Sunday, September 8, 2024

ಗಂಗೊಳ್ಳಿಯಲ್ಲಿ ಮತ್ತೊಮ್ಮೆ ಮನ ರಂಜಿಸಿದ ಮರಣಿ ಮಾಂಟೆ

ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ನಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಕ್ತನ ಮತ್ತು ಹಳೆ ವಿದ್ಯಾರ್ಥಿಗಳು ಇಲ್ಲಿನ ಸರಸ್ವತಿ ವಿದ್ಯಾಲಯದ ರೋಟರಿ ಸಭಾಂಗಣದಲ್ಲಿ ಪ್ರದರ್ಶಿಸಿದ ನರೇಂದ್ರ ಎಸ್ ಗಂಗೊಳ್ಳಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಮರಣಿ ಮಾಂಟೆ’ ನಾಟಕವು ಮತ್ತೊಮ್ಮೆ ತನ್ನ ವಿಶಿಷ್ಠ ಪ್ರಯೋಗದಿಂದ ಜನ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಮನುಷ್ಯರಿಗೆ ಮರಣ ಬರದಂತೆ ಔಷಧವನ್ನು ಕಂಡು ಹಿಡಿದು ಸಾವಿನ ದೇವತೆಯನ್ನು ಎದುರಿಸಿ ನಿಲ್ಲುವ ಸಾಹಸಕ್ಕೆ ಕೈ ಹಾಕಿದ ಜೀವಕ ಎನ್ನುವ ವೈದ್ಯ ಕೊನೆಯಲ್ಲಿ ಸಾವಿನ ದೇವತೆಯೆದುರು ಸೋಲನ್ನೊಪ್ಪುವ ಸಂದರ್ಭ ಸೃಷ್ಟಿಯಾಗಿ ಅಂತಿಮವಾಗಿ ಮಾನವ ಅದೆಷ್ಟೇ ಪ್ರಯತ್ನಿಸಿದರೂ ಈ ಲೋಕದ ನಿಯಮವನ್ನು ಮೀರಿ ನಿಲ್ಲಲು ಸಾಧ್ಯವಾಗದು ಎನ್ನುವ ಸತ್ಯವನ್ನು ಬೋಧಿಸುವ ಈ ನಾಟಕ ತನ್ನ ವಿಶೇಷವಾದ ಕಥಾ ವಸ್ತು ಮತ್ತು ಕಥನ ಶೈಲಿಯಿಂದ ಗಮನ ಸೆಳೆಯಿತು.

ಸಾವಿನ ದೇವತೆ ಮರಣಿಯ ಪಾತ್ರದಲ್ಲಿ ಅಭಿನಯಿಸಿದ ವಿದ್ಯಾರ್ಥಿನಿ ಶ್ರಾವ್ಯ ಎನ್ ಅದ್ಭುತವಾದ ಹಾವ ಭಾವಗಳೊಂದಿಗೆ ಅಬ್ಬರದಿಂದ ಅಭಿನಯಿಸಿ ಕಲಾರಂಗದ ಭರವಸೆಯ ನಟಿಯಾಗುವ ಮುನ್ಸೂಚನೆಯನ್ನು ನೀಡಿದರು. ಮುದುಕಿಯ ಪಾತ್ರದಲ್ಲಿ ವಿಶೇಷ ಆಂಗಿಕ ಪ್ರೌಢ ಅಭಿನಯದಿಂದ ಅಮೀಕ್ಷಾ ಡಿ ನಾಯ್ಕ್ ಜನ ಮೆಚ್ಚುಗೆ ಗಳಿಸಿದರೆ, ಚಮರಿಯ ಪಾತ್ರದಲ್ಲಿ ತನ್ನ ಸ್ಪಷ್ಟವಾದ ಮಾತುಗಾರಿಕೆಯಿಂದ ನಿಶಾ ಬಿ ಪೂಜಾರಿ ಕತೆಯನ್ನು ಕಟ್ಟಿ ಕೊಡುತ್ತಿದ್ದ ರೀತಿ ಉತ್ತಮವಾಗಿತ್ತು. ವೈದ್ಯ ಜೀವಕನ ಪಾತ್ರದಲ್ಲಿ ಹೃತಿಕಾ ಶೆಟ್ಟಿ ಮತ್ತು ರಾಜಕುಮಾರಿ ಪಯಸ್ವಿನಿ ಪಾತ್ರದಲ್ಲಿ ದಿಯಾ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾದರು.

