Thursday, November 21, 2024

ಐಪಿ‌ಎಲ್ : ಅದೃಷ್ಟಶಾಲಿ ನಾಯಕರು


ಎಸ್. ಜಗದೀಶ್ ಚಂದ್ರ ಅಂಚನ್ ಸೂಟರ್ ಪೇಟೆ


ಐಪಿ‌ಎಲ್’ ಎನ್ನುವ ಮೋಜು ಮಸ್ತಿನ ಆಟ ಈ ಬಾರಿ ಕುತೂಹಲ ಹಾಗೂ ಅಚ್ಚರಿಯನ್ನು ಮೂಡಿಸುತ್ತಾ ಸಾಗುತ್ತಿದೆ. ಪ್ರತಿಯೊಂದು ಪಂದ್ಯಗಳು ಈ ಬಾರಿ ಸ್ಪರ್ಧಾತ್ಮಕವಾಗಿ ಮುಕ್ತಾಯ ಕಾಣುತ್ತಿರುವುದರಿಂದ ಐಪಿ‌ಎಲ್ ಟ್ರೋಫಿ’ ಯಾರ ಮಡಿಲಿಗೆ ಸೇರಬಹುದು, ಯಾರು ವಿನ್ನಿಂಗ್ ಕ್ಯಾಪ್ಟನ್ ಎನ್ನುವ ಕುತೂಹಲದ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಹಲವು ಹೊಸತನಗಳಿಗೆ ಕಾರಣವಾಗಿರುವ ಈ ಬಾರಿಯ ಐಪಿ‌ಎಲ್ ಟೂರ್ನಿಯಲ್ಲಿ ಯುವ ನಾಯಕರು ಹಳೆಯ ನಾಯಕರಿಗೆ ಸಡ್ಡು ಹೊಡೆಯುವ ಕಾರ್ಯತಂತ್ರವನ್ನು ರೂಪಿಸುತ್ತಿರುವುದು ಈ ಬಾರಿಯ ಐಪಿ‌ಎಲ್ ಟೂರ್ನಿಯ ವಿಶೇಷ. ಹಾಗಾಗಿ ಈಗ ಎದ್ದಿರುವ ಚರ್ಚೆ ಸಮಂಜಸವಾದುದ್ದೇ.

