Sunday, September 8, 2024

ಕನ್ನಡ ಭಾಷೆ ಸಂಪದ್ಭರಿತಗೊಳ್ಳಲು ಕರಾವಳಿಗರ ಕೊಡುಗೆ ಅಪಾರ-ಸಚಿವ ಜೆ.ಸಿ ಮಾದುಸ್ವಾಮಿ

ನಟ ನಿರ್ದೇಶಕ ರಮೇಶ ಅರವಿಂದ್ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

ಕೋಟ: ಕನ್ನಡ ಭಾಷೆ ಶ್ರೀಮಂತ ಹಾಗೂ ಸಂಪದ್ಭರಿತಗೊಳ್ಳಲು ಕಡಲ ತೀರದ ಜನರ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ಶಿವರಾಮ ಕಾರಂತರು ವಿಶ್ವ ವಿದ್ಯಾನಿಲಯವೇ ಆಗಿದ್ದರು. ಅವರು ಎಲ್ಲಾ ಕ್ಷೇತ್ರಗಳನ್ನು ಅರಿತು ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಪ್ರತಿಯೊಂದು ರಂಗದಲ್ಲಿಯೂ ಪಾಂಡಿತ್ಯ ಹೊಂದಿದ್ದರು. ನುಡಿ ಮತ್ತು ನೆಲದ ಬಗ್ಗೆ ಅವರ ಶ್ರದ್ಧೆ, ಭಾಷೆಯ ಬೆಳೆಸುವಿಕೆಯಲ್ಲಿ ಅವರು ನೀಡಿದ ಕೃತಿಗಳು, ನಾಡಿಗೆ ನೀಡಿದ ಅವರ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ ಎಂದು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕೋಟತಟ್ಟು ಗ್ರಾಪಂ, ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟದ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ಕೋಟ ಶಾಂಭವಿ ಶಾಲಾ ವಠಾರದಲ್ಲಿ ಸೋಮವಾರ ಆಯೋಜಿಸಲಾದ ಡಾ.ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾರಂತರು ಈ ನಾಡಿನ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸಕ್ಕೆ ದೊಡ್ಡ ಕೊಡುಗೆ ನೀಡಿದವರು. ಜ್ಞಾನಪೀಠ ಪ್ರಶಸ್ತಿಯಿಂದ ಕಾರಂತರನ್ನು ಅಳೆಯುವುದಲ್ಲ. ಅವರು ನೀಡಿದ ಕೊಡುಗೆ ಅತ್ಯಂತ ಶ್ರೇಷ್ಠ ಮಟ್ಟದ್ದು. ಕಾರಂತರು ಬರೆಯುವ ಕಾಲದಲ್ಲಿ ಸಾಹಿತ್ಯ ವ್ಯವಹಾರಿಕವಾಗಿ ಬೆಳೆದಿರಲಿಲ್ಲ. ಮನಸ್ಸಿನ ತೃಪ್ತಿಗಾಗಿ ಅವರು ಬರೆಯುತ್ತಿದ್ದರು. ಕಾರಂತರ ಹುಟ್ಟೂರಿನಲ್ಲಿ ನಟ ರಮೇಶ್ ಅರವಿಂದ್ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣವಾದುದು ಎಂದರು.

ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಶಿವರಾಮ ಕಾರಂತರು ಸಣ್ಣ ಸಣ್ಣ ವಿಷಯಗಳನ್ನು ಗಮನಿಸಿದ್ದಾರೆ. ಗ್ರಹಿಸಿ ಬರೆದಿದ್ದಾರೆ. ಅವರ ಕುತೂಹಲ ನಾವೆಲ್ಲ ಯೋಚಿಸುವಂತಿದೆ. ಕಾರಂತರ ಹೆಸರಲ್ಲಿ ಅವರ ಹುಟ್ಟೂರಲ್ಲಿ ಭವನ ನಿರ್ಮಿಸಿ ಅವರ ಇಡೀ ಜೀವನವನ್ನು ತೆರೆದಿಡುವಂತೆ ಮಾಡಿರುವ ಪ್ರಯತ್ನ ಶ್ಲಾಘನೀಯ ಎಂದರು.
ಮಾನವೀಯ ಸಂಬಂಧಗಳು ಬೆಸೆಯಬೇಕು. ಮನುಷ್ಯರ ರಕ್ತ ಚೆಲ್ಲಲು ಅವಕಾಶ ನೀಡಬಾರದು. ಮಾನವೀಯ ಮೌಲ್ಯಗಳ ಜಾಗೃತಿಗೆ ಪ್ರಯತ್ನಿಸಬೇಕು. ಜೀವನದಲ್ಲಿ ಯಶಸ್ಸು ಪಡೆಯುವಲ್ಲಿ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹೆದರದೆ ಮುಂದುವರಿಯಬೇಕು. ಪ್ರತಿಯೊಬ್ಬರಲ್ಲಿಯೂ ಅದ್ಭುತವಾದ ಪ್ರತಿಭೆಗಳಿದ್ದು, ರಂಗೋಲಿಯ ಚುಕ್ಕಿಗಳಂತೆ ಇಟ್ಟ ಚುಕ್ಕಿ ಆಕಾರ ಪಡೆಯುತ್ತದೆ. ಅಷ್ಟೇ ಎನ್ನುವ ಮನೋಭಾವದಿಂದ ಮುಂದಡಿ ಇಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದರು.

ಇದೇ ಸಂದರ್ಭದಲ್ಲಿ ನರೇಂದ್ರ ಕುಮಾರ್ ಕೋಟ ಅವರ ’ಸೋಲು ಅಂತಿಮವಲ್ಲ’ ಕೃತಿ ಬಿಡುಗಡೆಗೊಳಿಸಲಾಯಿತು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತಾಪಂ ಕಾರ್ಯನಿರ್ವಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟ ಇಬ್ರಾಹಿಂ ಸಾಹೇಬ್, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ, ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷ ಸುಲತಾ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಕುರಿತು ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್. ಶೆಣೈ ಮಾತನಾಡಿದರು. ಶ್ರೀಧರ ಹಂದೆ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಂ ಶೆಟ್ಟಿ ವಂದಿಸಿದರು. ನರೇಂದ್ರ ಕುಮಾರ್ ಕೋಟ ನಿರೂಪಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರ್ವಹಿಸಿದರು.

ಇದಕ್ಕೂ ಮುನ್ನ ಕೋಟತಟ್ಟು ಪಂಚಾಯತ್ ನಿಂದ ಹೊರಟ ಶೋಭಾಯಾತ್ರೆಯು ಕಾರಂತ ಥೀಂ ಪಾರ್ಕ್ ನಲ್ಲಿ ಕಾರಂತರ ಪುತ್ಥಳಿಗೆ ನಮನ ಸಲ್ಲಿಸಿ ಕಾರ್ಯಕ್ರಮದ ವೇದಿಕೆಗೆ ಆಗಮಿಸಿತು. ಕಾರ್ಯಕ್ರಮದ ನಂತರ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!