Sunday, September 8, 2024

ಕುಂದಾಪುರದಲ್ಲಿ ತೀವ್ರ ಸ್ವರೂಪ ಪಡೆದ ಹಿಜಾಬ್-ಕೇಸರಿಶಾಲು ಸಂಘರ್ಷ

ಕುಂದಾಪುರ, ಫೆ.5: ಕುಂದಾಪುರದಲ್ಲಿ ನಡೆಯುತ್ತಿರುವ ಹಿಜಾಬ್ ಕೇಸರಿ ಶಾಲು ಸಂಘರ್ಷ ಸತತ ೪ನೇ ದಿನಕ್ಕೆ ಕಾಲಿಟ್ಟಿದೆ. ಹಿಜಾಬ್ ಸಂಘರ್ಷ ಪ್ರಾರಂಭವಾದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶನಿವಾರ ರಜೆ ನೀಡಿದ್ದ ಹಿನ್ನೆಲೆಯಲ್ಲಿ ಹಿಜಾಬ್-ಕೇಸರಿ ಶಾಲು ಸಂಘರ್ಷ ಖಾಸಗಿ ಕಾಲೇಜುಗಳಿಗೆ ವ್ಯಾಪಿಸಿದೆ.

ಶನಿವಾರ ಬೆಳ್ಳಂಬೆಳಿಗ್ಗೆ ಕುಂದಾಪುರದಲ್ಲಿ ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ನಡೆಯಿತು. ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಒಳಬಿಟ್ಟಿದ್ದರೆಂದು ಕೆಲವು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಕಾಲೇಜಿಗೆ ತಕ್ಷಣ ರಜೆ ಘೋಷಿಸಲಾಯಿತು. ಕಾಲೇಜಿನಿಂದ ಹೊರಬಂದ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕುಂದಾಪುರ ಶಾಸ್ತ್ರೀವೃತ್ತದ ತನಕ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು.

ಇತ್ತ ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಕೇಸರಿ ಶಾಲು ಧರಿಸಿ ಕುಂದೇಶ್ವರ ದೇವಸ್ಥಾನದಿಂದ ಘೋಷಣೆ ಕೂಗುತ್ತಾ ಕಾಲೇಜಿನತ್ತ ಹೆಜ್ಜೆ ಹಾಕಿದರು. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆಯೊಂದಿಗೆ ಮುಖ್ಯರಸ್ತೆಯಲ್ಲಿ ಸಾಗಿಬಂದು ಕಾಲೇಜಿನ ಆವರಣಕ್ಕೆ ಬಂದರು. ಕಾಲೇಜು ಆಡಳಿತ ಯಾವುದೇ ವಿದ್ಯಾರ್ಥಿಯೂ ಕೇಸರಿ ಶಾಲು, ಹಿಜಾಬ್ ಧರಿಸಿ ಕಾಲೇಜು ಆವರಣ ಪ್ರವೇಶ ಮಾಡಬಾರದೆಂದು ಸೂಚನೆ ನೀಡಿತ್ತು. ಪ್ರತಿಯೊಂದು ವಿದ್ಯಾರ್ಥಿಯನ್ನು ಕಾಲೇಜು ಸಿಬ್ಬಂದಿಗಳು ಗೇಟ್ ಹತ್ತಿರ ತೀವ್ರ ತಪಾಸಣೆ ಮಾಡಿಯೇ ಕಾಲೇಜು ಒಳ ಬಿಟ್ಟರು.

ಕುಂದಾಪುರ ಡಿವೈ‌ಎಸ್‌ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ಮೆರವಣಿಗೆಯ ಸಂದರ್ಭದಲ್ಲಿಯೂ ತೀವ್ರ ಎಚ್ಚರಿಕೆ ವಹಿಸಲಾಗಿತ್ತು. ಎಲ್ಲೂ ಅಹಿತಕರ ಘಟನೆಗೆ ಆಸ್ಪದವಾಗದಂತೆ ಮುಂಜಾಗ್ರತ ಕ್ರಮಗಳನ್ನು ವಹಿಸಲಾಗಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!