Thursday, November 21, 2024

ದಂಪತಿಗಳ ಕಲಾಭಿವ್ಯಕ್ತಿಯ ಯುಗಳ ಯಕ್ಷ ರೂಪಕ ‘ಚಿತ್ರ-ಫಲ್ಗುಣ’


ಯಕ್ಷಗಾನದಲ್ಲಿ ಹೊಸತನ, ನಾವೀನ್ಯ ಪ್ರಯೋಗಶೀಲತೆಗಳು ನಿತ್ಯನೂತನ. ಯಕ್ಷ ಸಂವಿಧಾನದ ಒಳಗಡೆಯೇ ಒಂದಿಷ್ಟು ವಿಭಿನ್ನ-ವಿನೂತನ ಆಶಯಗಳನ್ನು ಪ್ರಸ್ತುತ ಪಡಿಸುವ ಪ್ರಕ್ರಿಯೆಗಳು ಇಂದು ಕಂಡು ಬರುತ್ತಿವೆ. ನಿಜ ಜೀವನದಲ್ಲಿ ಸತಿಪತಿಗಳಾಗಿರುವ ಹವ್ಯಾಸಿ ಕಲಾವಿದರು ಪ್ರಸಂಗದಲ್ಲಿ ಸತಿಪತಿಗಳ ಯುಗಳ ಪಾತ್ರ ನಿರ್ವಹಿಸುವ ಮೂಲಕ ಗಮನ ಸಳೆದಿದ್ದು ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ರಚನೆಯ ಚಿತ್ರ-ಫಲ್ಗುಣ ಎನ್ನುವ ಯಕ್ಷಕಥಾ ರೂಪಕದಲ್ಲಿ.

ಇತ್ತೀಚೆಗೆ ಹೀಗೊಂದು ಪರಿಕಲ್ಪನೆ ರಂಗಾರ್ಪಣೆಗೊಂಡಿತು. ನೇಪಥ್ಯದ ಪೌರಾಣಿಕ ಕಥೆಯೊಂದರ ಎಳೆ ಅನುಸರಿಸಿ ಮೊಗೆಬೆಟ್ಟು ಎರಡು ಪಾತ್ರಗಳನ್ನು ಚಿತ್ರಿಸಿ, ಅದಕ್ಕೆ ಅನುಗುಣವಾಗಿ ನೃತ್ಯ, ಪರಿಣಾಮಕಾರಿ ಪದ್ಯಗಳ ರಚಿಸಿದರು. ಪ್ರಸಿದ್ಧ ಹವ್ಯಾಸಿ ಕಲಾವಿದರಾದ ಶಶಾಂಕ್ ಪಟೇಲ್ ಹಾಗೂ ಅವರ ಪತ್ನಿ ಶೃತಿಕಾಶಿ ಇದರಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.
ಚಿತ್ರ-ಫಲ್ಗುಣ ಕುತೂಹಲ ಹಾಗೂ ಸಾಕಷ್ಟು ಪ್ರತೀಕ್ಷೆಗಳನ್ನು ಸೃಷ್ಟಿಸಿತ್ತು. ನಿಜ ಜೀವನದ ದಂಪತಿಗಳು ಯಕ್ಷಗಾನದಲ್ಲಿಯೂ ಜೋಡಿಯಾಗಿ ಕಾಣಿಸಿಕೊಳ್ಳುವುದೆಂದರೆ ನಿರೀಕ್ಷೆಗಳು ಸಹಜ. ದಂಪತಿಗಳ ಕಲಾಭಿವ್ಯಕ್ತಿ, ಸನ್ನಿವೇಶಗಳ ಸೃಷ್ಟಿ, ರಂಗ ಚಲನೆ, ಮುಖ್ಯವಾಗಿ ಸಂಭಾಷಣೆ ಚುಟುಕಾಗಿದ್ದರೂ ಕಲಾವಿದರು ಭಾವನೆಗಳನ್ನು ಮಾತಿಗಿಂತ ನೃತ್ಯ-ಚಲನೆಯಲ್ಲಿ ತೋರಿಸಿಕೊಟ್ಟಿದ್ದು ಅರ್ಥಪೂರ್ಣವಾಗಿತ್ತು.

