Sunday, September 8, 2024

ಎಸ್ ಸಿಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ನಂಬರ್ -1 ಬ್ಯಾಂಕ್ : ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

110ನೇ ಉಪ್ಪುಂದ ಶಾಖೆ ಉದ್ಘಾಟನೆ: ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ

ಬೈಂದೂರು, ಏ.04: ರೈತರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್ ) ರಾಜ್ಯದಲ್ಲೇ ನಂಬರ್ -1 ಬ್ಯಾಂಕ್  ಆಗಿದ್ದು ಅದರ ಕಾರ್ಯವೈಖರಿ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳಿಗೆ ಮಾದರಿಯಾಗಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ  110ನೇ ಉಪ್ಪುಂದ  ಶಾಖೆಯನ್ನು  ಉದ್ಘಾಟಿಸಿ , ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶದಲ್ಲಿ ಮಾತಾಡುತ್ತಿದ್ದರು.

“ಕೋವಿಡ್ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದ ಸದಸ್ಯರು ಮರಣ ಹೊಂದಿದ್ದಾರೆ. ಈ ಬಗ್ಗೆ ಅಪೆಕ್ಸ್ ಬ್ಯಾಂಕ್ ನಲ್ಲಿ ಸಭೆ ನಡೆಸಿ ಮೃತರ ಕುಟುಂಬಗಳಿಗೆ ನೆರವಾಗುವ ನಿರ್ಧಾರಕ್ಕೆ ಬರಲಾಯಿತು. ಈ ವೇಳೆ       ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಅವರು ತಲಾ 1 ಲಕ್ಷ ರೂ. ನೆರವು ಘೋಷಣೆ ಮಾಡಿದ್ದು ಅದರಂತೆ ಇಂದು ಮೃತರ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಲಾಗಿದೆ. ಎಲ್ಲ ಸಹಕಾರ ಸಂಘಗಳನ್ನು ಒಂದೇ ತಂತ್ರಾಂಶದಡಿಯಲ್ಲಿ ತರಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು ಅವರು ಒಂದು ವರ್ಷದೊಳಗೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಭರವಸೆ ನೀಡಿದ್ದಾರೆ.         ಇಂದು ರಾಜೇಂದ್ರ ಕುಮಾರ್ ತನ್ನ ಸಂಘಟನಾ ಚಾತುರ್ಯದಿಂದ ತಾನೊಂದು ಶಕ್ತಿ ಎನ್ನುವುದನ್ನು ತೋರಿಸಿಕೊಟ್ಟು ಸಮಾಜಕ್ಕೆ  ಒಂದು ಸಂದೇಶವನ್ನು ನೀಡಿದ್ದಾರೆ. ಅವರ ಕಾರ್ಯವೈಖರಿ ಶ್ಲಾಘನೀಯವೆಂದರು. ಕರ್ನಾಟಕದಲ್ಲಿ 15 ಹಾಲಿನ ಯೂನಿಯನ್ ಇದ್ದು 26 ಲಕ್ಷ ರೈತರು ಹಾಲು ಪೂರೈಕೆ ಮಾಡುತ್ತಿದ್ದಾರೆ. ಅದರಲ್ಲಿ 9 ಲಕ್ಷ ಮಹಿಳೆಯರು ಸದಸ್ಯರಾಗಿರುವುದು ಖುಷಿಯ ವಿಚಾರ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಎಲ್ಲರಿಗೂ ಕಾರ್ಡ್ ವಿತರಿಸಲು ಸರಕಾರ ಮುಂದಾಗಿದೆ.” ಎಂದರು.

ರಾಜೇಂದ್ರ ಕುಮಾರ್ ದೇಶದ ಶಕ್ತಿ : ಮುರುಗೇಶ್ ನಿರಾಣಿ   

  ನವೋದಯ ಸ್ವಸಹಾಯ ಸಂಘಗಳ ಸಾಧನ ಸಮಾವೇಶ ಉದ್ಘಾಟಿಸಿ  ಮಾತಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು, “ಉತ್ತರ ಕರ್ನಾಟಕ ಭಾಗದ ಹಲವಾರು ಕಾರ್ಖಾನೆಗಳಿಗೆ ಎಸ್ ಸಿಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ನೀಡುತ್ತಾ ಬಂದಿದೆ. ನನ್ನ ನಿರಾಣಿ ಗ್ರೂಪ್ ಗೆ 25 ವರ್ಷಗಳ ಹಿಂದೆ 12 ಕೋಟಿ ರೂ. ಸಾಲವನ್ನು ರಾಜೇಂದ್ರ ಕುಮಾರ್ ಅವರು ನೀಡಿದ್ದು ಅದರಿಂದ ನನ್ನ ಉದ್ದಿಮೆ ಇಂದು ಯಶಸ್ವಿಯಾಗಿ ಬೆಳೆದು ನಿಂತ ಪರಿಣಾಮ ಸಹಸ್ರಾರು  ಮಂದಿ ದುಡಿಯಲು ಅವಕಾಶ ಸಿಕ್ಕಿದೆ. ನನ್ನ ಸಂಸ್ಥೆ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆಯಲು ರಾಜೇಂದ್ರ ಕುಮಾರ್ ಅವರ ಪ್ರೋತ್ಸಾಹವೇ ಕಾರಣ. ಅವರು ಕೇವಲ ಎಸ್ ಸಿಡಿಸಿಸಿ ಬ್ಯಾಂಕಿಗೆ ಮಾತ್ರ ಸೀಮಿತವಾಗಿಲ್ಲ. ರಾಜೇಂದ್ರ ಕುಮಾರ್ ದೇಶದ ಶಕ್ತಿಯಾಗಿ ಬೆಳೆದಿದ್ದಾರೆ ಎಂದರು.

