spot_img
Monday, March 16, 2026
spot_img

ಬ್ರಹ್ಮಾವರ ಆಕಾಶವಾಣಿ ಮರುಪ್ರಸರಣ ಕೇಂದ್ರದ ನಿರುಪಯುಕ್ತ ಜಾಗ ಸದ್ಬಳಕೆಯಾಗಲಿ

-ಶ್ರೀರಾಜ್‌ ವಕ್ವಾಡಿ


ನಿರುಪಯುಕ್ತ ಜಾಗವನ್ನು ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ಆಗ್ರಹ

ಬ್ರಹ್ಮಾವರದಲ್ಲಿ 1976ರಲ್ಲಿ ಮಂಗಳೂರು ಆಕಾಶವಾಣಿಯ ಮರು ಪ್ರಸರಣ ಕೇಂದ್ರ ಸ್ಥಾಪನೆಯಾಗಿತ್ತು. ಆಕಾಶವಾಣಿ ಮರುಪ್ರಸರಣ ಕೇಂದ್ರಕ್ಕಾಗಿ ಬಿಟ್ಟುಕೊಡಲಾಗಿದ್ದ ವಾರಂಬಳ್ಳಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಸುಮಾರು  22.96 ಎಕರೆ ಜಾಗದಲ್ಲಿ ಈಗ ಸುಮಾರು 20 ಎಕರೆ ಅಷ್ಟು ಪ್ರದೇಶವೀಗ ನಿರುಪಯುಕ್ತವಾಗಿ ಸಂಪೂರ್ಣ ಗಿಡಗಂಟಿಗಳು ಬೆಳೆದುಕೊಂಡಿವೆ. ಹಾಳು ಬಿದ್ದ ಈ ಜಾಗವನ್ನು ಸರಿಪಡಿಸಿ ಬ್ರಹ್ಮಾವರದಲ್ಲಿ ಅಗತ್ಯ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಿಟ್ಟುಕೊಡಬೇಕೆಂಬ ಆಗ್ರಹ ಈಗ ಮತ್ತೆ ಕೇಳಿಬಂದಿದೆ.

ಕಳೆದ ಎರಡು ಮೂರು ವರ್ಷಗಳ ಹಿಂದೆ ಬ್ರಹ್ಮಾವರ ಫೌಂಡೆಶನ್‌ ನ ಮ್ಯಾನೇಜಿಂಗ್‌ ಟ್ರಸ್ಟಿ ಬಿ. ಗೋವಿಂದರಾಜ್‌ ಹೆಗ್ಡೆ ಅವರು, ರಾಜ್ಯ ಸರ್ಕಾರದ ಮೇಲೆ  ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಈ ಹಾಳುಬಿದ್ದ 20 ಎಕರೆಯಷ್ಟು ಜಾಗವನ್ನು ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಿಟ್ಟುಕೊಟ್ಟು ಜನರಿಗೆ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಹತ್ತಿರ ತರುವಂತೆ ಮಾಡಬೇಕೆಂದು ಆಗ್ರಹಿಸಿದ್ದರು. ಅಂದಿನ ರಾಜ್ಯ ಸರ್ಕಾರದ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಗೂ ಇಂದಿನ ವಿಧಾನ ಪರಿಷತ್‌ ನ ಸದಸ್ಯರಾಗಿರುವ ಮಂಜುನಾಥ ಭಂಡಾರಿ ಅವರು ಸರ್ಕಾರಕ್ಕೆ ಮನವಿ ಪತ್ರವನ್ನು ನೀಡಿದ್ದರು ಹೊರತಾಗಿ ಮತ್ತೇನೂ ಪ್ರಯೋಜನವಾಗಿಲ್ಲ.

