Sunday, September 8, 2024

ಘನ ತ್ಯಾಜ್ಯ ವಿಲೇವಾರಿ ಹೇಗೆ? ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಘಟಕದಲ್ಲಿಯೇ ಪಾಠ

ಕಂದಾವರ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕುಂದಾಪುರ ಸ.ಪ.ಪೂ ಕಾಲೇಜು ಪ್ರೌಢಶಾಲಾ ವಿದ್ಯಾರ್ಥಿಗಳ ಭೇಟಿ

ಕುಂದಾಪುರ, ಮಾ.11: ಪುರಸಭಾ ವ್ಯಾಪ್ತಿಯ ಕಸವನ್ನು ನಿತ್ಯವೂ ಸಂಗ್ರಹಿಸಿ ಕೊಂಡೋಯ್ಯಲಾಗುತ್ತದೆ. ವಾಹನಗಳಲ್ಲಿ ಹಸಿ ಕಸ, ಒಣಕಸ ವಿಂಗಡಿಸಿಕೊಂಡು ತಗೆದುಕೊಂಡು ಹೋಗಿ ಏನು ಮಾಡುತ್ತಾರೆ? ಕಸದ ವಿಲೇ ಹೇಗಾಗುತ್ತದೆ? ಉಳಿಕೆ ಕಸ ಏನಾಗುತ್ತದೆ? ಇತ್ಯಾದಿ ವಿಚಾರಗಳಿಗೆ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷವಾದ ಅರಿವು ಮೂಡಿಸುವ ನಿಟ್ಟಿನಲ್ಲಿ ಂದಾಪುರ ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಕುಂದಾಪುರ ಪುರಸಭೆ ಆಯೋಜನೆಯಲ್ಲಿ ಶುಕ್ರವಾರ ಕಂದಾವರದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕುಂದಾಪುರ ಸ.ಪ.ಪೂ.ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಯಿತು.

ಕುಂದಾಪುರ ನಗರದಲ್ಲಿ ಸಂಗ್ರಹವಾಗುವ ಕಸವನ್ನು ವಾಹನದಲ್ಲಿ ಕೊಂಡೊಯ್ದು ಅದನ್ನು ಬೇರೆ ಬೇರೆ ಹಂತಗಳಲ್ಲಿ ವಿಂಗಡಣೆ ಮಾಡಿ, ಸಂಪನ್ಮೂಲವಾಗಿ, ಗೊಬ್ಬರವಾಗಿ ಪರಿವರ್ತಿಸುವ ವಿಧಾನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿಯ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸಿಕೊಳ್ಳಬೇಕು. ಸುಂದರ ನಗರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರವೂ ಪ್ರಮುಖವಾಗುತ್ತದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕವಾದ ಮಾಹಿತಿ ನೀಡಿ, ಪ್ರತಿನಿತ್ಯ ಕುಂದಾಪುರ ನಗರ ವ್ಯಾಪ್ತಿಯಿಂದ 13ರಿಂದ 15 ಟನ್ ಕಸ ಇಲ್ಲಿಗೆ ಬರುತ್ತಿದ್ದು ಅವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಯಂತ್ರಗಳ ಸಹಾಯದಿಂದ ವಿಂಗಡನೆ ಮಾಡಲಾಗುತ್ತಿದೆ. ದಿನಕ್ಕೆ 4 ಟನ್ ಹಸಿ ಕಸ ಬರುತ್ತಿದ್ದು ಅವುಗಳನ್ನು ಕೂಡ ವ್ಯವಸ್ಥಿತವಾಗಿ ಬೇರ್ಪಡಿಸಿ, 45 ದಿನಗಳ ಕಾಲ ವೈಜ್ಞಾನಿಕ ಮಾದರಿಯಲ್ಲಿ ಇರಿಸಿ ಗೊಬ್ಬರವನ್ನಾಗಿ ಪರಿವರ್ತನೆ ಮಾಡಿ ಕೃಷಿಕರಿಗೆ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಕೋಳಿ ತ್ಯಾಜ್ಯವನ್ನು ಕೂಡಾ ಇಲ್ಲಿ ಸಂಗ್ರಹಿಸಿ ಅದನ್ನು ಕೂಡಾ ವಿಶೇಷ ಘಟಕಗಳಲ್ಲಿ ವಿಲೇ ಮಾಡುತ್ತಿದ್ದು ಉತ್ಕೃಷ್ಟ ಗೊಬ್ಬರವನ್ನಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಪುರಸಭೆ ಸ್ವತಂತ್ರ್ಯವಾಗಿ ಇಷ್ಟೊಂದು ದೊಡ್ಡ ಘಟಕವನ್ನು ನಿರ್ವಹಣೆ ಮಾಡುತ್ತಿದೆ. ಕಸವನ್ನು ಬೇರೆ ಬೇರೆಯಾಗಿ ವಿಂಗಡಿಸಿ ಮರುಬಳಕೆಯಾಗುವ ಕಸವನ್ನು ಪ್ರತ್ಯೇಕಿಸಿ ಮಾರಾಟಕ್ಕೆ ಸಜ್ಜುಗೊಳಿಸುವುದು. ತ್ಯಾಜ್ಯ ನೀರನ್ನು ಕೂಡಾ ವ್ಯವಸ್ಥಿತ ಮಾದರಿಯಲ್ಲಿ ವಿಲೇ ಮಾಡುವುದು, ಹಸಿ ಕಸವನ್ನು ಪ್ಲಾಸ್ಟಿಕ್ ಇತ್ಯಾದಿ ಕರಗದ ವಸ್ತುಗಳಿಂದ ವಿಭಜಿಸಿ ೪೫ ದಿನಗಳ ಕಾಲ ಇರಿಸಿ ಒಣಗಿದ ಬಳಿಕ ಜರಡಿ ಹಿಡಿದು ರೈತರಿಗೆ ಒದಗಿಸುವುದು. ದೊಡ್ಡ ಮಟ್ಟದಲ್ಲಿ ನಿತ್ಯವೂ ಕಸ ಸಂಗ್ರಹವಾಗುವುದರಿಂದ ಕಸದ ವಿಂಗಡಣೆಗೆ ಯಾಂತ್ರೀಕೃತ ವ್ಯವಸ್ಥೆ ಮಾಡಿಕೊಂಡಿದ್ದು, ಜೆಸಿಬಿ ಸೇರಿದಂತೆ ಬೇರೆ ಬೇರೆ ರೀತಿಯ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಪೌರ ಕಾರ್ಮಿಕರೂ ಕೂಡಾ ಸೇವೆ ಸಲ್ಲಿಸುತ್ತಿದ್ದು ಅವರ ಸೇವೆಯೂ ಶ್ಲಾಘನಾರ್ಹವಾಗಿದೆ ಎಂದರು.

