Sunday, September 8, 2024

ಪ್ರಧಾನಿಯವರನ್ನು ಕೇಳಿ ಪ್ರನಾಳಿಕೆ ಸಿದ್ಧಪಡಿಸಿದ್ದೀರಾ? ರಾಜ್ಯ ಸರ್ಕಾರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಪ್ರಶ್ನೆ

ಹೆಮ್ಮಾಡಿ: ಗ್ಯಾರಂಟಿ ಕಾರ್ಡ್ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಇಂದು ಅಕ್ಕಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎನ್ನುವಂತೆ ಅಪಪ್ರಚಾರ ಮಾಡುತ್ತಿದೆ. ಇವರು ಪ್ರನಾಳಿಕೆ, ಗ್ಯಾರಂಟಿ ಕಾರ್ಡ್ ಸಿದ್ಧ ಪಡಿಸುವಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿ ಸಿದ್ಧಪಡಿಸಿದ್ದೀರಾ? ನುಡಿದಂತೆ 10 ಕೆಜಿ ಅಕ್ಕಿ ನೀಡದೆ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ನೇತೃತ್ವದಲ್ಲಿ ನಡೆದ ಹಿರಿಯ ಕಾರ್ಯಕರ್ತರು, ವಿವಿಧ ಮೋರ್ಚಾಗಳ ಸಂಯುಕ್ತ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

ksrtc ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದಂತೆ ಖಾಸಗಿ ಬಸ್‍ಗೂ ಅನ್ವಯಿಸಬೇಕು. ಸಬ್ಸಿಡಿ ಹಣವನ್ನು ಖಾಸಗಿ ಬಸ್‍ನವರಿಗೆ ನೀಡಬೇಕು, ನಿರುದ್ಯೋಗ ವೇತನ, ಗೃಹಲಕ್ಷ್ಮೀ, ಗೃಹಜ್ಯೋತಿ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣಾ ಪೂರ್ವ ನೀಡಿದ ಗ್ಯಾರಂಟಿ ಕಾರ್ಡ್‍ನ ವಿಚಾರದಲ್ಲಿ ನುಣುಚಿಕೊಳ್ಳಬಾರದು ಎಂದರು.

ಮತಾಂತರ ನಿಷೇದ ಕಾಯ್ದೆ, ಗೋ ಹತ್ಯೆ ಕಾಯ್ದೆಯನ್ನು ರದ್ದುಗೊಳಿಸುತ್ತೇವೆ ಎನ್ನುವ ವಿಚಾರವನ್ನು ಹಿಂದುಗಳು ಒಪ್ಪಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕೆ? ಹಿಂದೆ ಬಿ.ಎಸ್.ಯಡಿಯೂರಪ್ಪನವರು ಕೇವಲ ಇಬ್ಬರು ಶಾಸಕರಿದ್ದರು ಕೂಡಾ ಸದನದಲ್ಲಿ ಧ್ವನಿ ಎತ್ತಿದ್ದರು. ಇವತ್ತು ಹಾಗಿಲ,್ಲ 65 ಶಾಸಕರು ಇದ್ದಾರೆ. ಯಾರೂ ಕೂಡಾ ಈ ವಿಚಾರದಲ್ಲಿ ಧೃತಿಗೆಡಬೇಕಾದ ಅಗತ್ಯವಿಲ್ಲ ಎಂದರು.

ಭಾರತ 80 ಕೋಟಿ ಯುವಶಕ್ತಿಯನ್ನು ಹೊಂದಿರುವ ಏಕೈಕ ರಾಷ್ಟ್ರ. ಯುವಶಕ್ತಿಯನ್ನು ದೇಶದ ಶಕ್ತಿಯನ್ನಾಗಿ, ಮಾನವ ಸಂಪನ್ಮೂಲವಾಗಿ ರೂಪಿಸಲು ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ವಿಶ್ವದ ಪ್ರತಿಷ್ಠಿತ ಕಂಪೆನಿಗಳು ಭಾರತಕ್ಕೆ ಬರುವ ಮೂಲಕ ಉದ್ಯೋಗ ಸೃಷ್ಟಿಯಾಗುತ್ತಿದೆ. ವಿಶ್ವದಲ್ಲಿಯೇ ಇವತ್ತು ಡಿಜಿಟಲ್ ವ್ಯವಹಾರ, ಸೇವೆಗಳ ಮೂಲಕ ಭಾರತ ಮೊದಲ ಸ್ಥಾನದಲ್ಲಿದೆ ಎಂದರು.
ಕೇಂದ್ರ ಸರ್ಕಾರ ಶಕ್ತಿ ಸ್ವಾಯುತ್ತತೆಗೆ ಒತ್ತು ನೀಡಲಾಗುತ್ತಿದೆ. ಜಿಎಸ್‍ಟಿ ಯಿಂದ ತೆರಿಗೆ ಹೆಚ್ಚಾಗುವುದಿಲ್ಲ. ತೆರಿಗೆ ಸೊರಿಕೆ ತಡೆಗಟ್ಟುತ್ತದೆ. ದೇಶದ ಅಭಿವೃದ್ದಿಯಾಗುತ್ತದೆ ಎಂದರು.

ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದರ ನಡುವೆ ಅಭಿವೃದ್ದಿಯ ಕನಸು ಕಡಿಮೆಯಾಗಿಲ್ಲ.ಸಮೃದ್ದ ಬೈಂದೂರು ಕನಸಿಗೆ ಬದ್ಧರಿದ್ದೇವೆ. ಕ್ಷೇತ್ರದಲ್ಲಿ ಬಣ, ಗುಂಪು ಇನ್ನೂ ಮುಂದೆ ಇರುವುದಿಲ್ಲ. ನಾವೆಲ್ಲಾ ಒಟ್ಟಾಗಿ ಮುನ್ನೆಡೆಯಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ತಂಗಪ್ಪ, ಬಸವರಾಜ ಹಕ್ಲಾಡಿ, ಗೋಪಾಲ ಗಾಣಿಗ ನಾವುಂದ, ಸುದರ್ಶನ ನಾವುಂದ, ರತ್ನಾಕರ ಗಾಣಿಗ, ಇಂದಿರಾ ಶೆಟ್ಟಿ, ನಾರಾಯಣ ಗುಜ್ಜಾಡಿ, ನವೀನಚಂದ್ರ ಉಪ್ಪುಂದ ಮೊದಲಾದವರು ತಮ್ಮ ಅನಿಸಿಕೆ ಹಂಚಿಕೊಂಡರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಜಿಲ್ಲಾ ಕಾರ್ಯದರ್ಶಿ ಮಾಲತಿ ನಾಯಕ್, ವಿವಿಧ ಮೋರ್ಚಾಗಳ ಪ್ರಮುಖರಾದ ಭಾಗೀರಥಿ, ಸಂತೋಷ್ ಪೂಜಾರಿ, ಜೈಸನ್ ಎಂ.ಬಿ, ಚಂದ್ರ ಪಂಚವಟಿ ಉಪಸ್ಥಿತರಿದ್ದರು.

ಬೈಂದೂರು ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಿತಾ ಆರ್.ಕೆ ಮರವಂತೆ ವಂದೇ ಮಾತರಂ ಹೇಳಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿ, ವಿನೋದ್ ಗುಜ್ಜಾಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!