ಉಳಿದಂತೆ ಲಾಲಿತ್ಯನಾಗಿ ಆಕಾಂಕ್ಷ, ಬಡ ಹೆಂಗಸಾಗಿ ಸಮೀಕ್ಷಾ, ಮಗನಾಗಿ ಸಂಜನಾ, ತರಂಗಿಣಿಯಾಗಿ ರಿಶೆಲ್ ಡಿ ಅಲ್ಮೇಡ, ಶಿವನಾಗಿ ರಚನಾ, ಡಂಗುರದವರಾಗಿ ನಾಗಶ್ರೀ ಮತ್ತು ಶ್ರೀನಿಧಿ, ರಾಜಭಟರಾಗಿ ತ್ರಿಷಾ, ದೀಕ್ಷಾ, ಶಿಲ್ಪ ಪ್ರಿಯ, ತೇಜಸ್ವಿನಿ, ಶ್ರೀ ಶ್ರಾವ್ಯ, ರಕ್ಷಿತಾ, ಮುರಿಗಳಾಗಿ ರಿತೇಶ್ ಎಂ ಜಿ, ಅಮೃತ್, ವಿನಯ್, ಸಂಪತ್, ರಿತೇಶ್, ವೀರೇಂದ್ರ ,ಅಮೋದ್, ನಿರಂಜನ್ , ರಾಹುಲ್ ಮತ್ತು ಅನಿರುದ್ಧ ಅಭಿನಯಿಸಿದ್ದರು.

ಬಾಲ ಪ್ರತಿಭೆ ಸಂಜಿತ್ ಎಮ್ ದೇವಾಡಿಗ, ವಿದ್ಯಾರ್ಥಿಗಳಾದ ಕಾರ್ತಿಕ್ ಖಾರ್ವಿ ,ಸುಜನ್ ಪೂಜಾರಿ ಮತ್ತು ಪ್ರೇಮ್ ಹಿನ್ನೆಲೆ ಸಂಗೀತ ನೀಡಿದ್ದರು. ಹಿನ್ನೆಲೆ ಗಾಯನದಲ್ಲಿ ಶ್ರೇಯಾ ಖಾರ್ವಿ ಸಹಕರಿಸಿದರು.

ಮರಣಿಯ ಪ್ರವೇಶ, ಭಿನ್ನ ರೂಪದ ಮುರಿಗಳ ನೃತ್ಯ, ನೀಲಿ ಬೆಳಕಿನಲ್ಲಿ ಕಾಣಿಸಿಕೊಳ್ಳುವ ಪ್ರೇತ, ಲಾಲಿತ್ಯ ಮತ್ತು ತರಂಗಿಣಿಯ ಸಾವಿನ ಸನ್ನಿವೇಶಗಳು ಪ್ರೇಕ್ಷಕರಿಗೆ ವಿಶೇಷ ಕುತೂಹಲ ಮೂಡಿಸಿದವು. ಹಲವು ಅರ್ಥಪೂರ್ಣ ಸಂಭಾ?ಣೆಗಳು ಗಮನ ಸೆಳೆದವು. ಕೊನೆಯ ದೃಶ್ಯದಲ್ಲಿ ಮರಣಿಯ ಲೋಕವನ್ನು ಪ್ರದರ್ಶಿಸಿದ ರೀತಿ ಆಕರ್ಷಕವಾಗಿತ್ತು. ಪದೇ ಪದೇ ಬದಲಾಗುವ ಸನ್ನಿವೇಶಗಳು, ಅಗತ್ಯಕ್ಕೆ ತಕ್ಕಷ್ಟೇ ಮಾತುಗಳು, ಅನೂಹ್ಯ ತಿರುವುಗಳು, ನಾಟಕದ ಅಂದವನ್ನು ಹೆಚ್ಚಿಸಿದ್ದವು. ಲಭ್ಯ ಕಿರು ಅವಕಾಶದಲ್ಲಿ ವಿದ್ಯಾರ್ಥಿ ತಂಡವನ್ನು ಸಜ್ಜುಗೊಳಿಸಿ ಮತ್ತೊಮ್ಮೆ ಪ್ರೇಕ್ಷಕರಿಗೆ ಒಂದು ಭಿನ್ನ ನಾಟಕದ ರೋಚಕತೆಯನ್ನು ಉಣಬಡಿಸಿದ ನಿರ್ದೇಶಕ ನರೇಂದ್ರ ಎಸ್ ಗಂಗೊಳ್ಳಿ ಅಭಿನಂದನೆಗೆ ಅರ್ಹರು.