ಸ್ವತಃ ಗೋವಿಂದರಾಜ್‌ ಹೆಗ್ಡೆ ಅವರೇ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಕೇಂದ್ರ ವಾರ್ತಾ ಮತ್ತು ಪ್ರಸರಣ ಸಚಿವರು, ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಸಚಿವರಿಗೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವರು, ಶಾಸಕರು, ಉಡುಪಿ ಜಿಲ್ಲಾಧಿಕಾರಿ, ಕುಂದಾಪುರ ತಾಲೂಕು ಉಪ ವಿಭಾಗಾಧಿಕಾರಿ ಸೇರಿ ಸಂಬಂಧಿಸಿದ ಎಲ್ಲಾ ಇಲಾಖೆಗೆ ಮತ್ತು ಸಚಿವರಿಗೆ, ಅಧಿಕಾರಿಗಳಿಗೆ ಈ ಸಂಬಂಧಿಸಿದಂತೆ ಮನವಿ ಪತ್ರ ನೀಡಿದ್ದಾರೆ. ಆದರೇ, ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಯರು, ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಉಡುಪಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮಾತ್ರ ಪತ್ರದ ಮೂಲಕ ಸ್ಪಂದಿಸಿದ್ದನ್ನು ಬಿಟ್ಟರೇ, ಯಾವುದೇ ಅಗತ್ಯ ಕ್ರಮ ವಹಿಸುವುದಕ್ಕೆ ಈವರೆಗೆ ಮುಂದಾಗಿಲ್ಲ ಎನ್ನುವುದು ದುರಂತ.

ಹೆಚ್ಚಿನ ಸರ್ಕಾರಿ ಕಚೇರಿಗಳಿಗೆ ಜಾಗ ಅಲಭ್ಯ :

ಬ್ರಹ್ಮಾವರ ತಾಲೂಕು ರಚನೆಯಾಗಿದ್ದು 2014ರಲ್ಲಿ, ಆದರೂ, ಹೆಚ್ಚಿನ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಜಾಗ ಲಭ್ಯವಾಗಿಲ್ಲ. ತಾಲೂಕು ಪಂಚಾಯತ್‌ ಕಚೇರಿ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ, ಸಹಾಯಕ ನಿರ್ದೇಶಕರು ಮೀನುಗಾರಿಕಾ ಇಲಾಖೆ, ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ  ಲೋಕೋಪಯೋಗಿ ಇಲಾಖೆ, ಕಾರ್ಮಿಕ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ರೇಷ್ಮೆ ಇಲಾಖೆ, ಅಬಕಾರಿ ಇಲಾಖೆ, ಅಗ್ನಿಶಾಮಕ ಇಲಾಖೆ, ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ ಸೇರಿ ಇನ್ನೂ ಕೆಲವು ಇಲಾಖೆಗಳ ಕಚೇರಿ ನಿರ್ಮಾಣಕ್ಕಾಗಿ ಸೂಕ್ತ ಜಾಗ ಲಭ್ಯವಿಲ್ಲ.

ಸರ್ಕಾರಿ ಕಚೇರಿಗಳಲ್ಲದೇ ಸುಸಜ್ಜಿತ ಬಸ್ಸು ತಂಗುದಾಣ, ಇನ್ನಿತರ ಬಾಡಿಗೆ ವಾಹನಗಳ ನಿಲ್ದಾಣ, ಸಂತೆ ಮಾರ್ಕೇಟ್‌ ಗಳ ನಿರ್ಮಾಣಕ್ಕೆ ವ್ಯವಸ್ಥಿತ ಸ್ಥಳಾವಕಾಶದ ಕೊರತೆಯಿದೆ. ಬ್ರಹ್ಮಾವರದ ಕೇಂದ್ರ ಭಾಗದಲ್ಲೇ ಇರುವ ಆಕಾಶವಾಣಿ ಮರುಪ್ರಸರಣ ಕೇಂದ್ರದಲ್ಲಿ ಸದ್ಯ ಸುಮಾರು 21.72 ಎಕರೆ ನಿರುಪಯುಕ್ತ ಜಾಗವಿದೆ. ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಬೇಕಿರುವುದು ಅನಿವಾರ್ಯವಿದೆ.

ರಸ್ತೆ ಅಗಲೀಕರಣಕ್ಕೆ ಜಾಗ ಸ್ವಾದೀನ :

