Thursday, November 21, 2024

ಕೃಷಿಯಲ್ಲಿ ಸುಧಾರಿತ ಪದ್ದತಿ, ಯಂತ್ರೋಪಕರಣ ಬಳಕೆಯಿಂದ ಆರ್ಥಿಕ ಪ್ರಗತಿ- ಡಾ.ಡಿ.ವೀರೇಂದ್ರ ಹೆಗ್ಗಡೆ

ಅಸೋಡು: ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ ಉದ್ಘಾಟನೆ

ಕುಂದಾಪುರ, ಅ.20: ಕೃಷಿಯಲ್ಲಿ ಸುಧಾರಿತ ಪದ್ದತಿ ಅನುಷ್ಠಾನ, ಯಂತ್ರೋಪಕರಣಗಳ ಸಮರ್ಪಕ ಬಳಕೆ, ಅನಗತ್ಯ ಖರ್ಚುಗಳ ನಿಯಂತ್ರಣದಿಂದ ಲಾಭದಾಯಕವಾಗಿಸುವ ಮೂಲಕ ಕವಿದ ಅನಿಶ್ಚಿತತೆಯಿಂದ ರೈತರು ಕೃಷಿಯಿಂದ ವಿಮುಖರಾಗುವುದನ್ನು ತಡೆಯಬಹುದು. ಕೊರೋನಾದಂತಹ ಸಂದಿಗ್ದತೆ ಎರಡು ವರ್ಷ ಕಾಡಿದರೂ ಕೂಡ ರೈತ ಮಾತ್ರ ಕರ್ಮಯೋಗ ಬಿಡಲಿಲ್ಲ. ಹಾಗಾಗಿ ಆಹಾರದ ಸಮಸ್ಯೆ ಕಾಡಲಿಲ್ಲ. ಒಂದು ವೇಳೆ ಅನ್ನದಾತ ತಟಸ್ಥನಾಗಿರುತ್ತಿದ್ದರೆ ಕೊರೋನಾಕ್ಕಿಂತ ಹೆಚ್ಚು ಸಾವು ಆಹಾರ ಸಮಸ್ಯೆಯಿಂದ ಸಂಭವಿಸುತ್ತಿತ್ತು. ಹಾಗಾಗಿ ರೈತರ ಮುಂದಿರುವ ಸಮಸ್ಯೆಗಳ ಬಗೆಹರಿಸಿ ಪೂರಕ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಧರ್ಮಸ್ಥಳ ವತಿಯಿಂದ ನೂತನವಾಗಿ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಅಸೋಡು-ಬಂಡ್ಸಾಲೆಯಲ್ಲಿ ಆರಂಭಿಸಿದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿ ಇವತ್ತು ಅನಗತ್ಯವಾದ ಖರ್ಚು ಹೆಚ್ಚಳವಾದ್ದರಿಂದ ಲಾಭಾಂಶ ಕಡಿಮೆಯಾಗುತ್ತಿದೆ. ಆದಾಯ ಹೆಚ್ಚಳ ಮಾಡುವ ಬಗ್ಗೆ ರೈತರು ಸುಧಾರಿತ ಕೃಷಿ ಪದ್ದತಿ ಅನುಷ್ಠಾನದ ಬಗ್ಗೆ ಚಿಂತನೆ ಮಾಡಬೇಕು. ಕಾರ್ಮಿಕರ ಸಮಸ್ಯೆಗೆ ನೀಗಿಸಲು ಯಂತ್ರೋಪಕರಣಗಳ ಬಳಕೆ ಮಾಡಬಹುದು. ಸಣ್ಣ ರೈತರು ಮಧ್ಯಮ ರೈತರ ಅನುಕೂಲಕ್ಕಾಗಿ ಬಾಡಿಗೆ ಸೇವಾ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳಬಹುದು. ಲಾಭದ ದೃಷ್ಟಿಕೋನದಿಂದ ಈ ಕೇಂದ್ರಗಳು ಆರಂಭವಾಗಿಲ್ಲ. ರೈತರಿಗೆ ಅನುಕೂಲವಾಗಬೇಕು, ಹತ್ತಿರದಲ್ಲಿಯೇ ಕೃಷಿ ಯಂತ್ರಗಳು ಸಿಗಬೇಕು ಎನ್ನುವ ನೆಲೆಯಿಂದ ಆರಂಭವಾಗಿವೆ ಎಂದರು.