ಕೆಲವೊಂದು ಸನ್ನಿವೇಶಗಳಲ್ಲಿ ಬೆಳಕು ಮತ್ತು ಧ್ವನಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು ಎನ್ನಿಸಿದರೂ ಒಟ್ಟಾರೆ ನಾಟಕ ಕಳೆಗಟ್ಟಿತ್ತು. ನಾಟಕದ ಅನುಕೂಲಕ್ಕೆ ತಕ್ಕಂತೆ ಅಗಲ ವೇದಿಕೆ ದಕ್ಕದಿರುವುದು ಮತ್ತು ಸಂಜೆಯ ಬೆಳಕು ನಾಟಕದ ಸರಾಗ ಓಟಕ್ಕೆ ಸ್ವಲ್ಪ ಮಟ್ಟಿಗೆ ತಡೆ ನೀಡಿದಂತೆನಿಸಿತು. ಆದರೆ ಎಲ್ಲಾ ಇತಿಮಿತಿಗಳ ನಡುವೆಯೂ ಮರಣಿ ಮಾಂಟೆ ತನ್ನ ವಿಶೇಷ ಕಥನ ಮತ್ತು ಅದನ್ನು ಕಟ್ಟಿಕೊಟ್ಟ ರೀತಿಯಿಂದ ಪ್ರೇಕ್ಷಕರ ಮನವನ್ನು ರಂಜಿಸುವಲ್ಲಿ ಸಫಲವಾಯಿತು. ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದು ಶ್ಲಾಘನೀಯ. ನಾಟಕದ ಬಹುತೇಕ ವೇಷ ಭೂಷಣಗಳನ್ನು ರಂಗಸಜ್ಜಿಕೆಗಳನ್ನು ವಿದ್ಯಾರ್ಥಿಗಳ ತಂಡ ಸ್ವಯಂ ಪ್ರಯತ್ನದಿಂದ ರೂಪಿಸಿದ್ದು ಕೂಡ ಅಭಿನಂದನೀಯ ಸಂಗತಿ. ತನ್ನ ಭಿನ್ನ ಪ್ರಸ್ತುತಿಯ ಮೂಲಕ ಗ್ರಾಮೀಣ ಮಟ್ಟದ ಕಲಾ ಪ್ರಪಂಚದಲ್ಲಿ ಹೊಸದೊಂದು ಆಶಾಕಿರಣವಾಗಿ ಬೆಳೆದು ಬರುತ್ತಿರುವ ಗ್ರಾಮೀಣ ಪ್ರತಿಭೆಗಳನ್ನು ಒಳಗೊಂಡ ಇಂತಹ ಚಂದನೆಯ ಅರ್ಥಪೂರ್ಣ ಸಂದೇಶವುಳ್ಳ ನಾಟಕಗಳನ್ನು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕಾಗಿದೆ. ಮರಣಿ ಮಾಂಟೆ ತಂಡಕ್ಕೆ ಶುಭವಾಗಲಿ. ಮರಣಿ ಮಾಂಟೆ ಮತ್ತಷ್ಟು ಪ್ರದರ್ಶನಗಳನ್ನು ಕಾಣುವಂತಾಗಲಿ ಎನ್ನುವುದು ಹಾರೈಕೆ.

-ರಾಘವೇಂದ್ರ ಬಿಲ್ಲವ ಗಂಗೊಳ್ಳಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!