spot_img
Tuesday, March 17, 2026
spot_img

ಮೆಟ್ಟುವ ರಾಜಕಾರಣ ಮತ್ತು ಹನಿಟ್ರ್ಯಾಪ್‌

ತನ್ನ ಘನತೆಯನ್ನು ತಾನೇ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ !

 ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಂತರಿಕ ವೈಮನಸ್ಸಿಗೆ ಹನಿಟ್ರ್ಯಾಪ್‌ ವಿವಾದ ಪುಷ್ಠಿ ನೀಡಿದಂತೆ ಕಾಣಿಸುತ್ತಿದೆ. ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್‌ ತಾನಾಗಿಯೇ ತನ್ನ ಸರ್ಕಾರದ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂದನ್ನಿಸುತ್ತಿದೆ. ಕಾಂಗ್ರೆಸ್‌ ಒಳಗಿನ ಆಂತರಿಕ ಶೀತಲ ಸಮರಕ್ಕೆ ಹನಿಟ್ರ್ಯಾಪ್ ವಿವಾದ ಈಗ ಹೊಸ ತಿರುವು ನೀಡಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರದ ಚಿತ್ರ ಬದಲಾವಣೆಗೆ ನಾಂದಿ ಸಿಕ್ಕಂತಾಗಿದೆ.

ರಾಜಕೀಯ ಜೀವನದಲ್ಲಿ ಸಜ್ಜನರಾಗಿದ್ದರೇ, ಹನಿಟ್ರ್ಯಾಪ್‌ ಅಂತಹ ಪ್ರಕರಣದಲ್ಲಿ ಸಿಲುಕಿ ಹಾಕಿಕೊಳ್ಳುವುದಕ್ಕೆ ಸಾಧ್ಯವಿದೆಯೇ ? ಸಹಕಾರ ಸಚಿವ ಕೆ.ಎನ್. ರಾಜಣ್ಣ, ತಮ್ಮ ವಿರುದ್ದ ಹನಿಟ್ರ್ಯಾಪ್‌ ಪ್ರಯತ್ನ ನಡೆದಿದೆ ಎಂದು ಹೇಳಿದ್ದಲ್ಲದೇ, ಅದು ಸ್ವಪಕ್ಷೀಯರಿಂದಲೇ ನಡೆದಿದೆ ಎನ್ನುವುದನ್ನು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ ಅತ್ತ ಬೊಟ್ಟು ಮಾಡಿ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ವಿವಾದಕ್ಕೆ ಕಾರಣವಾಯಿತು. ಡಿ.ಕೆ. ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ನೇರವಾಗಿ ರಾಜಣ್ಣ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಬಣದಲ್ಲಿ ಸೀನಿಯರ್‌ ಮೋಸ್ಟ್‌ ನಾಯಕರಾಗಿ ಗುರುತಿಸಿಕೊಂಡಿರುವ ರಾಜಣ್ಣ ಅವರಿಗೆ ಡಿಕೆಶಿ ಅವರನ್ನು ಕಂಡರೇ ಅಷ್ಟಕ್ಕಷ್ಟೇ. ಡಿಕೆಶಿ ಅವರಿಗೂ ಸಿಎಂ ಸಿದ್ದರಾಮಯ್ಯ ಬಣದಲ್ಲಿರುವವರನ್ನು ಕಂಡರೇ ಆಗುವುದೇ ಇಲ್ಲ. ತಾನು ಬೆಳೆಯುವುದಕ್ಕೆ ಇನ್ನೊಬ್ಬನನ್ನು ಮೆಟ್ಟುವುದೇ  ರಾಜಕಾರಣ. ಇಲ್ಲಿ ಎಲ್ಲರೂ ಒಬ್ಬೊಬ್ಬರನ್ನು ಮೆಟ್ಟಿಯೇ ಈ ಹಂತಕ್ಕೆ ಬಂದವರೇ ಆಗಿದ್ದಾರೆ. ಪ್ರತ್ಯಕ್ಷವಾಗಿ ಅಲ್ಲದೇ ಇದ್ದರೂ, ಪರೋಕ್ಷವಾಗಿ ಸ್ವಪ್ರತಿಷ್ಠೆ ಬೆಳೆಸಿಕೊಳ್ಳುವುದಕ್ಕಾಗಿ ʼಮೆಟ್ಟುವ ರಾಜಕಾರಣʼವನ್ನು ಎಲ್ಲರೂ ಮಾಡಿದವರೇ ಆಗಿದ್ದಾರೆ. ಹುದ್ದೆಯಿಂದ ಕೆಳಗಿಳಿಸುವುದು, ಹನಿಟ್ರ್ಯಾಪ್‌ ಇವೆಲ್ಲಾ ಈ ʼಮೆಟ್ಟುವ ರಾಜಕಾರಣʼದ ಒಂದು ಭಾಗವಷ್ಟೇ.

ರಾಜಕಾರಣಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆ ಅತ್ಯಂತ ವಿರಳ. ಈಗಿನ ರಾಜಕಾರಣಿಗಳಲ್ಲಿ  ಸನ್ನಡತೆ ಹುಡುಕುವುದು ಹಾಸ್ಯಾಸ್ಪದ. ಕೆಲವು ರಾಜಕಾರಣಿಗಳು ಸಹಾಯ ಕೇಳಲು ಬಂದ ಅಮಾಯಕ ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವುದು ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಿಳೆಯಿಂದ ದೂರು ದಾಖಲಾದಾಗ ಅಥವಾ ವೀಡಿಯೋ ಅಥವಾ ಫೋಟೋಗಳು ಬಿಡುಗಡೆಯಾದಾಗ ʼಹನಿಟ್ರ್ಯಾಪ್‌ʼ ಎಂದು ಹೇಳುವ ಛಾಳಿ ಇತ್ತೀಚೆಗೆ ಅಂತೂ ತೀರಾ ಸಾಮಾನ್ಯವಾಗಿದೆ. ಪಕ್ಷಾಂತರ ಆಗುವ ಸಂದರ್ಭದಲ್ಲಿ, ಚುನಾವಣೆಯ ಸಂದರ್ಭದಲ್ಲಿ ಶಾಸಕರು, ಸಂಸದರನ್ನು ರಾಜಕೀಯವಾಗಿ ಮುಗಿಸುವುದಕ್ಕೆ ಈ ʼಹನಿಟ್ರ್ಯಾಪ್‌ʼ ತಂತ್ರಗಾರಿಕೆಯನ್ನು ಬಳಸುವುದು ಅತ್ಯಂತ ಸಾಮಾನ್ಯವಾಗಿ ಬಿಟ್ಟಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಎನ್ನಲಾಗಿದ್ದ ಪೆನ್‌ ಡ್ರೈವ್ ಹಾಸನದ ಬೀದಿ ಬೀದಿಗಳಲ್ಲಿ ಸಿಕ್ಕಿತ್ತು. ಪ್ರಕರಣ ದೇಶ ಮಟ್ಟದಲ್ಲಿ ಸುದ್ದಿಯಾಗಿತ್ತು. ಜೆಡಿಎಸ್‌ ನಾಯಕರು, ಈ ಸಂಬಂಧಿಸಿದಂತೆ ಕಾಂಗ್ರೆಸ್‌ ನ ಪ್ರಭಾವಿ ನಾಯಕರೋರ್ವರ ಮೇಲೆ ಗಂಭೀರ ಆರೋಪ ಮಾಡಿದ್ದರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಮೇಲಿನ ಅತ್ಯಾಚಾರ ಪ್ರಕರಣ ಡಿ.ಕೆ. ಶಿವಕುಮಾರ್‌ ಸಹೋದರನ ಷಡ್ಯಂತರ ಎಂದು ನೇರವಾಗಿಯೇ ಆರೋಪಿಸುತ್ತಲೇ ಇದ್ದಾರೆ. ಈಗ ಮೊನ್ನೆ ಸದನದಲ್ಲಿ ಡಿಕೆಶಿ ಅವರ ಮೇಲೆ ಆರೋಪ ಮಾಡುವುದಕ್ಕೆ ಈ ಸಂದರ್ಭವನ್ನು ಮುನಿರತ್ನ ಬಳಸಿಕೊಂಡರು. ರಮೇಶ್‌ ಜಾರಕಿಹೊಳಿ ಅವರ ಅಶ್ಲೀಲ ವೀಡಿಯೋ ಹೊರಬಂದಾಗಲೂ ಡಿ.ಕೆ. ಶಿವಕುಮಾರ್‌ ಅವರ ಮೇಲೆ ಆರೋಪ ಕೇಳಿ ಬಂದಿತ್ತು. 2019ರಲ್ಲಿ ಆಪರೇಷನ್‌ ಕಮಲ ನಡೆದಾಗ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರನ್ನು ರೆಸಾರ್ಟ್‌ ನಲ್ಲಿ ಕೂಡಿ ಹಾಕಿ ಅವರ ಅಶ್ಲೀಲ ವೀಡಿಯೋ ಮಾಡಿ ಬೆದರಿಕೆ ಹಾಕಲಾಗಿತ್ತು ಎನ್ನುವ ಸುದ್ದಿಯೂ ಅಂದು ಕೇಳಿ ಬಂದಿತ್ತು. ಅದೇ ಸಂದರ್ಭದಲ್ಲಿ ಬಿಜೆಪಿಯ ಏಳು ಮಂದಿ ಶಾಸಕರು ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿಗಳು ಪ್ರಕಟವಾದಾಗ, ಕೋರ್ಟ್‌ನಿಂದ ತಮ್ಮ ಹೆಸರು ಎಲ್ಲಿಯೂ ಉಲ್ಲೇಖವಾಗದಂತೆ ʼಸ್ಟೇʼ ಆರ್ಡರ್‌ ತಂದಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಈ ʼಹನಿಟ್ರ್ಯಾಪ್‌ʼ ಬಳಕೆ ಆಗಿರುವುದು ರಾಜಕಾರಣದಲ್ಲಿ ಅನೇಕ ಬಾರಿ ಕಾಣಬಹುದಾಗಿದೆ.

