spot_img
Monday, March 16, 2026
spot_img

ʼಸಿದ್ಧ ಸೂತ್ರʼಕ್ಕೆ ಡಿಕೆಶಿ ಒಪ್ಪುತ್ತಾರೆಯೇ !?

ಸಿದ್ದರಾಮಯ್ಯ ಮತ್ತು ಡಿಕೆಶಿ ಬೇಡಿಕೆಗಳಿಗೆ ಹೈಕಮಾಂಡ್‌ ಹೈರಾಣ

“ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ತೀರ್ಮಾನ ಆಗಿರುವ ವಿಷಯ. ಮೊದಲು ಡಿಕೆ ಶಿವಕುಮಾರ್ ಗೆ ಎಂಎಲ್‌ಎ ಟಿಕೆಟ್ ಕೊಡಿಸಿದ್ದು ನಾನೇ. ಈಗ ಅವರು ಪಕ್ಷದಲ್ಲಿ ಯಶಸ್ವಿ ನಾಯಕರಾಗಿ ಬೆಳೆದಿರುವುದು ಖುಷಿಯ ಸಂಗತಿ” ಎಂದು ಇತ್ತೀಚೆಗೆ ಉಡುಪಿಯ ಕಾರ್ಕಳದಲ್ಲಿ ನಡೆದಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಹೇಳಿದ್ದರು. ಇದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ವೀರಪ್ಪ ಮೋಯ್ಲಿ ಡಿ.ಕೆ ಶಿವಕುಮಾರ್ ಅವರ ಪರ ವಹಿಸಿ ಮಾತನಾಡುವುದಕ್ಕೆ ಕಾರಣ ಏನೆಂಬ ಪ್ರಶ್ನೆ ಈಗ ಕಾಂಗ್ರೆಸ್‌ ಪಾಳಯದಲ್ಲೇ ಮೇಲೆದ್ದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ವೀರಪ್ಪ ಮೋಯ್ಲಿ ಅವರಿಗೆ ಟಿಕೇಟ್‌ ತಪ್ಪಿಸಿದ್ದೇ ಸಿಎಂ ಸಿದ್ದರಾಮಯ್ಯರಂತೆ. ಅದೇ ಅಸಮದಾನದಿಂದ ಮೊಯ್ಲಿ ಡಿಕೆಶಿ ಪರ ವಹಿಸಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ತನ್ನನ್ನು ತಾನು ಸಮರ್ಥಿಸಿಕೊಂಡ ಮೊಯ್ಲಿ, “ಲೋಕಸಭಾ ಟಿಕೆಟ್ ಕೊಡುವುದು ಕೇಂದ್ರ ಚುನಾವಣೆ ಸಮಿತಿ. ನನಗೆ ಟಿಕೆಟ್ ಕೊಡಿ ಎಂದು ಸಿದ್ದರಾಮಯ್ಯ ಮುಂದೆ ಕೈ ಚಾಚಿದವನು ನಾನಲ್ಲ. ಸಿದ್ದರಾಮಯ್ಯ ನನಗೆ ಟೂ ಜೂನಿಯರ್, ನಾನು ಸಚಿವನಾಗಿದ್ದಾಗ ಸಿದ್ದರಾಮಯ್ಯ ಏನೇನೂ ಅಲ್ಲ” ಎಂದು ಹೇಳಿರುವುದು ಕೂಡ ಮೊಯ್ಲಿಗೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಅಸಮಾಧಾನ ಇದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ.

ರಾಜ್ಯ ಕಾಂಗ್ರೆಸ್‌ ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ವಿಚಾರ ಗದ್ದಲ ಸೃಷ್ಟಿ ಮಾಡಿದೆ. ಈಗ ಮೊಯ್ಲಿ ನೀಡಿರುವ ಹೇಳಿಕೆ ಮತ್ತಷ್ಟು ಅದಕ್ಕೆ ಪುಷ್ಟಿ ನೀಡಿದೆ. ಬರುವ ʼಮೇʼ ತಿಂಗಳ ಬಳಿಕ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಬಹುದು ಎಂಬ ವಿಚಾರ ಈಗ ಬಹುತೇಕ ನಿಶ್ಚಿತ ಎಂಬ ವಾತಾವರಣ ಕಾಣಿಸುತ್ತಿದೆ.

