Sunday, September 8, 2024

ಬೀಜಾಡಿ: ಧ. ಗ್ರಾ. ಯೋಜನೆ ಸಾಧನಾ ಸಮಾವೇಶ, ಮಹಿಳಾ ವಿಚಾರಗೋಷ್ಠಿ ಉದ್ಘಾಟನೆ

ಕುಂದಾಪುರ : ನಮ್ಮ ದೇಶದಲ್ಲಿ ಸ್ವಾತಂತ್ರ್ಯಪೂರ್ವದ ದಿನಗಳಿಗಿಂತ ಈಗ ಮಹಿಳೆಯರ ಸ್ಥಾನಮಾನ ಹೆಚ್ಚಿದೆ. ಮೀಸಲಾತಿಯೇ ಮೊದಲಾದ ಕಾನೂನಾತ್ಮಕ ಬೆಂಬಲಗಳಿಂದ ಗ್ರಾಮೀಣ ಮಹಿಳೆಯರೂ ಕೂಡಾ ಮುಂದುವರಿಯುವ ಅವಕಾಶ ದೊರೆತಿದೆ. ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರೂ ಸಾಧನೆ ಮಾಡುವಂತಾಗಿದೆ. ಆದರೆ, ಮಹಿಳೆಯರಿಗೆ ಕೆಲವು ಜವಾಬ್ದಾರಿಗಳೂ ಇವೆ. ತಮ್ಮ ಮಕ್ಕಳನ್ನು ಸಂಸ್ಕಾರವಂತರಾಗಿ ರೂಪಿಸುವ ಹೊಣೆಯಿದೆ. ಇದನ್ನು ಮರೆಯಬಾರದು. ಮಹಿಳೆಯರು ಆತ್ಮವಿಶ್ವಾಸ, ಸ್ವಾಭಿಮಾನವನ್ನು ಬೆಳೆಸಿಕೊಂಡು ಮುನ್ನಡಿ ಇಡಬೇಕಾಗಿದೆ. ಮಹಿಳೆಯರ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಯೋಜನೆಯು ಮಹತ್ತರ ಪಾತ್ರ ವಹಿಸಿದೆ-ಎಂದು ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್, ಕುಂದಾಪುರ ತಾಲೂಕು ಕೋಟೇಶ್ವರ ವಲಯ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಜ್ಞಾನವಿಕಾಸ ಕೇಂದ್ರ, ಕೋಟೇಶ್ವರ ವಲಯ ಇವರ ಸಂಯುಕ್ತಾಶ್ರಯದಲ್ಲಿ ಬೀಜಾಡಿಯ ಕಮ್ತಿಯಾರ್ ಬೆಟ್ಟಿನಲ್ಲಿ ಭಾನುವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಧನಾ ಸಮಾವೇಶ ಮತ್ತು ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನವಿಕಾಸ ವಿಭಾಗ ಧರ್ಮಸ್ಥಳ ಕೇಂದ್ರ ಕಚೇರಿಯ ಯೋಜನಾಧಿಕಾರಿ ಸಂಗೀತಾ ಮಾತನಾಡಿ, ಮಹಿಳೆಯರ ಅನುಕೂಲ ಮತ್ತು ಅಭಿವೃದ್ಧಿಗಾಗಿ ಯೋಜನೆ ಜಾರಿಗೆ ತಂದಿರುವ ಕ್ರಮಗಳನ್ನು ಪರಿಚಯಿಸಿ, ಮಕ್ಕಳನ್ನು ಸಚ್ಚಾರಿತ್ರ್ಯವಂತರನ್ನಾಗಿ ಬೆಳೆಸುವ ಜವಾಬ್ದಾರಿ ಮಹಿಳೆಯರದು. ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣ ಎಂದರೆ ಸ್ವೇಚ್ಚಾಚಾರವಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಕುಟುಂಬದಲ್ಲಿ ಹಿರಿಯರು ಹೇಳಿದ್ದನ್ನು ಕೇಳುವುದಕ್ಕಿಂತ, ಮಕ್ಕಳು ಹಿರಿಯರು ಮಾಡಿದ್ದನ್ನು ಅನುಸರಿಸುತ್ತಾರೆ. ಆದ್ದರಿಂದ ಹಿರಿಯರೂ ಉತ್ತಮ ನಡೆಯನ್ನನುಸರಿಸಬೇಕು ಎಂದು ಸಲಹೆ ಮಾಡಿದರು.

ಪತ್ರಕರ್ತ ಲಕ್ಷ್ಮೀ ಮಚ್ಚಿನ, ಶಿಕ್ಷಕಿ ಸುಮನಾ ರಾಮದಾಸ್, ಜನಜಾಗೃತಿ ವೇದಿಕೆ ಕೋಟೇಶ್ವರ ವಲಯಾಧ್ಯಕ್ಷ ಶ್ರೀನಿವಾಸ ಗಾಣಿಗ, ಕೋಟೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಗಿಣಿ, ಬೀಜಾಡಿ ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ, ಕ. ಸಾ. ಪ. ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಶ್ರೀ ಕೋಟಿಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.

ಕುಂದಾಪುರ ಕೇಂದ್ರ ಸಮಿತಿಯ ಅಧ್ಯಕ್ಷೆ ಶೋಭಾ ಚಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಯೋಜನಾ ಸೇವಾ ಪ್ರತಿನಿಧಿಗಳು, ವಿಶೇಷ ಸಾಧನೆಗೈದ ಒಕ್ಕೂಟಗಳನ್ನು ಗೌರವಿಸಲಾಯಿತು. ಪರಿಸರ ಸ್ನೇಹಿ ಒಲೆ, ಇ-ಶ್ರಮ್ ಕಾರ್ಡುಗಳನ್ನು ವಿತರಿಸಲಾಯಿತು. ಸಮಾವೇಶದಂಗವಾಗಿ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಜ್ಞಾನವಿಕಾಸ ವಿಭಾಗ ಸಮನ್ವಯಾಧಿಕಾರಿ ಸುಗುಣಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶೋಭಾ ವರದಿ ವಾಚಿಸಿದರು. ಪ್ರಸನ್ನ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಸುಶೀಲಾ ಶೇಟ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!