ಇವತ್ತು ಧ.ಗ್ರಾ ಯೋಜನೆಯಿಂದ ರಾಜ್ಯದಲ್ಲಿ 164 ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರಗಳಿವೆ. 50% ಕೇಂದ್ರಗಳು ಮಾತ್ರ ಲಾಭದಲ್ಲಿವೆ. ರೈತರ ಅಭ್ಯುದಯದ ದೃಷ್ಟಿಯಿಂದ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಯೋಜನಾಬದ್ದವಾದ ಕಾರ್ಯಚಟುವಟಿಕೆಯಿಂದ ಕಾರ್ಯನಿರ್ವಹಿಸಬೇಕು. ಆಯಾಯ ಪ್ರದೇಶದ ಋತುಮಾನ ಆಧಾರಿತ ಬೆಳೆಗಳನ್ನು ನೋಡಿಕೊಂಡು ಯಂತ್ರಗಳನ್ನು ಅಲ್ಲಿಗೆ ಕಳುಹಿಸಲಾಗುತ್ತದೆ. ಇದರಿಂದ ವರ್ಷವಿಡಿ ಯಂತ್ರಗಳಿಗೂ ಕೆಲಸ ಸಿಗುತ್ತದೆ ಎಂದು ಹೇಳಿದ ಅವರು, ರೈತ ಕೃಷಿಯಿಂದ ವಿಮುಖನಾಗಬಾರದು. ಹೆಚ್ಚು ಲಾಭದಾಯಕವಾಗಿ ಕೃಷಿ ಮಾಡುವ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಬೇಕು. ಗುರಿ, ಶ್ರದ್ದೆಯೊಂದಿಗೆ ಕಾರ್ಯನಿರ್ವಹಿಸಿದಾಗ ಕೃಷಿಯಲ್ಲಿ ಲಾಭ ಸಾಧ್ಯವಿದೆ ಎಂದರು.

ಗದ್ದೆಯಲ್ಲಿಯೇ ಬೆಂಬಲ ಬೆಲೆ ಕೊಡಬೇಕು-ಪ್ರತಾಪಚಂದ್ರ ಶೆಟ್ಟಿ:
ಗ್ರಾಹಕ ಸೇವಾ ಕೇಂದ್ರ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಇವತ್ತು ರೈತ ಬೆಳೆದ ಭತ್ತ ಗೋಡೌನ್‌ಗೆ ಹೋಗುತ್ತಿಲ್ಲ. ಗದ್ದೆಯಿಂದ ನೇರವಾಗಿ ಅಕ್ಕಿ ಗಿರಣಿಗಳಿಗೆ ಹೋಗುತ್ತಿದೆ. ರೈತರಿಗೆ ಬೆಂಬಲ ಬೆಲೆ ಸಿಗುವುದಿಲ್ಲ. ಹಾಗಾಗಿ ಸರ್ಕಾರ ಭತ್ತ ಬೆಳೆಗಾರರನ್ನು ಉತ್ತೇಜಿಸಲು ಗದ್ದೆಯಲ್ಲಿಯೇ ಬೆಂಬಲ ಬೆಲೆ ನೀಡುವ ವ್ಯವಸ್ಥೆ ಜ್ಯಾರಿಗೆ ತಂದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಅಂತರ್ಜಲ ವೃದ್ದಿಗೆ ಸರ್ಕಾರಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತವೆ. ಅದರೆ ನೈಸರ್ಗಿಕವಾಗಿ ಭತ್ತದ ಗದ್ದೆಗಳಿಂದ ಅಂತರ್ಜಲದ ಪರಿಣಾಮಕಾರಿ ವೃದ್ದಿಯಾಗುತ್ತದೆ. ಹಾಗಾಗಿ ಭತ್ತ ಬೇಸಾಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇವತ್ತು ಕೃಷಿಕರಿಗೆ ಕಾರ್ಮಿಕರ ಸಮಸ್ಯೆ, ಕಾಡು ಪ್ರಾಣಿಗಳ ಉಪಟಳ, ಹವಮಾನ ವೈಪರೀತ್ರ್ಯ ಮೊದಲಾದಗಳಿಂದ ಹೊಡೆತ ಬೀಳುತ್ತಲೇ ಇರುತ್ತದೆ. ಯಂತ್ರೋಪಕರಣಗಳನ್ನು ಬಾಡಿಗೆಯ ಮೂಲಕ ನೀಡುವ ಇಂತಹ ವ್ಯವಸ್ಥೆಗಳಿಂದ ರೈತರಿಗೆ ಅನುಕೂಲವಾಗುತ್ತದೆ. ಸರ್ಕಾರ ಇಂಥಹ ಬಾಡಿಗೆ ಸೇವಾ ಕೇಂದ್ರಗಳನ್ನು ಸಹಕಾರ ಸಂಘಗಳ ಮೂಲಕ ಅನುಷ್ಠಾನಕ್ಕೆ ಮುಂದಾದರೂ ಕೂಡಾ ಅದು ಲಾಭದಾಯಕವಲ್ಲ ಎನ್ನುವ ಹಿನ್ನೆಲೆಯಲ್ಲಿ ಸಹಕಾರಿ ಸಂಘಗಳು ಮುತುವರ್ಜಿ ವಹಿಸಲಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳ ಮೂಲಕ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುತ್ತಿರುವುದು ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಜನಜಾಗೃತಿ ವೇದಿಕೆ ಕುಂದಾಪುರದ ಸ್ಥಾಪಕ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾಳಾವರ ಗ್ರಾ.ಪಂ ಅಧ್ಯಕ್ಷೆ ಆಶಾಲತಾ ಶೆಟ್ಟಿ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ರೂಪಾ ಜೆ. ಮಾಡ, ಸುಜಿತ್ ಕುಮಾರ್ ಶೆಟ್ಟಿ, ಕರಾವಳಿ ಪ್ರಾದೇಶಿಕ ಕಛೇರಿಯ ನಿರ್ದೇಶಕ ವಸಂತ ಸಾಲ್ಯಾನ್ ಉಪಸ್ಥಿತರಿದ್ದರು.