ಈಗ ಈ ಪ್ರಕರಣ ಕಾಂಗ್ರೆಸ್‌ ಪಕ್ಷಕ್ಕೇ ತಿರುಗೇಟಾಗಿದೆ. ಸದನದಲ್ಲಿ ಹನಿಟ್ರ್ಯಾಪ್‌ ಬಗ್ಗೆ ಪ್ರಸ್ತಾಪಿಸಿದ್ದು ಸಚಿವ ರಾಜಣ್ಣ. ಇದೇ ರಾಜಕೀಯ ಪ್ರಸಂಗವನ್ನು ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರ ಪೈಕಿ 18 ಮಂದಿಯನ್ನು ಆರು ತಿಂಗಳವರೆಗೆ ಸದನದ ಕಲಾಪದಿಂದ ಅಮಾನತು ಮಾಡಲಾಯಿತು.

ಇನ್ನು, ರಾಜಣ್ಣ ಅವರೇ ಹೇಳುವ ಹಾಗೆ, ಅವರ ವಿರುದ್ಧ ಒಂದೂವರೆ ತಿಂಗಳ ಹಿಂದೆ ಹನಿಟ್ರ್ಯಾಪ್‌ ಪ್ರಯತ್ನ ನಡೆದಿತ್ತಾದರೇ, ಈವರೆಗೆ ಅವರು ಮೌನವಾಗಿದ್ದು ಯಾಕೆ ? ಇದ್ದಕ್ಕಿದ್ದಂತೆ ಪ್ರತಿಕ್ರಿಯೆ ನೀಡಿದ್ದು ಯಾಕೆ? ತನ್ನನ್ನು ಹನಿಟ್ರ್ಯಾಪ್ ಮಾಡಲು ಬಂದು ವಿಫಲರಾದ ಮತ್ತು ಹಿನ್ನಲೆಯಲ್ಲಿ ನಿಂತ ವ್ಯಕ್ತಿಗಳ ವಿರುದ್ಧ ತತ್ ಕ್ಷಣವೇ ಪೊಲೀಸರಿಗೆ ಏಕೆ ದೂರು ನೀಡಲಿಲ್ಲ.? ಸಚಿವರಾಗಿ ಅವರು ಅಷ್ಟೊಂದು ಅಮಾಯಕರೆ? ಅಥವಾ ಅವರು ತಾಳ್ಮೆಯಿಂದ ಕಾದು ಈಗ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆಯೆ ? ಎಂಬುದು ಸದ್ಯದ ಪ್ರಶ್ನೆ.

ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಈವರೆಗೆ ನಡೆದಿರುವ ಇಂತಹ ಘಟನೆಗಳನ್ನು ಪ್ರಸ್ತಾಪಿಸಿ ನಮ್ಮ ಪಕ್ಷದವರ ಕೈವಾಡವೂ ಇರಬಹುದು ಎಂಬ ಸಂಶಯ ಹೊರ ಹಾಕಿದರು. ಸದನದಲ್ಲಿ ಈ ವಿಚಾರವನ್ನು ಮೊದಲು ಪ್ರಸ್ತಾಪಿಸಿದವರು ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್. ಯತ್ನಾಳ್‌ ಅವರು