Thursday, November 21, 2024

ಚಿತ್ತೂರಲ್ಲಿ ಅಪೂರ್ವ ವಿನ್ಯಾಸದ ಬಸ್ ಪ್ರಯಾಣಿಕರ ತಂಗುದಾಣ ‘ಗೋಲ್ಡನ್ ಟ್ರೈಯಾಂಗಲ್ ಬಸ್ ನಿಲ್ದಾಣ’ ಉದ್ಘಾಟನೆ

(ಜನಪ್ರತಿನಿಧಿ ವಾರ್ತೆ)
ಕುಂದಾಪುರ: ವ್ಯಕ್ತಿ ಬದುಕಿದ್ದಾಗ ಮಾಡುವ ಕೆಲಸಗಳು ಸತ್ತ ನಂತರವೂ ಶಾಶ್ವತವಾಗಿ ಜನ ನೆನಪಿಸಿಕೊಳ್ಳುತ್ತಾರೆ. ಎಂ.ರಘುರಾಮ ಶೆಟ್ಟರು ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವುದು, ಅವರು ಸಮಾಜಕ್ಕೆ ನೀಡಿರುವ ಕೊಡುಗೆಗೆ ಪೂರಕವಾಗಿ ಅವರ ಕುಟುಂಬದವರು ಬಸ್ ತಂಗುದಾಣವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅರ್ಪಣೆ ಮಾಡುತ್ತಿರುವುದು ಶ್ಲಾಘನೀಯವಾದ ಕಾರ್ಯ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ದಿ.ಎಮ್.ರಘುರಾಮ ಶೆಟ್ಟಿ ಚಿತ್ತೂರು ಇವರ ಸ್ಮರಣಾರ್ಥ ಚಿತ್ತೂರಿನಲ್ಲಿ ನಿರ್ಮಿಸಲಾದ ಗೋಲ್ಡನ್ ಟ್ರೈಯಾಂಗಲ್ ಬಸ್ ನಿಲ್ದಾಣವನ್ನು ಫೆ.3ರಂದು ಸಾರ್ವಜನಿಕ ಲೋಕಾರ್ಪಣೆಗೊಳಿಸಿ, ದಿ. ಎಂ.ರಘುರಾಮ ಶೆಟ್ಟಿಯವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಬಂಟ ಸಮಾಜ ತನ್ನ ನಾಯಕತ್ವ ಗುಣಗಳಿಂದ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ದಿ| ಎಂ.ರಘುರಾಮ ಶೆಟ್ಟರು ಕೂಡಾ ಕೃಷಿ, ಉದ್ಯಮ ಚಟುವಟಿಕೆಗಳ ಜೊತೆಯಲ್ಲಿ ನ್ಯಾಯ ಪಂಚಾಯತಿದಾರರಾಗಿಯೂ ಕಾರ್ಯನಿರ್ವಹಿಸಿದ್ದು ಅದೆಷ್ಟು ಕುಟುಂಬಗಳ ನೆಮ್ಮದಿಗೆ ಕಾರಣವಾಗಿತ್ತು. ಇವತ್ತು ಡಾ.ಅತುಲ್ ಕುಮಾರ್ ಶೆಟ್ಟರು ಕೂಡಾ ಸೇವಾ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದರು.

