Sunday, September 8, 2024

ಉಚ್ಚಿಲ: ಮೀನುಗಾರರ ಬೇಡಿಕೆಗಳಿಗೆ ಸಿ.ಎಂ. ಬಸವರಾಜ ಬೊಮ್ಮಾಯಿ ಅಸ್ತು

ಉಚ್ಚಿಲ ದೇವಸ್ಥಾನಕ್ಕೆ 5 ಕೋಟಿ ಅನುದಾನ : ಮೊಗವೀರ ವಿದ್ಯಾರ್ಥಿನಿಲಯ ಸ್ಥಾಪನೆಗೆ ಒಪ್ಪಿಗೆ, ಮೀನುಗಾರ ಮಕ್ಕಳಿಗೆ ವಿದ್ಯಾನಿಧಿ

ಉಚ್ಚಿಲ, ಎ.11: ಸಾಹಸಿ ಮನೋಭಾವಕ್ಕೆ ಮೀನುಗಾರರು ಹೆಸರಾದವರು. ಮೀನುಗಾರರ ಬವಣೆ ಸರ್ಕಾರದ ಗಮನದಲ್ಲಿದ್ದು, ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ. ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಮುಂದುವರಿದ ಕಾಮಗಾರಿಗೆ ಮುಜರಾಯಿ ಇಲಾಖೆಯ ಮೂಲಕ 5 ಕೋಟಿ ರೂಪಾಯಿ ನೀಡಲಾಗುವುದು. ಹಾಗೆಯೇ ಮೀನುಗಾರರ ಮಕ್ಕಳಿಗೆ ವಸತಿ ನಿಲಯ ಸ್ಥಾಪನೆ ಹೆಚ್ಚು ಔಚಿತ್ಯ ಪೂರ್ಣವಾಗಿದ್ದು ಹಿಂದುಳಿದ ವರ್ಗಗಳ ಇಲಾಖೆಯ ಮೂಲಕ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಲಾಗುವುದು. ರೈತರ ಮಕ್ಕಳಿಗೆ ನೀಡುವಂತೆ ಮೊಗವೀರರು, ನೇಕಾರರ ಮಕ್ಕಳಿಗೂ ವಿದ್ಯಾನಿಧಿಯ ಯೋಜನೆಯನ್ವಯ ಪಿಜಿ ತನಕ ಅನುದಾನ ನೀಡಲಾಗುವುದು. ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಮತ್ಸ್ಯನಿಧಿ ಯೋಜನೆಯಲ್ಲಿ ಹೆಚ್ಚಿನ ಸಾಮರ್ಥ್ಯದ 100 ಅತ್ಯಂತ ವೇಗದ ಬೋಟುಗಳನ್ನು ಪ್ರಾಯೋಗಿಕವಾಗಿ ಆಳವಡಿಸಲಾಗುವುದು. ರೂ. 1.5 ಕೋಟಿ ಬೆಲೆಯ ಈ ಬೋಟುಗಳಿಗೆ ಗರಿಷ್ಠ ಪ್ರಮಾಣದ ಸಬ್ಸಿಡಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಎ.11ರಂದು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶ ಪುಣ್ಯೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೂರು ಜಿಲ್ಲೆಗಳ ಮೀನುಗಾರರಿಗೆ 5 ಸಾವಿರ ಮನೆಗಳು ಮಂಜೂರಾಗಿದೆ. ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಯೋಜನೆಯ ಸಮಸ್ಯೆಗಳನ್ನು ಪರಿಹರಿಸಿ ಸಮರ್ಪಕಗೊಳಿಸಲಾಗುವುದು. ಮೀನುಗಾರರ ಡಿಸೇಲ್ ಸಬ್ಸಿಡಿಯನ್ನು 2 ಲಕ್ಷಕ್ಕೆ ಏರಿಸಲಾಗುವುದು. 8 ಬಂದರುಗಳ ಡ್ರಜ್ಜಿಂಗ್‌ಗೆ ಅನುಮತಿ ನೀಡಲಾಗಿದೆ ಎಂದರು.