ರಾಜ್ಯದಲ್ಲಿ 164 ಬಾಡಿಗೆ ಸೇವಾ ಕೇಂದ್ರಗಳು:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ|ಎಲ್.ಎಚ್.ಮಂಜುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿ, 2014ರಿಂದ ರಾಜ್ಯ ಸಹಕಾರದೊಂದಿಗೆ ಒಡಂಬಡಿಕೆಯಿಂದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರಗಳ ಆರಂಬಿಸಲಾಯಿತು. 160 ಕೋಟಿ ಬೆಲೆ ಯಂತ್ರಗಳು, 85 ಕೋಟಿ ಸರ್ಕಾರದ ಪಾಲುದಾರಿಕೆಯಾದರೆ, 65 ಕೋಟಿ ರೂ ಧ.ಗ್ರಾ ಯೋಜನೆಯದ್ದು. 25 ಜಿಲ್ಲೆಗಳಲ್ಲಿ 164 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 16 ಲಕ್ಷ ಜನರ ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಗ್ರಾಮದ ಅವಶ್ಯಕತೆ ಮನಗಂಡು ಅಲ್ಲಗೆ ಅಗತ್ಯವಿರುವ ಯಂತ್ರಗಳನ್ನು ಬಾಡಿಗೆ ಸೇವಾ ಕೇಂದ್ರದಲ್ಲಿ ಇರಿಸಲಾಗಿದೆ. 2018ರಲ್ಲಿ ಮೈಸೂರು ಮತ್ತು ದಾವಣಗೆರೆಯಲ್ಲಿ ಹಾರ್ವೆಸ್ಟರ್ ಬ್ಯಾಂಕ್‌ಗಳ ಸ್ಥಾಪನೆ ಮಾಡಲಾಗಿದೆ. 30 ಸಾವಿರ ಗಂಟೆಗಳ ಕಾಲ ಬಳಕೆಯಾಗುತ್ತಿದೆ ಎಂದು ಹೇಳಿದ ಅವರು, ಕಾಳಾವರ ಯಂತ್ರಶ್ರೀಗೆ ಸಸಿ ಮಡಿ 350 ಎಕ್ರೆ ನಾಟಿ ಮಾಡಲಾಗಿತ್ತು. ಒಟ್ಟು 750 ಎಕ್ರೆ ಭತ್ತ ಬೇಸಾಯ ಯಂತ್ರಶ್ರೀಯ ಮೂಲಕ ಈ ಭಾಗದಲ್ಲಿ ಆಗಿದೆ. ಈಗಾಗಲೇ ಕುಂದಾಪುರದಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ರಚನೆಯಾಗಿದೆ. ಕಂಪೆನಿ ಪರಿಕಲ್ಪನೆಯಲ್ಲಿ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ ಎಂದರು.

