Sunday, September 8, 2024

ಕೆ.ಪಿ.ಎಸ್ ಬಿದ್ಕಲ್‌ಕಟ್ಟೆಯಲ್ಲಿ ಇಂಧನವಿಲ್ಲದೆ ಅಡುಗೆ ಮಾಡಿದ ವಿದ್ಯಾರ್ಥಿಗಳು!

ಪ್ರಕೃತಿ ಇಕೋಕ್ಲಬ್ ಹಾಗೂ ಮೀನಾಕ್ಲಬ್ ಸಹಯೋಗದಲ್ಲಿ ಸ್ಪರ್ಧಾತ್ಮಕ ಚಟುವಟಿಕೆ

ಕುಂದಾಪುರ: ವಿನೂತನ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿ, ಕಳೆದ ಆರು ವರ್ಷಗಳಿಂದ ದಾಖಲಾತಿ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿರುವ ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲ್ಲಿ ಪ್ರಕೃತಿ ಇಕೋಕ್ಲಬ್ ಹಾಗೂ ಮೀನಾಕ್ಲಬ್ ಸಹಯೋಗದಲ್ಲಿ ಮಕ್ಕಳು ಪೋಷಕರ ಅಥವಾ ಶಿಕ್ಷಕರ ನೆರವಿಲ್ಲದೆ ಇಂಧನ ರಹಿತ ಅಡುಗೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆದರು.

ಏಳನೇ ತರಗತಿಯ ವಿದ್ಯಾರ್ಥಿಗಳು ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ ಎಂಬ ಆರು ಪ್ರೇರಣಾ ಕಲಿಕಾ ತಂಡಗಳಲ್ಲಿ ಆರೋಗ್ಯದಾಯಕವಾದ ಪೌಷ್ಟಿಕಾಂಶಯುಕ್ತ ಸ್ವಾದಿಷ್ಟಭರಿತ ಖಾದ್ಯಗಳನ್ನು ಇಂಧನರಹಿತವಾಗಿ ತಯಾರಿಸಿ, ಎಲ್ಲರಿಗೂ ಹಂಚಿ ಸಂಭ್ರಮಿಸಿದರು. ಪ್ರತಿಯೊಂದು ತಂಡದ ಸದಸ್ಯ ಚಿಣ್ಣರು, ಖಾದ್ಯಗಳ ತಯಾರಿಕೆಗೆ ಬೇಕಾದ ಹಣ್ಣು, ತರಕಾರಿ, ದಿನಸಿ ಸಾಮಗ್ರಿ, ಅಗತ್ಯ ಪಾತ್ರೆ ಮತ್ತಿತರ ಸಲಕರಣೆಗಳನ್ನು ಮುಂಚಿತವಾಗಿ ಒಟ್ಟುಗೂಡಿಸಿಕೊಂಡಿದ್ದರು. ಇದೊಂದು ಸ್ಪರ್ಧಾತ್ಮಕ ಚಟುವಟಿಕೆಯಾಗಿದ್ದರಿಂದ ಮಕ್ಕಳು ತೀರ್ಪುಗಾರರ ಸಮ್ಮುಖದಲ್ಲಿ ತಮ್ಮ ಸ್ನೇಹಿತರ ಪರಸ್ಪರ ಸಹಕಾರದಲ್ಲಿ ಯೋಜನಾಬದ್ದವಾಗಿ ಶಿಸ್ತಿನಿಂದ ಸ್ಥಳದಲ್ಲೇ ಖಾದ್ಯಗಳನ್ನು ತಯಾರಿಸಿ ಗಮನ ಸೆಳೆದರು.

