Sunday, September 8, 2024

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ತಾ. ಮಟ್ಟದ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳು

ಕುಂದಾಪುರ : ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣಕ್ಕಾಗಿ ಶ್ರೀ ಸಿದ್ಧಿವಿನಾಯಕ ದೇವಾಲಯವು 26ನೇ ವರ್ಷದ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ದಿನಾಂಕ 12 ರಂದು ಏರ್ಪಡಿಸಿತ್ತು. ಕುಂದಾಪುರ ತಾಲ್ಲೂಕು ವ್ಯಾಪ್ತಿಯ ಸುಮಾರು 21 ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಸ್ಪರ್ಧಾ ಕಾರ್ಯಕ್ರಮವನ್ನು ಕುಂದಾಪುರದ ಪೊಲೀಸ್ ಉಪ ಅಧೀಕ್ಷಕರಾದ ಕೆ ಶ್ರೀಕಾಂತ್ ಉದ್ಘಾಟಿಸಿ, ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸದ ದೃಷ್ಟಿಯಿಂದ ಇಂತಹ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲು, ಸಭಾ ಕಂಪನವನ್ನು ಹೋಗಲಾಡಿಸಿಕೊಳ್ಳಲು, ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಈ ವೇದಿಕೆ ವರದಾನವಾಗಲಿದೆ ಎಂದರು.

ಸ್ಪರ್ಧಾ ಕಾರ್ಯಕ್ರಮದ ಗುರಿ ಮತ್ತು ಉದ್ದೇಶದ ಕುರಿತಂತೆ ಮಾಹಿತಿ ನೀಡಿದ ಶಾಲಾ ಪ್ರಾಂಶುಪಾಲರೂ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಆದ ಶರಣ ಕುಮಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಸೂಕ್ತವಾದ ವೇದಿಕೆಯನ್ನು ಒದಗಿಸಿಕೊಡಬೇಕೆಂಬ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿಗಳೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಸಂಸ್ಥಾಪಕರೂ ಆಗಿದ್ದ ದಿ. ವೇದಮೂರ್ತಿ ಹೆಚ್ ರಾಮಚಂದ್ರ ಭಟ್ಟರ ಸದಾಶಯದಂತೆ ಈ ಸ್ಪರ್ಧಾ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಆಯೋಜಿಸಲಾಗಿದೆ. ಕೊರೋನ ಮಹಾಮಾರಿಯ ಕಾರಣದಿಂದ ಎರಡು ವರ್ಷ ಕಾರ್ಯಕ್ರಮ ಸ್ಥಗಿತಗೊಂಡಿದ್ದರೂ ಕುಂದಾಪುರ ತಾಲೂಕಿಗೆ ಒಳಪಡುವ ಎಲ್ಲಾ ಶಾಲೆಗಳು ನೀಡಿದ ಬೆಂಬಲದಿಂದ ಈ ಕಾರ್ಯಕ್ರಮ ಇಂದು ಇನ್ನಷ್ಟು ಅದ್ಧೂರಿಯಾಗಿ ನೆಡೆಯುತ್ತಿದೆ. ಈ ವೇದಿಕೆಯಲ್ಲಿ ವಿದ್ಯಾರ್ಥಿಗಳು ಪಡೆದುಕೊಂಡ ಅನುಭವಗಳು ಅವರ ಉತ್ತರೋತ್ತರ ಶ್ರೇಯಸ್ಸಿಗೆ ಭದ್ರ ಬುನಾದಿಯಾಗಲಿದೆ ಎಂದರು.

ಸಭೆಯ ಅಧ್ಯಕ್ಷೀಯತೆಯನ್ನು ಶ್ರೀ ಸಿದ್ಧಿವಿನಾಯಕ ದೇವಳದ ಧರ್ಮದರ್ಶಿಗಳೂ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರೂ ಆದ ವೇದಮೂರ್ತಿ ಹೆಚ್ ಬಾಲಚಂದ್ರ ಭಟ್ಟರು ವಹಿಸಿದ್ದರು.

ಸುಮಾರು 22 ಬಗೆಯ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಭಾವಗೀತೆ ಸ್ಪರ್ಧೆ, ಕುಂದಾಪ್ರ ಕನ್ನಡ, ಶುದ್ಧಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷಣ ಸ್ಪರ್ಧೆ, ಕನ್ನಡ ಮತ್ತು ಇಂಗ್ಲೀಷ್ ಉಕ್ತಲೇಖನ ಸ್ಪರ್ಧೆ, ಪುರಂದರದಾಸರ ಭಜನೆ ಹಾಡುವ ಸ್ಪರ್ಧೆ, ಸಮೂಹ ಗೀತೆ ಮತ್ತು ನೃತ್ಯ ಸ್ಪರ್ಧೆ, ಗ್ರೀಟಿಂಗ್ ಕಾರ್ಡ್ ತಯಾರಿಕೆ, ಏಕಪಾತ್ರಭಿನಯ, ರಸಪ್ರಶ್ನೆ, ಚದುರಂಗ ಮುಂತಾದ ಸ್ಪರ್ಧೆಗಳಲ್ಲಿ ಸುಮಾರು ಎಂಟು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದರು. ಸುಮಾರು ಐವತ್ತಕ್ಕೂ ಹೆಚ್ಚು ಪರಿಣತರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಗಣೇಶ್ ಗಂಗೊಳ್ಳಿ ಮತ್ತು ಕೋಟೇಶ್ವರದ ಸಂಗೀತ ಶಿಕ್ಷಕಿ ಸುಧಾ ರಾಜಗೋಪಾಲ್ ಎಂ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಿದರು.

ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆತಂದ ಶಾಲೆಗಳಿಗೂ ವಿಶೇಷ ಬಹುಮಾನಗಳನ್ನು ನೀಡಿ ಸತ್ಕರಿಸಲಾಯಿತು. ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್, ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾಮುಖ್ಯೋಪಾಧ್ಯಾಯಿನಿ ಸುಜಾತ ಸದಾರಾಮ್, ಆಪ್ತ ಸಮಾಲೋಚಕಿ ಹೇಮಾಮಾಲಿನಿ, ಶಿಕ್ಷಕ-ಶಿಕ್ಷಕೇತರ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸಹ ಶಿಕ್ಷಕ ಶ್ರೀಮಧು ಕೆ ಎಲ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಮಹಾದೇವ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!