Thursday, November 21, 2024

ಪ್ರಸಿದ್ಧಿಯ ಪಥಕ್ಕೇರುತ್ತಿರುವ ಯುವ ಕಲಾವಿದ ರಾಘವೇಂದ್ರ ಶೆಟ್ಟಿ ಬಡಬಾಳು

ಆಜ್ರಿ ಮೇಳದ ಶನೀಶ್ವರ ಮಹಾತ್ಮೆ ಪ್ರಸಂಗಕ್ಕೆ ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಇರುತ್ತದೆ. ಶನೀಶ್ವರ ಪಾತ್ರಧಾರಿಯೂ ಕೂಡಾ ಪ್ರೇಕ್ಷಕರ ನಿರೀಕ್ಷೆ, ಭಾವನಾತ್ಮಕವಾದ ಪ್ರತೀಕ್ಷೆಯನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯಬೇಕು. ಕಥೆ ಎಲ್ಲರಿಗೂ ಗೊತ್ತಿದ್ದರೂ ಸಹ ಶನೀಶ್ವರ ಮಾತ್ರ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸುವ ಯುವ ಕಲಾವಿದ ರಾಘವೇಂದ್ರ ಶೆಟ್ಟಿ ಬಡಬಾಳು ಶನೀಶ್ವರ ಪಾತ್ರದ ಮೂಲಕ ಬಹುಬೇಗ ಪ್ರಸಿದ್ದಿಗೆ ಬಂದವರು.

ಪುಂಡುವೇಷದ ಮೂಲಕ ರಂಗದಲ್ಲಿ ವಿದ್ಯುತ್ಸಂಚಲನ ಉಂಟು ಮಾಡುತ್ತಿದ್ದ ಬಡಬಾಳ್ ಅವರಲ್ಲಿನ ಅಂತರ್ಗತ ಪ್ರತಿಭೆ ಗಮನಿಸಿದ ಆಜ್ರಿ ಶನೀಶ್ವರ ದೇವಸ್ಥಾನದ ಮುಖ್ಯಸ್ಥರಾದ ಅಶೋಕ್ ಶೆಟ್ಟಿ ಚೋನಮನೆಯವರು ಪ್ರಮುಖ ವೇಷಗಳನ್ನು ಮಾಡಲು ಉತ್ತೇಜಿಸಿದರು. ಪಾತ್ರದ ಪೂರ್ವ ಹಿನ್ನೆಲೆ ಇತ್ಯಾದಿಗಳ ತಿಳಿಸಿಕೊಟ್ಟರು. ಈ ಪ್ರೋತ್ಸಾಹದಾಯಕ ಮಾತುಗಳಿಂದ ಪ್ರೇರಿತರಾದ ಬಡಬಾಳ್, ಪಾತ್ರಗಳ ಅಂತರ್ಯ, ಮಹತ್ವ ತಿಳಿದುಕೊಂಡು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಕಲೆ ಕರಗತ ಮಾಡಿಕೊಂಡರು.

ಇವರ ಅಧ್ಯಯನಶೀಲತೆ, ರಂಗಶಿಸ್ತು, ಪ್ರಸಂಗಭ್ಯಾಸ, ಹಿರಿಯ ಕಲಾವಿದರೊಂದಿಗೆ ಸನ್ನಿವೇಶವನ್ನು ಇನ್ನೂ ರಸವತ್ತಾಗಿಸುವ ಬಗ್ಗೆ ಅಭಿಪ್ರಾಯ ಕ್ರೋಢೀಕರಣ ಹೀಗೆ ಆಟವೊಂದರ ಒಟ್ಟಂದಕ್ಕೆ ಬೇಕಾದ ತಯಾರಿ ಮೂಲಕವೇ ಯಶಸ್ವಿ ಕಲಾವಿದರಾಗಿ ಬೆಳೆದ ಬಡಬಾಳ್ ಇವತ್ತು ಯುವ ಪ್ರೇಕ್ಷಕರ ಕಣ್ಮಣಿಯಾಗಿದ್ದಾರೆ. ಪಾತ್ರೋಚಿತವಾದ ಸ್ವರಭಾರ, ಸುಂದರ ಅಳಂಗ, ಪಾತ್ರಕ್ಕೊಪ್ಪುವ ಮುಖಮುದ್ರೆ, ಚುರುಕುತನ, ಸಾಂಪ್ರದಾಯಿಕ ಚೌಕಟ್ಟಿನೊಳಗೆ ರಂಗತುಂಬುವ ಅಚ್ಚುಕಟ್ಟುತನ, ಸಾಹಿತ್ಯಭರಿತ ಮಾತುಗಾರಿಕೆ, ಪ್ರತ್ಯುತ್ಪನ್ನಮತಿತ್ವ, ಲಾಸ್ಯಪೂರಿತ ಕುಣಿತ… ರಾಘವೇಂದ್ರ ಶೆಟ್ಟಿ ಅವರಲ್ಲಿ ಗಮನಿಸಬಹುದು.

