Thursday, November 21, 2024

ಹಿರಿಯ ಭಜಕ ನಿಡೂಟಿ ಶೀನಪ್ಪ ಶೆಟ್ಟಿ

ಭಜನೆಯ ಕುಣಿತದಲ್ಲಿ 76ರ ವಯಸ್ಸಿನಲ್ಲೂ ಕೂಡಾ 18ರ ಯುವಕನಂತೆ ಕುಣಿಯಬಲ್ಲ ಭಜನಾಪಟು ಮೇಲ್ ಹೊಸೂರು ನಿಡೂಟಿ ಶೀನಪ್ಪ ಶೆಟ್ಟಿ.

ಕುಂದಾಪುರ ತಾಲೂಕಿನ ಹೇರೂರಿನಲ್ಲಿ ದಿ. ಮಾದಯ್ಯ ಶೆಟ್ಟಿ, ದಿ. ಚಂದಮ್ಮ ಶೆಡ್ತಿಯವರ ಒಂಬತ್ತು ಮಕ್ಕಳಲ್ಲಿ ಜ್ಯೇಷ್ಠ ಪುತ್ರರಾಗಿ ದಿನಾಂಕ 28/08/1948ರಲ್ಲಿ ಜನಿಸಿದ ಇವರು ಹೇರೂರು ರಾಗಿಹಕ್ಲ್ ಶಾಲೆಯಲ್ಲಿ ಮೂರನೇ ತರಗತಿವರೆಗೆ ವಿದ್ಯಾಭ್ಯಾಸ ಪೂರೈಸಿದ ಬಳಿಕ 1963ರಲ್ಲಿ ಮೇಲ್ ಹೊಸೂರು ನಿಡೂಟಿಗೆ ಬಂದು ಕೃಷಿ ಜೀವನದತ್ತ ದಾಪುಗಾಲು ಇಟ್ಟರು. ಚಿಕ್ಕ ವಯಸ್ಸಿನಲ್ಲೇ ದೇವರ ನಾಮಸ್ಮರಣೆಯತ್ತ ಮುಖ ಮಾಡಿದ ಇವರು ಶ್ರೀರಾಮ ಭಜನೆಯಲ್ಲಿ ನಿರತರಾದರು. ಭಜನೆ ಗುರುಗಳಾದ ಕೆರಾಡಿ ಗೊಳಿಮನೆ, ದಿ. ಗೋವಿಂದ ಶೆಟ್ಟಿ ಹಾಗೂ ಅಪ್ಪು ಕೊಠಾರಿ ಅವರಿಂದ ಹೆಚ್ಚಿನ ಭಜನೆ ಕುಣಿತವನ್ನು ಕಲಿತು ಪ್ರಬುದ್ದ ಕುಣಿತ ಭಜನೆ ಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು. ಅನೇಕ ಕಿರಿಯ ಭಜನಾ ಕಲಾವಿದರಿಗೆ ಗುರುಳಾಗಿ ಮಾರ್ಗದರ್ಶನವನ್ನು ನೀಡಿ ಅವರನ್ನು ಮುನ್ನೆಡಿಸಿದರು.

ಶೀನಪ್ಪ ಶೆಟ್ಟಿಯವರ ಕಂಠಸಿರಿಯಲ್ಲಿ ಭಜನೆ, ಕೀರ್ತನೆ, ದೇವರ ನಾಮಸ್ಮರಣೆಗಳು ಹೊರ ಹೊಮ್ಮುವ ಪರಿಯೇ ವಿಶಿಷ್ಠ. ಶುದ್ಧ ಭಜನಾ ಶೈಲಿಯನ್ನು ಅವರಲ್ಲಿ ಗಮನಿಸಬಹುದು. ರಾಮ ಭಜನೆ, ಕುಣಿತ ಭಜನೆ, ಅಹೋರಾತ್ರಿ ಭಜನೆ ಇತ್ಯಾದಿ ಭಜನಾ ಕಾರ್ಯಕ್ರಮದಲ್ಲಿ ತಂಡದ ಪ್ರಮುಖರಾಗಿ, ಪೀಠಿಕಾ ಭಜನಾಕಾರರಾಗಿ ಭಜನೆಯ ತಂಡವನ್ನು ಸಮರ್ಥವಾಗಿ ಮುನ್ನೆಡೆಸುವಲ್ಲಿ ಸಮರ್ಥರು.

