spot_img
Friday, July 24, 2026
spot_img

ಜು.29ರಿಂದ ಸೆ.14ರ ತನಕ ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ

ಕುಂದಾಪುರ: [ಜನಪ್ರತಿನಿಧಿ ವಾರ್ತೆ] ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಬೈಂದೂರು ನೇತೃತ್ವದಲ್ಲಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರ ಚಾತುರ್ಮಾಸ್ಯ ವೃತಾಚರಣೆ ‘ಬೈಂದೂರು ಚಾತುರ್ಮಾಸ’ ಇದೇ ಜುಲೈ 29 ಬುಧವಾರ ಗುರುಪೂರ್ಣಿಮೆಯಿಂದ ಸೆಪ್ಟೆಂಬರ್ 14 ಸೋಮವಾರದ ತನಕ ಬೈಂದೂರು ಸಮೀಪದ ಗೋಳಿಹೊಳೆಯ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಶಾಸಕರು, ‘ಬೈಂದೂರು ಚಾತುರ್ಮಾಸ’ ಸಮಿತಿ ಅಧ್ಯಕ್ಷರಾದ ಗುರುರಾಜ್ ಗಂಟಿಹೊಳೆ ಹೇಳಿದರು.

ಅವರು ಕುಂದಾಪುರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಶ್ರೀರಾಮ ಕ್ಷೇತ್ರದ ಶ್ರೀಗಳು ಉಡುಪಿ ಜಿಲ್ಲೆಯಲ್ಲಿ ನಡೆಸುವ ಪ್ರಥಮ ಚಾತುರ್ಮಾಸ್ಯ ಇದಾಗಿದೆ. ಸನಾತನ ಪರಂಪರೆಯಲ್ಲಿ ಚಾತುರ್ಮಾಸ್ಯ ಎನ್ನುವುದು ವಿಶಿಷ್ಠ ಧಾರ್ಮಿಕ ಕಲ್ಪನೆಯಾಗಿದೆ. ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಕಾರ್ಯಕ್ರಮ ಇದಾಗಿದೆ. ಇಡೀ ಬೈಂದೂರು ಕ್ಷೇತ್ರದ ಜನ ಒಂದಾಗಿ, ಜಾತಿಮತ ಬೇಧವಿಲ್ಲದೆ 48 ದಿನಗಳ ಕಾಲ ನಡೆಯುವ ಶ್ರೀಗಳ ಆತ್ಮೋನ್ನತಿ ಹಾಗೂ ಲೋಕಕಲ್ಯಾಣಾರ್ಥವಾಗಿ ಈ ಬೈಂದೂರು ಚಾತುರ್ಮಾಸ್ಯವನ್ನು ಯಶಸ್ವಿಗೊಳಿಸಲು ಸಂಕಲ್ಪ ಮಾಡಿದ್ದಾರೆ ಎಂದರು.

ಬೈಂದೂರು ಚಾತುರ್ಮಾಸ್ಯ ಯಶಸ್ಸಿಗೆ ಈಗಾಗಲೆ 48 ಸಮಿತಿಗಳನ್ನು ಮಾಡಿ, 48 ದಿನಗಳ ಜವಬ್ದಾರಿಯನ್ನು ಒಂದೊಂದು ಗ್ರಾಮಕ್ಕೆ ವಹಿಸಲಾಗಿದೆ. 48ದಿನಗಳನ್ನು ವಿಶೇಷವಾದ ಧಾರ್ಮಿಕ ವೈಶಿಷ್ಟ್ಯತೆಗಳೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ. ಕೇವಲ ಉಡುಪಿ ಜಿಲ್ಲೆಯವರು ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಮುಂಬಯಿಗಳಿಂದಲೂ ಭಕ್ತಾದಿಗಳು ಆಗಮಿಸಲಿದ್ದಾರೆ. ಹೊರೆಕಾಣಿಕೆ ಬರಲಿದೆ. ಈಗಾಗಲೇ ಸಭೆಗಳನ್ನು ನಡೆಸಲಾಗಿದೆ ಎಂದರು.