ಬಹು ಮಹತ್ವಕಾಂಕ್ಷೆಯ ಕೊಲ್ಲೂರು-ಕೊಡಚಾದ್ರಿ ಕೇಬಲ್ ಕಾರು ಯೋಜನೆಗೆ ಅಧಿಕೃತವಾಗಿ ಮಂಜೂರಾತಿ ದೊರಕಿದೆ. 6 ಕಿ.ಮೀ ದೂರದ ಈ ರೋಪ್ ವೇ ಕರ್ನಾಟಕದಲ್ಲಿಯೇ ಪ್ರಥಮದ್ದಾಗಿದ್ದು ಸುಮಾರು 360 ಕೋಟಿ ರೂ ವೆಚ್ಚದಲ್ಲಿ ಸಿದ್ಧವಾಗಲಿದೆ. ರಾಜ್ಯದಾದ್ಯಂತ ಜನ ಈ ಮಾರ್ಗವಾಗಿ ಬರುವುದರಿಂದ ಈ ಭಾಗದ ಅಭಿವೃದ್ದಿಗೂ ಕಾರಣವಾಗಲಿದೆ. ವಿಭಿನ್ನ ಶೈಲಿಯ ಈ ಬಸ್ ನಿಲ್ದಾಣ ಪ್ರವಾಸಿಗರ ಗಮನ ಸಳೆಯಲಿದೆ ಎಂದರು.

ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ತಂಗುದಾಣದ ಗಡಿಯಾರವನ್ನು ಉದ್ಘಾಟಿಸಿ ಮಾತನಾಡಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದ ಆ ಕಾಲಘಟ್ಟದಲ್ಲಿ ವಿವಿಧ ವ್ಯವಸ್ಥೆಗಳನ್ನು ಪ್ರತಿನಿಧಿಸಿ ಜನಸೇವೆ ಮಾಡಿ ಗ್ರಾಮೀಣ ಪ್ರದೇಶದ ಅವಶ್ಯಕತೆಗಳನ್ನು ಎಂ.ರಘುರಾಮ ಶೆಟ್ಟರು ಪೂರೈಸಿದ್ದರು. ಅವರನ್ನು ಸ್ಮರಿಸಿಕೊಳ್ಳುವ ಕಾರ್ಯ ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಹಿಸಿದ್ದರು.

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾರಣಕಟ್ಟೆ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸಿ.ಸದಾಶಿವ ಶೆಟ್ಟಿ, ಚಿತ್ತೂರು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಪೂಜಾರಿ ಉಪಸ್ಥಿತರಿದ್ದರು.

ಡಾ.ಅತುಲ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ದಿ.ರಘುರಾಮ ಶೆಟ್ಟರು ಪಂಚಾಯತ್ ರಾಜ್, ಸಹಕಾರ, ಕೃಷಿ, ಉದ್ಯಮ ವಲಯಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು ನಡೆಸುತ್ತಿದ್ದ ಪಂಚಾಯಿತಿಕೆ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. 1996 ಫೆ.3ರಂದು ಅವರು ನಿಧನರಾದರು. 1998ರಲ್ಲಿ ಈ ಬಸ್ ನಿಲ್ದಾಣದ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ರಸ್ತೆ ಅಗಲೀಕರಣ ಇತ್ಯಾದಿ ತೊಡಕುಗಳಿಂದ ವಿಳಂಬವಾಗಿ ಈಗ ಅದು ಲೋಕಾರ್ಪಣೆಯಾಗಿದೆ. ಸಲ್ದಾನ ಎಸೋಸಿಯೆಟ್ಸ್ ಇದರ ವಿನ್ಯಾಸ ರೂಪಿಸಿದೆ. ಇದರಲ್ಲಿ ಕೊಳ, ಗಡಿಯಾರ, ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ದಿ.ಎಂ.ರಘುರಾಮ ಶೆಟ್ಟರ ಪುತ್ಥಳಿಯನ್ನು ಸಹ ನಿರ್ಮಾಣ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಮತಿ ರಘುರಾಮ ಶೆಟ್ಟಿ, ವಿ.ಸದಾನಂದ ಶೆಟ್ಟಿ, ಡಾ.ಬಿ.ನಾರಾಯಣ ಶೆಟ್ಟಿ, ಡಾ.ಕಿರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಭಾಸ್ಕರ ಶೆಟ್ಟಿ ದಿ.ಎಂ.ರಘುರಾಮ ಶೆಟ್ಟಿಯವರ ಸಂಸ್ಮರಣೆ ಮಾಡಿದರು. ಚಿತ್ತೂರು ಶಾಲಾ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!