spot_img
Wednesday, March 11, 2026
spot_img

ನಿರಾಮಯ ಸೊಸೈಟಿಯ ಮೂಲಕ ಗ್ರಾಮ ಪಂಚಾಯತ್‌ಗಳ ಸ್ವಾಸ್ಥ್ಯ ಕಾಳಜಿ ರಾಜ್ಯಕ್ಕೆ ಮಾದರಿ-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ವಂಡ್ಸೆ: ರಾಜ್ಯದಲ್ಲೇ ಪ್ರಥಮ ಸಮುದಾಯ ಉಪಶಮನ ಆರೈಕೆ ಕೇಂದ್ರ ನಿರಾಮಯ ಸೊಸೈಟಿ  ಉದ್ಘಾಟನೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಅ.31:  ಅಧಿಕಾರವೆನ್ನುವುದು ಶಾಶ್ವತವಲ್ಲ, ಅಧಿಕಾರವಧಿಯಲ್ಲಿ ಮಾಡುವ ಸೇವೆ ಶಾಶ್ವತವಾಗಿ ಉಳಿಯುತ್ತದೆ. ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಶಾಸಕರು, ಸಂಸದರ ರೀತಿಯಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದು ವಿಶೇಷ. 7 ಗ್ರಾಮ ಪಂಚಾಯತ್‌ಗಳು ಸಮನ್ವಯತೆಯಿಂದ ಪಕ್ಷಬೇದ, ಜಾತಿ ಮತ ಬೇದ ಮರೆತು, ಭವಿಷ್ಯದ ದೃಷ್ಟಿಯಿಂದ ಆರೋಗ್ಯ ಸೇವೆಯಲ್ಲಿ ವಿಷಯದಲ್ಲಿ ನಿರಾಮಯ ಸೊಸೈಟಿಯ ಮೂಲಕ ಕಾರ್ಯೋನ್ಮುಖವಾಗಿರುವುದು ವಂಡ್ಸೆ ಗ್ರಾಮ ಪಂಚಾಯತ್ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ವಂಡ್ಸೆ ಕ್ಲಸ್ಟರ್ ವ್ಯಾಪ್ತಿಯ ವಂಡ್ಸೆ, ಚಿತ್ತೂರು, ಇಡೂರು-ಕುಂಜ್ಞಾಡಿ, ಆಲೂರು, ಹಕ್ಲಾಡಿ, ಹೆಮ್ಮಾಡಿ ಮತ್ತು ಕೆರಾಡಿ ಗ್ರಾಮ ಪಂಚಾಯತ್‌ಗಳಲ್ಲಿ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ನಿರಾಮಯ ಸೊಸೈಟಿ ಮೂಲಕ ಅನುಷ್ಟಾನಗೊಳ್ಳುತ್ತಿರುವ ಸಮುದಾಯ ಉಪಶಮನ ಆರೈಕೆ ಕೇಂದ್ರ ಹಾಗೂ ಉಡುಪಿ ಜಿಲ್ಲೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯ ಪ್ರಪ್ರಥಮ ಸಮುದಾಯ ನಿರ್ವಹಣಾ ತರಬೇತಿ ಕೇಂದ್ರ(ಸಿ.ಎಂ.ಟಿ.ಸಿ) ಸಹ್ಯಾದ್ರಿ ಸಂಜೀವಿನಿ ಕೌಶಲ್ಯಾವೃದ್ಧಿ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ವಂಡ್ಸೆಯಲ್ಲಿ ಎಸ್.ಎಲ್.ಆರ್.ಎಂ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಿಸಿ ಲಾಭದಾಯಕವಾಗಿ ಮುನ್ನೆಡೆಸುತ್ತಿರುವುದು ಮಾತ್ರವಲ್ಲದೆ ತ್ಯಾಜ್ಯವಿಲೇವಾರಿಯಲ್ಲೂ ಪ್ರಗತಿಪಥದಲ್ಲಿ ಸಾಗುವ ಜೊತೆಯಲ್ಲಿ ಸಾಮಾಜಿಕ ಕಾಳಜಿಯಿಂದ ಶ್ರಮಿಸುತ್ತಿರುವುದು ಕೂಡಾ ಗಮನಾರ್ಹವಾದುದು. ಇಂಥಹ ಕೆಲಸಗಳನ್ನು ಮಾಡಲು ದೂರದೃಷ್ಟಿತ್ವ, ಅಭಿವೃದ್ಧಿಶೀಲ ದೃಷ್ಟಿಕೋನ ಹಾಗೂ ನಾಯಕತ್ವ ಅವಶ್ಯಕವಾಗುತ್ತದೆ. ನಿರಾಮಯ ಸೊಸೈಟಿ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ವಂಡ್ಸೆಯವರ ಸಮಾಜಮುಖಿ ಚಿಂತನೆಗಳು ನಿಜಕ್ಕೂ ಶ್ಲಾಘನಾರ್ಹವಾದುದು ಎಂದರು.