ಈ ವಿಚಾರ ಪಸ್ತಾಪ ಮಾಡುವುದಕ್ಕೂ ಮುನ್ನಾ ಕಾಂಗ್ರೆಸ್‌ ನಿಂದಲೇ ಈ ವಿಚಾರ ಪ್ರಸ್ತಾಪ ಮಾಡಿ ಎಂಬಂತೆ ಚೀಟಿಯೊಂದು ಬಂದಿತ್ತಂತೆ. ಹಾಗಾದರೇ, ಆ ಚೀಟಿ ಸೃಷ್ಟಿ ಮಾಡಿದವರು ಯಾರು? ರಾಜಣ್ಣ ಅವರೇ ಇದರ ಹಿಂದಿನ ʼಕೈʼ ಇರಬಹುದೇ ಎನ್ನುವ ಸಂಶಯ ರಾಜಕೀಯ ವಲಯದಲ್ಲಿ ಕೇಳಲಾರಂಭಿಸಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ತನ್ನ ಮರ್ಯಾದೆಯನ್ನು ತಾನೇ ಕಳೆದುಕೊಳ್ಳುತ್ತಿದೆ ಎನ್ನುವುದಂತೂ ಸತ್ಯ.

ರಾಜ್ಯ ಕಾಂಗ್ರೆಸ್‌ ನಲ್ಲಿ ಡಿ.ಕೆ ಶಿವಕುಮಾರ್‌ ಅವರನ್ನು ನೇರವಾಗಿ ಕಾಂಗ್ರೆಸ್‌ ನಾಯಕರೇ ಗುರಿಯಾಗಿಸಿಕೊಂಡಿರುವುದು ನೇರವಾಗಿ ಕಾಣಿಸುತ್ತಿದೆ. ಕೆಲವು ತಿಂಗಳಿಂದ ಡಿಸಿಎಂ ಡಿ. ಕೆ ಶಿವಕುಮಾರ್‌ ವಿರುದ್ಧ ಬಹಿರಂಗವಾಗಿ ಎಲುಬಿಲ್ಲದ ನಾಲಿಗೆಯಲ್ಲಿ ಹೇಳಿಕೆ ನೀಡಿರುವುದು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೂ ಮತ್ತು ಸರ್ಕಾರಕ್ಕೂ ಮುಜುಗರ ಉಂಟು ಮಾಡಿತ್ತು. ರಾಜಕಾರಣ ಅಂದ ಮೇಲೆ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಅಡ್ಡವಾಗಿದ್ದ ನಾಯಕರುಗಳನ್ನು ನಿಧಾನವಾಗಿ ತಮ್ಮ ದಾರಿಯಿಂದ ದೂರ ಸರಿಸುವಲ್ಲಿ ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುವುದು ಸರಿ. ಅದನ್ನೇ ರಾಜಕೀಯ ಎಂದು ಕರೆಯುವುದು. ಆದರೇ, ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ಇರಬೇಕಾದದ್ದು ಸತ್ಯ.

