Sunday, September 8, 2024

ಮಹಿಳಾ ವಿಶ್ವಕಪ್  : ಮಿಥಾಲಿರಾಜ್ ಅಪೂರ್ವ ಸಾಧಕಿ

—————————–
■ ಎಸ್ ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ
——————————
ಸಾಧನೆಯ ಪ್ರತಿಯೊಂದು ಮೆಟ್ಟಿಲನ್ನು ಏರುವುದು ಪ್ರತಿಯೊಬ್ಬ ಕ್ರೀಡಾ ಪಟುವಿನ ಪರಮ ಗುರಿ. ಈ ಗುರಿಯನ್ನಿಟ್ಟುಕೊಂಡೇ ಕೆಲವರು ದಾಖಲೆಗಳ ಒಡೆಯರಾಗಿ ಜಾಗತಿಕ ಕ್ರೀಡೆಗಳಲ್ಲಿ ಕಾಣಿಸಿಕೊಂಡಿದ್ದಾರೆ.  ‘ ಕ್ರಿಕೆಟ್ ‘ ವಿಷಯಕ್ಕೆ ಬಂದಾಗ ಭಾರತದ ಸಚಿನ್ ತೆಂಡುಲ್ಕರ್ ‘ ವಿಶ್ವ ದಾಖಲೆಗಳ ವೀರ’ ಎನ್ನುವುದನ್ನು ಜಾಗತಿಕವಾಗಿ ಎಲ್ಲರೂ ಒಪ್ಪಿಕೊಂಡಾಗಿದೆ. ಇವರ ವಿಶ್ವದಾಖಲೆಗಳನ್ನು ಅಳಿಸಿ ಹಾಕುವುದು ಸದ್ಯದ ಮಟ್ಟಿಗೆ ಯಾರಿಗೂ ಕಷ್ಟಸಾಧ್ಯ. ಸಚಿನ್ ತೆಂಡುಲ್ಕರ್  ಕ್ರಿಕೆಟ್ ಸಾಧನೆಗಳ ಎವರೆಸ್ಟ್ ಶಿಖರವನ್ನೇರಿದ ಅದ್ಭುತ ಪ್ರತಿಭೆ. ತೆಂಡುಲ್ಕರ್ ಅವರಂತೆ ಮಹಿಳಾ ಕ್ರಿಕೆಟಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸಿರುವ ಆಟಗಾರ್ತಿ ಎಂದರೆ ಸದ್ಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿರುವ ಮಿಥಾಲಿ ರಾಜ್.

ಮಿಥಾಲಿ ರಾಜ್ ಅವರನ್ನು ‘ಲೇಡಿ ತೆಂಡುಲ್ಕರ್’  ‘ಮಹಿಳಾ ಕ್ರಿಕೆಟಿನ ಡಾನ್’ ಎಂದೇ ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಲಾಗಿದೆ.  ಮಧ್ಯಮ ಕ್ರಮಾಂಕದ ಆಕರ್ಷಕ ಹೊಡೆತಗಳ ಆಟಗಾರ್ತಿಯಾಗಿರುವ ಇವರು ಲೆಗ್ ಬ್ರೇಕ್ ಬೌಲರ್ ಕೂಡ. ಸದ್ಯ ನ್ಯೂಜಿಲೆಂಡಿನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಪಂದ್ಯಾಟದಲ್ಲಿ ಮಿಥಾಲಿರಾಜ್, ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಮಿಥಾಲಿ ರಾಜ್ ಆರು ಬಾರಿ ಮಹಿಳಾ ವಿಶ್ವಕಪ್ ಪಂದ್ಯಾಟದಲ್ಲಿ ಭಾಗವಹಿಸಿರುವ ಭಾರತದ ಏಕೈಕ ಆಟಗಾರ್ತಿ. ಮಿಥಾಲಿರಾಜ್ 2000ನೇ  ವಿಶ್ವಕಪ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ  ಪದಾರ್ಪಣೆ ಮಾಡಿದ್ದು, ನಂತರ 2005 , 2009, 2013, 2017 ಮತ್ತು 2022ನೇ ವಿಶ್ವಕಪ್‍ನಲ್ಲಿ ಭಾರತ ತಂಡದ ಪರ ಆಡಿದ ಸಾಧನೆ ಮಾಡಿದ್ದಾರೆ.

ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಕಳೆದ ಶನಿವಾರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳ ನಾಯಕತ್ವದ ದಾಖಲೆಯನ್ನು ಕೂಡ ಮುರಿದಿದ್ದಾರೆ.  ಆಸ್ಟ್ರೇಲಿಯಾದ ಮಾಜಿ ನಾಯಕಿ  ಬೆಲಿಂಡಾ ಕ್ಲಾರ್ಕ್ ಅವರನ್ನು ಹಿಂದಿಕ್ಕಿದ್ದಾರೆ. 39 ವರ್ಷದ ಮಿಥಾಲಿ 24 ವಿಶ್ವಕಪ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. ಇದರಲ್ಲಿ  14 ಪಂದ್ಯಗಳಲ್ಲಿ ಗೆಲುವು ಪಡೆದಿರುವ ಮಿಥಾಲಿರಾಜ್ , 8 ಪಂದ್ಯಗಳಲ್ಲಿ ಸೋಲು ಕಂಡು , ಒಂದು ಪಂದ್ಯ ಫಲಿತಾಂಶ ರಹಿತವಾಗಿದೆ.  ಕ್ಲಾರ್ಕ್ 23 ಪಂದ್ಯಗಳಲ್ಲಿ ಆಸ್ಟ್ರೇಲಿಯಾ  ತಂಡದ ನಾಯಕತ್ವ ವಹಿಸಿದ್ದರು. ಮೊನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಮಿಥಾಲಿರಾಜ್ ವಿಶ್ವಕಪ್ ನಾಯಕತ್ವದಲ್ಲಿ ಅಪೂರ್ವ ದಾಖಲೆ ನಿರ್ಮಿಸಿದರು.

ಮಹಿಳಾ ಕ್ರಿಕೆಟಿನಲ್ಲಿ ಭಾರತದ ಕಂಪನ್ನು ಜಾಗತಿಕವಾಗಿ ಪಸರಿಸಿರುವ ಮಿಥಾಲಿ ರಾಜ್ ಪರಿಪೂರ್ಣ ಸವ್ಯಸಾಚಿ. ಇವರು ಗೆಲುವಿಗಾಗಿ  ಸಾಕಷ್ಟು ಬಾರಿ ಏಕಾಂಗಿಯಾಗಿ ಹೋರಾಟವನ್ನು ನಡೆಸಿದ್ದಾರೆ. ನಿರಂತರವಾಗಿ ಸ್ಥಿರತೆಯ ಆಟವನ್ನು ಪ್ರದರ್ಶಿಸುತ್ತಿರುವ ಮಿಥಾಲಿ ರಾಜ್ ಸದ್ಯ ಕ್ರಿಕೆಟ್ ಜಾಗತಿನ ಸಾರ್ವಕಾಲಿಕ ಮಹಿಳಾ ಬ್ಯಾಟರ್.  ತನ್ನ 17ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರುವ ಇವರು , ಸುಮಾರು 23 ವರ್ಷಗಳ ಕಾಲ ಭಾರತೀಯ ಮಹಿಳಾ  ಕ್ರಿಕೆಟಿನ ಅವಿಭಾಜ್ಯ ಅಂಗವಾಗಿ 10000ಕ್ಕೂ ಅಧಿಕ ರನ್ ಪೇರಿಸಿ, ಸಾವಿರಾರು ಕ್ರೀಡಾ ಪ್ರತಿಭೆಗಳ ಪಾಲಿಗೆ ಸ್ಪೂರ್ತಿಯಾಗಿದ್ದಾರೆ. ಇವರ ಕ್ರೀಡಾ ಪಯಣವೇ ಒಂದು ರೋಚಕ ಕಥನ.

