9.2 C
New York
Thursday, March 23, 2023

Buy now

spot_img

ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನಾಧರಿತ ಚಲನಚಿತ್ರ ನಿರ್ಮಾಣ-ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು

ಕುಂದಾಪುರ, ಫೆ.2: 15-16ನೇ ಶತಮಾನದ ಕಾಲಮಾನದಲ್ಲಿ 120 ವರ್ಷಗಳ ಕಾಲ ಭೂಮಿಯಲ್ಲಿ ಜೀವಿಸಿ ಜಗತ್ತಿಗೆ ಬಹುಮುಖದ ಸಂದೇಶ ನೀಡಿದ ಮಹಾನ್ ಸನ್ಯಾಸಿ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನ ಚರಿತ್ರೆಯನ್ನು ಚಲನಚಿತ್ರದ ಮೂಲಕ ತಿಳಿಯಪಡಿಸಲು ನಿರ್ಧಾರ ಮಾಡಲಾಗಿದೆ. ಶ್ರೀ ವಾದಿರಾಜರ ಸಮಗ್ರ ವ್ಯಕಿತ್ವವನ್ನು ಸೀಮಿತ ಅವಧಿಯಲ್ಲಿ ತೋರಿಸುವುದು ಅಸಾಧ್ಯವೆನ್ನುವುದು ಸರ್ವವೇದ್ಯವಾದರೂ ಪ್ರಮುಖ ಘಟನೆಗಳನ್ನು ಪರಿಣಾಮಕಾರಿಯಾಗಿ ತಿಳಿಯಪಡಿಸಲು ಚಿತ್ರತಂಡಕ್ಕೆ ತಿಳಿಸಲಾಗಿದೆ. ಚಿತ್ರತಂಡ ಶ್ರದ್ದೆ ವಹಿಸಿ ಶ್ರೀ ವಾದಿರಾಜರು ನೀಡಿದ ಸಂದೇಶವನ್ನು ಚಲನಚಿತ್ರದ ಮೂಲಕ ತೆರೆದಿಡಲು ಆಸಕ್ತಿ ಹೊಂದಿದ್ದಾರೆ ಎಂದು ಉಡುಪಿ ಸೋದೆ ಶ್ರೀ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಅವರು ಹೂವಿನಕೆರೆ ಶ್ರೀ ವಾದಿರಾಜರ ಮಠದಲ್ಲಿ ಸುದ್ಧಿಗೋಷ್ಠಿಯಲ್ಲಿ ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನಾಧರಿತ ಚಲನಚಿತ್ರ ನಿರ್ಮಾಣದ ಘೋಷಣೆ ಮಾಡಿದರು.

ಮಹಾನ್ ವ್ಯಕ್ತಿಗಳ ಕುರಿತು ಚಿತ್ರ ಮಾಡುವಾಗ ಸಾಕಷ್ಟು ಅಧ್ಯಯನ ಹಾಗೂ ಶ್ರದ್ದೆ ಅಗತ್ಯ. ಚಿತ್ರದ ಮೂಲಕ ವ್ಯಕ್ತಿಗಳ ಸಿದ್ದಾಂತ, ಚಿಂತನೆ, ವ್ಯಕ್ತಿತ್ವವನ್ನು ಸಮಾಜದ ಮುಂದಿಡಬೇಕು. ಅಂದಿನ ಕಾಲಘಟ್ಟ, ಸಮಾಜದ ಮೇಲೆ ಅವರು ಬೀರಿದ ಪ್ರಭಾವ, ಅವರಿಂದಾದ ಪರಿವರ್ತನೆ ಇತ್ಯಾದಿ ಅಂಶಗಳನ್ನು ಜಾಗರೂಕವಾಗಿ ತಿಳಿಸುವ ಕೆಲಸ ಆಗಬೇಕು. ಆ ಹಿನ್ನೆಲೆಯಲ್ಲಿ ಈ ಚಿತ್ರತಂಡ ಶ್ರೀ ವಾದಿರಾಜರ ಕುರಿತಾದ ಚಲನಚಿತ್ರ ನಿರ್ಮಿಸುವಲ್ಲಿ ಯಶಸ್ಸುಗಳಿಸಲಿ ಎಂದರು.