೨೦೦೮ರಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭವಾದ ಐಪಿ‌ಎಲ್ ಕ್ರಿಕೆಟ್ ಲೀಗ್ ಕೇವಲ ೧೪ ವರ್ಷಗಳ ಅವಧಿಯಲ್ಲಿ ಕಂಡ ಬೆಳವಣಿಗೆಯನ್ನು ವರ್ಣಿಸಲು ಅಸಾಧ್ಯ. ಗ್ಲಾಮರ್ ಟಚ್ ಜೊತೆ ವರ್ಣರಂಜಿತವಾಗಿ ನಡೆಯುತ್ತಾ ಸಾಗಿದ ಈ ಕ್ರಿಕೆಟ್ ಲೀಗ್‌ನಲ್ಲಿ ಕೆಲವು ತಂಡಗಳು ಐಪಿ‌ಎಲ್ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಇನ್ನೂ ಕೆಲವು ತಂಡಗಳು ಅಪೇಕ್ಷಿತ ಟ್ರೋಫಿ ಗೆಲ್ಲಲು ಹೆಣಗಾಡುತ್ತಿವೆ. ಐಪಿ‌ಎಲ್ ಪಂದ್ಯಾವಳಿಯ ಹದಿಮೂರು ಆವೃತ್ತಿಗಳ ಇತಿಹಾಸದಲ್ಲಿ ಕೇವಲ ಆರು ತಂಡಗಳು ಮಾತ್ರ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಐಪಿ‌ಎಲ್ ಟೂರ್ನಿಯ ಯಶಸ್ವಿ ನಾಯಕರ ಅವಲೋಕನ ಇಲ್ಲಿದೆ.
೨೦೦೮ರಲ್ಲಿ ನಡೆದ ಚೊಚ್ಚಲ ಐಪಿ‌ಎಲ್ ಟ್ವೆಂಟಿ-೨೦ ಕ್ರಿಕೆಟ್ ಟೂರ್ನಿ ಹಲವು ದಾಖಲೆಗಳನ್ನು ಸೃಷ್ಟಿಸಿ ಇತಿಹಾಸ ನಿರ್ಮಿಸಿದ ನಂತರ ಅದರ ಖದರ್ ಮತ್ತಷ್ಟು ಪ್ರಜ್ವಲಿಸಿತು. ರಾಜಸ್ಥಾನ್ ರಾಯಲ್ಸ್ ತಂಡವು ಚೊಚ್ಚಲ ಐಪಿ‌ಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಾಗ ಎಲ್ಲರೂ ಆಶ್ಚರ್ಯ ಪಟ್ಟರು. ರಾಜಸ್ಥಾನ ತಂಡದ ನಾಯಕತ್ವವನ್ನು ವಹಿಸಿದ್ದ ಆಸ್ಟ್ರೇಲಿಯಾದ ಲೆಜೆಂಡ್ ಸ್ಪಿನ್ನರ್ ಶೇನ್ ವಾರ್ನ್ ಐಪಿ‌ಎಲ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ನಾಯಕರೆನ್ನುವ ಹೆಗ್ಗಳಿಕೆಗೂ ಪಾತ್ರರಾದರು. ಆ ಬಳಿಕ ೨೦೦೯ರಲ್ಲಿ ನಡೆದ ದ್ವಿತೀಯ ಆವೃತ್ತಿಯ ಪ್ರಶಸ್ತಿಯೂ ಕೂಡ ಆಸ್ಟ್ರೇಲಿಯನ್ ನಾಯಕತ್ವಕ್ಕೆ ಒಲಿದು ಬಂತು. ಆಡಮ್ ಗಿಲ್ ಕ್ರಿಸ್ಟ್ ಸಾರಥ್ಯದ ಡೆಕ್ಕನ್ ಚಾರ್ಜರ್ಸ್ ತಂಡ ಟೂರ್ನಿಯಲ್ಲಿ ಒಟ್ಟಾರೆಯಾಗಿ ವಿಭಿನ್ನ ರೀತಿಯಲ್ಲಿ ಆಡುವುದರ ಮೂಲಕ ಐಪಿ‌ಎಲ್ ಟ್ರೋಫಿಯನ್ನು ಎತ್ತಿ ಹಿಡಿದಿರುವುದು ಕೂಡ ಆಶ್ಚರ್ಯವೇ.

ಧೋನಿ ಯುಗ :
ಐಪಿ‌ಎಲ್ ಟೂರ್ನಿಯಲ್ಲಿ ಯಶಸ್ವಿ ನಾಯಕರಾಗಿ ಮೊದಲಾಗಿ ಮೂಡಿ ಬಂದದ್ದು ಮಹೇಂದ್ರ ಸಿಂಗ್ ಧೋನಿ. ಆವಾಗಲೇ ಸೀಮಿತ ಓವರ್ ಗಳ ಕ್ರಿಕೆಟಿನ ಟೀಂ ಇಂಡಿಯಾವನ್ನು ಅದ್ಭುತವಾಗಿ ಮುನ್ನಡೆಸಿದ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ೨೦೧೦ರಲ್ಲಿ ಐಪಿ‌ಎಲ್ ಪ್ರಶಸ್ತಿಯನ್ನು ಮೊದಲಾಗಿ ಗೆಲ್ಲಿಸಿಕೊಟ್ಟರು. ಆ ನಂತರ ೨೦೧೧ರಲ್ಲಿ ಮತ್ತು ೨೦೧೮ರಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಹೀಗೆ ಮೂರು ಬಾರಿ ಐಪಿ‌ಎಲ್’ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಮತ್ತೆ ಟ್ರೋಫಿ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ. ಈ ಬಾರಿ ಧೋನಿ ಅಷ್ಟೇನೂ ಫಾರ್ಮ್‌ನಲ್ಲಿ ಇಲ್ಲದಿದ್ದರೂ ಉಳಿದ ಆಟಗಾರರ ಸಂಘಟಿತ ಆಟ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೆಚ್ಚು ಲಾಭದಾಯಕವಾಗುತ್ತಿದೆ.