ಆಕಾಶವಾಣಿ ಬ್ರಹ್ಮಾವರದ 22.96 ಎಕರೆ ಪ್ರದೇಶದಲ್ಲಿ, ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಅಗಲೀಕರಣಕ್ಕಾಗಿ ಜಾಗ ಸ್ವಾದೀನಪಡಿಸಿಕೊಂಡಿದ್ದರು. ಒಟ್ಟು ಜಮೀನಿನಲ್ಲಿ ರಸ್ತೆಗೆ ವಿಂಗಡಿಸಿದ 0.32 ಎಕರೆ ಜಮೀನು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸ್ವಾಧೀನಪಡಿಸಿಕೊಂಡ 0.61.75 ಎಕರೆ ಜಮೀನು ಹೊರತು ಪಡಿಸಿದರೇ, 21.72 ಎಕರೆ ಜಮೀನು ಈಗ ಆಕಾಶವಾಣಿ ಸ್ವಾಧೀನದಲ್ಲಿದೆ. ಈ ಅನುಪಯುಕ್ತ ಜಮೀನನ್ನು ಬ್ರಹ್ಮಾವರ ತಾಲೂಕು ಕೇಂದ್ರದ ಅಗತ್ಯ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂಬ ಅಭಿಪ್ರಾಯವಿದೆ.

ಸಾರ್ವಜನಿಕ ಉದ್ದೇಶಕ್ಕೆ ಜಮೀನು ಬಳಕೆ :

ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ಕ್ಯಾತಮಾರನಹಳ್ಳಿಯ 100 ಎಕರೆ ಜಮೀನು ಮೈಸೂರಿನಲ್ಲಿರುವ ಭಾರತ ಸರ್ಕಾರದ ಪಠ್ಯ ಪುಸ್ತಕ ಮುದ್ರಣಾಲಯಕ್ಕೆ ಮಂಜೂರಾಗಿತ್ತು. ಈ ಪೈಕಿ 15 ಎಕರೆ ಹೆಚ್ಚುವರಿ ಜಮೀನನ್ನು ಮೈಸೂರು ಜಿಲ್ಲೆಯ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಆದೇಶದ ಅನ್ವಯ ಜಿಲ್ಲಾಧಿಕಾರಿಯವರ ವಶಕ್ಕೆ ನೀಡಿ ಜಿಲ್ಲಾಧಿಕಾರಿಯವರ ಕಚೇರಿಯನ್ನು ನಿರ್ಮಿಸಲಾಗಿರುವ ಉದಾಹರಣೆ ಇದೆ.

ಬ್ರಹ್ಮಾವರ ಆಕಾಶವಾಣಿಗೆ ಮಂಜೂರಾದ ಸ್ಥಳದ ಪೈಕಿ ನಿರುಪಯುಕ್ತವಾಗಿ ಬಿದ್ದಿರುವ ಈ ಜಾಗ ಮಂಜೂರಾತಿಯಾಗಿ 55 ವರ್ಷಗಳು ಕಳೆದಿವೆ. ಬ್ರಹ್ಮಾವರದಲ್ಲಿ ವಿಶೇಷ ತಹಶೀಲ್ದಾರರ ಕಚೇರಿ ತೆರೆದಿರುವುದು 2003ರಲ್ಲಿ. ತಾಲೂಕು ರಚನೆಗೆ ಇದು ಅಂದು ಮುನ್ಸೂಚನೆಯಾಗಿತ್ತು. ತಾಲೂಕು ರಚನೆಯಾಗಿ ಈಗಾಗಲೇ ದಶಕ ಕಳೆದಿದೆ. ಎರಡರಿಂದ ಮೂರು ಎಕರೆ ಜಾಗ ಆಕಾಶವಾಣಿಗೆ ಬಿಟ್ಟು ಕಂದಾಯ ಇಲಾಖೆ ಸುಪರ್ದಿಗೆ ಪಡೆದರೆ ಬ್ರಹ್ಮಾವರ ತಾಲೂಕಿನ ಅಬಿವೃದ್ಧಿಗೆ ಪೂರಕವಾಗಲಿದೆ.

2015ರಲ್ಲೇ ಬಿದ್ದುಹೋದ ಆಂಟೇನಾ :  

