Thursday, November 21, 2024

ಪುಷ್ಪ ಸಂಕುಲದಲ್ಲೊಂದು ವಿಸ್ಮಯ-ಬ್ರಹ್ಮಕಮಲ

ಸಸ್ಯ ಹಾಗೂ ಪುಷ್ಪ ಪ್ರಬೇಧಗಳಲ್ಲಿ ಸಾಕಷ್ಟು ವಿಸ್ಮಯಗಳನ್ನು ಕಾಣುತ್ತೇವೆ. ನಿತ್ಯನೂತನವಾದ ಈ ಭೂಮಿಯಲ್ಲಿ ಬೆರಗು ಮೂಡಿಸುವ ಸೃಷ್ಟಿ ಚಮತ್ಕಾರಗಳು ಪ್ರಕೃತಿ ಸಹಜ. ಅವುಗಳಲ್ಲೊಂದು ಬ್ರಹ್ಮಕಮಲ ಪುಷ್ಪ.


ಬ್ರಹ್ಮಕಮಲ ಈ ಭಾಗದಲ್ಲಿ ಬಹು ಅಪರೂಪವಾದರೂ ಹಿಮಾಲಯ, ಉತ್ತರಖಾಂಡದಲ್ಲಿ ತೀರಾ ಪರಿಚಿತ. ಉತ್ತರ ಬರ್ಮಾ, ನೈ‌ಋತ್ಯ ಚೀನಾದಲ್ಲಿ ಹೆಚ್ಚಾಗಿ ಕಂಡು ಬರುವ ಸಸ್ಯಜಾತಿ ಇದು. ವೈಜ್ಞಾನಿಕವಾಗಿ ಸೋಸೂರಿಯಾ ಆಬ್‌ವ್ಯಾಲೇಟಾ ಎಂದು ಕರೆಯಲ್ಪಡುವ ಬ್ರಹ್ಮಕಮಲ ದೈವಿಕ ಪುಷ್ಪ ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿಯೂ ಸಾಕಷ್ಟು ಮಹತ್ವ ಪಡೆದ ಸಸ್ಯ.


ಬ್ರಹ್ಮಕಮಲ ಗಿಡ ವಿಸ್ಮಯಕಾರಿ. ಎಲ್ಲ ಸಸ್ಯಗಳಲ್ಲಿ ಎಲೆಗಳ ನಡುವಿನ ಕುಡಿಗಳಲ್ಲಿ ಮೊಗ್ಗು ಬಂದು ಹೂವಾದರೆ ಇದರಲ್ಲಿ ಎಲೆಯಲ್ಲಿಯೇ ಮೊಗ್ಗಾಗಿ, ಹೂವು ಅರಳುತ್ತದೆ. ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ಅರಳುವ ಹೂವು ಸೂರ್ಯೋದಯಕ್ಕೂ ಮೊದಲೆ ಮುದುಡಿ ಹೋಗುತ್ತದೆ. ಅಲ್ಪಾಯುಷಿಯಾದರೂ ಈ ಹೂವು ಅರಳುವ ಸುಕ್ಷಣವನ್ನೇ ಕಾಯುವುದೆ ಹಿತಾನುಭೂತಿ. ಅರಳಿದ ಹೂವನ್ನು ಅರಳಿದ ಸಂದರ್ಭದಲ್ಲಿ ನೋಡುವುದೇ ಸೊಬಗು-ಅಪ್ಯಾಯಮಾನದ ಪರಮಸಾರ್ಥಕ್ಯದ ಕ್ಷಣ ಅದು.


ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಬ್ರಹ್ಮ ಕಮಲ ಹೂವಿಗೆ ವಿಶೇಷ ಸ್ಥಾನಮಾನವಿದೆ. ಬ್ರಹ್ಮದೇವನ ಕೈಯಲ್ಲಿರುವ ಶ್ವೇತ ಕಮಲವೇ ಬ್ರಹ್ಮಕಮಲ ಎನ್ನಲಾಗುತ್ತದೆ. ವಿಷ್ಣುವಿನ ನಾಭಿಯಲ್ಲಿ ಅರಳಿದ ಕಮಲದ ಮೂಲಕ ಬ್ರಹ್ಮ ಹೊರ ಬಂದ ಕಾರಣ ಅದು ಬ್ರಹ್ಮಕಮಲವಾಯಿತೆಂಬ ನಂಬಿಕೆಯೂ ಇದೆ. ಅಮೃತಕ್ಕೆ ಸಮಾನವಾದ ಶಕ್ತಿ ಬ್ರಹ್ಮಕಮಲಕ್ಕೆ ಇದೆ ಎನ್ನಲಾಗಿದೆ. ಪುರಾಣಗಳಲ್ಲಿ ಬ್ರಹ್ಮಕಮಲದ ಬಗ್ಗೆ ಹಲವು ಉಲ್ಲೇಖಗಳನ್ನು ಕಾಣಬಹುದು. ಹಲವಾರು ಜಾನಪದ ಕಥೆಗಳು ಈ ಹೂವಿನ ಸುತ್ತ ಹೆಣೆಯಲ್ಪಟ್ಟಿವೆ. ಈ ಹೂವಿನಲ್ಲಿ ವಿಶೇಷವಾದ ಔಷಧೀಯ ಅಂಶವಿದೆ ಎನ್ನಲಾಗಿದೆ. ವೈಜ್ಞಾನಿಕವಾಗಿ ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಈ ಹೂವಿನಲ್ಲಿರುವ ಅಂಶವನ್ನು ಬಳಕೆ ಮಾಡಲಾಗುತ್ತದೆ ಎನ್ನಲಾಗುತ್ತದೆ.


ಬ್ರಹ್ಮಕಮಲ ಹೂ ಅರಳುವುದನ್ನು ಕಾದು ತಮ್ಮ ಮನಸ್ಸಿನ ನಿವೇದಿಸಿಕೊಂಡರೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಈ ಹೂವು ಅರಳುವ ಮನೆಯವರು ಸಂಪದ್ಭರಿತರಾಗುತ್ತಾರೆ ಎಂಬ ಪ್ರತೀತಿಯೂ ಇದೆ. ಅದೊಂದು ಶ್ರೇಯಸ್ಸು, ಶುಭಪ್ರಧ ಎನ್ನಲಾಗುತ್ತದೆ.


ಬ್ರಹ್ಮಕಮಲ ಗಿಡದ ಒಂದು ಎಲೆಯಲ್ಲಿ ಕೆಲವೊಮ್ಮೆ ಮೂರ್‍ನಾಲ್ಕು ಹೂ ಆಗುತ್ತದೆ. ಹೂವು ಅರಳುವ ದಿನ ಸಂಜೆ ಸೂರ್ಯ ಅಸ್ತಮಿಸುವ ವೇಳೆ ಮೊಗ್ಗು ಅರಳಲು ಸನ್ನದ್ದವಾಗುತ್ತದೆ. ರಾತ್ರಿ 9ರ ಸುಮಾರಿಗೆ ಹೂವು ಪಕಳೆ ಬಿಚ್ಚಿಕೊಳ್ಳುತ್ತದೆ. ಕೆಲವೆ ನಿಮಿಷಗಳಲ್ಲಿ ಬ್ರಹ್ಮಕಮಲ ಸುಗಂಧವನ್ನು ಹೊರಸೂಸುವುದರೊಂದಿಗೆ ಪೂರ್ಣ ಪ್ರಮಾಣದಲ್ಲಿ ಅರಳುತ್ತದೆ. ಹೂವಿನಿಂದ ಹೊರಹೊಮ್ಮುವ ಪರಿಮಳ ನಾಸಿಕ ಮಾತ್ರವಲ್ಲ ಮನ-ಮನೆಯನ್ನು ತುಂಬುತ್ತದೆ. ಅದೊಂದು ಅದ್ಭುತವಾದ ಅನುಭವ.


