Thursday, November 21, 2024

ಮದ್ಯ ಮಾದಕ ದ್ರವ್ಯ ವಿರೋಧಿ ದಿನಾಚಾರಣೆ

ಜೂನ್ 26 ಪ್ರತಿ ವರುಷ ಮಾದಕ ದ್ರವ್ಯ ವಿರೋಧಿ ದಿನಾಚಾರಣೆ ಎಂದು ಆಚರಿಸಲಾಗುತ್ತದೆ. ಪ್ರತಿ ವರುಷ unodc ಒಂದು ಧ್ಯೇಯ ವಾಕ್ಯ ಘೋಷಿಸುತ್ತದೆ. ಈ ವರುಷದ ಧ್ಯೇಯ ವಾಕ್ಯ “ಆರೋಗ್ಯ ಮತ್ತು ಮಾನವೀಯ ಬಿಕ್ಕಟ್ಟುಗಳ ನಡುವೆಯೂ ಮಾದಕವಸ್ತು ಉಪಯೀಗಿಸುವವರ ಸವಾಲುಗಳನ್ನು ಪರಿಹರಿಸುವುದು” ಎಂದು. ಕೋವಿಡ್ ಸಾಂಕ್ರಾಮಿಕ, ಉಕ್ರೇನ್, ಅಫಘಾನಿಸ್ತಾನ ಯುದ್ಧಗಳು ಇವು ಈ ವರುಷದ ವಿಶ್ವದ ಸಂಕಷ್ಟಗಳು. ಇವುಗಳನ್ನು ಎದುರಿಸುವುದರ ನಡುವೆಯು ಮಾದಕ ದೃವ್ಯ ವ್ಯಸನದ ವಿರುದ್ಧ ಹೋರಾಟ ಮಾಡುವುದು ಅಗತ್ಯ ಎಂದು ಸಂಯುಕ್ತ ರಾಷ್ಟ್ರ ತಿಳಿ ಹೇಳಿದೆ. ಎರಡು ದಶಕಗಳಿಂದ, ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್ (UNODC) ಡ್ರಗ್ಸ್‌ನಿಂದ ಜಗತ್ತನ್ನು ಸುರಕ್ಷಿತವಾಗಿಸಲು ಸಹಾಯ ಮಾಡುತ್ತಿದೆ.

