spot_img
Thursday, October 1, 2026
spot_img

ಅ.4ರಂದು ಆಲೂರಿನ ಚಿತ್ರಕೂಟ ಆಯುರ್ವೇದ ಕೇಂದ್ರದಲ್ಲಿ ‘ಆಯುರ್ವೇದ ಹಬ್ಬ-2026’

ಕುಂದಾಪುರ: ಇಂದಿನ ಗಡಿಬಿಡಿಯ ಜೀವನಶೈಲಿ, ಸ್ಕ್ರೀನ್ ಟೈಮ್, ಪ್ಯಾಕೆಟ್ ಆಹಾರ ಹಾಗೂ ಡೆಡ್‍ಲೈನ್‍ಗಳ ಒತ್ತಡದಲ್ಲಿ ಬದುಕುತ್ತಿರುವ ಇಂದಿನ ಪೀಳಿಗೆಗೆ ಆಯುರ್ವೇದವನ್ನು ನೈಜ ಗ್ರಾಮೀಣ ಪರಿಸರದಲ್ಲಿ ಪರಿಚಯಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರಿನ ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಇದೇ ಅಕ್ಟೋಬರ್ 4, ಭಾನುವಾರದಂದು ಆಯುಷ್ ಇಲಾಖೆ ಸಹಯೋಗದೊಂದಿಗೆ ಚಿತ್ರಕೂಟ ಆಯುರ್ವೇದ ಹಬ್ಬ 2026 ಅನ್ನು ಆಯೋಜಿಸಲಾಗಿದೆ. ‘ಆಯುರ್ವೇದ ನಾಳೆಗೆ | ಹಳ್ಳಿಯ ಮಡಿಲಲ್ಲಿ ಆರೋಗ್ಯ ಹಬ್ಬ’ ಎಂಬ ಧ್ಯೇಯವಾಕ್ಯದೊಂದಿಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಹಬ್ಬ ನಡೆಯಲಿದೆ ಎಂದು ಚಿತ್ರಕೂಟದ ಮುಖ್ಯಸ್ಥರಾದ ಡಾ.ರಾಜೇಶ ಬಾಯರಿ ತಿಳಿಸಿದರು.

ಅ.1ರಂದು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಆಯುರ್ವೇದ ಎಂಬುದು ಕೇವಲ ಕ್ಲಿನಿಕ್‍ನ ಕಷಾಯಕ್ಕೆ ಸೀಮಿತವಾಗಿರದೆ, ನಮ್ಮ ಪೂರ್ವಜರು ರೂಢಿಸಿಕೊಂಡು ಬಂದ ನಿತ್ಯಜೀವನದ ಆರೋಗ್ಯಕರ ಶೈಲಿ ಎಂಬುದನ್ನು ಪ್ರತ್ಯಕ್ಷವಾಗಿ ಅನುಭವಿಸಲು ಸಾರ್ವಜನಿಕರಿಗೆ ಮತ್ತು ಕುಟುಂಬ ಸಮೇತ ಭೇಟಿ ನೀಡುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕ ಪ್ರವೇಶ ಸಂಪೂರ್ಣ ಉಚಿತವಾಗಿದೆ ಎಂದರು.

