Sunday, September 8, 2024

ಮಹಾಶಿವರಾತ್ರಿ ಮಹೋತ್ಸವ: ಶಿವಾಲಯಗಳಲ್ಲಿ ಶಿವರಾಧನೆಯ ವೈಭವ

ಕುಂದಾಪುರ, ಫೆ.18: ಮಹಾಶಿವರಾತ್ರಿ ಈಶ್ವರನ ಪ್ರಮುಖ ಆರಾಧನಾ ದಿನ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯನ್ನು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ ಶಿವರಾತ್ರಿ ದಿನ ಉಪವಾಸ, ಜಾಗರಣೆಗೆ ಹೆಚ್ಚಿನ ಮಹತ್ವಿಕೆ ಇದೆ.

ಇಂದು ಮಹಾ ಶಿವರಾತ್ರಿಯನ್ನು ವಿಶೇಷ ಭಕ್ತಿ, ಆರಾಧನೆ, ಅನುಷ್ಟಾನಗಳೊಂದಿಗೆ ಆಚರಿಸಲಾಯಿತು. ಕುಂದಾಪುರ ತಾಲೂಕಿನ ಪ್ರಸಿದ್ಧ ಶಿವಾಲಯಗಳಲ್ಲಿ ಭಕ್ತರ ಸಂಧೋಹವೇ ಸೇರಿದ್ದು ಕಂಡು ಬಂತು.

ಕುಂದಾಪುರದ ಕುಂದೇಶ್ವರ ದೇವಸ್ಥಾನ ಬೆಳಿಗ್ಗೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಂದೇಶ್ವರನಿಗೆ ವಿವಿಧ ಸೇವೆಗಳನ್ನು ಸಲ್ಲಿಸಿ ಪುನೀತರಾದರು. ರುದ್ರಾಭಿಷೇಕ, ಬಿಲ್ವಾರ್ಚನೆ ಮೊದಲಾದ ಸೇವೆಗಳನ್ನು ಸಲ್ಲಿಸುತ್ತಿರುವುದು ಕಂಡು ಬಂತು.

ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೂ ಕೂಡ ಭಕ್ತರ ದಂಡು ಹರಿದು ಬಂದಿದೆ. ಕೋಟ ಹಿರೇಮಹಾಲಿಂಗೇಶ್ವರ, ಕುಂದಾಪುರದ ಮೈಲಾರೇಶ್ವರದ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಸೇವೆಗಳು ನಡೆದವು.

ತಲ್ಲೂರು ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಂತದಲ್ಲಿದ್ದರೂ ಕೂಡಾ ಶಿವನ ಭಕ್ತರ ಸಮೂಹವೇ ಆಗಮಿಸುತ್ತಿತ್ತು. ಶಿವನ ಆರಾಧನೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದ್ದು ಅಲ್ಲಿ ಪೂಜೆ ಪುನಸ್ಕಾರಗಳನ್ನು ಭಕ್ತರು ಸಲ್ಲಿಸಿದರು.

ಗುಹಾಂತರ ದೇವಾಲಯವಾಗಿರುವ ಕೊಡಪಾಡಿಯ ಗುಹೇಶ್ವರ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಗುಹೇಶ್ವರನ ದರ್ಶನ ಮಾಡಿದರು.

ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ವಿಶೇಷವಾಗಿ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿರುವುದು ಕಂಡು ಬಂತು.

ಚಾರಿತ್ರಿಕ ಪ್ರಸಿದ್ಧ ಬೈಂದೂರಿನ ಸೇನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಬೇರೆ ಬೇರೆ ಭಾಗದಿಂದ ಭಕ್ತರು ಆಗಮಿಸಿದ್ದರು.

ಬೈಂದೂರು ಸಮೀಪದ ಗಂಗನಾಡುವಿನ ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಂತದ್ದಲ್ಲದ್ದರೂ ಮಹಾಶಿವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಶಿವನಿಗೆ ಅತೀ ಪ್ರಿಯವಾದ ರುದ್ರಾಭಿಷೇಕವೇ ಸಹಿತ ವಿವಿಧ ಸೇವೆಗಳನ್ನು ಸಲ್ಲಿಸುತ್ತಿರುವುದು ಕಂಡು ಬಂತು. ಸಾಕಷ್ಟು ಸಾಂಪ್ರಾದಾಯಿಕ ನಂಬಿಕೆಗಳನ್ನು ಹೊಂದಿರುವ ಈ ಶಿವ ಸಾನಿಧ್ಯ ಬಹು ವಿಸ್ಮಯಕಾರಿಯಾಗಿದ್ದು ಇಂದಿಗೂ ಕೂಡಾ ಸೊಪ್ಪಿನ ಚಪ್ಪರ ಸೇರಿದಂತೆ ಹಲವಾರು ಅಪರೂಪದ ನಂಬಿಕೆಗಳು ಚಾಲ್ತಿಯಲ್ಲಿವೆ.

ಮರವಂತೆಯ ಗಂಗಾಧರೇಶ್ವರ, ಬಸ್ರೂರು ತುಳುವೇಶ್ವರ, ಗುಜ್ಜಾಡಿಯ ಸಂಗಮೇಶ್ವರ, ಹಟ್ಟಿಯಂಗಡಿ ಲೋಕನಾಥೇಶ್ವರ, ಅರೆಹೊಳೆ ಮಹಾಲಿಂಗೇಶ್ವರ, ಅರೆಶಿರೂರು ಕೋಟಿಲಿಂಗೇಶ್ವರ, ವಕ್ವಾಡಿ ಮಹಾಲಿಂಗೇಶ್ವರ, ಶಂಕರಾನಾರಾಯಣ ಮೊದಲಾದ ಶಿವಕ್ಷೇತ್ರಗಳಲ್ಲಿ ಮಹಾಶಿವರಾತ್ರಿ ವಿಜೃಂಭಣೆಯಿಂದ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!