ಇನ್ನು, ಇಂತಹ ವಿಷಯಗಳಲ್ಲಿ ಡಿಸಿಎಂ ಡಿಕೆಶಿ ಅವರ ಮೇಲೆ ನಿರಂತರವಾಗಿ ಆರೋಪ ಕೇಳಿ ಬರುತ್ತಿದೆ. ಡಿಕೆಶಿ ರಾಜ್ಯ ರಾಜಕಾರಣದಲ್ಲಿ ಒಬ್ಬ ಪ್ರಭಾವಿ ನಾಯಕ. ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಬಹುಶಃ ಪಕ್ಷದಲ್ಲಿ, ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯೊಂದನ್ನು ಬಿಟ್ಟು, ಎಲ್ಲಾ ಹಂತದ ರಾಜಕೀಯದ ಅನುಭವವನ್ನು ಕಂಡವರು. ಹೀಗಿರುವಾಗ ಈ ರೀತಿಯ ಕೆಳಮಟ್ಟದ ರಾಜಕೀಯಕ್ಕೆ ಅವರು ಇಳಿಯುತ್ತಾರೆಯೇ ಎನ್ನುವ ಪ್ರಶ್ನೆಯೂ ನಮ್ಮ ಮುಂದಿದೆ. ರಾಜಕಾರಣಕ್ಕಾಗಿ ಏನು ಬೇಕಾದರೂ ಮಾಡಬಹುದು ಎನ್ನುವ ಮಾತನ್ನು ಖಂಡಿತ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಬಹುಶಃ ಆ ಮಾತಿಗೆ ಡಿಕೆಶಿ ಅವರೇನೂ ಹೊರತಾಗಿಲ್ಲ.

ಹನಿಟ್ರ್ಯಾಪ್ ಯತ್ನದ ಪ್ರಕರಣವಷ್ಟೇ ಅಲ್ಲ ಇದುವರೆಗೆ ನಡೆದಿರುವ ಎಲ್ಲ ಇಂತಹ ಪ್ರಕರಣಗಳ ಹಿಂದಿನ ಕಾಣದ ಕೈಗಳು ಬಯಲಾಗಬೇಕು ಅದಕ್ಕಾಗಿ ಆ ಎಲ್ಲದರ ಬಗ್ಗೆಯೂ ಸೂಕ್ತ ತನಿಖೆ ನಡೆಯಬೇಕು ಎಂಬ ಸಚಿವ ರಾಜಣ್ಣ ಅವರ ಆಗ್ರಹದಲ್ಲಿ ನ್ಯಾಯವಿದೆ. ಆದರೇ, ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ? ತನಿಖೆಯಾಗಲಿ, ಕಾದು ನೋಡೋಣ. ಒಟ್ಟಿನಲ್ಲಿ ಈ ಹನಿಟ್ರ್ಯಾಪ್‌ ಅಂತಹ ವಿಕೃತಿಗಳೊಂದಿಗೆ ರಾಜ್ಯ ರಾಜಕಾರಣದ ಹಿರಿಮೆಗೆ ಕಪ್ಪು ಚುಕ್ಕಿ ಅಂಟುತ್ತಿರುವುದಂತೂ ಸತ್ಯ.

ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!