ರೋಹಿತ್ ಯಶಸ್ವಿ ನಾಯಕ :
ಐಪಿ‌ಎಲ್ ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಅತ್ಯಂತ ಯಶಸ್ವೀ ನಾಯಕ. ಮುಂಬೈ ಇಂಡಿಯನ್ಸ್ ಸುವರ್ಣ ಯುಗವು ೨೦೧೩ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಆರಂಭವಾಯಿತು. ಅದುವರೆಗೆ ನಾಯಕರಾಗಿದ್ದ ರಿಕಿ ಪಾಂಟಿಂಗ್ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಸಾರಥ್ಯದಲ್ಲಿ ಮುಂಬೈ ಇಂಡಿಯನ್ಸ್ ಹೊಸ ಯುಗವನ್ನು ಆರಂಭಿಸಿತು. ಮಿಸ್ಟರ್ ಕೂಲ್ ಧೋನಿಯ ನಾಯಕತ್ವವನ್ನೇ ಹೋಲುವಂತೆ ಶಾಂತ ಸ್ವಭಾವದ ರೋಹಿತ್ ಶರ್ಮ ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ತಂತ್ರಗಾರಿಕೆಗಳನ್ನು ಹೆಣೆಯಬಲ್ಲರು. ಧೋನಿಯಂತೆ ಆಟಗಾರರನ್ನು ರೋಹಿತ್ ಬಳಸಿಕೊಳ್ಳುತ್ತಾರೆ. ಇನ್ನೂ ತಂಡದಲ್ಲಿರುವ ಆಲ್‌ರೌಂಡರ್ ಆಟಗಾರರನ್ನು ಬಳಸಿಕೊಳ್ಳುವಲ್ಲೂ ಇವರು ಎತ್ತಿದ ಕೈ. ಐದು ಬಾರಿ ( ೨೦೧೩, ೨೦೧೫, ೨೦೧೭, ೨೦೧೯, ೨೦೨೦ ) ಐಪಿ‌ಎಲ್ ಟ್ರೋಫಿ ಜಯಿಸಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಪಂದ್ಯಾಟದಲ್ಲಿ ಕುಂಟುತ್ತ ಸಾಗುತ್ತಿದೆ. ಆದರೂ ರೋಹಿತ್ ಶರ್ಮ ಮತ್ತೊಮ್ಮೆ ಐಪಿ‌ಎಲ್ ಕಿರೀಟಕ್ಕೆ ಮುತ್ತಿಡುವ ಲೆಕ್ಕಚಾರದಲ್ಲಿದ್ದಾರೆ.

ಗಂಭೀರ್ ಕೂಡ ಯಶಸ್ವಿ :
ಮೊದಲ ನಾಲ್ಕು ಐಪಿ‌ಎಲ್ ಆವೃತ್ತಿಯಲ್ಲಿ ಶೋಚನೀಯ ಸ್ಥಿತಿ ಅನುಭವಿಸಿದ ನಂತರ, ಕೋಲ್ಕತಾ ನೈಟ್ ರೈಡರ್ಸ್ ೨೦೧೨ರಲ್ಲಿ ಗೌತಮ್ ಗಂಭೀರ್ ಅವರಿಗೆ ನಾಯಕತ್ವ ನೀಡಿತು. ಹೊಸ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ೨೦೧೨ರ ಐಪಿ‌ಎಲ್ ಟೂರ್ನಿಯಲ್ಲಿ ತನ್ನ ಪ್ರಭುತ್ವದ ಆಟವನ್ನು ಆಡಿತು. ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಪ್ರಶಸ್ತಿಯನ್ನು ಹುಡುಕುತ್ತಿದ್ದ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೋಲ್ಕತಾ ನೈಟ್ ರೈಡರ್ಸ್, ತನ್ನ ಆಟಗಾರರ ಸಂಘಟಿತ ಆಟದ ನೆರವಿನಿಂದ ಐಪಿ‌ಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದು ಆಶ್ಚರ್ಯವಾದರೂ ಕೂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಂಘಟಿತ ಆಟಕ್ಕೆ ಉತ್ತಮ ನಿದರ್ಶನವಾಯಿತು.ನಂತರ ದ್ವಿತೀಯ ಬಾರಿ ಕೋಲ್ಕತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದದ್ದು ೨೦೧೪ರಲ್ಲಿ . ಅತ್ಯಂತ ರೋಚಕತೆಯನ್ನು ಸೃಷ್ಟಿಸಿದ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಪ್ರತಿ ಹೋರಾಟವನ್ನು ನೀಡಿದ ಕೋಲ್ಕತಾ ನೈಟ್ ರೈಡರ್ಸ್ ಐಪಿ‌ಎಲ್ ಟೂರ್ನಿಯಲ್ಲಿ ಎರಡನೇ ಪ್ರಶಸ್ತಿ ಜಯಿಸಿತ್ತು.

