spot_img
Wednesday, November 19, 2025
spot_img

‘ಸಮಾಜಸೇವಾ ಹರಿಕಾರ ನಾಡೋಜ ಜಿ.ಶಂಕರ್ 70’ ಉದಯಕುಮಾರ್ ಹಟ್ಟಿಯಂಗಡಿ ಅವರ ಪುಸ್ತಕ ಬಿಡುಗಡೆ

ಜೀವನವನ್ನೇ ಸೇವೆಗೆ ಮುಡಿಪಾಗಿಟ್ಟವರು ಜಿ.ಶಂಕರ್ -ಡಾ.ಎಚ್.ಎಸ್.ಬಲ್ಲಾಳ್
ಜನಪ್ರತಿನಿಧಿ ವಾರ್ತೆ] ಉಡುಪಿ: ಪರೋಪಕಾರಾಯ ಇದಂ ಶರೀರಂ ಎನ್ನುವ ಮಾತಿನಂತೆ ಡಾ.ಜಿ.ಶಂಕರ್ ಬದುಕುತ್ತಿದ್ದಾರೆ. ಕಷ್ಟದ ಅನುಭವ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಬಡವರ, ನೊಂದವರ ಧ್ವನಿಯಾಗಿ ಅವರು ಇಂದು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ತನ್ನ ಬದುಕನ್ನೇ ಸಮಾಜ ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ಅವರು ಶ್ಲಾಘನಾರ್ಹವಾದ ಸೇವೆ ನೀಡುತ್ತಿದ್ದಾರೆ. ಆ ನೆಲೆಯಲ್ಲಿ ‘ಸಮಾಜಸೇವಾ ಹರಿಕಾರ ಡಾ. ಜಿ.ಶಂಕರ್ ಅವರ 70’ ಸಂಭ್ರಮದಲ್ಲಿ ಅವರ ಜೀವನ ನುಡಿಚಿತ್ರವನ್ನು ಹೊರತಂದಿರುವುದು ಅರ್ಥಪೂರ್ಣವಾದುದು ಎಂದು ಮಾಹೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್ ಹೇಳಿದರು.

ಅವರು ಅ.5 ರವಿವಾರ ಉಡುಪಿ ಶ್ಯಾಮಿಲಿ ಸಭಾಂಗಣದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಅವರ ಸಪ್ತತಿ ಹುಟ್ಟುಹಬ್ಬದ ಅಂಗವಾಗಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ ಅವರ ಕೃತಿ ಸಮಾಜಸೇವಾ ಹರಿಕಾರ-ನಾಡೋಜ ಡಾ.ಜಿ.ಶಂಕರ್ 70 ನುಡಿಚಿತ್ರ ಹೊತ್ತಗೆಯನ್ನು ಅನಾವರಣಗೊಳಿಸಿ ಮಾತನಾಡಿದರು.

ಜಿ.ಶಂಕರ್ ಅವರು ಇವತ್ತು ಉನ್ನತ ಸ್ಥಾನಮಾನದಲ್ಲಿದ್ದರೂ ಕೂಡಾ ಸ್ವಂತ ಬದುಕನ್ನು ಹೆಚ್ಚು ವೈಭವೀಕರಿಸಿಕೊಳ್ಳದೆ ಸರಳವಾಗಿ ಬದುಕುತ್ತಿರುವ ಆದರ್ಶ ವ್ಯಕ್ತಿ. ತನ್ನ ದುಡಿಮೆಯ ಬಹುಪಾಲನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟವರು. ಬೇರೆ ಬೇರೆ ರೀತಿಯಲ್ಲಿ ಬಡವರ, ನೊಂದವರ ಬಾಳಿಗೆ ಬೆಳಕಾಗಿದ್ದಾರೆ. ಆರೋಗ್ಯ ಕಾರ್ಡ್ ಇರಬಹುದು, ಯಕ್ಷಗಾನ ಕಲಾವಿದರಿಗೆ ನೆರವು ನೀಡುವುದು ಇರಬಹುದು, ಸಾಮಾಜಮುಖಿಯಾಗಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಇವತ್ತು ಎಲ್ಲಾ ಕ್ಷೇತ್ರಗಳಲ್ಲೂ ಅವರ ಕೊಡುಗೆ ಕಾಣಬಹುದು ಎಂದರು.

