Sunday, September 8, 2024

ಜನರ ಕೆಲಸಗಳಿಗೆ ಪ್ರಾಮುಖ್ಯತೆ ನೀಡಿ-ಪುರಸಭೆ ಅಧಿಕಾರಿಗಳಿಗೆ ಶಾಸಕ ಕಿರಣ್ ಕೊಡ್ಗಿ ಕಿವಿಮಾತು


ಕುಂದಾಪುರ: ಜನಸಮಾನ್ಯರ ಅವಶ್ಯತೆಗಳಿಗೆ ಯಾವುದೆ ಅಡಚಣೆಯಾಗದಂತೆ ಕಾರ್ಯನಿರ್ವಹಿಸಬೇಕು. ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಉತ್ತಮ ಸೇವೆ ನೀಡಬೇಕು. ಅಧಿಕಾರಿಗಳು ಮತ್ತು ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವ ಮೂಲಕ ಅವರ ಕೆಲಸಗಳಿಗೆ ಪ್ರಾಮುಖ್ಯತೆ ಕೊಡಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಕುಂದಾಪುರ ಪುರಸಭೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಕುಡಿಯುವ ನೀರು ಸರಬರಾಜು ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ಜವಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಉಪ್ಪು ನೀರು ಸರಬರಾಜು ಆಗಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲವೇ? ಈಗ ಸಮಸ್ಯೆಯನ್ನು ಯಾವ ರೀತಿ ಪರಿಹಾರ ಮಾಡಿದ್ದಿರಿ? ಕುಡಿಯಲು ನೀರು ಯೋಗ್ಯವೇ ಎನ್ನುವುದ ಪರೀಕ್ಷಾ ವರದಿ ಪಡೆದುಕೊಂಡಿದ್ದಿರಾ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಲಸಿರಿ ಯೋಜನೆಯ ಅಧಿಕಾರಿಗಳು ಗುಲ್ವಾಡಿಯಲ್ಲಿ ಏಕಾ‌ಏಕಿ ಉಪ್ಪುನೀರು ತಡೆಗೋಡೆಯ ಗೇಟ್ ತೆರೆದಿರುವುದರಿಂದ ಈ ಸಮಸ್ಯೆಯಾಯಿತು. ಗೇಟ್ ತೆರೆಯುವ ಸಂದರ್ಭ ಇಲಾಖೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದ ಉಪ್ಪು ನೀರು ಮೇಲ್ಬಾಗಕ್ಕೆ ಹೋಗಿದ್ದರಿಂದ ಸ್ವಲ್ಪ ಸಮಸ್ಯೆಯಾಯಿತು. ಕೂಡಲೇ ಪರಿಶೀಲನೆ ಮಾಡಿ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ಈಗ ಸರಿಯಾಗಿದೆ ಎಂದು ಜಲಸಿರಿ ಯೋಜನೆಯ ಅಧಿಕಾರಿ ಉತ್ತರಿಸಿದರು.

ಜಲಸಿರಿ ಮೇಲೆ ಪುರಸಭೆ ಆರೋಪ:
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಜವಬ್ದಾರಿ ಹೊತ್ತಿರುವ ಜಲಸಿರಿ ಯೋಜನೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಪುರಸಭೆಯಿಂದ ಹಸ್ತಾಂತರಿಸುವಾಗ 3300 ಕುಡಿಯುವ ನೀರು ನಳ ಸಂಪರ್ಕಗಳಿದ್ದವು. ಅದನ್ನು 6650 ನಳಸಂಪರ್ಕ ಮಾಡುವ ಬಗ್ಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ 4200 ಮಾತ್ರವಾಗಿದೆ. ಗುರಿ ತಲುಪಲು ಇನ್ನೂ ಆಗಿಲ್ಲ. ಇದರಿಂದ ಪುರಸಭೆಗೆ ನಷ್ಟವಾಗುತ್ತದೆ. ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ನಿರ್ವಹಣೆಯ ಬಗ್ಗೆಯೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಹೇಳಿದರು.

ಇದಕ್ಕೆ ಉತ್ತರಿಸಿದ ಜಲಸಿರಿಯ ಅಧಿಕಾರಿಗಳು ಈಗ ಹೊಸ ನಳ ಸಂಪರ್ಕಕ್ಕೆ ಜನ ಆಸಕ್ತಿ ತೋರಿಸುತ್ತಿಲ್ಲ. ದಿನಕ್ಕೆ ಒಂದೇರಡು ಕಡೆ ಹೊಸ ಸಂಪರ್ಕ ಮಾಡುತ್ತಿದ್ದೇವೆ. ನೀರಿನ ಕರ ಕೂಡಾ ಸಾಕಷ್ಟು ಬಾಕಿ ಇದೆ ಎಂದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಗುತ್ತಿಗೆ ಪಡೆದ ಮೇಲೆ ಕರಾರುವಿನಂತೆ ನಡೆದುಕೊಳ್ಳಬೇಕು. 8 ವರ್ಷದ ಅವಧಿಯಲ್ಲಿ ಎಷ್ಟು ಸಂಪರ್ಕ ಮಾಡಬೇಕು, ನಿರ್ವಹಣೆ ಇತ್ಯಾದಿಗಳನ್ನು ಒಪ್ಪಂದ ಪತ್ರದಲ್ಲಿ ಇರುವಂತೆ ನಿರ್ವಹಣೆ ಮಾಡಬೇಕು. ಜವಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಹೊಸ ನಿರ್ಣಯಗಳನ್ನು ಕೈಗೊಳ್ಳಬೇಕೆಂದರೆ ಪುರಸಭೆಗೆ ಹೊಸ ಆಡಳಿತ ಮಂಡಳಿ ಬರಬೇಕು. ಸರ್ಕಾರ ಮೀಸಲಾತಿ ನಿಗಧಿಪಡಿಸಿದ ಬಳಿಕ ಅಧ್ಯಕ್ಷರು, ಉಪಾಧ್ಯಕ್ಷರು ಆಯ್ಕೆಯಾದ ಬಳಿಕವೇ ಅವರ ಸಮ್ಮುಖದಲ್ಲಿ ಸೂಕ್ತ ನಿರ್ಣಯ ಮಾಡಬೇಕು ಎಂದರು.

