spot_img
Wednesday, January 22, 2025
spot_img

ಜಡ್ಕಲ್‌ನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ: ಜಿಲ್ಲಾಡಳಿತದ ಮುಂದೆ ಕಟ್ಟ ಕಡೆಯ ವ್ಯಕ್ತಿಗೂ ಅಹವಾಲು ಸಲ್ಲಿಸಲು ಅವಕಾಶ-ಜಿಲ್ಲಾಧಿಕಾರಿ ಕೂರ್ಮರಾವ್


ಕುಂದಾಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಕೋವಿಡ್ 2ನೇ ಅಲೆಯಿಂದ ಸ್ತಗಿತವಾಗಿದ್ದು ಈಗ ನಮ್ಮ ಜಿಲ್ಲೆಯಲ್ಲಿ, ಜಿಲ್ಲೆ ಹಾಗೂ ತಾಲೂಕು ಕೇಂದ್ರದಿಂದ ದೂರದಲ್ಲಿರುವ ಜಡ್ಕಲ್ ಗ್ರಾಮದಿಂದ ಪುನರಾರಂಭವಾಗುತ್ತಿದೆ. ಜಿಲ್ಲಾಡಳಿತವೇ ಗ್ರಾಮಕ್ಕೆ ಆಗಮಿಸಿ ಸಾರ್ವಜನಿಕರ ಸಮಸ್ಯೆ, ಸಲಹೆಗಳ ಆಲಿಸಿ, ಸಮಸ್ಯೆಗಳಿಗೆ ವ್ಯವಸ್ಥಿತವಾಗಿ ಪರಿಹಾರ ಮಾರ್ಗಸೂಚಿಸುವ ಕಾರ್ಯಕ್ರಮ ಇದಾಗಿದೆ. ಕಟ್ಟಕಡೆಯ ವ್ಯಕ್ತಿಯೂ ಕೂಡಾ ಇಲ್ಲಿ ಅಹವಾಲು ಸಲ್ಲಿಸಿ ಪರಿಹಾರ ಪಡೆದುಕೊಳ್ಳಲು ಅವಕಾಶವಿದ್ದು‌ಈ ಅಭಿಯಾನ ಇಲ್ಲಿ ಆಗುತ್ತಿರುವುದು ಅರ್ಥಪೂರ್ಣ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದರು.

ಅವರು ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿನಪಾರೆಯ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ಸಭಾಂಗಣದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಡ್ಕಲ್ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹಲವು ಅಂಶಗಳು ಪೂರಕವಾಗುತ್ತವೆ. ಇದು ಪ್ರಕೃತಿದತ್ತವಾದ ಸುಂದರ ಗ್ರಾಮ. ಹಳ್ಳಿಯ ಶಾಲೆಗಳು, ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ನೆಡೆಯುತ್ತಿರುವ ಅಭಿವೃದ್ದಿ ಕಾರ್ಯಕ್ರಗಳು ಗಮನಾರ್ಹವಾಗಿದೆ. ಇಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಬೇಡಿಕೆಗಳು, ಇಲಾಖಾ ಮಟ್ಟದಿಂದ ಆಗಬೇಕಾದ ಕೆಲಸಗಳು, ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತದ ಮೂಲಕ ಆಗಬೇಕಾದ ಕಾರ್ಯಗಳನ್ನು ಜೋಡಣೆ ಮಾಡಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದರು.

