Sunday, September 8, 2024

50 ಸಾವಿರ ರೂ.ಗಿಂತ ಹೆಚ್ಚಿನ ನಗದು ದಾಖಲೆ ರಹಿತವಾಗಿ ಕೊಂಡೊಯ್ಯುವಂತಿಲ್ಲ


ಕುಂದಾಪುರ ಉಪ ವಿಭಾಗದಲ್ಲಿ ಚುನಾವಣೆಗೆ ಸಕಲ ಸಿದ್ಧತೆ-ಚುನಾವಣಾಧಿಕಾರಿ ರಶ್ಮಿ ಎಸ್.ಆರ್.

ಕುಂದಾಪುರ : ವಿಧಾನ ಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಯಾವುದೇ ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಸಭೆ, ಪ್ರಚಾರ ಸಭೆ ಇತ್ಯಾದಿಗಳನ್ನು ನಡೆಸಲು ಪೂರ್ವಾನುಮತಿ ಪಡೆದುಕೊಳ್ಳಲೆಬೇಕು. 50 ಸಾವಿರ ರೂ.ಗಿಂತ ಹೆಚ್ಚಿನ ನಗದು ದಾಖಲೆ ರಹಿತವಾಗಿ ಕೊಂಡೊಯ್ಯುವಂತಿಲ್ಲ. 10 ಲಕ್ಷ ರೂ.ಗಿಂತ ಹೆಚ್ಚಿನ ನಗದು ಸಿಕ್ಕಿದರೆ ಅದನ್ನು ತೆರಿಗೆ ಇಲಾಖೆಗೆ ನೀಡಲಾಗುವುದು ಎಂದು ಚುನಾವಣಾಧಿಕಾರಿ, ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್ ತಿಳಿಸಿದ್ದಾರೆ.

ಕುಂದಾಪುರದ ಮಿನಿ ವಿಧಾನಸೌಧದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರ, ಬ್ರಹ್ಮಾವರ, ಹೆಬ್ರಿ ತಾಲ್ಲೂಕು ವ್ಯಾಪ್ತಿ ಇರುವ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 222 ಮತಗಟ್ಟೆಗಳಿದ್ದು, 99,577 ಪುರುಷ, 1,07,625 ಮಹಿಳಾ ಮತದಾರರು, 2 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 2,07,204 ಮತದಾರರು ಅಧಿಕಾರ ಚಲಾಯಿಸಬೇಕಿದೆ . ಕುಂದಾಪುರ ಹೋಬಳಿಯಲ್ಲಿ 122 , ಕೋಟ ಹೋಬಳಿಯಲ್ಲಿ 89, ಹೆಬ್ರಿ ಹೋಬಳಿಯಲ್ಲಿ 11ಮತಗಟ್ಟೆಗಳು ಇರಲಿವೆ. 3,277ಮಂದಿ 18 ರಿಂದ 19ವಯಸ್ಸಿನ ಯುವ ಮತದಾರರು ಇದ್ದು, 2,531 ವಿಕಲಚೇತನ ಮತದಾರರು, 6,209 ಮತದಾರರು 80 ರ ವಯೋಮಾನ ಮೀರಿದವರು ಇದ್ದಾರೆ. ವಿಕಲಚೇತನ ಹಾಗೂ 80ವಯಸ್ಸು ಮೀರಿದವರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಇದೆ. ಅಂತಹ ಕಡೆ ಅಧಿಕಾರಿಗಳು ಮತಯಂತ್ರದ ಜತೆ ತೆರಳಲಿದ್ದಾರೆ ಎಂದರು.

ಫ್ಲಯಿಂಗ್ ಸ್ಕ್ವಾಡ್ ಟೀಮ್, ಸ್ಟಾಟಿಕ್ ಸರ್ವಿಲೆನ್ಸ್ ಟೀಮ್, ವಿಡಿಯೊ ಸರ್ವಿಲೆನ್ಸ್ ಟೀಮ್ ಎಂದು ಮೂರು ತಂಡಗಳನ್ನು ಮಾಡಲಾಗಿದೆ. ಹಾಲಾಡಿ, ಕಂಡ್ಲೂರು, ಸಾಬ್ರಕಟ್ಟೆ ಚೆಕ್‌ಪೋಸ್ಟ್‌ಗಳಲ್ಲಿ ನಿರಂತರ 24 ಗಂಟೆಗಳ ಕಾಲ, ಮೂರು ತಂಡಗಳು ತಲಾ 8 ಗಂಟೆಗಳ ಅವಧಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಅಕ್ರಮ ತಡೆಗಟ್ಟಲು ಸಾರ್ವಜನಿಕರು ದೂರು ನೀಡಲು ಸಿ-ವಿಜಿಲ್ ಆಪ್ ಕೂಡಾ ಚಾಲನೆಯಲ್ಲಿರುತ್ತದೆ. ಅನಾಮಧೇಯ ದೂರುಗಳಿಗೂ ಪ್ರತಿ ಸ್ಪಂದಿಸಲಾಗುವುದು. ದೂರುಗಳು ಬಂದಾಗ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದೆ ಎಂದರು.

24 ತಾಸು ನಿರ್ವಹಣೆ ಮಾಡಲು ಕಂಟ್ರೋಲ್ ರೂಂ ತೆರೆಯಲಾಗಿದೆ. 08254-230352 ಹಾಗೂ 6364626868 ಸಂಖ್ಯೆಗೆ ಕರೆ ಮಾಡಿ ಮಾಹಿತಿ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಕುರಿತು ದೂರು ನೀಡಬಹುದು. ಬಹಿಷ್ಕಾರ ಹಾಕುವ ಹಳ್ಳಿಗಳಿಗೆ ತೆರಳಿ ಮನ ಒಲಿಸಲಾಗುವುದು. 158 ಸಾಮಾನ್ಯ ಮತಗಟ್ಟೆಗಳಿದ್ದು ಉಳಿದ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳ ಭದ್ರತೆಗೆ ಪೂರಕ ವ್ಯವಸ್ಥೆ ಮಾಡಲಾಗಿದೆ ಎಂದರು.

ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಹೆಬ್ರಿ ತಹಶೀಲ್ದಾರ್ ಪುರಂದರ ಕೆ. ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ನೀತಿ ಸಂಹಿತೆ ಉಲ್ಲಂಘನೆಯ ಪರಿಶೀಲನೆಗೆ ನೋಡೆಲ್ ಅಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ನೇಮಕವಾಗಿದ್ದಾರೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಡಿವೈ‌ಎಸ್‌ಪಿ ಬೆಳ್ಳಿಯಪ್ಪ, ಸಹಾಯಕ ಚುನಾವಣಾಧಿಕಾರಿಗಳಾದ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!