ಎಂಎನ್ ಆರ್ ಕಾರ್ಯ ಶ್ಲಾಘನೀಯ: ಬಿ.ಸಿ. ಪಾಟೀಲ್ 
ಹೊಸ  ಸ್ವಸಹಾಯ ಸಂಘಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕೃಷಿ ಸಚಿವ ಬಿ. ಸಿ. ಪಾಟೀಲ್  ಅವರು, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣುಮಕ್ಕಳು ಸ್ವಾವಲಂಬಿಯಾದರೆ ಆಕೆಯ ಇಡೀ ಕುಟುಂಬದ ಅಭಿವೃದ್ಧಿಯಾಗುತ್ತದೆ. ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸಾಲ ನೀಡಿ ಅವರನ್ನು ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯ. ಸರಕಾರಗಳು ಮಾಡಬೇಕಿರುವ ಕೆಲಸವನ್ನು ಇಂದು ರಾಜೇಂದ್ರ ಕುಮಾರ್ ಮಾಡುತ್ತಾ ಬಂದಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಅವರ ಸಾಮಾಜಿಕ ಕಳಕಳಿ ಇದೇ ರೀತಿ ಮುಂದುವರಿದು ನಾಡಿನೆಲ್ಲೆಡೆಯ ಜನರು ಪ್ರಯೋಜನ ಪಡೆಯುವಂತಾಗಲಿ” ಎಂದರು.

ಟೀಮ್ ವರ್ಕ್ ನಿಂದ ಯಶಸ್ಸು : ಎಂಎನ್ ಆರ್
ಸಮಾವೇಶದ ಅಧ್ಯಕ್ಷತೆ ವಹಿಸಿ  ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, “ಉಪ್ಪುಂದ ಶಾಖೆಯು ಉದ್ಘಾಟನೆಗೊಂಡ ದಿನವೇ 4000 ಖಾತೆಗಳು ತೆರೆಯಲ್ಪಟ್ಟಿವೆ. ಇದಕ್ಕಾಗಿ ನಾನು ಇಲ್ಲಿನ ಗ್ರಾಹಕರಿಗೆ ಅಭಾರಿಯಾಗಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕ ಸಂಕಷ್ಟದಿಂದ ಸಕಾಲದಲ್ಲಿ ಸಾಲ ಸಿಗದ ಕಾರಣಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದೇ ರೀತಿ ಕೃಷಿ ಸಾಲ  ಶೇ.100ರಷ್ಟು ಸಾಲ ಮರುಪಾವತಿಯಾಗುತ್ತಿದೆ. ಇದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ. ಬ್ಯಾಂಕ್ ಇಷ್ಟು ದೊಡ್ಡಮಟ್ಟದಲ್ಲಿ ಬೆಳೆಯಲು ಕಾರಣ ನಾನೊಬ್ಬನೇ ಅಲ್ಲ. ಬ್ಯಾಂಕಿನ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ , ನವೋದಯ ಬಂಧುಗಳ ಒಗ್ಗಟ್ಟು ಇದಕ್ಕೆ ಕಾರಣ. ಮುಖ್ಯವಾಗಿ ಸಾಲ ಪಡೆದು ಕೊಂಡವರು ಸಕಾಲದಲ್ಲಿ   ಸಾಲವನ್ನು  ಮರುಪಾವತಿ ಮಾಡಿದ ಕಾರಣ ಇಂದು ಬ್ಯಾಂಕ್ ಸುದೃಢ ವಾಗಿದೆ. ಬರೀ ಭಾಷಣದಲ್ಲಿ ಮಾತೆಯರೇ ತಾಯಂದಿರೇ ಎಂದರೆ ಸಾಲದು. ನಾನು ನಿಮ್ಮನ್ನು ಸ್ವಾವಲಂಬಿಯನ್ನಾಗಿ ಮಾಡಲು ನಿಮ್ಮನ್ನು ನಂಬಿ ಸಾಲ ನೀಡುತ್ತಿದ್ದೇನೆ. ಇದಕ್ಕಾಗಿ ಮನೆ ಅಡಮಾನ ಇಡಬೇಕಿಲ್ಲ. ನಿಮ್ಮದೇ ಗುಂಪು ರಚಿಸಿದ್ದೀರಿ, ನಿಮ್ಮೆಲ್ಲರ ಮೇಲೆ ವಿಶ್ವಾಸವಿರಿಸಿ ಸಾಲ ನೀಡಿದ್ದೇನೆ. ನೀವು ಮರುಪಾವತಿ ಮಾಡಿದ್ದೀರಿ. ನೀವು ನನಗೇನೂ ಕೊಡುವುದು ಬೇಡ, ಸಾಲ ಪಡೆದು ಅನ್ಯ ಖರ್ಚು ಮಾಡದೇ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಮುಂದೆ ಅವರ ಕಾಲ ಮೇಲೆ ನಿಲ್ಲಿಸಿ. ಅವರು ನಿಮ್ಮ ಇಡೀ ಕುಟುಂಬಕ್ಕೆ ಬೆಳಕಾಗುತ್ತಾರೆ. ಇದು ನನ್ನೊಬ್ಬನ ಸಾಧನೆಯಲ್ಲ ನಮ್ಮೆಲ್ಲರ ಟೀಮ್ ವರ್ಕ್ ನಿಂದ ಇದು ಸಾಧ್ಯವಾಗಿದೆ.” ಎಂದರು.