ಈ ಆಯುರ್ವೇದ ಹಬ್ಬದಲ್ಲಿ 1., ನಿಮ್ಮ ಪ್ರಕೃತಿ, ನಿಮ್ಮ ಆಹಾರ: ಆಯುರ್ವೇದ ತಜ್ಞ ವೈದ್ಯರಿಂದ ಉಚಿತ ನಾಡಿ ಪರೀಕ್ಷೆ ಹಾಗೂ ತ್ರಿದೋಷಗಳಾದ ವಾತ, ಪಿತ್ತ, ಕಫ ಪ್ರಕೃತಿ ವಿಶ್ಲೇಷಣೆ ನಡೆಸಿ ವೈಯಕ್ತಿಕ ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ. 2., ಗೋಮಾತೆ ಅಪ್ಪುಗೆ : ದೇಸಿ ಗೋಶಾಲಾ ಭೇಟಿ, ಗೋಸಂಸ್ಕೃತಿಯ ಮಹತ್ವ ಹಾಗೂ ಹಸುವನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ನವೀನ ಅನುಭವ. 3. ಕಷಾಯ ಶಾಲೆ: ಮನೆಯ ಅಡುಗೆಯ ಸಾಮಗ್ರಿಗಳು ಹಾಗೂ ಹಿತ್ತಿಲಿನ ಔಷಧೀಯ ಗಿಡಮೂಲಿಕೆಗಳಿಂದ ರೋಗನಿರೋಧಕ ಕಷಾಯಗಳನ್ನು ತಯಾರಿಸುವ ನೇರ ಪ್ರಾತ್ಯಕ್ಷಿಕೆ. 4. ದೇವ ವನ, ಔಷಧಿ ವನ (ಹರ್ಬಲ್ ವಾಕ್): 18 ಎಕರೆ ಹಸಿರು ಪರಿಸರದಲ್ಲಿರುವ ನಾಗಕೇಸರ, ರಕ್ತಚಂದನ, ಏಕನಾಯಕ, ರುದ್ರಾಕ್ಷಿ ಸೇರಿದಂತೆ 150ಕ್ಕೂ ಹೆಚ್ಚು ಅಪರೂಪದ ಗಿಡಮೂಲಿಕೆಗಳ ಪರಿಚಯ ನಡಿಗೆ. ಆಸಕ್ತ ಮಕ್ಕಳಿಗೆ ಔಷಧೀಯ ಸಸಿಗಳ ವಿತರಣೆ. 5. ಆಯುರ್ವೇದ ಜಗತ್ತು: ಪಂಚಕರ್ಮ ಚಿಕಿತ್ಸಾ ವಿಧಾನಗಳ ಪರಿಚಯ ಮತ್ತು ವಿವರಣೆ ನಡೆಯಲಿದೆ ಎಂದರು.

ಬೆಳಿಗ್ಗೆ 9:30ಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ, ಕುಂದಾಪುರದ ಚಿನ್ಮಯ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ಉಮೇಶ್ ಪುತ್ರನ್, ಕುಂದಾಪುರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ ಹಾಗೂ ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಮುಖ್ಯಸ್ಥರು ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕರಾದ (ಎಜಿಎಂ) ರಮೇಶ್ ವೈದ್ಯ ಹಾಗೂ ಡಾ. ಸತೀಶ್ ಆಚಾರ್ಯ ರವರು ( ಆಯುಷ್ ಅಧಿಕಾರಿಗಳು ಉಡುಪಿ ಜಿಲ್ಲೆ) ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಸ್ವರ್ಣ ಕಮಲ ಪುರಸ್ಕೃತ ಖ್ಯಾತ ಚಿತ್ರ ವಿಮರ್ಶಕ ಡಾ. ಪ್ರದೀಪ್ ಕೆಂಚನೂರು ವಿಶೇಷ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಸಂಜೆ 5 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ.ಎಂ. ಸುಕುಮಾರ್ ಶೆಟ್ಟಿ ಹಾಗೂ ಕೆ. ಗೋಪಾಲ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾರಣಕಟ್ಟೆಯ ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜ, ಹಿರಿಯ ಪತ್ರಕರ್ತರಾದ ಯು.ಎಸ್. ಶೆಣೈ ಹಾಗೂ ಉಡುಪಿ ಜಿಲ್ಲಾ ಎ.ಎಫ್.ಐ ಅಧ್ಯಕ್ಷರಾದ ಡಾ.ಎಸ್. ಆಂಚನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭಾಗವಹಿಸಲಿದ್ದಾರೆ.