ಚಿತ್ರ ನಿರ್ದೇಶಕ ಹಯವದನ್ ಮಾತನಾಡಿ, ವಾದಿರಾಜರ 542ನೇ ಜಯಂತ್ಯುತ್ಸವದ ಸಂದರ್ಭದಲ್ಲಿ ಶಿಲಾಮಯ ದೇವಸ್ಥಾನ ಲೋಕಾರ್ಪಣೆಯೊಂದಿಗೆ ಈ ಮಹತ್ವಕಾಂಕ್ಷಿ ಚಲನಚಿತ್ರದ ಘೋಷಣೆಯಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ ದೊಡ್ಡ ಬಜೆಟ್‌ನಲ್ಲಿ ಶ್ರೀ ವಾದಿರಾಜರ ಕುರಿತಾದ ಚಲನಚಿತ್ರವನ್ನು ನಿರ್ಮಿಸಲಾಗುವುದು. ಯತಿಗಳ ಜನನ, ಬಾಲ್ಯ, ಸಂನ್ಯಾಸ ಸ್ವೀಕಾರ, ಸಮಾಜಮುಖಿ ಕಾರ್ಯಗಳು, ನಾಡು ನುಡಿಗೆ ಅವರು ನೀಡಿದ ಕೊಡುಗೆಗಳನ್ನು ಚಿತ್ರದಲ್ಲಿ ತೋರಿಸಲಾಗುವುದು. ಈ ಬಗ್ಗೆ ಆರು ತಿಂಗಳ ಶ್ರೀ ವಾದಿರಾಜರ ಕುರಿತು ಅಧ್ಯಯನ ಮಾಡಲಾಗುವುದು. ಅವರು ನಡೆದಾಡಿದ ಸ್ಥಳ ಇತ್ಯಾದಿಗಳನ್ನು ಸಿನಿಮಾದಲ್ಲಿ ತೋರಿಸಲು 15-16ನೇ ಶತಮಾನದ ಕಾಲಘಟ್ಟಕ್ಕೆ ಹೊಂದಿಸಲು ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಲಾಗುವುದು. ವಾದಿರಾಜರು ಮೂರು ಬಾರಿ ಅಖಂಡ ವಿಶ್ವ ಪರ್ಯಟನೆ ಮಾಡಿದ್ದರು. ಇದನ್ನೆಲ್ಲವನ್ನು ತೋರಿಸಲು ಅಸಾಧ್ಯವಾದರೂ ಪ್ರಮುಖಾಂಶಗಳನ್ನು ಪರಿಣಾಮಕಾರಿಯಾಗಿ ಚಿತ್ರಪ್ರೇಮಿಗಳ ಮುಂದಿಡಲಾಗುವುದು ಎಂದರು.

ಕನ್ನಡದಲ್ಲಿ ಹಲವಾರು ಪೌರಾಣಿಕ, ಮಹಾಮಹಿಮರ ಕುರಿತಾದ ಸಿನಿಮಾಗಳು ಬಂದಿವೆ. ಶ್ರೀ ವಾದಿರಾಜರ ಕುರಿತಾಗಿ ಈ ತನಕ ಯಾವುದೇ ಸಿನಿಮಾ ಬಂದಿಲ್ಲ. ಈಗಾಗಲೇ ನಾವು ಗಮನಿಸಿದಂತೆ ವಾದಿರಾಜರ ಬಾಲ್ಯ, ಸನ್ಯಾಸ ಸ್ವೀಕಾರ ಮೊದಲಾದ ಸನ್ನಿವೇಶಗಳು ಅದ್ಭುತ ದೃಶ್ಯಗಳಾಗುತ್ತವೆ. ಹಾಗಾಗಿ ಈ ಚಲನಚಿತ್ರ ವಿಭಿನ್ನವಾಗಿ ಮೂಡಿಬರಲಿದೆ ಎಂದರು.

ಚಲನಚಿತ್ರದಲ್ಲಿ ವಾದಿರಾಜರು ರಚಿಸಿರುವ ಜನಪ್ರಿಯ ಹಾಡುಗಳನ್ನು ಬಳಸಿಕೊಳ್ಳಲಾಗುವುದು. ಮುಖ್ಯವಾಗಿ ಹೂವಿನಕೆರೆಯ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ವಾದಿರಾಜರ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದು ಇನ್ನಷ್ಟೇ ತೀರ್ಮಾನಿಸಬೇಕಾಗಿದೆ. ಪ್ರಸಿದ್ಧ ಕಲಾವಿದರೋರ್ವರು ಈ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ ಪ್ರಮುಖ ನಟರುಗಳೆ ಇರುತ್ತಾರೆ. ಶ್ರೀ ವಾದಿರಾಜರ ಸಮಗ್ರ ವ್ಯಕ್ತಿತ್ವವನ್ನು ಜನಪ್ರಿಯ ಶೈಲಿಯಲ್ಲಿ ತೋರಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪವನ್ ಸಿಮಿಕೇರೆ, ವಿಕ್ರಮ್ ಹತ್ವಾರ್, ಸಚಿನ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,742FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!