ಪುರಸಭೆ ಆಡಳಿತಾಧಿಕಾರಿ, ಹಾಗೂ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಮಾತನಾಡಿ, ಜಲಸಿರಿ ಗುತ್ತಿಗೆ ಸಂಸ್ಥೆ ಹಾಗೂ ಪುರಸಭೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದ್ದು ಪ್ರತ್ಯೇಕ ಸಭೆ ನಡೆಸಿ ಸೂಕ್ತ ತೀರ್ಮಾನ ತಗೆದುಕೊಳ್ಳಲಾಗುವುದು ಎಂದರು.

ಯುಜಿಡಿ ಕಾಮಗಾರಿ ಪ್ರಗತಿ ಹಾಗೂ ಅದನ್ನು ಮುಂದಿವರಿಸುವ ಬಗ್ಗೆ ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಮಂಜುನಾಥ ಅವರು ಒಳಚರಂಡಿ ಯೋಜನೆಗೆ ಎಸ್.ಟಿ.ಪಿ ರಚನೆಗೆ ಹುಂಚಾರಬೆಟ್ಟು ಸಮೀಪ ಸ್ಥಳ ಗುರುತಿಸಲಾಗಿದ್ದು ಸಾರ್ವಜನಿಕರ ವಿರೋಧ ಎದುರಾಗಿದೆ. ೨ ಕೋಟಿ ರೂಪಾಯಿ ನೀಡಿ ಭೂಮಿ ಖರೀದಿ ಮಾಡಿಯೂ ಆಗಿದ್ದು ಈಗ ಜನ ವಿರೋಧ ಮಾಡುತ್ತಿದ್ದಾರೆ. ಪರ್ಯಯ ಸ್ಥಳ ತೋರಿಸಲಾಗಿದ್ದರು ಆ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮೊದಲಾದ ಒಪ್ಪಿಗೆ ಸಿಗಲು ಸಾಕಷ್ಟು ಕಾಲವಕಾಶ ಬೇಕಾಗುತ್ತದೆ ಎಂದರು.
ಕುಂದಾಪುರದಲ್ಲಿ ಅಟೋ ರಿಕ್ಷಾ ನಿಲ್ದಾಣದ ಬಗ್ಗೆ ಬೇಡಿಕೆ ವ್ಯಕ್ತವಾಗಿದ್ದು ಎನು ಕ್ರಮ ಕೈಗೊಂಡಿದ್ದಿರಿ ಎಂದು ಶಾಸಕರು ಪ್ರಶ್ನಿಸಿದರು.

ಈಗಾಗಲೇ 7 ರಿಕ್ಷಾ ನಿಲ್ದಾಣಕ್ಕೆ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 11 ರಿಕ್ಷಾ ನಿಲ್ದಾಣಗಳನ್ನು ಗುರುತಿಸಬೇಕಾಗಿದೆ. ಎಂದರು.

ಕುಂದಾಪುರದ ಮೇಲ್ಸೇತುವೆ ಕೆಳಭಾಗದಲ್ಲಿ ಸ್ಥಳವಕಾಶವಿದ್ದು ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಎನ್.ಎಚ್.ಐ ಅಧಿಕಾರಿಗಳ ಜೊತೆ ಚರ್ಚೆ ಮಾಡಬಹುದು. ಪುರಸಭೆ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್ ಸಮಸ್ತೆಗೆ ಪರಿಹಾರ ಕಂಡುಕೊಳ್ಳಬೇಕು. ನೆಹರೂ ಮೈದಾನ ಪುರಸಭೆ ಹಸ್ತಾಂತರ ಪ್ರಕ್ರಿಯೆಗಳ ಬಗ್ಗೆ ಶಾಸಕರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಪುರಸಭೆಯಲ್ಲೂ ಹುದ್ದೆ ಖಾಲಿ:
ಕುಂದಾಪುರ ಪುರಸಭೆಯಲ್ಲಿ 23 ವಾರ್ಡ್ ಇದ್ದು ಒಟ್ಟು 108 ಹುದ್ದೆಗಳಿದ್ದು ಈಗ 46 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 62 ಹುದ್ದೆ ಖಾಲಿ ಇದೆ. 14 ಜನ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ಮಂಜುನಾಥ ಶಾಸಕರ ಗಮನಕ್ಕೆ ತಂದರು.

ಸಭೆಯಲ್ಲಿ ಪುರಸಭೆ ಆಡಳಿತಾಧಿಕಾರಿ, ಹಾಗೂ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಹಾಗೂ ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!