ಹೈಕಮಾಂಡ್ ಮಟ್ಟದಲ್ಲಿ ಆಗಿರುವ ಒಪ್ಪಂದದಂತೆ ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕೆಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ವರಿಷ್ಠರ ಬಳಿ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೇ, ಈ ಒಪ್ಪಂದ ಏನು ಎನ್ನುವುದೇ ಈಗ ದೊಡ್ಡ ಪ್ರಶ್ನೆ. ಸಿಎಂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸದರೇ, ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಜವಾಬ್ದಾರಿ ಏನು ? ಕೆಪಿಸಿಸಿ ಅಧ್ಯಕ್ಷ ಸ್ಥಾನವೋ ಅಥವಾ ರಾಷ್ಟ್ರ ರಾಜಕಾರಣವೋ ? ಅಥವಾ ಈ ಅಧಿಕಾರ ಹಂಚಿಕೆ ಅಥವಾ ಅಧಿಕಾರ ಬದಲಾವಣೆ ಒಪ್ಪಂದ ನಡೆದಿರುವುದು ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ ಡಿಕೆಶಿ ಅವರಲ್ಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು, ಡಿಕೆಶಿ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವುದೆಂದಾಗಿತ್ತಾ? ಎಂಬ ಊಹೆಗೂ ಮೀರಿದ ಪ್ರಶ್ನೆಯೊಂದು ಈಗ ಮೇಲೇಳುತ್ತಿದೆ. ಅಲ್ಲದೆ ಹೋದರೇ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಯಾವ ಹುದ್ದೆಯಲ್ಲಿ ಕುಳ್ಳಿರಿಸಲಾಗುತ್ತದೆ ? ಇಡೀ ಸಚಿವ ಸಂಪುಟವೇ ಬದಲಾವಣೆಯಾಗುವುದಾದರೂ ಸಿದ್ದರಾಮಯ್ಯ ಅವರಿಗೆ ಪ್ರಮುಖ ಖಾತೆಯೊಂದನ್ನೇ ನೀಡಬೇಕಾಗುತ್ತದೆ. ಮುಲಾಜಿಲ್ಲದೇ, ಸಿದ್ದರಾಮಯ್ಯ ಅವರನ್ನು ಮನೆಗೆ ಹೋಗಿ ಅಂತ ಕಳುಹಿಸಿದರೇ, ಖಂಡಿತ ರಾಜ್ಯದಲ್ಲಿ ಕಾಂಗ್ರೆಸ್‌ ದೀರ್ಘ ಕಾಲದ ಪರಿಣಾಮ ಎದುರಿಸಬೇಕಾಗುತ್ತದೆ.