ಒಬ್ಬ ವೈದ್ಯನಾಗಿ ಅದರಲ್ಲಿಯೂ ಮದ್ಯ, ಮಾದಕ ದೃವ್ಯ ವ್ಯಸನ ವಿಮುಕ್ತಿ ಚಿಕಿತ್ಸಕನಾಗಿ ನಾನು ನೋಡುತ್ತಾ ಇರುವ ಒಂದು ಕೆಟ್ಟ ಬೆಳವಣಿಗೆ ಅಂದರೆ ಈ ವ್ಯಸನ ಯುವಕರಲ್ಲಿ ವ್ಯಾಪಕವಾಗಿ ಹರಡುತ್ತಾ ಇದೆ. ನನ್ನ ವೃತ್ತಿಜೀವನದ ಮೊದಲಿನಲ್ಲಿ ನಾನು ಹೆಚ್ಚು ನೋಡುತ್ತಾ ಇದ್ದದ್ದು ಮದ್ಯ ವ್ಯಸನಿಗಳನ್ನು. ಈಗಲೂ ಮದ್ಯ ವ್ಯಸನಿಗಳನ್ನೇ ಹೆಚ್ಚು ನೋಡಿದರು ಕಳೆದ ಒಂದೈದು ವರುಷಗಳಲ್ಲಿ ಗಾಂಜಾ ಅಫೀಮು ಆಂಫೆಟಮೈನ ಮುಂತಾದ ಪದಾರ್ಥಗಳ ಉಪಯೋಗ ಶಾಲಾಕಾಲೇಜುಗಳಲ್ಲಿ ಕೂಡ ಹೆಚ್ಚಾಗುತ್ತಾ ಇರುವುದು. ಹದಿಹರೆಯ ಸಾಕಷ್ಟು ಒತ್ತಡಗಳನ್ನು ನಮ್ಮ ಯುವಜನರಲ್ಲಿ ಉಂಟು ಮಾಡುತ್ತಾ ಇದೆ. ಅದರಲ್ಲಿಯೂ ಕಾಲೇಜು ವಿದ್ಯಾರ್ಥಿಗಳು ನಿರ್ವಹಣೆಯ ಒತ್ತಡ, ಕಾಲೇಜಿನ ರೂಲ್ಸ್ ಪಾಲಿಸುವ ಒತ್ತಡ ಹಾಗೆಯೇ ಸುಧಾರಿಸು” ನಮ್ಮಂತಾಗು” ಎನ್ನುವ ಮಿತ್ರರ ಒತ್ತಡ ಇವುಗಳ ನಡುವೆ ಕಂಗಾಲಾಗಿದ್ದಾರೆ. ಹಲವಾರು ಯುವಕರು ಈ ಒತ್ತಡ ನಿಭಾಯಿಸಲು ಮಿತ್ರರ ಪ್ರೇರಣೆಯಿಂದಲೋ ಅಥವಾ ಕುತೂಹಲದಿಂದಲೋ ಅಥವಾ ವಯೋಸಹಜವಾದ ಪ್ರಯೋಗ ಮನೋಭಾವದಿಂದಲೋ ಮೊಟ್ಟ ಮೊದಲ ಬಾರಿಗೆ ಸಿಗರೇಟ್ ಅಥವಾ ಮದ್ಯ ಅಥವಾ ಗಾಂಜಾ ಉಪಯೋಗಿಸುತ್ತಾರೆ. ಇನ್ನು ಕೆಲವರು ತಮ್ಮ ಆತಂಕ ಅಥವಾ ಖಿನ್ನತೆಗೆ ಇದೇ ಪರಿಹಾರ ಎಂದು ಎಲ್ಲಿಯೋ ಓದಿಕೊಂಡು ಅಥವಾ ಮಿತ್ರರಿಂದ ಯಾ ಗುರುಹಿರಿಯರಿಂದ ಕೇಳಿಸಿಕೊಂಡು ಈ ಪದಾರ್ಥಗಳನ್ನು ಸೇವಿಸುತ್ತಾರೆ. ಇದನ್ನು self medication hypothesis ಎಂದು ನಾವು ವೈದ್ಯರು ಕರೆಯುತ್ತೇವೆ.

ಇವತ್ತು ನಾವು ನೋಡುತ್ತಾ ಇರುವ ಬೆಳವಣಿಗೆ ಅಂದರೆ ಯುವ ಜನತೆ ಮೊದಮೊದಲು ಸಿಗರೇಟ್ ಮದ್ಯ ಉಪಯೋಗಿಸಿ ಇವಾಗ ಗಾಂಜಾ ಅಫೀಮು ಆಂಫಿಟಮಿನ್ ಬಳಕೆಯತ್ತ ಹೋಗುತ್ತಾ ಇರುವುದು, ಇದನ್ನು escalation hypothesis ಎನ್ನುತ್ತೇವೆ. ಹೆಚ್ಚಿನ ಸಂದರ್ಭದಲ್ಲಿ ಯುವ ಜನತೆ ಮೊದಲು ಉಪಯೋಗಿಸುವುದು ತಂಬಾಕು, ಗಾಂಜಾ ಅಥವಾ ಮದ್ಯ. ಇವುಗಳನ್ನು ನಾವು ವೈದ್ಯರು gateway drugs ಎಂದು ಕರೆಯುತ್ತೇವೆ. ಇವುಗಳನ್ನು ಸೇವಿಸಿ ಇದರಿಂದ ಪಡೆದ ಕಿಕ್ ಸಾಲದೇ ಇದ್ದರೇ ಇವುಗಳ ಮಿಶ್ರಣ ಅಥವಾ ಇವುಗಳಿಗಿಂತ ಹೆಚ್ಚು ಕಿಕ್ ಕೊಡುವ ಪದಾರ್ಥಗಳತ್ತ ಅವರ ಮನ ಹರಿದು ಮುಂದೆ ಅಫೀಮು, ಆಂಫಿಟಮಿನ್ ಮುಂತಾದ ದೃವ್ಯಗಳ ಸೇವನೆಗೆ ವಾಲುತ್ತಾರೆ.