ಜು.29ರಂದು ಬುಧವಾರ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ತನಕ ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ಹಾಗೂ ವೈದಿಕ ವಿಧಿ ವಿಧಾನಗಳು ಆರಂಭಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಬೈಂದೂರು ಶ್ರೀಸೇನೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಶ್ರೀಗಳ ಪುರಪ್ರವೇಶದ ಭವ್ಯ ಮೆರವಣಿಗೆ ಪ್ರಾರಂಭವಾಗಲಿದೆ. ಪೂರ್ವಾಹ್ನ 11 ಗಂಟೆಗೆ ಶ್ರೀ ಬಿಳಿಶಿಲೆ ವಿನಾಯಕ ದೇವರಿಗೆ ಶ್ರೀಗಳಿಂದ ವಿಶೇಷ ಪೂಜೆ ನಡೆಯಲಿದೆ. ಪೂರ್ವಾಹ್ನ 11.05ಕ್ಕೆ ಶ್ರೀಗಳ ವ್ಯಾಸ ಪೀಠದ ಪೀಠಾರೋಹಣ ಕಾರ್ಯಕ್ರಮ, ಗುರು ಪಾದುಕಾ ಪೂಜೆ, ಶ್ರೀಗಳ ಆಶೀರ್ವಚನ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಚಾತುರ್ಮಾಸ್ಯದ ಪ್ರತಿದಿನ ಪೂರ್ವಾಹ್ನ 10 ಗಂಟೆಯಿಂದ 11 ರವರೆಗೆ ಭಜನೆ, ಬಳಿಕ ಗುರುಪಾದುಕಾ ಪೂಜೆ, ಆಶೀರ್ವಚನ, ಮಂತ್ರಾಕ್ಷತೆ, ಅನುಗ್ರಹ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಪ್ರತಿದಿನ 5.30ರಿಂದ ರಾತ್ರಿ 9.30ರ ತನಕ ಭಕ್ತಿಪ್ರಧಾನ ವಿವಿಧ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಸೆ.14ರಂದು ಚಾತುರ್ಮಾಸ್ಯ ವ್ರತ ಮುಕ್ತಾಯಗೊಳ್ಳಲಿದ್ದು ಅದೇ ದಿನ ಬೆಳಿಗ್ಗೆ ಶ್ರೀಗಳವರ ಸೀಮೋಲ್ಲಂಘನ ಕಾರ್ಯಕ್ರಮ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ತಟದಲ್ಲಿರುವ ಸುಮನಾವತಿ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸುವುದರೊಂದಿಗೆ ಸಮಾಪನಗೊಳ್ಳಲಿದೆ ಎಂದರು.

ಧರ್ಮಸಭೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಸಚಿವರಾದ ಮಂಕಾಳ ಎಸ್.ವೈದ್ಯ, ಮಧು ಬಂಗಾರಪ್ಪ, ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಎ.ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಉಮಾನಾಥ ಕೋಟ್ಯಾನ್, ರಾಜೇಶ ನಾಯ್ಕ್, ಡಾ.ವೈ.ಭರತ್ ಕುಮಾರ್ ಶೆಟ್ಟಿ,ವೇದವ್ಯಾಸ ಕಾಮತ್, ಹರೀಶ ಪೂಂಜಾ, ಭಾಗಿರಥಿ ಮುರುಳ್ಯ, ಅಶೋಕ್ ರೈ, ಬೇಳೂರು ಗೋಪಾಲಕೃಷ್ಣ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಬೈಂದೂರು ಚಾತುರ್ಮಾಸ್ಯ ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಬೈಂದೂರು ಸಮೀಪದ ಗೋಳಿಹೊಳೆಯಲ್ಲಿ ಶ್ರೀಗಳು 48 ದಿನಗಳ ಕಾಲ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವ ಹೆಮ್ಮೆಯ ವಿಚಾರವಾಗಿದೆ. ಇದು ಒಂದು ಸಮುದಾಯಕ್ಕೆ ಸೇರದೆ ಎಲ್ಲರೂ ಕೂಡಾ ಒಂದಾಗಿ ಆಚರಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ಎಲ್ಲಾ ಹಿಂದುಳಿದ ವರ್ಗಗಳು ಸೇರಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಮಿತಿ ರಚನೆ ಮಾಡಲಾಗಿದೆ ಎಂದರು.