ರಾಜ್ಯ ಕಾಂಗ್ರೆಸ್‌ ನಲ್ಲಿ ಉಂಟಾಗಿರುವ ಈ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗಲೂ ಆಳ ಅಗಲ ನೋಡಿಯೇ ಮುನ್ನಡೆಯಬೇಕಾಗುತ್ತದೆ. ಈ ನಡುವೆ ಕಾಂಗ್ರೆಸ್‌ ಹೈಕಮಾಂಡ್‌ ಇಕ್ಕಟ್ಟಿಗೆ ಸಿಲುಕಿದ್ದಂತೂ ಸತ್ಯ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷ ದಿನೇ ದಿನೇ ಕುಸಿಯುತ್ತಿದೆ. ಸಿದ್ದರಾಮಯ್ಯ ಅವರು ರಾಜಕೀಯ ಜೀವನದ ಕೊನೆಯ ಕಾಲಘಟ್ಟದಲ್ಲಿದ್ದಾರೆ. ಆದರೇ, ಅವರನ್ನು ಬೆಂಬಲಿಸಿದ ನಾಯಕರ ಭವಿಷ್ಯ ಏನೆನ್ನುವುದು ಪ್ರಶ್ನೆ. ಡಿಕೆಶಿ ಮುಖ್ಯಮಂತ್ರಿಯಾದಲ್ಲಿ ಅವರ ಅಡಿಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸಮಧಾನದಿಂದ ಕೆಲಸ ಮಾಡುವರೇ? ಅಥವಾ  ಡಿಕೆಶಿ ಸಿಎಂ ಆದಲ್ಲಿ, ಸಿದ್ದರಾಮಯ್ಯ ಬೆಂಬಲಿಗರಿಗೆ ಸಚಿವ ಸಂಪುಟದಲ್ಲಿ ಸರಿಯಾದ ಸ್ಥಾನಮಾನ ನೀಡುವರೇ ? ಸೃಷ್ಟಿಯಾದ ಈ ಗೊಂದಲದಲ್ಲಿ ರಾಜ್ಯ ಕಾಂಗ್ರೆಸ್‌ನ ಭವಿಷ್ಯದ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಇನ್ನು, ಡಿಸಿಎಂ ಡಿಕೆಶಿ ಅವರು ಪಾಲಿಸುತ್ತಿರುವ ಹಿಂದೂ ಧರ್ಮದ ಆಚರಣೆಗಳ ಬಗ್ಗೆಯೂ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಚರ್ಚೆಯಾಗಿದೆ. ಇತ್ತೀಚೆಗೆ ಅವರು ಪ್ರಯಾಗರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕುಟುಂಬದ ಸದಸ್ಯರೊಂದಿಗೆ ಭಾಗವಹಿಸಿದ್ದು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅವರನ್ನು ವಿಶೇಷ ಅತಿಥಿಯಾಗಿ ಸತ್ಕರಿಸಿದ್ದು, ಮಹಾ ಕುಂಭಮೇಳದ ವ್ಯವಸ್ಥೆಗಳ ಬಗ್ಗೆ ಬಿಜೆಪಿ ಸರ್ಕಾರವನ್ನು ಕೊಂಡಾಡಿದ್ದು, ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ನಡೆದ ಶಿವರಾತ್ರಿ ಆಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳ ವಿಚಾರವಾಗಿ ಇತ್ತೀಚೆಗೆ ಡಿಕೆಶಿ ಹೆಚ್ಚು ಹೆಚ್ಚು ಕೇಂದ್ರದ ಸಚಿವರನ್ನು ಭೇಟಿ ಮಾಡುತ್ತಿರುವುದು ಒಳಗೊಂಡಂತೆ ಡಿಕೆಶಿ ಅವರ ಇತ್ತೀಚೆಗಿನ ಹೇಳಿಕೆಗಳನ್ನು ಗಮನಿಸಿದರೇ, ಪರೋಕ್ಷವಾಗಿ ಡಿಕೆಶಿ ತಮ್ಮ ಪಕ್ಷದ ಹೈಕಮಾಂಡ್‌ ಗೆ ತಮ್ಮ ಬೇಡಿಕೆಯ ಬಗ್ಗೆ ಸ್ಪಷ್ಟ ಸಂದೇಶ ನೀಡಿದಂತೆ ಕಾಣಿಸುತ್ತಿದೆ. ಡಿಕೆಶಿ ಆಗಾಗ ಹೇಳುವ ʼನಾನು ಹುಟ್ಟು ಕಾಂಗ್ರೆಸಿಗʼ ಎಂಬ ಮಾತನ್ನು ಕೇಳಿದರೇ, ಡಿಕೆಶಿ ಎಂತಹ ಸಂದರ್ಭದಲ್ಲಿಯೂ ಬಿಜೆಪಿಗೆ ಸೇರ್ಪಡೆಯಾಗುವ ಯಾವ ಲಕ್ಷಣವೂ ಕಾಣಿಸುವುದಿಲ್ಲ. ಆದರೂ, ಅವರೇ ರಾಜಕೀಯ ಗುರು ಎಂದು ಹೇಳುವ, ಎಸ್‌.ಎಂ ಕೃಷ್ಣ ತಮ್ಮ ರಾಜಕೀಯ ಜೀವನದ ಕೊನೆಯ ಕಾಲಘಟ್ಟದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ನೋಡಿದರೇ, ಗುರುವಿನ ಹಾದಿಯನ್ನು ಡಿಕೆಶಿ ಹಿಡಿಯಬಹುದೇ ಎನ್ನುವ ಅಭಿಪ್ರಾಯವನ್ನು ತೀರಾ ಸಾರಾಸಗಟಾಗಿ ಅಲ್ಲಗಳೆಯುವಂತೆಯೂ ಇಲ್ಲ.