ರಾಜೀವ ಶೆಟ್ಟಿ ಮತ್ತು ಲಚ್ಚಮ್ಮ ಶೆಟ್ಟಿ ಅವರ ಪುತ್ರರಾಗಿ ಸಿದ್ಧಾಪುರ ಗ್ರಾ.ಪಂ. ವ್ಯಾಪ್ತಿಯ ಬಡಬಾಳು ಎಂಬಲ್ಲಿ 1990ರಲ್ಲಿ ಜನಿಸಿದ ಇವರು, ಪ್ರೌಢಶಿಕ್ಷಣ ಪಡೆದ ಬಳಿಕ ಯಕ್ಷಗಾನದ ಬಗ್ಗೆ ಆಸಕ್ತಿ ಹರಿಸಿದರು. ಆಗ ಗಣೇಶ್ ಬಳೆಗಾರ್ ಶಂಕರನಾರಾಯಣ ಅವರ ವೇಷಗಳನ್ನು ನೋಡುತ್ತಾ ತಾನೂ ಅವರಂತೆ ಕಲಾವಿದರಾಗಬೇಕು ಎನ್ನುವ ಆಸೆಗೆ ಪೂರಕವಾಗಿ ಉದಯ ಕುಮಾರ್ ತಾರೆಕೊಡ್ಲು ಅವರ ಗುರುತನ ಲಭಿಸಿತು. ಅವರಿಂದ ಹೆಜ್ಜೆಗಾರಿಕೆ ಕಲಿತರು. ನಾರಾಯಣ ಶೆಟ್ಟಿ ಜನ್ಸಾಲೆಯವರು ಮೇಳಕ್ಕೆ ಸೇರ್ಪಡೆಗೊಳಿಸಿದರು. ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟುವ ಮೂಲಕ ವೃತ್ತಿಯನ್ನೂ ಯಕ್ಷಗಾನವನ್ನಾಗಿ ಸ್ವೀಕರಿಸಿದರು. ಕಮಲಶಿಲೆ ಮೇಳದಲ್ಲಿ ನಿತ್ಯವೇಷಗಳನ್ನು ಮಾಡುತ್ತಾ ಹಂತ ಹಂತ ಅನುಭವ ಪಡೆದರು, ಅಲ್ಲಿ ಹಿರಿಯ ಕಲಾವಿದರ ಒಡನಾಟ, ಯಜಮಾನರ ಪ್ರೋತ್ಸಾಹದಿಂದ ಇನ್ನಷ್ಟು ಬೆಳವಣಿಗೆ ಸಹಕಾರಿಯಾಯಿತು. ಮೂರು ವರ್ಷ ಅಲ್ಲಿ ಸೇವೆ ಸಲ್ಲಿಸಿ ಬಳಿಕ ಆಜ್ರಿ ಚೋನಮನೆ ಶನೀಶ್ವರ ಮೇಳಕ್ಕೆ ಸೇರ್ಪಡೆಗೊಂಡರು.

ಇಲ್ಲಿ ಮೇಳದ ಯಜಮಾನರಾದ ಆಶೋಕ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಬೆಳೆಯಲು, ಬೆಳಗಲು ಪೂರಕ ಅವಕಾಶಗಳು ಲಭಿಸಿದವು. ಇವರ ಪ್ರತಿಭಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪುಂಡುವೇಷದ ಜೊತೆಗೆ ಎರಡನೇ ವೇಷಗಳು ಲಭಿಸಿದವು. ಕೌರವ, ಋತುಪರ್ಣ, ಭಸ್ಮಾಸುರ, ಕೀಚಕ, ಭೀಷ್ಮ, ಘಟೋತ್ಚಚ ಹೀಗೆ ಪುರಾಣ ಪಾತ್ರಗಳಲ್ಲಿ ತನ್ನ ಹೆಚ್ಚುಗಾರಿಕೆಯನ್ನು ಅಚ್ಚೋತ್ತಿದರು. ಅಭಿಮನ್ಯು, ಸುಧನ್ವ, ಬಬ್ರುವಾಹನ, ಬರ್ಭರಿಕ, ಕುಶ ಲವ ಮೊದಲಾದ ಪುಂಡುವೇಷಗಳು ಇವರಿಗೆ ಖ್ಯಾತಿ ತಂದು ಕೊಟ್ಟಿವೆ.

