Sunday, September 8, 2024

ಕುಂದಾಪುರ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ‘ಕೃಷಿಯ ಕಡೆ ನಮ್ಮ ನಡೆ’

ಪ್ರಸ್ತುತ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೃಷಿಯ ಬಗ್ಗೆ ಪ್ರಾಯೋಗಿಕವಾದ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಕೃಷಿಯ ಕಡೆ ನಮ್ಮ ನಡೆ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಜಾಗೃತಿ ಉಂಟಾಗುತ್ತದೆ ಎಂದು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕುಂದಾಪುರ ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಗುಣರತ್ನ ಹೇಳಿದರು.


ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ, ಸ್ಥಳೀಯ ಸಂಸ್ಥೆ ಕುಂದಾಪುರದ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಸಹಭಾಗಿತ್ವದಲ್ಲಿ ಕೋಟ್ಯಾನ್ ಕುಟುಂಬಸ್ಥರ ಸಹಕಾರದೊಂದಿಗೆ ಕುಂದಾಪುರದ ಕೋಟ್ಯಾನ್ ಕುಟುಂಬದ ಗದ್ದೆಯಲ್ಲಿ ನಡೆದ ಕೃಷಿಯ ಕಡೆ ನಮ್ಮ ನಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತ್ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಕಳೆದ 9 ವರ್ಷಗಳಿಂದ ಕೃಷಿಯ ಕಡೆ ನಮ್ಮ ನಡೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ರಾಜ್ಯ ಆಯುಕ್ತರಾದ ಪಿ.ಆರ್.ಸಿಂಧ್ಯಾ ಮಾರ್ಗದರ್ಶನದಲ್ಲಿ ಇದರ ಜೊತೆಯಲ್ಲಿ ನದಿ ತೀರಪ್ರದೇಶದಲ್ಲಿ ಕಾಂಡ್ಲಾ ಗಿಡ ನಾಟಿ, ಕೋಡಿಯಲ್ಲಿ ಗಾಳಿ ಗಿಡ ನಡುವುದು ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ ಎಂದರು.

ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಅಧ್ಯಕ್ಷೆ ವೀಣಾ ಕೋಟ್ಯಾನ್ ಅವರು ನೇಜಿಯ ಕಟ್ಟುಗಳನ್ನು ಸ್ಕೌಟ್ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಉದ್ಘಾಟಿಸಿ, ಭಾರತ ಕೃಷಿ ಪ್ರಧಾನವಾದ ರಾಷ್ಟ್ರ. ಸೈನಿಕರು ದೇಶವನ್ನು ಹೇಗೆ ರಕ್ಷಣೆ ಮಾಡುತ್ತಾರೋ ಅದೇ ರೀತಿ ರೈತರು ಜನರ ಅನ್ನದಾತರಾಗಿ ಆಹಾರವನ್ನು ನೀಡುತ್ತಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರೀ ಅವರು ನುಡಿದಂತೆ ಜೈಜವಾನ್ ಜೈ ಕಿಸಾನ್ ಎನ್ನುವುದು ನಿರಂತರವಾಗಿ ಸತ್ಯವಾಗಿ ಉಳಿಯುತ್ತದೆ ಎನ್ನುವುದು ಸತ್ಯ. ನಾಗರೀಕರಣ, ಕೈಗಾರೀಕರಣ ಬೆಳೆಯುತ್ತಿರುವ ಈ ದಿನಗಳಲ್ಲಿ ಕೃಷಿಯ ಕಡೆ ಯುವಜನತೆಯ ಒಲವು ಕಡಿಮೆಯಾಗುತ್ತದೆ. ಇಂಥಹ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿಯ ಒಲವು ಮೂಡಿಸಿ ಜನಜಾಗೃತಿ ಮಾಡವ ಕಾರ್ಯ ಶ್ಲಾಘನೀಯವಾದುದು ಎಂದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ರಾಜೀವ್ ಕೋಟ್ಯಾನ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಅನಂದ ಅಡಿಗ, ಕರ್ನಾಟಕ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಜಿಲ್ಲಾ ಸಂಸ್ಥೆಯ ಸಾವಿತ್ರಿ, ಉದ್ಯಮಿಗಳಾದ ಸತೀಶ್ ಕೋಟ್ಯಾನ್, ಕೆ.ಆರ್ ನಾಯಕ್, ಸುಮಂತ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಮಾರ್ಗದರ್ಶಿ ಕೈಪಿಡಿ ಅನಾವರಣಗೊಳಿಸಲಾಯಿತು.
ಸ್ಕೌಟ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸ್ಥಳೀಯ ಸಂಸ್ಥೆ ಖಜಾಂಚಿ ವೀರೇಂದ್ರ ಸ್ವಾಗತಿಸಿದರು. ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಶಾಲೆಯ ಸ್ಕೌಟ್ ಶಿಕ್ಷಕ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ನಾಟಿಗೆ ಹದಗೊಳಿಸಿದ ಗದ್ದೆಯಲ್ಲಿ ವಿದ್ಯಾರ್ಥಿಗಳು ಸಾಂಪ್ರಾದಾಯಿಕ ಶೈಲಿಯಲ್ಲಿ ನಾಟಿ ಮಾಡಿದರು. ಇಂದು ಮರೆಯಾಗುತ್ತಿರುವ ಸಾಂಪ್ರಾದಾಯಿಕ ನಾಟಿ ಪದ್ದತಿ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಕುಂದಾಪುರ ವಲಯದ 7 ಶಾಲೆಗಳ 290 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಷಾಡದ ತಿಂಡಿ-ತಿನಿಸು:
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಾರಾಯಣ ಗುರು ಮಹಿಳಾ ಸಹಕಾರಿ ಸಂಘದ ಸದಸ್ಯರು ಆಷಾಡದ ಸಾಂಪ್ರಾದಾಯಿಕ ತಿನಿಸುಗಳನ್ನು ಪರಿಚಯಿಸಿದರು. ಅಕ್ಕಿ ಹುಡಿ, ನುಗ್ಗೆ ಸೊಪ್ಪಿನ ಪಲ್ಯ, ಬೇಯಿಸಿದ ಅವಡೆ, ಕೆಸುವಿನ ಪತ್ರೋಡೆ, ಹಲಸಿನ ಹಣ್ಣು, ಕಾಳು ಮೆಣಿಸಿನ ಪಾನಕ ನೀಡಲಾಯಿತು. ಆಷಾಡದಲ್ಲಿ ಮಾಡುವ ಆಹಾರ ಪದಾರ್ಥಗಳು ಆರೋಗ್ಯಕಾರಿ ಎನ್ನುವ ಅಂಶವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!