ಉದಯ ಕುಮಾರ್ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿಗೆ ಆರ್ಹರು: ಉದಯ ಕುಮಾರ್ ಶೆಟ್ಟಿಯವರು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಷಯದಲ್ಲಿ ನೀಡುತ್ತಿರುವ ಸೇವೆ, ಆರೋಗ್ಯ ಕ್ಷೇತ್ರದಲ್ಲಿಯೂ ನಿರಾಮಯ ಸೊಸೈಟಿ ಎನ್ನುವ ವಿಶಿಷ್ಠವಾದ ಯೋಜನೆಯನ್ನು ಪ್ರಥಮವಾಗಿ ಆರಂಭಿಸುತ್ತಿರುವುದು, ಒಟ್ಟಾರೆ ಇವರ ಸೇವೆಯನ್ನು ಗಮನಿಸಿದರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವುದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಬರುವ ವರ್ಷದ ರಾಜ್ಯೋತ್ಸವ ಸಂದರ್ಭದಲ್ಲಿ ಅವರ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಾನೇ ಸೂಚಿಸುತ್ತೇನೆ ಎಂದರು.

ವಂಡ್ಸೆ ಗ್ರಾಮ ಪಂಚಾಯತ್ ಕಾರ್ಯವನ್ನು ಬೇರೆ ಗ್ರಾಮ ಪಂಚಾಯತ್‌ಗಳು ನೋಡಬೇಕು, ನಮ್ಮ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯಿ ಸದಸ್ಯರನ್ನು ಇಲ್ಲಿಗೆ ಅಧ್ಯಯನಕ್ಕೆ ಕಳುಹಿಸುವುದಾಗಿ ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮಾತನಾಡಿ, ನಿರಾಮಯ ಸೊಸೈಟಿ ಕಾರ್ಯಸೂಚಿ ರಾಜ್ಯಕ್ಕೆ ಮಾದರಿಯಾಗಿದೆ. ಇಂಥಹ ಯೋಜನೆಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವ ಅಗತ್ಯವಿದೆ. ಉದಯ ಕುಮಾರ್ ಶೆಟ್ಟಿಯವರ ಗ್ರಾಮೀಣಾಭಿವೃದ್ಧಿ ಕಾಳಜಿ ಶ್ಲಾಘನಾರ್ಹವಾದುದು. ಅವರ ಸಾಧನೆಗೆ ರಾಜ್ಯೋತ್ಸವದಂತಹ ಗೌರವ ಸಿಗುವಂತಾಗಬೇಕು ಎಂದರು.

