Sunday, September 8, 2024

ಗಂಗೊಳ್ಳಿ ಮಲ್ಯರ ಮಠ ಬ್ರಹ್ಮರಥೋತ್ಸವ ಫೆ.26ಕ್ಕೆ


ಗಂಗೊಳ್ಳಿ : ಪಂಚಗಂಗಾವಳಿ ನದಿ ತೀರದಲ್ಲಿ ಶೋಭಿಸುತ್ತಿರುವ 350 ವರ್ಷ ಪುರಾತನವಾದ ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಲಂಪ್ರತಿ ಜರಗುವ ಬ್ರಹ್ಮರಥೋತ್ಸವ ಫೆ.26ರಂದು ನಡೆಯಲಿದೆ.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಫೆ.22ರಂದು ಧ್ವಜಾರೋಹಣದೊಂದಿಗೆ ಬ್ರಹ್ಮರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು ಫೆ.27 ರಂದು ಧ್ವಜ‌ಅವರೋಹಣದೊಂದಿಗೆ ಸಂಪನ್ನಗೊಳ್ಳಲಿದೆ. ಫೆ.25ರಂದು ಗಂಗೊಳ್ಳಿ ನಿನಾದ ಸಂಸ್ಥೆಯ ವತಿಯಿಂದ ಸಂಜೆ 6 ಗಂಟೆಗೆ ನಾಗೇಂದ್ರ ನಾಯಕ್ ಬೆಳ್ತಂಗಡಿ ಇವರಿಂದ ಭಜನಾ ಕಾರ್ಯಕ್ರಮ ಫೆ.24ರಂದು ರಾತ್ರಿ ಬಂಡಿ ಉತ್ಸವ, ಫೆ.25 ರಂದು ರಾತ್ರಿ ಹೂವಿನ ತೇರು, ಫೆ.26 ರಂದು ಸಂಜೆ 4 ಗಂಟೆಗೆ ಬ್ರಹ್ಮರಥೋತ್ಸವ, 27ರಂದು ಅವಭೃತ ಉತ್ಸವ, ಧ್ವಜ ಅವರೋಹಣ, ರಾತ್ರಿ 9 ಗಂಟೆಗೆ ಪಂಚಗಂಗಾವಳಿ ನದಿಯಲ್ಲಿ ಶ್ರೀ ದೇವರ ನಿರಾಟ ಉತ್ಸವ ಜರುಗಲಿದೆ. ರಥೋತ್ಸವದ ಅಂಗವಾಗಿ ಹಗಲು ಉತ್ಸವ, ರಾತ್ರಿ ಪಲ್ಲಕಿ ಉತ್ಸವ, ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿದೆ.

ಮಲ್ಯರಮಠ ಶ್ರೀ ವೆಂಕಟರಮಣ :

ಕೊಂಕಣ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಂಚನದಿಗಳು ಸಂಗಮಿಸುವ ಪಂಚಗಂಗಾವಳಿ ನದಿಯ ತಟದಲ್ಲಿ ಸುಂದರವಾದ ಪುರಾಣ ಪ್ರಸಿದ್ಧ ಅತ್ಯಂತ ಪ್ರಾಚೀನವಾದ ಶ್ರೀ ಮಲ್ಯರಮಠ ವೆಂಕಟರಮಣ ದೇವಾಲಯ ಶೋಭಿಸುತ್ತಿದೆ. ಕುಮಟಾ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗಣೇಶ ಮಲ್ಯರ ವಂಶಸ್ಥರಾದ ವೆಂಕಟೇಶ ಮಲ್ಯ ಅವರ ಪುತ್ರ ನಾರಾಯಣ ಮಲ್ಯ ಅವರಿಂದ 1668ರಲ್ಲಿ ಶ್ರೀದೇವಿ ಭೂದೇವಿಯುಕ್ತ ಶ್ರೀ ವೆಂಕಟರಮಣ ದೇವರ ಮೂರ್ತಿ ಪ್ರತಿಷ್ಠಾಪನೆಗೊಂಡಿತು. ಮಲ್ಯರಿಂದ ಪ್ರತಿಷ್ಠಾಪನೆಯಾದ ಕಾರಣ ಈ ದೇಗುಲಕ್ಕೆ ಶ್ರೀ ಮಲ್ಯರಮಠ ವೆಂಕಟರಮಣ ದೇವಸ್ಥಾನ ಎಂದು ಹೆಸರಾಯಿತು. ವರ್ಷಂಪ್ರತಿ ನಡೆಯುವ ಈ ದೇವಳದ ಬ್ರಹ್ಮರಥೋತ್ಸವಕ್ಕೆ ವಿಶೇಷ ಮಹತ್ವ.