ಸುಮಾರು 500ಕ್ಕೂ ಹೆಚ್ಚು ದಾಸರ ಪದಗಳು, ವಿವಿಧ ಭಜನೆಗಳು ಇವರಿಗೆ ಕಂಠಸ್ಥಾಯಿ. ಕುಣಿತ ಭಜನೆಗೆ ಬ್ಯಾಂಡಿನ ಹಿನ್ನೆಲೆಯೊಂದಿಗೆ ಕುಣಿತದ ವೇಗ, ನಿಖರ ಹೆಜ್ಜೆಗಳು, ಶಾಸ್ತ್ರೀಯವಾದ ಪಟ್ಟುಗಳು ಗಮನೀಯ. ತಾಳಬದ್ದವಾಗಿ ಭಜನೆ ಹೇಳುತ್ತಾ ಕುಣಿತವನ್ನು ಲಯಬದ್ದವಾಗಿ ಪ್ರಕಟಿಸುವ ಇವರು ಭಜನೆಯ ಮೂಲಕವೇ ದೈವಿಕ ವಲಯವೊಂದನ್ನು ಸೃಷ್ಟಿಸುತ್ತಾರೆ. ಭಜನೆ ಹೆಚ್ಚು ಪ್ರಸಿದ್ಧವಾಗಿದ್ದ ೯೦ರ ಪೂರ್ವದ ಸಮಯದಲ್ಲಿ ಕುಂದಾಪುರ ತಾಲೂಕು ಮಾತ್ರವಲ್ಲದೇ ಇಡೀ ಜಿಲ್ಲೆಯಾದ್ಯಂತ ಬೇಡಿಕೆಯ ಭಜನಾ ಪಟುವಾಗಿ ಬೇರೆ ಬೇರೆ ಭಜನಾ ತಂಡಗಳಲ್ಲಿ ಭಾಗವಹಿಸುತ್ತಿದ್ದರು. ಈಗಲೂ ಕೂಡಾ ಬೇರೆ ಬೇರೆ ಕಡೆ ಕರೆ ಅವರಿಗೆ ಆಹ್ವಾನ, ಕರೆಗಳು ಬರುತ್ತಲೇ ಇದೆ. ಈಗಲೂ ಕೂಡಾ ಅವರು ಅಹೋರಾತ್ರಿ ಕುಣಿತ ಭಜನೆ ಮಾಡಬಲ್ಲರು. ಹರಕೆಯ ಭಜನೆಯ ಕಾರ್ಯಕ್ರಮಗಳಿಗೆ ಇವರ ಮಾರ್ಗದರ್ಶವನ್ನು ಪಡೆಯಲಾಗುತ್ತದೆ.

ಮೇ.25-1973ರಲ್ಲಿ ಶಾಂತರವರ ಕೈ ಹಿಡಿದು ಮೂರು ಜನ ಗಂಡು ಮಕ್ಕಳು ಒಬ್ಬಳು ಪುತ್ರಿ ಹಾಗೂ ಮೊಮ್ಮಕ್ಕಳೊಂದಿಗೆ ಸಂತೃಪ್ತ ಸಂಸಾರ ನಡೆಸುತ್ತಿದ್ದಾರೆ. ಇವರ ಭಜನೆಯ ಸಾಧನೆಗೆ ಹಲವು ಸನ್ಮಾನ ಗೌರವಗಳು ಸಂದಿವೆ. ಭಜನಾ ಕ್ಷೇತ್ರದಲ್ಲಿ ಇವರಿಂದ ಯುವ ಭಜಕರಿಗೆ ಮಾರ್ಗದರ್ಶನ ನಿರಂತರವಾಗಿ ಸಿಗುತ್ತಿರಲಿ.

-ಯಕ್ಷಪ್ರೇಮಿ ಜಯರಾಮ ಶೆಟ್ಟಿ ಮೇಲ್ ಹೊಸೂರು

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!