ಈ ಪದಾರ್ಥಗಳ ಉಪಯೋಗದಿಂದ ಮನಸ್ಸಿಗೆ ಖುಷಿ ಸಿಗುತ್ತದೆ. ಒತ್ತಡ ಕಡಿಮೆಯಾದ ಹಾಗೆ ಅನ್ನಿಸುತ್ತದೆ. ಆದರೇ ಬರುಬರುತ್ತ ಈ ಖುಷಿ, ನೆಮ್ಮದಿ ಸಿಗಲು ಬೇಕಾದ ಡೋಸ್ ಜಾಸ್ತಿಯಾಗುತ್ತದೆ. ಇದನ್ನು “ತಾಳಿಕೆ “ ಎಂದು ಕರೆಯುತ್ತೇವೆ. ಬರುಬರುತ್ತ ವಾರಕ್ಕೆ ಒಮ್ಮೆ “ಸಂಡೆ ಉಪಯೋಗ ಮಾಡುತ್ತ ಇದ್ದ ಪದಾರ್ಥ ಪ್ರತಿ ದಿನ “ಸಂಜೆ” ಉಪಯೋಗಿಸಲು ಪ್ರಾರಂಭಿಸುತ್ತಾರೆ. ಹಾಗೆಯೇ ನೋಡುತ್ತಾ ಬೆಳಬೆಳಗ್ಗೆ ಉಪಯೋಗಿಸಲು ತೊಡಗಿ, ಈ ಪದಾರ್ಥ ಸಿಗದೇ ಇದ್ದಲ್ಲಿ ಕೈಕಾಲು ನಡುಕ, ಹೆದರಿಕೆ, ನಿದ್ರಾಹೀನತೆ, ಭ್ರಮೆ, ಕಿವಿಯಲ್ಲಿ ಯಾರೋ ಶೂನ್ಯದಲ್ಲಿ ಮಾತಾಡಿದ ಹಾಗೆ, ಬೈದ ಹಾಗೆ ಎನಿಸುವುದು ಪ್ರಾರಂಭವಾಗುತ್ತದೆ. ಈ ಪದಾರ್ಥಗಳು ಸಿಗದೇ ಇದ್ದಾಗ ಉಂಟಾಗುವ ಅಹಿತಕರ ಮನೋದೈಹಿಕ ಸಮಸ್ಯೆಗಳಿಗೆ ಹಿಂತೆಗೆತದ ಚಿಹ್ನೆಗಳು ಎಂದು ಕರೆಯುತ್ತೇವೆ. ಹಲವಾರು ಯುವಕರು ಈ ಪದಾರ್ಥಗಳ ಅತಿಯಾದ ಸೇವನೆಯಿಂದ ಬಳಲಿ ಅದರಿಂದ ಹೊರಗೆ ಬರಬೇಕು ಅಂದರು ಈ ಹಿಂತೆಗೆತದ ಚಿಹ್ನೆಗಳು ಅವರನ್ನು ದೃತಿಗೆಡಿಸಿ ಬಿಡುತ್ತದೆ.

ಈ ಹಿಂತೆಗೆತದ ಚಿಹ್ನೆಗಳನ್ನು ಸಂಭಾಳಿಸುವುದು ಹಾಗು ಈ ಪದಾರ್ಥಗಳ ತ್ಯಜಿಸಲು ಮನ ಒಲಿಸಿ ಹಾಗೆಯೇ ಈ ಪದಾರ್ಥಗಳನ್ನು ಮತ್ತೆ ಮತ್ತೆ ತೆಗೆದುಕೊಳ್ಳಬೇಕು ಅನ್ನುವ ತವಕ ಕಡಿಮೆ ಮಾಡುವುದು ಇವೆಲ್ಲ ಮನೋವೈದ್ಯಕೀಯ ತಂಡವೊಂದರ ಕೆಲಸ. ಹಾಗೆಯೇ ಕೆಲವು ಜನರು ಖಿನ್ನತೆ ಆತಂಕ ಮುಂತಾದ ಸಮಸ್ಯೆಗಳಿಂದ ಈ ಪದಾರ್ಥಗಳನ್ನು ಸೇವಿಸುತ್ತಾ ಇದ್ದರೆ ಅವರಿಗೆ ಆಪ್ತ ಸಲಹೆ, ಸಮಾಧಾನ, ಮನಸ್ಸಿಗೆ ಆರಾಮ ನೀಡುವ ವ್ಯಾಯಾಮಗಳ ಅವಶ್ಯಕತೆ ಇರುತ್ತದೆ. ಇದನ್ನು ಮನಶಾಸ್ತ್ರಜ್ಞರು ಮನೋವೈದ್ಯರು ಚರ್ಚಿಸಿ ನಿರ್ಧರಿಸುತ್ತಾರೆ. ಹಾಗೆಯೇ ಅಗತ್ಯ ಆತಂಕ ನಿವಾರಕ ಹಾಗು ಖಿನ್ನತೆ ನಿವಾರಕ ಮಾತ್ರೆಗಳನ್ನು ವೈದ್ಯರು ನೀಡುತ್ತಾರೆ. ಕೆಲವರು ಮನೆಯ ಸಮಸ್ಯೆಗಳಿಂದ ಈ ತೊಂದರೆಗಳಿಗೆ ದಾಸರಾಗುತ್ತಾರೆ. ಅಂತಹವರಿಗೆ ಮನೋಸಾಮಾಜಿಕ ಸಲಹಾ ತಜ್ಞರು ಮನೆಯವರನ್ನು ಕರೆದು ಮಾತನಾಡಿ ಕೆಲವೊಮ್ಮೆ ಕೌಟುಂಬಿಕ ಚಿಕಿತ್ಸೆ ಮಾಡಬೇಕಾಗುತ್ತದೆ.