ಇದೇ ವೇಳೆ ಕೋವಿಡ್ ನಿಂದ ಮೃತಪಟ್ಟ ರೈತರ ಕುಟುಂಬಗಳಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ನಡೆಯಿತು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ವಿತರಿಸಲಾಯಿತು. ಮೃತ ಸದಸ್ಯರ ಚೈತನ್ಯ ವಿಮಾ ಚೆಕ್ ಅನ್ನು ಕುಟುಂಬ ಸದಸ್ಯರಿಗೆ ವಿತರಿಸಲಾಯಿತು. ನೂತನ ಶಾಖೆಯಿಂದ ವಾಹನದ ಸಾಲ ಪತ್ರ ವಿತರಣೆಯನ್ನು ಗಣ್ಯರು ನೆರವೇರಿಸಿದರು. 

ಸಮಾರಂಭದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಿಂದುಳಿದ ವರ್ಗಗಳ ಯೋಜನ ಆಯೋಗದ ಅಧ್ಯಕ್ಷರಾದ, ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ,  ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷೆ  ಲಕ್ಷ್ಮಿ ಖಾರ್ವಿ, ಶಾಖಾ ಕಟ್ಟಡದ ಮಾಲಕರಾದ ಹಿರಿಯಣ್ಣ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಬಿ., ಬ್ಯಾಂಕ್ ನಿರ್ದೇಶಕ ವಾದಿರಾಜ ಎಂ ಶೆಟ್ಟಿ ,  ಬೆಳಪು ದೇವಿಪ್ರಸಾದ್ ಶೆಟ್ಟಿ , ಶಶಿಕುಮಾರ್ ರೈ ಬಾಲ್ಯೋಟ್ಟು, ಅಶೋಕ್ ಕುಮಾರ್ ಶೆಟ್ಟಿ ,  ರಾಜು ಪೂಜಾರಿ, ಮಹೇಶ್ ಹೆಗ್ಡೆ , ಕೆ.ಹರಿಶ್ಚಂದ್ರ, ರಾಜೇಶ್ ರಾವ್ , ಸದಾಶಿವ ಉಳ್ಳಾಲ್ , ಸಹಕಾರ ಸಂಘಗಳ ಉಪ ನಿಬಂಧಕರಾದ ಪ್ರವಿಣ್ ಬಿ. ನಾಯಕ್ ಬ್ಯಾಂಕಿನ ಮಹಾಪ್ರಬಂಧಕರಾದ ಗೋಪಿನಾಥ್ ಭಟ್ ,   ಮತ್ತಿತರರು ಉಪಸ್ಥಿತರಿದ್ದರು.

ಗಾಯಕ ಗಣೇಶ್ ಗಂಗೊಳ್ಳಿ ಪ್ರಾರ್ಥಿಸಿದರು . ನಿರ್ದೇಶಕರಾದ ರಾಜು ಪೂಜಾರಿ ಸ್ವಾಗತಿಸಿದರು. ನಿರ್ದೇಶಕ ಮಹೇಶ್ ಹೆಗ್ಡೆ  ಮೊಳಹಳ್ಳಿ ಧನ್ಯವಾದ ಅರ್ಪಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!