ಬ್ರಹ್ಮಾವರ ಆಕಾಶವಾಣಿಯ ಮರುಪ್ರಸರಣ ಕೇಂದ್ರದ ಪ್ರಸರಣ ಸಾಮರ್ಥ್ಯ 20ಕೆಡಬ್ಲ್ಯೂ ಆಗಿದ್ದು 28.04.2015ರಲ್ಲೇ 108ಎಮ್.ಟಿ ಸಾಮರ್ಥ್ಯದ ಎರಡು ಆಂಟೇನಾ ಬಿದ್ದು ಹೋಗಿವೆ. ಈಗ ಪ್ರಸರಣ ಸಾಮರ್ಥ್ಯ 4ಕೆಡಬ್ಲ್ಯೂ ಗೆ ಇಳಿಕೆಯಾಗಿರುತ್ತದೆ. ಇದರಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಹತ್ತು ವರ್ಷಗಳ ಹಿಂದೆಯೇ ಬಿದ್ದು ಹೋದ ಆಂಟೆನಾಗಳನ್ನು ರಿಪೇರಿ ಮಾಡುವುದು ಕೂಡ ಅಸಾಧ್ಯ ಎಂದು ಹೇಳಲಾಗುತ್ತಿದೆ. ಆದ್ದರಿಂದ ಮಂಗಳೂರಿನಲ್ಲಿ ಇರುವಂತೆ ಬ್ರಹ್ಮಾವರದಲ್ಲಿ 1.72 ಎಕರೆ ಜಾಗದಲ್ಲಿ ಎಫ್.ಎಂ ಪ್ರಾರಂಭಿಸಿ ಉಳಿದ 20 ಎಕರೆ ಜಾಗವನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಟ್ಟು, ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿರುವ 52 ಗ್ರಾಮಗಳು ಹಾಗೂ 27 ಗ್ರಾಮ ಪಂಚಾಯತ್‌ ಗಳ ಜನರಿಗೆ ಸರ್ಕಾರಿ ಕಚೇರಿಗಳನ್ನು ಹತ್ತಿರದಲ್ಲೇ ಲಭ್ಯವಾಗುವಂತೆ ಮಾಡುವುದು ಸೂಕ್ತ.

ಸದ್ಯ ಸ್ಥಳ ಲಭ್ಯವಿರದೇ ಇರುವ ಸರ್ಕಾರಿ ಕಚೇರಿಗಳನ್ನು ಮತ್ತು ಇನ್ನಿತರ ಅವಶ್ಯಕ ವ್ಯವಸ್ಥೆಗಳನ್ನು ಬ್ರಹ್ಮಾವರದ ಕೇಂದ್ರ ಭಾಗದಲ್ಲಿ ಒಂದೇ ಕಡೆ ರಚಿಸಿದರೇ ಬ್ರಹ್ಮಾವರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವುದಲ್ಲದೇ, ತಾಲೂಕಿನ 52 ಗ್ರಾಮಗಳ ಸಾರ್ವಜನಿಕರಿಗೆ ಇದರಿಂದ ತುಂಬಾ ಪ್ರಯೋಜನವಾಗಲಿದೆ.

ಬ್ರಹ್ಮಾವರ ಆಕಾಶವಾಣಿ ಮರುಪ್ರಸರಣ ಕೇಂದ್ರದಲ್ಲಿರುವ ಹೆಚ್ಚುವರಿ ಜಾಗವನ್ನು ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಳಸಿಕೊಳ್ಳುವುದಕ್ಕೆ ಬೇಕಾಗಿ ಸ್ವಾದೀನ ಪಡಿಸಿಕೊಳ್ಳುವ ಪ್ರಕ್ರಿಯೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಆಗಬೇಕಿದೆ. ಅಲ್ಲಿರುವ ಜಾಗವನ್ನು ಸ್ವಾದೀನ ಪಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಇನ್ನಷ್ಟು ತಿಳಿದುಕೊಂಡು ಮುಂದಿನ ಕ್ರಮ ವಹಿಸುವೆ.
-ಡಾ. ಕೆ. ವಿದ್ಯಾಕುಮಾರಿ
ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ.           

ಈ ಸಂಬಂಧಿಸಿದಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇನೆ. ಸಂಬಂಧಪಟ್ಟವರು ಯಾರೂ ಇಲ್ಲಿಯವರೆಗೆ ಕ್ರಮ ತೆಗೆದುಕೊಂಡಿಲ್ಲ. ಸೂಕ್ತ ಸಮಯದಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳುತ್ತೇನೆ.
-ಬಿ. ಗೋವಿಂದರಾಜ್‌ ಹೆಗ್ಡೆ
ಮ್ಯಾನೇಜಿಂಗ್‌ ಟ್ರಸ್ಟಿ, ಬ್ರಹ್ಮಾವರ ಫೌಂಡೇಶನ್‌.
 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!