ಇತ್ತೀಚಿನ ದಿನಗಳ ಬೆಳವಣಿಗೆ ಅಂದರೆ ಈ ಮಾದಕ ದೃವ್ಯ ವ್ಯಸನ ಚಿಕಿತ್ಸೆಯಲ್ಲಿ ಈ ಪದಾರ್ಥಗಳ ತವಕ ಕಡಿಮೆ ಮಾಡುವ ಮಾತ್ರೆಗಳ ಬಗ್ಗೆ ಸಂಶೋದನೆಗಳು ನಡೆದು ಈ ಮಾತ್ರೆಗಳ ಉಪಯೋಗ ಸಹಾಯಕಾರಿಯಾಗಿದೆ. ವೈಜ್ಞಾನಿಕ ತಳಹದಿಯಲ್ಲಿ ಬೆಳೆದು ಬಂದಿರುವ ಮಾತ್ರೆ ಹಾಗು ಮಾತು ಚಿಕಿತ್ಸೆಯ ಜೊತೆಜೊತೆಯಲ್ಲಿ ಸ್ವಸಹಾಯ ಚಿಕಿತ್ಸೆ ಅಂದರೆ “ಅನಾಮಿಕ ಅಮಲಿಗಳು “alcoholic anonymous”, “narcotic anonymouss” ಮುಂತಾದ ಈ ಪದಾರ್ಥಗಳನ್ನು ಸೇವಿಸಿ ಅವುಗಳನ್ನು ತೊರೆದ ಮಾಜಿ ವ್ಯಸನಿಗಳು ಸೇರಿ ತಮ್ಮದೇ ಗುಂಪುಗಳನ್ನು ಮಾಡಿಕೊಂಡು ತಮ್ಮದೇ ಕೆಲವು ಧ್ಯೇಯಗಳನ್ನು ಭೋದಿಸುವ, ಚರ್ಚಿಸುವ ಸ್ವಸಹಾಯ ಚಿಕಿತ್ಸೆ ಈ ರೋಗ ಮರುಕಳಿಸದೆ ಇರಲು ತುಂಬಾ ಸಹಾಯ ಮಾಡುತ್ತದೆ.
ಒಟ್ಟಾರೆಯಾಗಿ ನಾವು ವ್ಯಸನಗಳನ್ನು ಎದುರಿಸಲು ಮಲ್ಟಿಮೋಡಲ್” ವಿಧಾನವನ್ನು ಅನುಸರಿಸಬೇಕಾಗಿದೆ. ಮನೋವೈದ್ಯರು, ಮನಶಾಸ್ತ್ರಜ್ಞರು, ಮನೋಸಾಮಾಜಿಕ ಕಾರ್ಯಕರ್ತರು, ಮಾಜಿ ವ್ಯಸನಿಗಳು ಹಾಗು ಕೆಲವೊಮ್ಮೆ ಫಿಸಿಶಿಯನ್ ವೈದ್ಯರು ಎಲ್ಲ ಸೇರಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ .

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!