ಆಜ್ರಿ ಮೇಳದಲ್ಲಿ ನಿರಂತರ 10 ವರ್ಷ, ನೀಲಾವರ ಮೇಳದಲ್ಲಿ ಮೂರುವರ್ಷ, ಪ್ರಸ್ತುತ 17ನೇ ವರ್ಷದ ಕಲಾಸೇವೆ ಸಲ್ಲಿಸುತ್ತಿರುವ ಇವರು ಪುರಾಣ ಪಾತ್ರಗಳ ಬಗ್ಗೆ ಅದ್ಯಯನ, ಹಿರಿಯ ಕಲಾವಿದರ ಸಂಸರ್ಗದಿಂದ ತಿಳಿದುಕೊಂಡು ಪಾತ್ರವನ್ನು ಇನ್ನಷ್ಟು ಗಟ್ಟಿಯಾಗಿ ಮೂಡಿಬರುವಂತೆ ಪ್ರಯತ್ನ ಮಾಡುತ್ತಾರೆ. ಕೆಂಪು ಮುಂಡಾಸು ಪಾತ್ರವಾಗಲಿ, ಸಾತ್ವಿಕ ಪಾತ್ರವಾಗಲಿ, ಪೌರಾಣಿಕ, ಸಾಮಾಜಿಕ ಪ್ರಸಂಗದಲ್ಲಿ ತನ್ನ ಪಾಲಿಗೆ ಲಭಿಸುವ ಪಾತ್ರಕ್ಕೆ ನಿಷ್ಠನ್ಯಾಯ ಒದಗಿಸುತ್ತಾರೆ. ಇವರ ಪ್ರತಿಭೆ ಗುರುತಿಸಿ, ಆಜ್ರಿ ಮೇಳದ ದಶಮಾನೋತ್ಸವ ಸಂದರ್ಭ ಸಮ್ಮಾನ ಸಹಿತ ಸಮ್ಮಾನ-ಗೌರವಗಳು ಇವರಿಗೆ ಸಂದಿವೆ. ಬೇರೆ ಬೇರೆ ಕಡೆ ಆಟ-ಕೂಟಗಳಲ್ಲಿ ಭಾಗವಹಿಸಿದ್ದಾರೆ.

‘ನನ್ನ ಈ ಹಂತಕ್ಕೆ ತರುವಲ್ಲಿ ಅನೇಕ ಹಿರಿಯ ಕಲಾವಿದರ ಸಹಕಾರವಿದೆ. ಮುಖ್ಯವಾಗಿ ಆಜ್ರಿ ಮೇಳದ ಯಜಮಾನರಾದ ಅಶೋಕ ಶೆಟ್ಟಿಯವರು ಮನೆಮಗನಂತೆ ನೋಡಿಕೊಂಡಿದ್ದಾರೆ. ಇಲ್ಲಿ ಉತ್ತಮ ತಂಡವಿದೆ. ಕಲಾಭಿಮಾನಿಗಳ ಅಭಿಮಾನವಿದೆ’ ಎನ್ನುವ ಬಡಬಾಳ್ ರಾಘವೇಂದ್ರ ಶೆಟ್ಟಿ ಯಕ್ಷರಂಗದಲ್ಲಿ ನಾನಿನ್ನೂ ವಿದ್ಯಾರ್ಥಿ. ಕಲಿಯಲು ಸಾಕಷ್ಟಿದೆ ಎನ್ನುತ್ತಾರೆ.
ಸೌಮ್ಯ ಸ್ವಭಾವದ ಈ ಗ್ರಾಮೀಣ ಪ್ರತಿಭೆ ಅಪ್ಪಟ ಶ್ರಮಜೀವಿ. ಕಲೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಇವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.


-ನಾಗರಾಜ್ ವಂಡ್ಸೆ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!