ಗಂಗೊಳ್ಳಿಯ ಸುತ್ತಮುತ್ತಲು ಇರುವ ದೇವಸ್ಥಾನಗಳು ಲೆಕ್ಕವಿಲ್ಲದಷ್ಟು. ಊರಿನ ಪ್ರತಿಯೊಂದು ಮೂಲೆಯಲ್ಲೂ ಬೇರೆ ಬೇರೆ ಸಮುದಾಯಕ್ಕೆ ಸೇರಿದ ದೇವಾಲಯಗಳು ನಿರ್ಮಾಣಗೊಂಡಿದೆ. ಇಂತಹ ಅನೇಕ ದೇವಾಲಗಳು ಗಂಗೊಳ್ಳಿಗೆ ವಿಶೇಷ ಧಾರ್ಮಿಕ ಮಹತ್ವ, ಸ್ಥಾನ ಮಾನ ಒದಗಿಸಿದೆ. ಇವುಗಳ ಪೈಕಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನ ಕೂಡ ಒಂದಾಗಿದೆ. ಈ ದೇವಸ್ಥಾನವು 1945ರ ಮಾರ್ಚ 17ರಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಹಸ್ತಾಂತರಿಸಲ್ಪಟ್ಟು ಅಂದಿನಿಂದ ಶ್ರೀ ಮಠದ ಶಾಖಾ ಮಠವಾಗಿ ಬಂದಿರುತ್ತದೆ.

1996ರಲ್ಲಿ ದೇವಳದ ಜೀಣೋದ್ಧಾರ ಕಾರ್ಯ ಯಶಸ್ವಿಯಾಗಿ ನಡೆಸಿ, ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ ವಡೇರ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀದೇವರನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಯಿತು. ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರು ಈ ದೇವಸ್ಥಾನದಲ್ಲಿ ಎರಡು ಬಾರಿ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದಾರೆ. ದೇವಳದ ಮುಂಭಾಗದಲ್ಲಿ ಸುಂದರವಾದ ಕೆರೆ, ಶಿಲಾ ನಿರ್ಮಿತ ಧ್ವಜ ಕಂಬ, ಆಕರ್ಷಕ ಕಲ್ಯಾಣ ಮಂಟಪ, ಸುಂದರವಾದ ಉತ್ಸವದ ಪಲ್ಲಕಿಗಳು, ಸುಮಾರು10 ಅಡಿ ಎತ್ತರದ ದೀಪ ಮೊದಲಾದವುಗಳು ದೇವಳಕ್ಕೆ ವಿಶೇಷ ಮೆರಗು ನೀಡಿದೆ. ಈ ದೇವಳದಲ್ಲಿ ನಡೆಯುವ ಹಬ್ಬಗಳ ಪೈಕಿ ಜರಗುವ ರಥೋತ್ಸವ ಊರಿಗೆ ಒಂದು ದೊಡ್ಡ ಹಬ್ಬವಾಗಿದೆ. ರಾಮಾಯಣ, ಕೃಷ್ಣಲೀಲೆ ಚರಿತ್ರೆ, ಅಷ್ಟದಿಕ್ಪಾಲಕರು ಸೇರಿದಂತೆ ಅನೇಕ ಸುಂದರ ಕೆತ್ತನೆಯಿಂದ ಕೂಡಿರುವ ಬ್ರಹ್ಮರಥ ಶೋಭಾಯಮಾನವಾಗಿದೆ. ತಾಲೂಕಿನ ಅತಿ ಎತ್ತರದ ಹಾಗೂ ಸುಂದರವಾದ ಬ್ರಹ್ಮರಥಕ್ಕೆ ವಿಶಿಷ್ಟ ಸ್ಥಾನವಿದೆ. 1988ರಲ್ಲಿ ಮಾಧವ ಪೈ ಅವರ ಸ್ಮರಣಾರ್ಥ ಅವರ ಮಕ್ಕಳು ದೇವಳಕ್ಕೆ ನೀಡಿದ ಸುಂದರವಾದ ಹೂವಿನತೇರು ಶುದ್ಧ ಷಷ್ಠಿಯಂದು ನಡೆಯುತ್ತದೆ.

ಶ್ರೀಗಳ ಜನ್ಮಸ್ಥಳ :

ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನವು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಯತಿ ಪರಂಪರೆಯ 22ನೇ ಸ್ವಾಮೀಜಿ ಶ್ರೀಮದ್ ದ್ವಾರಕಾನಾಥ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹಾಗೂ 23ನೇ ಪೀಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಜನ್ಮ ಸ್ಥಳವಾಗಿರುವುದು ಈ ಕ್ಷೇತ್ರದ ಮಹಾತ್ಮೆ.

ಇಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಏಳು ದಿನಗಳ ‘ಅಖಂಡ ಭಜನಾ ಸಪ್ತಾಹ’, ಕಾರ್ತಿಕ ಮಾಸದಲ್ಲಿ ನಡೆಯುವ ಕೆರೆ ದೀಪೋತ್ಸವ, ಫಾಲ್ಗುಣ ಮಾಸದಲ್ಲಿ ನಡೆಯುವ ಬ್ರಹ್ಮರಥೋತ್ಸವ, ಅವಭೃತ ಹಾಗ ರಾತ್ರಿ ಪಂಚಗಂಗಾವಳಿ ನದಿಯಲ್ಲಿ ನಡೆಯುವ ನೀರಾಟ ಉತ್ಸವಗಳು ಈ ದೇವಸ್ಥಾನದಲ್ಲಿ ನಡೆಯುವ ಹಲವು ಉತ್ಸವಗಳಲ್ಲಿ ಪ್ರಾಮುಖ್ಯವಾದುದು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!