Sunday, September 8, 2024

ರಾಜ್ಯೋತ್ಸವ ಪುರಸ್ಕೃತರಿಗೆ ‘ರಂಗಾರ್ಪಣ’ದಲ್ಲಿ ಅಭಿನಂದನೆ

ತೆಕ್ಕಟ್ಟೆ: ಬ್ರಹ್ಮಾನುಭವವನ್ನು ಹೊಂದಿದ ಗಣ್ಯರ ನಡುವೆ ನಾವಿದ್ದೇವೆ. ಗೆಳೆಯರ ಕೂಟದಲ್ಲಿ ಒಂದಷ್ಟು ವಿಚಾರಗಳ ಮೂಲಕ, ಕೊಡುಕೊಳ್ಳುಗೆಯ ಮೂಲಕ ಆನಂದದ ಅನುಭೂತಿಯನ್ನು ಹೊಂದುವುದೇ ನಿಜವಾದ ಬ್ರಹ್ಮಾನುಭವ. ಸಂಗೀತ ಗುರುಗಳಾದ ಮಧೂರು ಬಾಲಸುಬ್ರಹ್ಮಣ್ಯಂರವರು ಸಂಗೀತವನ್ನು ಹಾಡುತ್ತ ಹಾಡುತ್ತ ತಮ್ಮನ್ನೇ ತಾವು ಮೈ ಮರೆಯುತ್ತ ನಿಜವಾದ ಬ್ರಹ್ಮಾನುಭವವನ್ನು ಅನುಭವಿಸಿದವರು. ನಾಟಕವನ್ನು ನಿರ್ದೇಶಿಸುವುದರ ಮೂಲಕ ಗೋಪಾಲಕೃಷ್ಣ ನಾಯರಿ, ಕೊಡುಗೈ ದಾನಿಗಳಾಗಿ ಗುರುತಿಸಿಕೊಳ್ಳುವ ಮೂಲಕ ಕೃಷ್ಣಮೂರ್ತಿ ಮಂಜರು, ಕುಂದಗನ್ನಡದ ಸೊಗಡನ್ನು ದಿಗ್ಧೇಶಗಳಿಗೆ ಹಂಚುವ ಮೂಲಕ ಕುಂದಗನ್ನಡದ ರಾಯಭಾರಿ ಮನುಹಂದಾಡಿ ಇವರೆಲ್ಲಾ ಬ್ರಹ್ಮಾನುಭವವನ್ನು ಬಗೆಬಗೆಯಲ್ಲಿ ಪಡೆದವರು. ನಾವು ಆರಾಧಿಸಬೇಕಾದದ್ದು ವ್ಯಕ್ತಿತ್ವವನ್ನೇ ಹೊರತು ವ್ಯಕ್ತಿಗಳನ್ನಲ್ಲ. ಆ ನೆಲೆಯಲ್ಲಿ ಇಂದಿನ ಅಭಿನಂದನೆ ಹೆಚ್ಚು ಸೂಕ್ತ. ಇಂದು ಈರ್ವರು ಪ್ರಶಸ್ತಿ ಪುರಸ್ಕೃತರನ್ನು ಕೈಲಾಸ ಕಲಾಕ್ಷೇತ್ರ ಅಭಿನಂದಿಸುವುದು ಸಾಂಸ್ಕೃತಿಕವಾಗಿ ಗುರುತಿಸಿಕೊಂಡದ್ದಕ್ಕೆ. ದುರ್ಬಲ ಕಲಾವಿದರಿಗೆ ಸುಭದ್ರತೆಯನ್ನು ಒದಗಿಸುವುದರ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡು ಪುರಸ್ಕಾರಕ್ಕೆ ಬೆಲೆ ತಂದವರು ಕಲಾವಿದರ ಕಾಮಧೇನು ಮಂಜರು. ಕುಂದಾಪುರದ ಗ್ರಾಮ್ಯದ ಸೊಗಡನ್ನು, ಸೊಬಗನ್ನು ಮತ್ತೆ ಮತ್ತೆ ನೆನಪಿಸಿ ನಮ್ಮ ಭಾಷೆಯನ್ನು ವಿಶ್ವದಾದ್ಯಂತ ಪಸರಿಸಿ ಕುಂದಗನ್ನಡಕ್ಕೆ ಮಾನ್ಯತೆ ದೊರೆಯುವಂತೆ ಮಾಡಿದವರು ಹಂದಾಡಿಯವರು. ಇವರನ್ನು ಪುರಸ್ಕಾರಕ್ಕಾಗಿ ಗುರುತಿಸಿದ ಸರಕಾರಕ್ಕೆ ಅಭಿನಂದನೆ ಸಲ್ಲಿಸೋಣ. ಇಂದಿನ ಅಭಿನಂದನೆಗೆ ಕಾರಣ ಪ್ರಶಸ್ತಿ ಪುರಸ್ಕೃತರ ಬಗೆಗಿನ ಸಂತೋಷ ಎನ್ನುವುದು ಎಲ್ಲರ ಪಾಲಾಗಬೇಕು ಎಂಬುದೇ ಉದ್ದೇಶ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಹೇಳಿದರು.

ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಬೆಂಗಳೂರು ಇವರ ಸಹಯೋಗದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ರಂಗಾರ್ಪಣ ಕಲಾಚಿಗುರುಗಳ ಕಲರವದಲ್ಲಿ ರಾಜ್ಯೋತ್ಸವ ಪುರಸ್ಕೃತ ಕೃಷ್ಣಮೂರ್ತಿ ಮಂಜರನ್ನು, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮನು ಹಂದಾಡಿಯವರನ್ನು ಸಮ್ಮಾನಿಸಿ ಅಭಿನಂದನಾ ಮಾತುಗಳನ್ನಾಡಿದರು.

ಚಿಣ್ಣರಿಗೆ ಕೊಡುವ ಶಿಕ್ಷಣ ಅಭೂತಪೂರ್ವ. ತನ್ನಲ್ಲಿರುವ ವಿದ್ಯೆಯನ್ನು ಮಕ್ಕಳಿಗೆ ಹಂಚಿದರೆ ಮುದೊಂದು ದಿನ ಸಮಾಜ ಕಲೆಯ ಬೀಡಾಗುತ್ತದೆ. ಹಣದಿಂದ ನೆಮ್ಮದಿ ಸಿಗುವುದಿಲ್ಲ, ಆದರೆ ಕಲೆಯಿಂದ ನೆಮ್ಮದಿ ಸಾಧ್ಯ. ಜಾತಿ ಮತಗಳಿಲ್ಲದ ಕಲೆಯನ್ನು ಕಲಿತು ಸಮಾಜದಲ್ಲಿ ಗೌರವ ಸಂಪಾದನೆ ಮಾಡುವಂತಾಗಲಿ. ನಿಮ್ಮ ಮಕ್ಕಳಿಗೆ ಕಲೆಯ ಅಭಿರುಚಿ ಬೆಳೆಸಿ ಎಂದು ಮದೂರು ಪಿ. ಬಾಲಸುಬ್ರಹ್ಮಣ್ಯಂ ಪೋಷಕರಿಗೆ ಕಿವಿಮಾತು ಹೇಳಿದರು.

ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿಯವರು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಪ್ರಾಸ್ತಾವಿಕ ಮಾತನ್ನಾಡಿದರು. ಶ್ಯಾಮ್ ಕೀರ್ತನ್ ಹೊಳ್ಳ ಪ್ರಾರ್ಥನೆಗೈದು, ಪುಣ್ಯವತಿ ನಾವುಡ ಸ್ವಾಗತಿಸಿ, ಮೇಘನಾ ಸಾಲಿಗ್ರಾಮ ವಂದಿಸಿದರು. ಸುಮನಾ ನೇರಂಬಳ್ಳಿ ನಿರೂಪಣೆಗೈದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸುಗಮಸಂಗೀತ, ಯಕ್ಷ ಕಂಠಗಳ ಗಾಯನ, ಚಂಡೆ ಮದ್ದಳೆ ಜುಗಲ್‌ಭಂದಿ, ಕರಾಟೆ, ಚಿತ್ರಕಲೆಗಳ ಪ್ರದರ್ಶನ, ಭರತನಾಟ್ಯ ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!