ಪ್ರೌಢಶಾಲಾ ವಿಭಾಗದ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಉದಯ ಮಡಿವಾಳ ಮಾತನಾಡಿ, ಇವತ್ತು 130 ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲೆಯ 150 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ನಗರದಲ್ಲಿ ಉತ್ಪತ್ತಿಯಾಗುವ ಕಸದ ವಿಲೇವಾರಿ ಹೇಗೆ ಆಗುತ್ತದೆ ಎನ್ನುವ ಅರಿವು ಹಾಗೂ ಜವಬ್ದಾರಿ ಇರುವುದರಿಂದ ಈ ಭೇಟಿ ಅತ್ಯುಪಯೂಕ್ತವಾಗುತ್ತದೆ ಎಂದರು.

ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಇಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯವನ್ನು ವಿಂಗಡನೆಯಾಗುತ್ತಿದ್ದು ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತನೆ ಹಾಗೂ ಪ್ಲಾಸ್ಟಿಕ್, ಲೋಹ ಇತ್ಯಾದಿಗಳನ್ನು ಸಂಪನ್ಮೂಲವಾಗಿ ಬಳಕೆ ಮಾಡಲಾಗುತ್ತದೆ. ನಗರ ಸೌಂದರ್ಯದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳು, ಇಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಸೇವೆಯನ್ನು ನಾಗರಿಕರು ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ ಖಾರ್ವಿ, ನಾಮ ನಿರ್ದೇಶಿತ ಸದಸ್ಯೆ ಪುಷ್ಪ ಶೇಟ್, ಪುರಸಭೆಯ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಕಂದಾಯ ನಿರೀಕ್ಷಕಿ ಜ್ಯೋತಿ, ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯಕ್, ಗಣೇಶ ಕುಮಾರ್ ಜನ್ನಾಡಿ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಪ.ಪೂ.ಕಾಲೇಜಿನ ಪ್ರಾಧ್ಯಾಪಕರಾದ ನವೀನ ಕುಮಾರ್, ದಿವ್ಯಾ, ನಾಗರತ್ನ, ವಿಜಯಾ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!