ಬ್ರಹ್ಮಕಮಲ ಸಸ್ಯಾಭಿವೃದ್ದಿ ಹೇಗೆ?
ಬ್ರಹ್ಮಕಮಲವನ್ನು ಎಲೆಗಳ ಮೂಲಕವೇ ಸಸ್ಯಾಭಿವೃದ್ದಿ ಮಾಡಬಹುದು. ವೈಜ್ಞಾನಿಕ ವಿಧಾನಗಳನ್ನು ಬಳಸಿ ಸಸ್ಯಾಭಿವೃದ್ದಿ ಮಾಡಬಹುದು. ಸರಳ ವಿಧಾನವೆಂದರೆ ಒಂದು ಬ್ರಹ್ಮಕಮಲ ಎಲೆಯನ್ನು ತಗೆದುಕೊಂಡು (ದೊಡ್ಡ ಎಲೆಯಾಗಿದ್ದರೆ ಎರಡು ತುಂಡು ಮಾಡಿ) ಒಂದು ನೀರಿನ ಲೋಟದಲ್ಲಿ ಬುಡಭಾಗ ಕೆಳಗೆ ಮಾಡಿ ಇಳಿಸಿ ಬಿಡಬೇಕು. ಕೆಲವು ದಿನಗಳಲ್ಲಿ ಬೇರು ಮೂಡುತ್ತದೆ. ನಂತರ ಅದನ್ನು ನರ್ಸರಿ ಕವರ್‌ನಲ್ಲಿ ಮರಳು ಮಿಶ್ರಿತ ಮಣ್ಣಿನಲ್ಲಿ ನೆಡಬೇಕು. ಒಂದೆರಡು ತಿಂಗಳಲ್ಲಿ ಅದು ನೆಡಲು ಸಿದ್ಧವಾಗುತ್ತದೆ. ನೀರು ಸಂಪೂರ್ಣ ಬಸಿದು ಹೋಗುವ ಪಾಟ್‌ನಲ್ಲಿ ಮರಳು ಮಿಶ್ರಿತ ಸಾವಯವ ಪದಾರ್ಥವುಳ್ಳ ಮಣ್ಣನ್ನು ತುಂಬಿ ಅಲ್ಲಿ ಸಿದ್ಧ ಮಾಡಿಕೊಂಡ ಗಿಡ ನಾಟಿ ಮಾಡಬೇಕು. ಪಾಟ್‌ನಲ್ಲಿ ನೀರು ನಿಲ್ಲಬಾರದು. ಹಾಗೂ ಪಾಟ್ ಸಾಕಷ್ಟು ವಿಶಾಲವಾಗಿರಬೇಕು. ಬ್ರಹ್ಮಕಮಲ ಗಿಡಗಳ ಬೇರುಗಳ ಅಗಲವಾಗಿ ಬೆಳೆಯುತ್ತವೆ. ಇವತ್ತಿನ ದಿನಗಳಲ್ಲಿ ಅಲಂಕಾರಿಕ ಗಿಡಗಳ ಪಟ್ಟಿಯಲ್ಲೂ ಬ್ರಹ್ಮಕಮಲ ಸ್ಥಾನ ಪಡೆದಿದೆ.


ಬರೆಹ: ನಾಗರಾಜ್ ವಂಡ್ಸೆ

(ಪೂರಕ ಚಿತ್ರಗಳು: ಶಂಕರನಾರಾಯಣ ಗ್ರಾ.ಪಂ.ವ್ಯಾಪ್ತಿಯ ಕ್ರೋಢಬೈಲೂರು ಹೊಸ್ಮಕ್ಕಿ ನರಸಿಂಹ ಮೊಗವೀರರ ಮನೆಯಂಗಳದಲ್ಲಿ ಅರಳಿದ ತ್ರಿವಳಿ ಬ್ರಹ್ಮಕಮಲ)

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!