ಮಕ್ಕಳಲ್ಲಿ ಅಡುಗೆ ತಯಾರಿಯ ಕೌಶಲವನ್ನುಂಟುಮಾಡುವುದರ ಜೊತೆಗೆ, ಜಂಕ್‌ಫುಡ್‌ಗಳ ಈ ಯುಗದಲ್ಲಿ ಆರೋಗ್ಯಕ್ಕೆ ಹಿತಕರವಾದ ವೈವಿದ್ಯಪೂರ್ಣ ಪೌಷ್ಟಿಕಾಂಶಯುಕ್ತವಾದ ಆಹಾರ ಪದಾರ್ಥಗಳನ್ನು ತಾವೇ ತಯಾರಿಸಿಕೊಳ್ಳುವುದು ಹೇಗೆ? ಎಂಬುದನ್ನು ಮಕ್ಕಳು ಸ್ವತಃ ಅನುಭವಿಸಿ ಕಲಿಯಬೇಕೆಂಬ ಮಹತ್ತರ ಉದ್ಧೇಶದೊಂದಿಗೆ ಶಿಕ್ಷಕರು ಮಕ್ಕಳಿಗೆ ಈ ವಿಶಿಷ್ಟ ಅವಕಾಶವನ್ನು ಒದಗಿಸಿದ್ದರು. ಶಿಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸದ ಮಕ್ಕಳು ಬಾಳೆ ಹಣ್ಣಿನ ರಸಾಯನ, ಪುನರ್ಪುಳಿ ಜ್ಯೂಸ್, ನಿಂಬೆ ಪಾನಕ, ರಾಗಿನೀರು, ಎಳ್ಳುನೀರು, ತಂಪಿನ ಬೀಜದ ಜ್ಯೂಸ್, ರಸ್ನ ಜ್ಯೂಸ್, ಮೂಸಂಬಿ ಜ್ಯೂಸ್, ಚಾಕಲೇಟ್ ಜ್ಯೂಸ್, ಬಿಸ್ಕತ್ ಜ್ಯೂಸ್… ಹೀಗೆ ಹತ್ತಾರು ಬಗೆಯ ಆರೋಗ್ಯದಾಯಕ ಪಾನೀಯಗಳನ್ನು ತಯಾರಿಸುವುದರೊಂದಿಗೆ, ಪಂಚಕಜ್ಜಾಯ, ಹುಳಿಯವಲಕ್ಕಿ, ಖಾರದವಲಕ್ಕಿ, ಮೊಸರು ಸಲಾಡ್, ಫ್ರುಟ್ ಸಲಾಡ್, ಮೊಸರುಬಜ್ಜಿ, ಕೋಸುಂಬರಿ, ಹೆಸರು ಉಂಡೆ, ಕಾಯಿಬೆಲ್ಲ, ಬ್ರೆಡ್‌ಕೇಕ್, ಸೌತೆಕಾಯಿಚೀಸ್, ಕ್ಯಾರೆಟ್‌ಚೀಸ್, ಬ್ರೆಡ್‌ಸ್ಯಾಂಡ್‌ವಿಚ್, ಬಿಸ್ಕತ್‌ಸ್ಯಾಂಡ್ ವಿಚ್, ಉಪ್ಕರಿ, ಅಕ್ಕಿಹುಡಿ, ಉಪ್ಪಿನಹುಡಿ, ಕಾಯಿಚಟ್ನಿ, ಹುಣಸೆ ಹಣ್ಣಿನ ಲಾಲಿಪಪ್, ಉಪ್ಪುಖಾರದ ಮಾವಿನಕಾಯಿ, ಉರಗದೆಲೆಯ ಚಟ್ನಿ… ಈ ಮೊದಲಾದ ಹತ್ತಾರು ಬಗೆಯ ಸವಿಯಾದ ಖಾದ್ಯಗಳನ್ನೂ ತಯಾರಿಸಿ ಗಮನ ಸೆಳೆದರು. ಬಳಿಕ ತೀರ್ಪುಗಾರರು, ಶಾಲಾ ಶಿಕ್ಷಕರು, ಅಡುಗೆಯವರು, ಪೋಷಕರು ಮಕ್ಕಳು ತಯಾರಿಸಿದ ವಿವಿಧ ಐಟಂಗಳನ್ನು ಸವಿದು, ರುಚಿ ಮತ್ತು ವೈವಿಧ್ಯತೆಯ ಆಧಾರದಲ್ಲಿ ಪ್ರತೀ ತಂಡಕ್ಕೂ ಅಂಕ ನೀಡಿ ತೀರ್ಪು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಯು ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಮನೋಜ್‌ಕುಮಾರ್ ಶೆಟ್ಟಿ, ಮೊಳಹಳ್ಳಿ ಶಿವಶಾಂತಿ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ದಿನಪಾಲ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರಾದ ವಿಘ್ನೇಶ್ವರ ಭಟ್, ಉಪಪ್ರಾಂಶುಪಾಲರಾದ ಕರುಣಾಕರ ಶೆಟ್ಟಿ, ಸಿ.ಆರ್.ಪಿ ನಾಗರಾಜ ಆಚಾರ್ಯ, ಇಂಜಿನಿಯರ್ ಶಶಿಧರ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಉದಯ್‌ಕುಮಾರ್ ಶೆಟ್ಟಿ, ಸಹಶಿಕ್ಷಕರುಗಳಾದ ರಾಜೀವ ಕುಲಾಲ್, ಸತೀಶ್ ಶೆಟ್ಟಿಗಾರ್, ಶಂಕರ ದೇವಾಡಿಗ, ಚಿತ್ರಾಕುಮಾರಿ, ಶ್ಯಾಮಲ, ರಶ್ಮಿ, ಸುಕನ್ಯ, ಅತಿಥಿ ಶಿಕ್ಷಕಿಯರಾದ ಭಾರತಿ, ನಾಗರತ್ನ, ಜ್ಞಾನದೀಪ ಶಿಕ್ಷಕಿ, ಮಹಾಲಕ್ಷ್ಮೀ, ಅವಕಾಶ ಫೌಂಡೇಶನ್ ಶಿಕ್ಷಕಿ ಪವಿತ್ರ, ಗೌರವ ಶಿಕ್ಷಕಿ ಶೋಭಿತಾ, ಕಂಪ್ಯೂಟರ್ ಶಿಕ್ಷಕಿ ಅಕ್ಷತಾ, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!