ಉಡುಪಿ ಹಿರಿಯ ನಿರ್ದೇಶಕರಾದ ಗಣೇಶ್ ಬಿ., ಕುಂದಾಪುರ ಕಛೇರಿಯ ಯೋಜನಾಧಿಕಾರಿ ಮುರಳೀದರ ಕೆ.ಶೆಟ್ಟಿ, ಸಿ.ಎಚ್,ಎಸ್.ಸಿ ಉಡುಪಿ ವಿಭಾಗದ ಅಶೋಕ್, ಕೋಟೇಶ್ವರ ವಲಯ ಮೇಲ್ವಿಚಾಕರ ನಾಗರಾಜ್ ಎಚ್., ಜ್ಞಾನವಿಕಾಸ ಕಾರ್ಯಕ್ರಮದ ಸಾವಿತ್ರಿ, ಹರೀಶ್, ಶೇಖರ ದೇವಾಡಿಗ, ಲಲಿತಾ ಅತಿಥಿಗಳನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ರೈತರಾದ ಅಶೋಕ್ ಮರಾಠಿ, ಸದಾನಂದ ಪೂಜಾರಿ, ಚಂದ್ರಶೇಖರ ಶೆಟ್ಟಿಗಾರ ಅವರಿಗೆ ನಾಟಿ, ಉಳುಮೆ, ಕಟಾವು ಯಂತ್ರಕ್ಕೆ ಮುಂಗಡ ರಶೀದಿಯನ್ನು ಹೆಗ್ಗಡೆಯವರು ನೀಡಿದರು.

ಸ್ಥಳದ ಮಾಲಿಕರಾದ ಸುಜಿತ್ ತಾರಾ ಎಸ್.ಶೆಟ್ಟಿ, ಸುಜಿತ್ ಕುಮಾರ್ ಶೆಟ್ಟಿ, ತಾಲೂಕು ಕಾರ್ಯಕರ್ತರು, ವಲಯ ಸೇವಾಪ್ರತಿನಿಧಿಗಳ ತಂಡ, ಕೇಂದ್ರ ಒಕ್ಕೂಟ, ಸ್ಥಳೀಯ ಒಕ್ಕೂಟ, ಸಿ.ಎಚ್,ಎಸ್.ಸಿ ವಿಭಾಗ, ಶ್ರೀ ವಿರೂಪಾಕ್ಷ ಸೇವಾ ಸಮಿತಿ ಹಾಗೂ ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಆರ್.ನವೀನಚಂದ್ರ ಶೆಟ್ಟಿ, ಹಾಲಾಡಿ ವಲಯದ ಸುದರ್ಶನ ಶೆಟ್ಟಿ, ತೆಕ್ಕಟ್ಟೆ ವಲಯದ ಸುಧಾಕರ ಶೆಟ್ಟಿ, ಅಂಪಾರು ವಲಯದ ಸುರೇಶ್ ಹೆಬ್ಬಾರ್, ಕುಂದಾಪುರ ವಲಯದ ಕೃಷ್ಣಾನಂದ ಚಾತ್ರ, ಬಸ್ರೂರು ವಲಯದ ಸುಬ್ರಹ್ಮಣ್ಯ ಪುರಾಣಿಕ, ಕೋಟೇಶ್ವರ ವಲಯದ ಶ್ರೀನಿವಾಸ ಗಾಣಿಗ, ತಲ್ಲೂರು ವಲಯದ ಅನ್ನಪೂರ್ಣಮ್ಮ, ಅಮಾಸೆಬೈಲು ವಲಯದ ಸದಾಶಿವ ಶೆಟ್ಟಿ ಮೊದಲಾದವರು ಡಾ|ಡಿ.ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಿದರು.

ರಶ್ಮಿ ಪ್ರಾರ್ಥನೆ ಮಾಡಿದರು. ಕೃಷಿ ಯಂತ್ರೋಪಕರಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಅಬ್ರಾಹಂ ಎಂ.ಕೆ ಸ್ವಾಗತಿಸಿದರು. ಕುಂದಾಪುರ ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ಸಿ.ಎಚ್,ಎಸ್.ಸಿ ಮಧ್ಯಮ ವಲಯ ಶಿವಮೊಗ್ಗ ಇದರ ನಿರ್ದೇಶಕರಾದ ದಿನೇಶ್ ಎ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!