ಬೈಂದೂರು ಚಾತುರ್ಮಾಸ್ಯ ಸಮಿತಿಯಲ್ಲಿ ಎಲ್ಲ ಸಮುದಾಯದವರನ್ನು ಸೇರಿಸಿಕೊಳ್ಳಲಾಗಿದೆ. ಅಧ್ಯಕ್ಷರಾಗಿ ಶಾಸಕ ಗುರುರಾಜ ಗಂಟಿಹೊಳೆ, ಸಂಚಾಲಕರಾಗಿ ಶಿವರಾಜ ಪೂಜಾರಿ ಗೋಳಿಹೊಳೆ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ ಎಲ್.ಪೂಜಾರಿ ಹೊಸ್ಕೋಟೆ, ಅಶೋಕ ಪೂಜಾರಿ ಬೀಜಾಡಿ, ಪ್ರಧಾನ ಅರ್ಚಕರಾಗಿ ವಾಸುದೇವ ಹೊಳ್ಳ ಅವರನ್ನು ಒಳಗೊಂಡು ಸಮಿತಿ ರಚನೆ ಮಾಡಲಾಗಿದೆ. ಎಲ್ಲ ಭಾಗಗಳಲ್ಲಿಯೂ ಸಭೆ ನಡೆಸಲಾಗುತ್ತಿದೆ. ಕಾರ್ಯಕ್ರಮದ ಸಿದ್ಧತೆಯ ಬಗ್ಗೆ ಜು.26ರಂದು ಮಧ್ಯಾಹ್ನ ಕಟ್‍ಬೇಲ್ತೂರು ನಮ್ಮ ಮನೆಯ ವಠಾರದಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಶ್ರೀರಾಮ ಕ್ಷೇತ್ರದ ಶ್ರೀಗಳು ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಪ್ರಥಮವಾಗಿ ಚಾತುರ್ಮಾಸ್ಯ ಆಚರಿಸಿಕೊಳ್ಳುತ್ತಿದ್ದಾರೆ. ಜಾತಿಮತ ಪಕ್ಷ ಬೇದವಿಲ್ಲದೆ ಭಕ್ತಿಯೊಂದೇ ಮುಖ್ಯ ಎನ್ನುವ ನೆಲೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಇಲ್ಲಿ ಭಕ್ತಿಯೇ ಪ್ರಧಾನ ಎಂದು ಅವರು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಎಲ್ಲಾ ಸಮುದಾಯವರನ್ನು ಸೇರಿಸಿಕೊಂಡು ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ 48ದಿನಗಳ ಕಾರ್ಯಕ್ರಮ ನಿಗಧಿಯಾಗಿದೆ. ಒಂದೊಂದು ಊರಿನವರು ಒಂದೊಂದು ದಿನದ ಜವಬ್ದಾರಿ ತಗೆದುಕೊಂಡಿದ್ದಾರೆ. ಎಲ್ಲಾ ಸಮುದಾಯದ ನಾಯಕರು ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಜಾತಿ ಮುಖ್ಯವಲ್ಲ ಭಕ್ತಿ ಮುಖ್ಯ ಎನ್ನುವ ನೆಲೆಯಲ್ಲಿ ಬೈಂದೂರು ಚಾತುರ್ಮಾಸ್ಯ ಯಶಸ್ಸುಗೊಳಿಸಲು ಸಂಕಲ್ಪ ಮಾಡಿದ್ದೇವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ.ಪೂಜಾರಿ ಉಪಸ್ಥಿತರಿದ್ದರು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!