ಜಡ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಎಸ್ ಶೆಟ್ಟಿ ಮಾತನಾಡಿ, ಜಡ್ಕಲ್ ಮುದೂರು ಎರಡು ಗ್ರಾಮಗಳನ್ನು ಒಳಗೊಂಡ ದೊಡ್ಡ ಪಂಚಾಯಿತಿ ಆಗಿದ್ದು ಮುದೂರು ಗ್ರಾಮಕ್ಕೆ ಪಂಚಾಯಿತಿ ಕಟ್ಟಡಕ್ಕೆ ಸ್ಥಳವನ್ನು ಗುರುತಿಸಿ ಕಾಯ್ದಿರಿಸುವ ಕೆಲಸ ಆಗಬೇಕು. ಜಡ್ಕಲ್ ಗ್ರಾಮದಲ್ಲಿ ಹಿಂದೂ ರುದ್ರಭೂಮಿಗೆ ಸ್ಥಳವನ್ನು ಗುರುತು ಪಡಿಸಿ ಗ್ರಾ.ಪಂ. ವಶಕ್ಕೆ ನೀಡಬೇಕು, ಜಡ್ಕಲ್ ಮುದೂರು ಬಹು ವಿಸ್ತ್ರತ ಹಾಗೂ ಕುಗ್ರಾಮಗಳನ್ನು ಒಳಗೊಂಡ ಗ್ರಾಮವಾದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ. 94ಸಿ ಅರ್ಜಿ ಸಲ್ಲಿಸಿ ಫಲಾನುಭವಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು ಮಂಜೂರಾತಿ ನೀಡುವ ಕೆಲಸ ಆಗಬೇಕು, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ, ಎಸ್.ಆರ್.ಟಿ ಪೈಲ್‌ಗಳನ್ನು ಶೀಘ್ರ ಇತ್ಯರ್ಥಗೊಳಿಸುವ ಕಾರ್ಯ ಆಗಬೇಕು.ಎಸ್.ಎಲ್.ಆರ್.ಎಂ ಘಟಕ ನಿರ್ಮಾಣಕ್ಕೆ ಈ ಹಿಂದೆ ಹಾಲ್ಕಲ್‌ನಲ್ಲಿ 30 ಸೆಂಟ್ಸ್ ಜಾಗ ಕಾಯ್ದಿರಿಸಿದ್ದು ಪಕ್ಕದಲ್ಲಿ ಪ.ಪಂಗಡದ ಕುಟುಂಬವಿದ್ದು, ಅಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಿದರೆ ಆ ಮುಗ್ದ ಕುಟುಂಬಕ್ಕೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಎಸ್.ಎಲ್.ಆರ್.ಎಂ. ಘಟಕಕ್ಕೆ ಬೇರೆಡೆ ಜಾಗ ಕಾಯ್ದಿರಿಸಬೇಕು ಎನ್ನುವ ಬೇಡಿಕೆ ಪಟ್ಟಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಆಯುಕ್ತ ಕೆ.ರಾಜು, ಬೈಂದೂರು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಡ್ಕಲ್ ಗ್ರಾ.ಪಂ. ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ನಾಗಭೂಷಣ ಉಡುಪ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಸಂಧ್ಯಾ ರಮೇಶ್, ಜಿ.ಪಂ. ಯೋಜನಾಧಿಕಾರಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ತಾಲೂಕು ತಹಶೀಲ್ದಾರ್ ಶೋಭಾಲಕ್ಷ್ಮೀ ಎಂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬೇಬಿ ಶೆಟ್ಟಿ ಹಾಗೂ ನಾಗರಾಜ ಶೆಟ್ಟಿ ಅವರಿಗೆ ಹಕ್ಕು ಪತ್ರ ವಿತರಿಸಲಾಯಿತು. ಮುಖ್ಯಶಿಕ್ಷಕ ರತ್ನಾಕರ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