ಈ ನಡುವೆ ಸನ್ ರೈಸರ್ಸ್ ಹೈದರಾಬಾದ್ ತಂಡ ೨೦೧೬ರಲ್ಲಿ ಐಪಿ‌ಎಲ್ ಟ್ರೋಫಿಯನ್ನು ಗೆದ್ದಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರಿದ ಸನ್ ರೈಸರ್ಸ್ ಹೈದರಾಬಾದ್ ತಂಡ, ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದ್ದು ಕೂಡ ಇತಿಹಾಸ. ಹೀಗೆ ಸಾಗುತ್ತದೆ ಐಪಿ‌ಎಲ್ ಪ್ರಶಸ್ತಿ ಗೆಲುವಿನ ನಾಯಕರ ಅವಲೋಕನ. ಆದರೆ, ಈ ಬಾರಿ ಕೆಲವು ತಂಡಗಳ ನಾಯಕತ್ವ ಬದಲಾವಣೆ ಆಗಿದೆ. ಯುವ ಆಟಗಾರರು ಈ ಬಾರಿಯ ಐಪಿ‌ಎಲ್ ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಮುಖ್ಯವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಬ್ ಪಂತ್, ರಾಜಸ್ಥಾನ್ ರಾಯಲ್ಸ್ ಗೆ ಸಂಜು ಸ್ಯಾಮ್ಸನ್ ಹಾಗೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಕೆ‌ಎಲ್ ರಾಹುಲ್. ಹಾಗಾಗಿ ಅನುಭವಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆನ್ ವಿಲಿಯಮ್ಸನ್ ಹಾಗೂ ಇಯಾನ್ ಮೊರ್ಗನ್ ಗೆ ಈ ಬಾರಿಯ ಐಪಿ‌ಎಲ್ ಕ್ರಿಕೆಟ್ ಟೂರ್ನಿ ಸತ್ವಪರೀಕ್ಷೆಯಾಗಿದೆ. ಒಟ್ಟಿನಲ್ಲಿ ಈ ಬಾರಿಯ ಐಪಿ‌ಎಲ್ ಟೂರ್ನಿಯಲ್ಲಿ ನಾಯಕರ ಛಾಪು ಇದ್ದೇ ಇದೆ. ಆದರೆ, ಅದೃಷ್ಟವಿದ್ದವರು ಮಾತ್ರ ಟ್ರೋಫಿ ಎತ್ತಬಹುದು. ಇಂತಹ ಅದೃಷ್ಟಶಾಲಿ ನಾಯಕರು ಯಾರಾಗಬಹುದು ಎನ್ನುವುದೇ ಕುತೂಹಲ. ಹಳೆಯ ನಾಯಕರೊಂದಿಗೆ ಹೊಸ ನಾಯಕರು ಈ ಬಾರಿಯ ಐಪಿ‌ಎಲ್ ನಲ್ಲಿ ಅದೃಷ್ಟ ಪರೀಕ್ಷಿಸುತ್ತಿರುವುದರಿಂದ ಅದೃಷ್ಟಶಾಲಿ ನಾಯಕರು ಯಾರಾಗಬಹುದು ಎನ್ನುವುದನ್ನು ಮಾತ್ರ ಕಾದುನೋಡ ಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!