ಕಾರ್ಯಕ್ರಮಕ್ಕೆ ಶಾಸಕ ಗುರುರಾಜ ಗಂಟಿಹೊಳೆ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ಎಂ.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಚಿತ್ರಕೂಟ ಚಿಕಿತ್ಸಾಲಯ ಕಳಿ ಆಲೂರು ಇದರ ಮುಖ್ಯಸ್ಥರಾದ ಡಾ.ರಾಜೇಶ ಬಾಯರಿ, ಜಯರತ್ನ ಸೇವಾ ಟ್ರಸ್ಟ್ ಮೊಳಹಳ್ಳಿ ಇದರ ಅಧ್ಯಕ್ಷರಾದ ಎಂ.ದಿನೇಶ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ನಿರಾಮಯ ಸೊಸೈಟಿ ಗೌರವ ಸದಸ್ಯರಾದ ಡಾ.ಅತುಲ್ ಕುಮಾರ್ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್, ಹಕ್ಲಾಡಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಆಲೂರು ಗ್ರಾ.ಪಂ ಅಧ್ಯಕ್ಷ ರಾಜೇಶ ದೇವಾಡಿಗ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಆಚಾರ್ಯ, ನಿರಾಮಯ ಸೊಸೈಟಿ ಕಾರ್ಯದರ್ಶಿ, ಕೆರಾಡಿ ಗ್ರಾ.ಪಂ. ಅಧ್ಯಕ್ಷ ಸುದರ್ಶನ ಶೆಟ್ಟಿ, ಕೋಶಾಧಿಕಾರಿ ಇಡೂರು ಕುಂಜ್ಞಾಡಿ ಗ್ರಾ.ಪಂ. ಅಧ್ಯಕ್ಷೆ ಆಶಾ ಆಚಾರ್ಯ, ಜಿಲ್ಲಾ ಪಂಚಾಯತ್ ಉಪಾ ಕಾರ್ಯದರ್ಶಿ ಶಾಮ್ ಎಸ್.ಕಾದ್ರೊಳ್ಳಿ, ಕೆ.ಎಚ್.ಪಿ.ಟಿ ಬೆಂಗಳೂರು ಇದರ ಸಿ.ಇ.ಒ ಮೋಹನ್ ಎಚ್.ಎಲ್., ಅರುವು ಕೊಲಾಬರೇಟರಿ ಬೆಂಗಳೂರು ಇದರ ಸಹ ಸಂಸ್ಥಾಪಕರಾದ ನವೀನ್ ಬಾಗಲ್ ಕೋಟ್, ಚಿತ್ತಾರ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷೆ ರೋಶನಿ ಶೆಟ್ಟಿ ಅಂಪಾರು, ಸಹ್ಯಾದ್ರಿ ಸಂಜೀವಿನಿ ಸಿ‌ಎಂಟಿಸಿ ಅಧ್ಯಕ್ಷೆ ಸಲ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅಂಬುಲೆನ್ಸ್ ಕೊಡುಗೆ ನೀಡಿದ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಶೀತಲಿಕರಣ ಪೆಟ್ಟಿಗೆ ದಾನಿಗಳಾದ ಡಾ.ರಾಜೇಶ ಬಾಯರಿ ಹಾಗೂ ಎಂ.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ನಾಗರಾಜ ಮಂಜರನ್ನು ಸನ್ಮಾನಿಸಲಾಯಿತು.

ನಿರಾಮಯ ಸೊಸೈಟಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ, 7 ಪಂಚಾಯತ್ ವ್ಯಾಪ್ತಿಯಲ್ಲಿ ಉಪಶಮನ ಆರೈಕೆಗೆ ಒಳಪಡುವ ರೋಗಿಗಳನ್ನು ಗುರುತಿಸುವ ಹಾಗೂ ಅವರ ದೈಹಿಕ, ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಮೌಲ್ಯ ಮಾಪನದ ಪ್ರಕ್ರಿಯೆಯನ್ನು ಕೆ.ಎಮ್.