‘ನನ್ನ ಫಸ್ಟ್ ಲವ್ ಕ್ರಿಕೆಟ್. ನಾನು ಸೋಲನ್ನು ದ್ವೇಷಿಸುತ್ತೇನೆ. ಒಮ್ಮೆ ಮೈದಾನದೊಳಕ್ಕೆ ಕಾಲಿಟ್ಟೆನೆಂದರೆ ನನ್ನ ಪಾಲಿಗೆ ಬೇರೆಯೇ ಲೋಕ ತೆರೆದುಕೊಳ್ಳುತ್ತದೆ. ಅಲ್ಲಿ ಸದಾ ಗೆಲುವಿನ ಹಸಿವಿರುತ್ತದೆ .’ – ಎನ್ನುವ ‘ ಕ್ರಿಕೆಟ್ ದೇವರು’  ಸಚಿನ್ ತೆಂಡುಲ್ಕರ್ ಅವರ ಮಾತನ್ನು ತನ್ನ ವೃತ್ತಿ ಬದುಕಿನಲ್ಲಿ ಅಕ್ಷರಶಃ  ಪಾಲಿಸಿಕೊಂಡು ಬಂದಿರುವ ಮಿಥಾಲಿರಾಜ್ ಕ್ರಿಕೆಟಿನಿಂದ ತಾನೂ ಬೆಳೆದು, ತನ್ಮೂಲಕ ಮಹಿಳಾ ಕ್ರಿಕೆಟನ್ನೂ ಬೆಳೆಸಿದ ಧೀಮಂತ ಆಟಗಾರ್ತಿ. ಮಿಥಾಲಿ ರಾಜ್  ಕ್ರಿಕೆಟನ್ನು ಪ್ರೀತಿಸಿದ್ದಷ್ಟೇ ಅಲ್ಲ , ಆರಾಧಿಸಿದರು. ಇವರ ವೃತ್ತಿ- ಪ್ರವೃತ್ತಿ ಎರಡೂ ಕ್ರಿಕೆಟೇ ಆಗಿದೆ. ಅವರ ಬ್ಯಾಟಿಂಗ್ ನಲ್ಲಿ ಒಂದು ಹೃದಯ ಅಡಗಿರುತ್ತಿತ್ತು. ಒಂದು ಸೂಕ್ಷ್ಮತೆಯ ಎಳೆ ಇರುತ್ತಿತ್ತು. ಇವು ಅವರ ಸ್ಟ್ರೋಕ್ ಗಳಿಗೆ ಹೆಚ್ಚಿನ ಕಾಂತಿ ಒದಗಿಸುತ್ತಿದ್ದವು. ಆ ಸೂಕ್ಷ್ಮತೆ ಅವರನ್ನು ಎಲ್ಲರೂ ಪ್ರೀತಿಸುವ ಬ್ಯಾಟರ್ ಆಗಿ ರೂಪಿಸಿತು. ಈ ಪರಿಯ ಸೊಬಗು ಮಿಥಾಲಿ ರಾಜ್  ಅವರ ಕ್ರಿಕೆಟ್ ಬದುಕು.


ಮಿಥಾಲಿ ರಾಜ್ ಸಾಧನೆ : ಮಿಥಾಲಿ ರಾಜ್ ಅಪೂರ್ವ ಕ್ರಿಕೆಟ್ ಸಾಧಕಿ. ತನ್ನ ಸ್ವಪ್ರಯತ್ನದಿಂದಲೇ ಗುರುತಿಸಲ್ಪಟ್ಟ ಇವರು ಇದುವರೆಗೆ 229 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ಪು ಮಾಡಿದ್ದಾರೆ. ಅವರು ಆಡಿದ 208 ಏಕದಿನ ಪಂದ್ಯಗಳ‌ ಇನ್ನಿಂಗ್ಸ್ ನಲ್ಲಿ 57ಬಾರಿ ಅಜೇಯರಾಗಿ ಉಳಿದು 50.78ರ ಸರಾಸರಿಯಲ್ಲಿ 7669ರನ್ ಗಳಿಸಿರುವರು. ಇದರಲ್ಲಿ 7ಶತಕ ಹಾಗೂ 62 ಅರ್ಧಶತಕಗಳು ಸೇರಿವೆ . ಹಾಗೆಯೇ 84 ಟ್ವೆಂಟಿ-20ಪಂದ್ಯಗಳಲ್ಲಿ‍ ಇವರು 2364ರನ್ ಕಲೆಹಾಕಿರುವರು. ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲೂ ಅನುಭವಿ ಆಟಗಾರ್ತಿ ಆಗಿರುವ ಇವರು 12 ಟೆಸ್ಟ್ ಪಂದ್ಯಗಳಲ್ಲಿ 699ರನ್ ಗಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!