spot_img
Thursday, March 19, 2026
spot_img

ಸೌಕೂರು ದೇವಳದ ಮೂಲಸ್ಥಾನ ಜೀರ್ಣೋದ್ಧಾರ| ತಪೋಭೂಮಿಯಾಗಲಿದೆ ದೇವಿಯ ಜನ್ಮಭೂಮಿ

ಕುಂದಾಪುರ: ‘ಪುಷ್ಪ ಪವಾಡ’ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೂಲಸ್ಥಾನ ಅಭಿವೃದ್ಧಿಗೊಂಡಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಸಬ್ಲಾಡಿ ಎನ್.ಮಂಜಯ್ಯ ಶೆಟ್ಟಿ ಮತ್ತು ಸೌಕೂರು ಸೇರ್ವೆಗಾರರ ಮನೆತನದ ಶ್ರೀಮತಿ ವಸಂತಿ ಎಂ. ಶೆಟ್ಟಿ ಅವರು ಸುಮಾರು ರೂ.25 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಪುನರುತ್ಥಾನ ಮಾಡಿದ್ದಾರೆ.

ಅಪರೂಪದ್ದಾದ ಈ ಮೂಲಸ್ಥಾನಕ್ಕೆ ಅತ್ಯಂತ ಸುಂದರವಾದ ಗುಡಿ, ಸುತ್ತ ಆವರಣ, ಮೂಲಕ್ಷೇತ್ರಕ್ಕೆ ಹೋಗಲು ಮೆಟ್ಟಿಲು ವ್ಯವಸ್ಥೆ, ಮೂಲಸ್ಥಾನದ ಸುತ್ತ ದೈವೀವನ ನಿರ್ಮಾಣ ಹೀಗೆ ಸುಸಜ್ಜಿತವಾಗಿ ಅಭಿವೃದ್ದಿ ಮಾಡಲಾಗಿದೆ.
ಸೌಕೂರು ಶ್ರೀ ದುರ್ಗಾಪರಮೇಶ್ವರಿ ಲೋಕಮುಖಕ್ಕೆ ಕಾಣಿಸಿಕೊಂಡ ಸ್ಥಳ ಶಿಥಿಲಾವಸ್ಥೆಯಲ್ಲಿತ್ತು. ಸರಿಯಾಗಿ ಹೋಗಲು ಕೂಡಾ ವ್ಯವಸ್ಥೆ ಇದ್ದಿರಲಿಲ್ಲ. ಬಹುತೇಕ ಭಕ್ತರಿಗೆ ಸೌಕೂರಮ್ಮನ ಮೂಲಸ್ಥಳ ಎಲ್ಲಿದೆ ಎನ್ನುವುದೇ ಗೊತ್ತಿರಲಿಲ್ಲ. ಶಿಲೆಯ ನಡುವೆ ಶ್ರೀದೇವಿ ಸೌಖ್ಯಪುರದಲ್ಲಿ ಕಾಣಿಸಿಕೊಂಡ ದಿವ್ಯ ಹಾಗೂ ಪುಣ್ಯ ಸ್ಥಳವನ್ನು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ವಿಶೇಷವಾದ ಈ ಸ್ಥಳವನ್ನು ಸಂಪೂರ್ಣ ಜೀರ್ಣೋದ್ಧಾರ ಮಾಡಲಾಗಿದೆ. ಜಗನ್ಮಾತೆ ನೆಲೆನಿಂತ ಅಪರೂಪದ ತಾಣ. ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪರಮ ಪಾವನ ಸನ್ನಿಧಿ. ಪುಷ್ಪ ಪವಾಡದ ಖ್ಯಾತಿ ಹೊಂದಿರುವ ದುರ್ಗಾಪರಮೇಶ್ವರಿ ನೆಲೆನಿಂತಿರುವ ಕ್ಷೇತ್ರಕ್ಕೆ ರಾಜ್ಯದ್ಯಂತ ಭಕ್ತರು ಆಗಮಿಸುತ್ತಾರೆ. ರಥೋತ್ಸವ, ಶರನ್ನವರಾತ್ರಿ, ವರಮಹಾಲಕ್ಷ್ಮೀ ವೃತ ಮೊದಲಾದ ವಿಶೇಷಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುತ್ತಾರೆ. ನಿತ್ಯ ಅನ್ನಸಂತರ್ಪಣೆಯಂತಹ ಸೇವೆಗಳು ಕ್ಷೇತ್ರದಲ್ಲಿವೆ. ಇಂಥಹ ಪ್ರಾಚೀನ, ಪುರಾಣ ಐತಿಹ್ಯ ಉಳ್ಳ ಕ್ಷೇತ್ರಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ.

ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿಯೇ ಇರುವ ಮೂಲಸನ್ನಿಧಿ ಜೀರ್ಣೋದ್ಧಾರಗೊಂಡು ಗಮನ ಸಳೆಯುತ್ತಿದೆ. ಸುತ್ತ ಆವರಣ ಗೋಡೆಯೊಂದಿಗೆ ವಿವಿಧ ವನಸ್ಪತಿ, ಹಣ್ಣುಹಂಪಲು ಗಿಡಗಳನ್ನು ನೆಟ್ಟು ಆಕರ್ಷಣೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಇನ್ನೆರಡು ವರ್ಷಗಳಲ್ಲಿ ಇದು ತಪೋಭೂಮಿಯಾಗಿ ರೂಪುಗೊಳ್ಳಲಿದೆ. ಧ್ಯಾನ ಇತ್ಯಾದಿಯಿಂದ ಶ್ರೀದೇವಿಯನ್ನು ಪ್ರಶಾಂತವಾಗಿ ಏಕಚಿತ್ತ ಮನದಿಂದ ಅರ್ಚಿಸಿ, ಆರಾಧಿಸಲು ಅನುಕೂಲವಾಗಲಿದೆ. ಸಾವಿರಾರು ವರ್ಷಗಳ ಪೂರ್ವದಲ್ಲಿ ಇದೇ ಶಿಲೆಯ ನಡುವೆ ದೇವಿ ಅವಿರ್ಭವಿಸಿದ್ಧಾಳೆ ಎನ್ನುವ ಪ್ರತೀತಿ ಇದೆ. ಕಲ್ಲು ಬಂಡೆಗಳು, ಪ್ರಾಕೃತಿಕ ತಪೋಭೂಮಿಯಂತಹ ಪ್ರದೇಶ ಇದಾಗಿತ್ತು. ಈಗಲೂ ಕೂಡಾ ಅದೇ ಶಿಲೆಯ ಬಂಡೆಗಳು, ನೈಸರ್ಗಿಕ ಗಿಡಗಳನ್ನು ಉಳಿಸಿಕೊಂಡು, ಮತ್ತೆ ಇನ್ನಷ್ಟು ಸಸಿಗಳನ್ನು ನೆಟ್ಟು ದೈವಿಕ ಕಳೆ ನೀಡಲಾಗಿದೆ.

ಮೂಲಸ್ಥಾನಕ್ಕೆ ಸುಂದರವಾದ ಆಲಯ ನಿರ್ಮಾಣ ಮಾಡಲಾಗಿದೆ. ಶಿಲೆ ಸ್ತಂಭಗಳನ್ನು ಗತವೈಭವ ಸಾರುವ ರೀತಿಯಲ್ಲಿ ಶಿಲ್ಪಿ ಕರಚಮತ್ಕಾರ ತೋರಿದ್ದಾರೆ. ಆಲಯ ಮತ್ತು ಪ್ರದಕ್ಷಿಣ ಪಥದ ಮಾದರಿಯಲ್ಲಿ ಗುಡಿ ನಿರ್ಮಾಣಗೊಂಡಿದೆ. ಮೂಲಸ್ಥಾನಕ್ಕೆ ಸೂರ್ಯ ಪ್ರಕಾಶಕ್ಕೆ ಅನುಕೂಲವಾಗಿ ಮೇಲ್ಛಾವಣಿಯಲ್ಲಿ ವಿಶಾಲವಾದ ರಂಧ್ರ ಬಿಡಲಾಗಿದೆ. ಮೂಲಸ್ಥಾನದ ಶಿಲೆಯ ಗೋಡೆ ನಿರ್ಮಾಣ ಮಾಡಲಾಗಿದೆ. ಅರ್ಧ ಗೋಡೆಯ ರಚನೆ ಇದಾಗಿದ್ದು ಅಲ್ಲಿ ಪುರಾಣ ಕಥೆಗಳನ್ನು ಹೋಲುವ ಅಂಶಗಳನ್ನು ಇಟ್ಟುಕೊಂಡು ಶಿಲೆಯಲ್ಲಿ ಕಲೆಯನ್ನು ಅರಳಿಸಲಾಗಿದೆ. ಧ್ವಾರದಲ್ಲಿ ಆಚೆ-ಈಚೆ ಕೆತ್ತಿರುವ ಶಿಲ್ಪಕಲೆಯೂ ಗಮನ ಸೆಳೆಯುತ್ತದೆ. ದೂರದಿಂದ ಲೇ ಭಕ್ತಾದಿಗಳ ಕಣ್ಮನ ಸೆಳೆಯುವ ಸೌಕೂರು ದುರ್ಗಾಪರಮೇಶ್ವರಿ ದೇವಿಯ ಮೂಲಸ್ಥಾನದ ಗುಡಿ ದಿವ್ಯತೆಯನ್ನು ಸಾರುತ್ತಿದೆ.

ದೇವಸ್ಥಾನದಿಂದ ಮೂಲಸ್ಥಾನಕ್ಕೆ ಹೋಗುವ ದಾರಿಯನ್ನು ಮೆಟ್ಟಿಲುಗಳಾಗಿ ನಿರ್ಮಾಣ ಮಾಡಲಾಗಿದೆ. ಸುತ್ತ ಆವರಣ ನಿರ್ಮಾಣ ಮಾಡಿ ಅದರೊಳಗೆ ಬೇರೆ ಬೇರೆ ಗಿಡಗಳನ್ನು ನೆಡಲಾಗಿದೆ. ಮೂಲಸ್ಥಾನ ಪ್ರವೇಶ ಮಾಡುತ್ತಲೇ ಹೊಸದೊಂದು ಆಧ್ಯಾತ್ಮಲೋಕಕ್ಕೆ ಬಂದ ಅನುಭವವಾಗುತ್ತದೆ. ಆ ರೀತಿಯಲ್ಲಿ ಗತವೈಭವನ್ನು ಪುನರ್‌ಸ್ಥಾಪನೆ ಮಾಡಲಾಗಿದೆ. ಇನ್ನೂ ಮುಂದೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ದೇವಿಯ ಮೂಲಸ್ಥಾನ ದರ್ಶನವನ್ನೂ ಮಾಡಬಹುದಾಗಿದೆ. ಒಂದಿಷ್ಟು ಹೊತ್ತು ಪ್ರಕೃತಿ ರಮಣೀಯ ಪ್ರದೇಶದಲ್ಲಿ ಮನಸ್ಸನ್ನು ಪ್ರಪುಲ್ಲಗೊಳಿಕೊಳ್ಳಬಹುದಾಗಿದೆ. ಮೂಲಸ್ಥಾನ ಜೀರ್ಣೋದ್ಧಾರದ ಪುಣ್ಯಪ್ರದ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

               (ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!