ಸಿ. ಆಸ್ಪತ್ರೆ ಮಣಿಪಾಲ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ನಡೆಸಲಾಗಿದೆ. ಇದರಂತೆ 284 ಜನರನ್ನು ಈಗಾಗಲೇ ಗುರುತಿಸಿದ್ದು ಅವರಲ್ಲಿ 73 ಜನರು ಹಾಸಿಗೆ ಹಿಡಿದವರಾಗಿದ್ದಾರೆ. ಅಭದ್ರತೆ ಕಾಡುತ್ತಿರುವ ಹಿರಿಯ ನಾಗರಿಕರನ್ನು ಗುರುತಿಸುವ ಕಾರ್ಯ ಇನ್ನಷ್ಟೇ ಆಗಬೇಕಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶವು ಅದರ ನೋವು, ಅಸಹಜತೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ರೋಗಿಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿ ಅಗತ್ಯವಿದ್ದಲ್ಲಿ ಜೀವನೋಪಾಯ ಚಟುವಟಿಕೆಯೊಂದಿಗೆ ಜೀವನದ ಗುಣಮಟ್ಟವನ್ನು ಸುಧಾರಿಸಿ ಗೌರವಯುತವಾದ ಬದುಕು ನಡೆಸುವಂತೆ ಮಾಡುವುದಾಗಿದ್ದು, ಈಗಾಗಲೇ ಮಾಸಿಕ ಬಾಡಿಗೆ ಆಧಾರದಲ್ಲಿ ಪಡೆದ 2 ಕಾರುಗಳು ಮತ್ತು ದಾನಿಗಳಿಂದ ಪಡೆದ ಅಂಬುಲೆನ್ಸ್ ಮುಖಾಂತರ 7 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೋಗಿಗಳ ಮನೆಗೆ ಭೇಟಿ ನೀಡಿ ಆರೈಕೆ ಮಾಡಲಾಗುತ್ತಿದೆ. ಸಿಬ್ಬಂದಿಗಳಿಗೆ ಮತ್ತು ನಾಲ್ವರು ವೈದ್ಯರುಗಳಿಗೆ ತಿರುವನಂತಪುರದ ಪ್ಯಾಲಿಯಂ ಇಂಡಿಯಾ ಸಂಸ್ಥೆಯಲ್ಲಿ ತರಭೇತಿ ನೀಡಿ ಸೆಪ್ಟೆಂಬರ್‌ನಿಂದ ಸಂಸ್ಥೆಯು ಸೇವೆ ನೀಡುತ್ತಿದೆ. 7 ಗ್ರಾಮ ಪಂಚಾಯತ್‌ಗಳ ಸಮನ್ವತಯೆಯಿಂದ ರಾಜಕೀಯವನ್ನು ಮೀರಿ ಸೇವಾಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವುದು ಅತೀ ವಿಶೇಷವಾದುದು. 7 ಗ್ರಾಮ ಪಂಚಾಯತ್‌ಗಳು ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದ ಅವರು, ಸಮಾಜದ ಋಣ, ಭೂಮಿ ಋಣ ತೀರಿಸಲು ನಮಗೊಂದು ಅವಕಾಶ. ಶೇ.೧೦೦ರಷ್ಟು ಭ್ರಷ್ಟಚಾರ ರಹಿತವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ನಿರಾಮಯ ಸೊಸೈಟಿ ಕಾರ್ಯ ಉದ್ದೇಶ ವಿವರಿಸಿದರು. ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಆಚಾರ್ಯ ವಂದಿಸಿದರು, ಪತ್ರಕರ್ತ ಪ್ರಭಾಕರ ಆಚಾರ್ಯ ಚಿತ್ತೂರು ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಎಸ್.ಎಲ್.ಆರ್.ಎಂ ಆವರಣದಲ್ಲಿ ನಿರ್ಮಾಣಗೊಂಡ ಉಡುಪಿ ಜಿಲ್ಲೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯ ಪ್ರಪ್ರಥಮ ಸಮುದಾಯ ನಿರ್ವಹಣಾ ತರಬೇತಿ ಕೇಂದ್ರ(ಸಿ.ಎಂ.ಟಿ.ಸಿ) ಸಹ್ಯಾದ್ರಿ ಸಂಜೀವಿನಿ ಕೌಶಲ್ಯಾವೃದ್ಧಿ ತರಬೇತಿ ಕೇಂದ್ರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಬಳಿಕ ಸಮುದಾಯ ಉಪಶಮನ ಆರೈಕೆ ಕೇಂದ್ರವನ್ನು ಉದ್ಘಾಟಿಸಲಾಯಿತು. ನಿರಾಮಯ ಸೊಸೈಟಿಯ ಅಂಬುಲೆನ್ಸ್ ಮತ್ತು ಶೀತಲೀಕರಣ ಪೆಟ್ಟಿಗೆಯನ್ನು ಸಚಿವರ ಸಮಕ್ಷಮದಲ್ಲಿ ದಾನಿಗಳಿಂದ ಹಸ್ತಾಂತರ ಮಾಡಲಾಯಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!