ಚಿತ್ರ-ಫಲ್ಗುಣ ಚಿತ್ರಾಂಗದೆ ಮತ್ತು ಅರ್ಜುನರ ಪ್ರೇಮಕಾವ್ಯ. ಯಕ್ಷಗಾನ ಪ್ರಸಂಗದಲ್ಲಿ ಈ ಸನ್ನಿವೇಶ ಕಾಣಿಸಿಕೊಳ್ಳುದಿಲ್ಲ. ಇಲ್ಲಿ ಅರ್ಜುನನ ಪ್ರವೇಶ, ತೀರ್ಥಾಟನೆ, ಮಣಿಪುರ ವನ ಪ್ರವೇಶ, ವನದ ವರ್ಣನೆ, ಬೇಟೆಯಾಡುತ್ತಾ ರಾಜಕುಮಾರಿ ಚಿತ್ರಾಂಗದೆ ಆಗಮನ, ಚಿತ್ರ-ಅರ್ಜುನ ಮುಖಾಮುಖಿ, ಶರ ಪ್ರಯೋಗ- ಪ್ರೇಮಾಂಕುರ, ಈ ತನ್ಮಧ್ಯೆ ಅರ್ಜುನ ನಾಗಲೋಕ ಸೇರಿದ ರಂಗಕ್ರಿಯೆ, ಕನಸಿನಲ್ಲಿ ಚಿತ್ರಾರ್ಜುನ ಪ್ರೇಮ ಸಲ್ಲಾಪ, ಅಂತಿಮದಲ್ಲಿ ಗಾಂಧರ್ವ ವಿವಾಹ ಇದು ಒಟ್ಟಾರೆಯ ದೃಶ್ಯಗಳು.

ಇಲ್ಲಿ ನೃತ್ಯ-ಗಾಯನ ಗಮನ ಸಳೆಯುತ್ತದೆ. ಹೊಸ ರಾಗಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದೆ. ಮಾಮೂಲಿ ರೂಪಕಗಳಿಗಿಂಥ ಭಿನ್ನವಾಗಿ ತೋರಿಸುವ ಪ್ರಯತ್ನ ಇಲ್ಲಿ ಗಮನಿಸಬಹುದು. ನೃತ್ಯ ಅಭಿನಯ, ರಂಗಕ್ರಿಯೆಯೊಂದಿಗೆ ಚುಟುಕು ಸಂಭಾಷಣೆಯೂ ಇದ್ದು, ಯಕ್ಷಗಾನ ರೂಪವೂ ಹೌದು- ಯಕ್ಷಗಾನ ರೂಪಕವೂ ಹೌದು ಎನ್ನಬಹುದು. 2 ತಾಸುಗಳ ಅವಧಿ ಚಿತ್ರ-ಫಲ್ಗುಣ ಹೃನ್ಮನಗಳನ್ನು ಪುಳಕಗೊಳಿಸುತ್ತದೆ.

ವಹವ್ವಾರೆ ಮನಸೂರೆ ಬನಶಂಕರಿ|, ಶರವ ಪೂಡಿ ಓಡಿ ಬಂದೆ ಶರಜಲೋಚನೆ, ಚಿತ್ರಾ ಎಂಬವಳೆ…|, ಧೀರ ನಾರಿಯ ತಡೆದೆ|, ನಾ ಶಶಾಂಕಾನ್ವಯನು ನೀ ಶೃತಿಯು ಜೀವವೀಣೆಗೆ | ಹಾಗೂ ಕನಸಿನ ಸನ್ನಿವೇಶದ ಚಂದ್ರವದನೆ ಪ್ರಾಣನಾಯಕಿ, ಹೃದಯ ವೀಣೆಯ ವೈಣಿಕ| ಪ್ರತಿಯೊಂದು ಪದ್ಯಗಳು ಕೂಡಾ ಕಿವಿ ಇಂಪಾಗುವುದರ ಜೊತೆಗೆ ಪದ್ಯವನ್ನು ನೃತ್ಯದ ಜೊತೆ ಸಚೇತನಗೊಳಿಸುವಲ್ಲಿ ಶಶಾಂಕ್-ಶೃತಿಯವರ ಪ್ರಾಮಾಣಿಕ ಶ್ರಮವೂ ಗಮನಾರ್ಹ.

ಹಿಮ್ಮೇಳದಲ್ಲಿ ಮೊಗೆಬೆಟ್ಟು ಪ್ರಸಾದ ಕುಮಾರರ ಭಾಗವತಿಕೆ ಸಾಂಪ್ರಾದಾಯಿಕ ಹಾಗೂ ಹೊಸರಾಗಗಳ ಸಂಯೋಜನೆಯೊಂದಿಗೆ ಒಳ್ಳೆಯ ಆರಂಭ ನೀಡಿದರೆ, ರಾಘವೇಂದ್ರ ಹೆಗಡೆ ಯಲ್ಲಾಪುರ ಅವರ ಮದ್ದಳೆಯ ನುಡಿತ, ಶ್ರೀನಿವಾಸ ಪ್ರಭು ಅವರ ಚಂಡೆಯ ಸಾಥ್ ಪ್ರದರ್ಶನವನ್ನು ಉತ್ಕೃಷ್ಟಗೊಳಿಸಿತು. ಈ ಪ್ರದರ್ಶನ ಮಲ್ಯಾಡಿ ಲೈವ್‍ನಲ್ಲಿ ಪ್ರಸಾರಗೊಂಡು ಜಗತ್ತಿನಾದ್ಯಂತ ಯಕ್ಷಪ್ರೇಮಿಗಳು ವೀಕ್ಷಿಸುವಂತಾಯಿತು.

-ನಾ ವಂಡ್ಸೆ

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!