‘ಸಮಾಜಸೇವಾ ಹರಿಕಾರ ನಾಡೋಜ ಜಿ.ಶಂಕರ್ 70’ ಕೃತಿಯ ಬಗ್ಗೆ ಮಾತನಾಡಿದ ಸಾಹಿತಿ ಡಾ.ಗಾಯತ್ರಿ ನಾವಡ ಅವರು, ಡಾ.ಜಿ.ಶಂಕರ್ ಅವರು ವ್ಯಕ್ತಿಯಲ್ಲ, ಅವರೊಂದು ವ್ಯಕ್ತಿತ್ವ. ಅವರ ದಾನವ್ರತದ ಕೈಗೆ ಜಾತಿ-ಮತ ಧರ್ಮದ ಭೇದವಿಲ್ಲ. ಪವಿತ್ರ ಭಾವದ ವ್ಯಕ್ತಿತ್ವ ಅವರದ್ದು. ಅದೇ ಅವರ ಸಾಧನೆಯ ಜೊತೆಯ ಅವರ ಪತ್ನಿ ಶಾಲಿನಿ ಶಂಕರ್ ಅವರ ಪಾತ್ರವೂ ಪ್ರಮುಖವಾಗಿದೆ. ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದಕ್ಕಿಂತ ಯಶಸ್ವಿ ಪುರುಷನ ಯಶಸ್ಸಿನ ಜೊತೆಜೊತೆಯಲ್ಲಿ ಸತಿಯೂ ಇರುತ್ತಾಳೆ ಎನ್ನುವುದು ಹೆಚ್ಚು ಸೂಕ್ತ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಕೃತಿ ಜಿ.ಶಂಕರ್ ಅವರನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ನನ್ನ ಕನಸು ನನಸಾಗಿದೆ: ಕೃತಿಯ ಲೇಖಕರಾದ ಉದಯಕುಮಾರ್ ಹಟ್ಟಿಯಂಗಡಿ ಮಾತನಾಡಿ, ನಾಡೋಜ ಡಾ.ಜಿ.ಶಂಕರ್ ಇತಿಹಾಸ ಪುರುಷ. ಅವರ ಸಾಧನೆ, ವ್ಯಕ್ತಿತ್ವವನ್ನು ಪದಗಳ ಮಿತಿಯಲ್ಲಿ ಹಿಡಿದಿಡುವುದು ಅಸಾಧ್ಯ. ಅವರ ಕಾರ್ಯಶಕ್ತಿಯ ಅಗಾಧತೆ, ಸೇವಾಸಾಧನೆಯ ಎತ್ತರವನ್ನು ಕೃತಿಯ ವ್ಯಾಪ್ತಿಯಲ್ಲಿ ತರಲು ಸಾಧ್ಯವಿಲ್ಲ. ಕಳೆದ ಇಪ್ಪತ್ತೈದು ವರ್ಷಗಳಿಂದ ಅವರ ಶಿಷ್ಯನಂತೆ ನಾನು ಅವರನ್ನು ಕಂಡಂತೆ ಕೆಲವೊಂದಿಷ್ಟನ್ನು ಎಳೆ‌ಎಳೆಯಾಗಿ ಈ ಪುಸ್ತಕದಲ್ಲಿ ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ನಾನು ವೃತ್ತಿ ಬರಹಗಾರನಲ್ಲ. ವಿಷಯವನ್ನು ನೇರ ಓದುಗರ ಮುಂದಿಡುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದ ಅವರು, ಡಾ.ಜಿ.ಶಂಕರ್ ಓರ್ವ ಶ್ರೇಷ್ಠ ಮಾನವತಾವಾದಿ. ಅವರ ಸೇವಾಮನಸ್ಸಿಗೆ ಜಾತಿ-ಮತ-ಧರ್ಮ ಭೇದವಿಲ್ಲ. ಎಲ್ಲರಿಗೂ ಅವರು ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಅವರ ಸೇವೆ ಅಚ್ಚೋತ್ತಿದೆ. ಅವರು ಸಾಧನೆಯ ಮೂಲಕ ಹಂತಹಂತವಾಗಿ ಜೀವನದಲ್ಲಿ ಎತ್ತರಕ್ಕೇತರಿದವರು. ರಾಜ್ಯದ ಶ್ರೇಷ್ಠ ಪ್ರಥಮದರ್ಜೆ ಗುತ್ತಿಗೆದಾರರಾಗಿ, ಯಶಸ್ವಿ ಉದ್ಯಮಿಯಾಗಿರುವ ಡಾ.ಜಿ.ಶಂಕರ್ ಅವರ ಜೀವನವೇ ಒಂದು ಪ್ರೇರಣೆಯ ಪಾಠ. ಅವರ ಸೇವಾ ಚಟುವಟಿಕೆ, ದೃಢನಿರ್ಧಾರ, ಜನಪರ ಕಾಳಜಿ, ಕಾರ್ಯವೈಖರಿಯಿಂದ ಪ್ರೇರಿತನಾಗಿ ಅವರ ಬದುಕಿನ ಹಾದಿಯ ಕುರಿತು ಈ ಪುಸ್ತಕ ಬರೆದಿದ್ದೇನೆ. ಇಂದು ನನ್ನ ಕನಸು ನನಸಾಗಿದೆ ಎಂದರು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಶ್ಯಾಮಿಲಿ ನವೀನ್, ಪ್ರೊ.ಎ.ವಿ ನಾವಡ, ದ.ಕ ಮೊಗವೀರ ಮಹಾಸಭಾದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಜಾನಪದ ಆಕಾಡೆಮಿ ಸದಸ್ಯ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು.

ಆನಂದ್ ಎಸ್.ಕೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶಂಕರ್ ಸಾಲಿಯಾನ್ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!