ಆಯುರ್ವೇದ ಹಬ್ಬದಲ್ಲಿ ಪ್ರಕೃತಿ, ಆರೋಗ್ಯ ಮತ್ತು ಗ್ರಾಮೀಣ ಪರಂಪರೆಗೆ ಪೂರಕವಾದ ವಿವಿಧ ಸಾವಯವ ಮಳಿಗೆಗಳನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಸದ್ಗುರು ಆಯುರ್ವೇದ, ಆತ್ಮಿಕ್ ಆಯುರ್ವೇದ ಹಾಗೂ ಆಯುರ್ವೇದಿಕ್ ಹುಬ್ಬಳ್ಳಿಯ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳು, ನೈಸರ್ಗಿಕ ಮಸಾಜ್ ಸಾಧನಗಳು, ದೇಸಿ ಗೋ ಉತ್ಪನ್ನಗಳು, ತುಮಕೂರಿನ ಸಾವಯವ ಧಾನ್ಯಗಳು, ತಾರಸಿ ತೋಟಕ್ಕೆ ಸೂಕ್ತವಾದ ದೇಸಿ ತರಕಾರಿ ಬೀಜಗಳು, ಕುಂದಾಪುರದ ಸ್ವದೇಶಿ ಮಳಿಗೆ ಹಾಗೂ ಉಡುಪಿಯ ಆರ್.ಕೆ. ಉಪ್ಪಿನಕಾಯಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರಲಿವೆ. ಇದರೊಂದಿಗೆ ಆರೋಗ್ಯಕರ ಪಾನೀಯಗಳಾದ ತಾಜಾ ನೀರಾ, ನೆರಳಕಟ್ಟೆಯ ಕಬ್ಬಿನ ಹಾಲು, ಆಲೂರಿನ ಗೋಲಿ ಸೋಡಾ, ನೈಸರ್ಗಿಕ ಐಸ್‍ಕ್ರೀಮ್ ಹಾಗೂ ಪರಿಸರಸ್ನೇಹಿ ಜೀವನಶೈಲಿಗೆ ಒತ್ತು ನೀಡುವ ಆಲೂರಿನ ಮಣ್ಣಿನ ಮಡಕೆಗಳು, ಮರದ ಗೃಹಬಳಕೆ ಪರಿಕರಗಳು ಮತ್ತು ಹಟ್ಟಿಯಂಗಡಿಯ ನಮ್ಮಭೂಮಿ ಸಂಸ್ಥೆಯ ಗ್ರಾಮೀಣ ಕರಕುಶಲ ವಸ್ತುಗಳ ಮಳಿಗೆಗಳು ಸಾರ್ವಜನಿಕರಿಗೆ ನೈಸರ್ಗಿಕ ಜೀವನಶೈಲಿಯನ್ನು ಹತ್ತಿರದಿಂದ ಪರಿಚಯಿಸಲಿವೆ ಎಂದು ಹೇಳಿದರು.

ಕರಾವಳಿಯ ಅಪರೂಪದ ಆಯುರ್ವೇದ ಥಾಲಿ:
ಮಧ್ಯಾಹ್ನದ ಊಟಕ್ಕೆ ಆರೋಗ್ಯ ಮತ್ತು ರುಚಿಯ ಸಂಗಮವಾದ ಅಪರೂಪದ ಆಯುರ್ವೇದ ಥಾಲಿಯನ್ನು ಅತ್ಯಂತ ರಿಯಾಯಿತಿ/ಸಣ್ಣ ಮೊತ್ತಕ್ಕೆ ನೀಡಲಾಗುತ್ತದೆ. ಈ ಥಾಲಿಯಲ್ಲಿ ಗೆಣಸಿನ ಸೂಪ್, ಹುರುಳಿ ಕೊಟ್ಟೆ ಕಡುಬು, ನೆಲಗಡಲೆ ಕೋಸುಂಬರಿ, ಹೆಸರುಕಾಳು ತೊವೆ, ಕೆಂಪು ಅಕ್ಕಿ ಅನ್ನ, ಹುರುಳಿ ಸಾರು, ಪತ್ರೊಡೆ, ನುಗ್ಗೆ ಸೊಪ್ಪಿನ ಚಟ್ನಿ, ಚಕ್ತೆ ಸೊಪ್ಪಿನ ಕೆಂಪು ಚಟ್ನಿ, ಒಂದೆಲಗ ತಂಬಳಿ, ಬೋಂಡ ಪಾಯಸ, ಬಾಳೆದಿಂಡಿನ ಬೆಲ್ಲದ ಪಾಕ, ಗೊಂಬಳಕಾಯಿ ಜ್ಯೂಸ್, ಮಜ್ಜಿಗೆ ಸೊಪ್ಪಿನ ಮಜ್ಜಿಗೆ ಹಾಗೂ ಸಾಂಪ್ರದಾಯಿಕ ಹಾಲುಬಾಯಿ ಇರಲಿವೆ ಎಂದರು.

ವಿದ್ಯಾರ್ಥಿಗಳಿಗೆ ನಗದು ಬಹುಮಾನದ ಸ್ಪರ್ಧೆಗಳು:
ಶಾಲಾ ವಿದ್ಯಾರ್ಥಿಗಳಿಗಾಗಿ ಅಂದೇ ಸ್ಥಳದಲ್ಲಿ ಪ್ರಬಂಧ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ.3,000 ಹಾಗೂ ದ್ವಿತೀಯ ರೂ2,000 ನಗದು ಬಹುಮಾನ ನೀಡಲಾಗುವುದು. ಮಧ್ಯಾಹ್ನ ಯುವಜನತೆ, ವೈದ್ಯರು ಮತ್ತು ಕಂಟೆಂಟ್ ಕ್ರಿಯೇಟರ್‍ಗಳ ನಡುವೆ ಮುಕ್ತ ಸಂವಾದ ನಡೆಯಲಿದೆ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!