ಈ ದೇವಸ್ಥಾನ ನಿರ್ಮಾಣದಲ್ಲಿ ಪ್ರತಿಯೊಬ್ಬರ ಶ್ರಮವೂ ಅಡಗಿದೆ. ಬೆವರು ಸುರಿಸಿ ದೇವಿಯ ಸೇವೆಯಲ್ಲಿ ತಮ್ಮದು ಅಳಿಲು ಸೇವೆ ಇರಲಿ ಎನ್ನುವ ಮನೋಭಾವದಲ್ಲಿ ದುಡಿದಿರುವುದು ಅತ್ಯಂತ ಶ್ರೇಷ್ಠವಾದುದು. ಇಲ್ಲಿ ಪವಿತ್ರ ಭಕ್ತಿಯ ಸಿಂಚನವಾಗಿದೆ. ಪ್ರಾಮಾಣಿಕತೆ, ಪರಿಶ್ರಮ, ನಿಷ್ಠೆಗೆ ಸದಾ ದೇವರ ಅನುಗ್ರಹ ಇರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದೇವಸ್ಥಾನದ ಬ್ರಹ್ಮಕಲಶೋತ್ಸವ ಪುಣ್ಯೋತ್ಸವ ಸಮಿತಿ ಅಧ್ಯಕ್ಷರು, ಮೊಗವೀರ ಸಮಾಜದ ಮುಂದಾಳು ಡಾ. ಜಿ.ಶಂಕರ್ ಮಾತನಾಡಿ, ಮೊಗವೀರ ಸಮಾಜದ ಶ್ರದ್ದಾಕೇಂದ್ರವಾದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ 36 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಮುಂದುವರಿದ ಕಾಮಗಾರಿಗಾಗಿ ಮುಜರಾಯಿ ಇಲಾಖೆ ವತಿಯಿಂದ ರೂ. 5 ಕೋಟಿ ಅನುದಾನ ಒದಗಿಸಿಕೊಡಬೇಕು, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಘೋಷಣೆ ಮಾಡಬೇಕು, ಮೀನುಗಾರಿಕಾ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಸಹಕಾರ ನೀಡಬೇಕು. ಇವತ್ತು ಮೀನುಗಾರಿಕಾ ವೃತ್ತಿ ಸಮಸ್ಯೆಯ ಸುಳಿಯಲ್ಲಿದೆ. ಮೀನುಗಾರರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗುವಂತೆ ಮೀನುಗಾರರಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯ ಸ್ಥಾಪಿಸಲು ಹಿಂದುಳಿದ ವರ್ಗಗಳ ಇಲಾಖೆಯಿಂದ ಅನುಮತಿ ಸಹಿತವಾಗಿ ಅನುದಾನ ಒದಗಿಸಬೇಕು, ಮಂಗಳೂರಿನಲ್ಲಿ ಮೀನುಗಾರಿಕಾ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಬೇಕು, ಡಿಸೇಲ್ ಸಬ್ಸಿಡಿಯನ್ನು 2 ಲಕ್ಷಕ್ಕೆ ಹೆಚ್ಚಳ ಮಾಡಬೇಕು. ನಾಡ ದೋಣಿ ಮೀನುಗಾರರಿಗೆ ೪೦೦ ಲೀಟರ್ ಸಬ್ಸಿಡಿ ಸೀಮೆ‌ಎಣ್ಣೆ ವಿತರಿಸಬೇಕು ಮೀನುಗಾರರ ಮಹಿಳೆಯರ ಸ್ವಸಹಾಯ ಸಂಘಗಳಿಗೆ ಹಿಂದೆ ನೀಡುತ್ತಿದ್ದ ಶೂನ್ಯ ಬಡ್ಡಿದರದ ಸಾಲವನ್ನು ಪುನಃ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಶ್ರೀರಾಮುಲು, ಶಾಸಕರುಗಳಾದ ಲಾಲಾಜಿ ಆರ್.ಮೆಂಡನ್, ಕೆ.ರಘುಪತಿ ಭಟ್, ಬಿ.ಎಂ.ಸುಕುಮಾರ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಯಶ್‌ಪಾಲ್ ಸುವರ್ಣ, ಪ್ರಮೋದ ಮದ್ವರಾಜ್, ಸುರೇಶ ನಾಯಕ್, ಆನಂದ ಸಿ ಕುಂದರ್ ದ,ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗುಂಡು ಬಿ,ಅಮೀನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!