ಹಾಗಾಗಿ ಹೈಕಮಾಂಡ್‌ ರಾಜ್ಯ ಕಾಂಗ್ರೆಸ್‌ ನ ಅಸ್ತಿತ್ವಕ್ಕೆ ಪೆಟ್ಟು ಬೀಳದಂತೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ನಡೆದುಕೊಳ್ಳಬೇಕಾಗಿರುವುದು ಬಹಳ ಮುಖ್ಯ. ಒಮ್ಮೊಮ್ಮೆ ಈ ಮುಖ್ಯಮಂತ್ರಿ ಬದಲಾವಣೆ ವಿಚಾರ ʼಈ ಅವಧಿʼಗೆ ಬರಿ ಊಹೆ, ರಾಜಕೀಯ ಚರ್ಚೆ ಎಂದೇ ಕಾಣಿಸುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕೇಂದ್ರದ ನಾಯಕರು ಅಭಯವನ್ನು ಶಿವಕುಮಾರ್ ಅವರಿಗೆ ನೀಡಿರುವ ಕಾರಣಕ್ಕೆ ಅವರು ಬಿರುಸಾಗಿದ್ದಾರೆ ಎಂಬಂತೆ ಕಾಣಿಸುತ್ತದೆ. ಹಾಗಾಗಿ ಈ ಅವಧಿ ಪೂರೈಸುವವರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಗಟ್ಟಿಯಾಗಿ ಕೂತು ತನ್ನ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ದೃಷ್ಟಿಯಲ್ಲಿಯೇ ಅವರ ಈಗಿನ ರಾಜಕೀಯ ನಡೆಗಳು ಇದ್ದಂತೆ ಕಾಣಿಸುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ತಾನು ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಹೇಳುತ್ತಿದ್ದಾರೆ. ಆದಾಗ್ಯೂ ಅವರನ್ನು ಮನವೊಲಿಸಿ ರಾಜೀನಾಮೆ ಪಡೆಯುವುದು ಅದಕ್ಕೆ ಪ್ರತಿಯಾಗಿ ಅವರು ಹೇಳಿದವರನ್ನೇ, ಕೇಳಿರುವ ಹುದ್ದೆ, ಖಾತೆಗಳಲ್ಲಿ ಕೂರಿಸುವುದು ಕೂಡ ಹೈಕಮಾಂಡ್‌ಗೆ ಅಷ್ಟು ಸುಲಭವಲ್ಲ. ಅಷ್ಟಲ್ಲದೇ, ಮುಂದೆ ಸಿಎಂ ಸ್ಥಾನದಿಂದ ಇಳಿದ ಮೇಲೆ ಅವರಿಗೆ ಯಾವ ಜವಾಬ್ದಾರಿ ಕೊಡುವುದು ಎನ್ನುವುದು ಕೂಡ ಹೈಕಮಾಂಡ್‌ ಮುಂದಿರುವ ಪ್ರಶ್ನೆ. ಈ ಸುತ್ತ ಹೈಕಮಾಂಡ್‌ ಹಾಕಿಕೊಂಡಿರುವ ʼಸಿದ್ದ ಸೂತ್ರʼ ಏನು ? ಈ ʼಸಿದ್ದ ಸೂತ್ರʼಕ್ಕೆ ಸಿದ್ದರಾಮಯ್ಯ, ಡಿಕೆಶಿ ಒಪ್ಪಿಕೊಳ್ಳುತ್ತಾರೆಯೇ ? ಎನ್ನುವುದು ಬಿಲಿಯನ್‌ ಡಾಲರ್‌ ಪ್ರಶ್ನೆ.

ಈತನ್ಮಧ್ಯೆ, ಇಬ್ಬರೂ ಅಂದುಕೊಂಡಂತೆ ಏನೂ ನಡೆಯದೆ ಇದ್ದರೇ, ಪಕ್ಷ ಇಬ್ಭಾಗವಾಗುವುದಂತೂ ನಿಶ್ಚಿತ. ಪಕ್ಷದಿಂದ ಬೇರ್ಪಟ್ಟು ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾಗುವುದಕ್ಕೆ ಸ್ವತಃ ಡಿಕೆಶಿ ಅವರಿಗೂ ಇಷ್ಟವಿಲ್ಲ. ಸಿದ್ದರಾಮಯ್ಯ ಅವರು ಬಂಡಾಯ ಎದ್ದು ಹೊಸ ಪಕ್ಷ  ಕಟ್ಟುವ ಹುರುಪಿನಲ್ಲೂ ಇಲ್ಲ ಅಥವಾ ಹಾಗೆ ಮಾಡುವ ಮನಸ್ಸೂ ಅವರಲ್ಲಿಲ್ಲ ಎಂದೇ ಕಾಣಿಸುತ್ತದೆ. ಇಬ್ಬರಿಗೂ ಕಾಂಗ್ರೆಸ್‌ ಅಪಾರವಾದದ್ದನ್ನೇ ಕೊಟ್ಟಿದೆ. ಇಬ್ಬರೂ ಕಾಂಗ್ರೆಸ್‌ ಗೆ ಅಪಾರವಾದದ್ದನೇ ಕೊಟ್ಟಿದ್ದಾರೆ. ಏನೇ ಇದ್ದರೂ ಆಂತರಿಕ ಒಪ್ಪಂದದ ಮೇರೆಗೆ ಎಲ್ಲವೂ ಒಂದು ಅಚ್ಚರಿಯ ತಾರ್ಕಿಕ ಅಂತ್ಯಕ್ಕೆ ಬರುವಂತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ನಿರ್ಧಾರಗಳಿಂದಲೇ ಆಗಬೇಕಿದೆ ಅನ್ನಿಸುತ್ತಿದೆ. ಒಟ್ಟಿನಲ್ಲಿ, ಕಾಂಗ್ರೆಸ್‌ ರಾಜಕೀಯದ ಬೆಳವಣಿಗೆಯ ಮೇಲೆ ದಿನೇದಿನೇ ಕುತೂಹಲ ಹೆಚ್ಚಾಗುತ್ತಿದೆ. ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!