ವಿಕಲಚೇತನರ ಬಸ್‌ಪಾಸ್ ಖಾಸಗಿ ಬಸ್‌ಗೂ ಅನ್ವಯಕ್ಕೆ ಆಗ್ರಹ
ವಿಕಲಚೇತರಿಗೆ ಸರ್ಕಾರಿ ಬಸ್‌ಗಳಲ್ಲಿ 100 ಕಿ.ಮೀ ತನಕ ಬಸ್‌ಪಾಸ್ ನೀಡಲಾಗುತ್ತಿದ್ದು, ಈ ಭಾಗದಲ್ಲಿ ಸರ್ಕಾರಿ ಬಸ್ ಸೌಲಭ್ಯ ಕಡಿಮೆ. ಹಾಗಾಗಿ ವಿಕಲಚೇತನ ಬಸ್ ಸೌಲಭ್ಯ ಖಾಸಗಿ ಬಸ್‌ಗಳಿಗೂ ಅನ್ವಯಗೊಳಿಸಬೇಕು. ಹಾಗೂ 100 ಕಿ.ಮೀ ವ್ಯಾಪ್ತಿಯನ್ನು ರಾಜ್ಯದ್ಯಂತ ವಿಸ್ತರಿಸಬೇಕು ಎಂದು ಸ್ಥಳೀಯರಾದ ರಾಜು ಪೂಜಾರಿ ಅಹವಾಲು ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ವಿಷಯ ಪ್ರಸ್ತಾವಿಸಲಾಗುವುದು. ವ್ಯಾಪ್ತಿಯ ವಿಸ್ತರಣೆಯ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಸರ್ಕಾರಿ ಶಿಕ್ಷಣ ಸಂಸ್ಥೆಗಳಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ರ್‍ಯಾಂಪ್ ಸಹಿತ ವಿಕಲಚೇತನರಿಗೆ ಅನುಕೂಲವಾಗುವಂತೆ ಸೌಕರ್ಯಗಳ ಅನುಷ್ಠಾನಿಸಬೇಕು. ಪಂಚಾಯತ್‌ಗಳಲ್ಲಿ ವಿಕಲಚೇತನರ ಅಭಿವೃದ್ದಿಗೆ 5% ಅನುದಾನವನ್ನು ಸದ್ವಿನಿಯೋಗಗೊಳಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳನ್ನು ಕೋರಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಪೂರಕ ಸೌಕರ್ಯಗಳನ್ನು ಅನುಷ್ಠಾನಗೊಳಿಸಲು ಸೂಚಿಸಲಾಗುವುದು. 5% ಅನುದಾನ ಪಂಚಾಯತ್, ನಗರ ಸಭೆಗಳಲ್ಲಿ ಸದ್ವಿನಿಯೋಗ ಆಗುತ್ತಿದೆ ಎಂದರು.

95% ಲಸಿಕಾಕರಣ
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಸುತ್ತಿನ ಕೋವಿಡ್ ಲಸಿಕೆ 95% ಪ್ರತಿಶತ ಮುಗಿದಿದೆ. ಜಡ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉತ್ತಮ ಮಟ್ಟದಲ್ಲಿ ಲಸಿಕಾಕರಣ ಆಗಿದೆ. ಎರಡನೇ ಡೋಸ್‌ನ್ನು ಕೂಡಾ ಉತ್ತಮ ಸ್ಪಂದನೆ ಇದೆ ಎಂದರು.

ಮೆಕ್ಕೆಗೆ ಹೊಸ ಅಂಗನವಾಡಿ ಬೇಡಿಕೆ
ಮೆಕ್ಕೆ ಪರಿಸರದಲ್ಲಿ ಹೊಸ ಅಂಗನವಾಡಿ ಕೇಂದ್ರ ನಿರ್ಮಾಣವಾಗಬೇಕು ಎಂದು ಸ್ಥಳೀಯರು ಬೇಡಿಕೆ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು 400-800 ಜನವಸತಿ ಇದ್ದರೆ ಅಲ್ಲಿ ಅಂಗನವಾಡಿ ನೀಡಲಾಗುತ್ತದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಜಿಲ್ಲಾಧಿಕಾರಿಗಳು ಮಾತನಾಡಿ ಎರಡು ವಾರದ ಒಳಗಡೆ ಪರಿಶೀಲಿಸಿ ಸಾಧ್ಯವಾಗುವುದಾದರೆ ಪ್ರಸ್ತಾವನೆ ಇಲ್ಲಿಸಿ, ಅಸಾಧ್ಯವಾದರೆ ಹಿಂಬರಹ ಕೊಡಿ. ಜೊತೆಯಲ್ಲಿ ಮಿನಿ ಅಂಗನವಾಡಿಯಾದರೂ ನೀಡಲು ಪ್ರಯತ್ನಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.


ರುದ್ರಭೂಮಿಗೆ ಗಡಿ ಗುರುತು ಅಗಿಲ್ಲ
ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಜಾಗ ಕಾಯ್ದಿರಿಸಿದ್ದು ಇನ್ನೂ ಗಡಿ ಗುರುತು ಮಾಡಿಲ್ಲ ಎಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಎರಡು ವಾರದ ಒಳಗಡೆ ಗಡಿ ಗುರುತು ಮಾಡುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಮುದೂರು ಆರೋಗ್ಯ ಕೇಂದ್ರ ಪಾಳು ಬಿದ್ದಿದೆ
ಮುದೂರು ಆರೋಗ್ಯ ಕೇಂದ್ರ ಸಿಬ್ಬಂದಿ ಇಲ್ಲದೇ ಪಾಳು ಬಿದ್ದಿದೆ. ಕೂಡಲೇ ಅಲ್ಲಿಗೆ ಸ್ಟಾಪ್ ನರ್ಸ್ ನಿಯೋಜಿಸುವಂತೆ ಸಾರ್ವಜನಿಕರು ಆಗ್ರಹಿಸಿದರು. ಮುದೂರಿ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ಬರಲು ಒಪ್ಪುತ್ತಿಲ್ಲ. ಸ್ಥಳೀಯ ಆರ್ಹರು ಇದ್ದರೆ ಅರ್ಜಿ ಸಲ್ಲಿಸಿ, ನೇಮಕಾತಿಗೆ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಮುದೂರಿನಲ್ಲಿ ಲೊ ವೋಲ್ಟೇಜ್ ಸಮಸ್ಯೆ
ಮುದೂರು ಭಾಗದಲ್ಲಿ ಲೋ ವೊಲ್ಟೇಜ್ ಸಮಸ್ಯೆಯಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. 7 ವರ್ಷವಾದರೂ ಹಾಲ್ಕಲ್‌ ನ ಸಬ್ ಸ್ಟೇಷನ್ ಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದ ಸ್ಥಳೀಯರು ದೂರಿದರು. ಅದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು ಸಬ್ ಸ್ಟೇಷನ್ ಕೆಲಸ 90% ಮುಗಿದಿದ್ದು, ಪರಿಸರ ಸೂಕ್ಷ್ಮ ಪ್ರದೇಶದ ಸಮಸ್ಯೆ ಕಾಡುತ್ತಿದೆ. ಅರಣ್ಯ ಇಲಾಖೆಯಿಂದ ಸಮಸ್ಯೆ ಪರಿಹರಿಸಿದರೆ ಲೈನ್ ಅಳವಡಿಸಲು ಅನುಕೂಲವಾಗುತ್ತದೆ. ಈಗ 35-40 ಕಿ.ಮೀ ದೂರದಿಂದ ಲೈನ್ ಮೂಲಕ ವಿದ್ಯುತ್ ಸರಬರಾಜು ಆಗುವುದರಿಂದ ಈ ಸಮಸ್ಯೆ ಆಗುತ್ತಿದೆ ಎಂದರು.

ಸೆಳ್ಕೋಡು ಶಾಲೆಗೆ ಭೇಟಿ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಜಡ್ಕಲ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು. ಗ್ರಂಥಾಲಯ, ವಿಕಲಚೇತನ ಕಾರ್ಯಾಲಯಕ್ಕೆ ಭೇಟಿ ನೀಡಿದರು. ಬಳಿಕ ಸೆಳ್ಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.

ಮಕ್ಕಳೊಂದಿಗೆ ಕೆಲ ಹೊತ್ತು ಕಳೆದ ಜಿಲ್ಲಾಧಿಕಾರಿಗಳು ಶಾಲೆಯ ಕುಂದುಕೊರತೆಗಳನ್ನು ಮಕ್ಕಳಲ್ಲಿ ವಿಚಾರಿಸಿದರು. ವಿದ್ಯಾರ್ಥಿಗಳು ಅನ್‌ಲೈನ್ ತರಗತಿಯಿಂತ ನಿರಂತರ ತರಗತಿಯೇ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತ ಪಡಿದರು. 1967ರಲ್ಲಿ ನಿರ್ಮಾಣವಾದ ಶಾಲೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು, ಇಲ್ಲಿನ ಅಗತ್ಯ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!