spot_img
Wednesday, March 18, 2026
spot_img

ರಾಜ್ಯ ಕಾಂಗ್ರೆಸ್‌ ಸುಧಾರಣೆ ಆಗುವುದೇ !?

ಸರ್ಕಾರವನ್ನು ಅಭದ್ರಗೊಳಿಸುತ್ತಿರುವ ಕಾಂಗ್ರೆಸ್‌ ನಾಯಕರ ಪ್ರತಿಷ್ಠೆಯ ವ್ಯಸನ

 ʼಯುವ ಕಾಂಗ್ರೆಸ್‌ ಒಗ್ಗಟ್ಟಿನಿಂದ ಬಿಜೆಪಿ-ಜೆಡಿಎಸ್‌ ವಿರುದ್ಧ ಹೋರಾಡಬೇಕು. ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ. ಪಕ್ಷದಲ್ಲಿ ಯಾವುದೇ ಗುಂಪು ಬಣಗಳನ್ನು ಮಾಡಿಕೊಳ್ಳದೆ, ಎಲ್ಲಾ ಕಾರ್ಯಕರ್ತರನ್ನು ಒಂದುಗೂಡಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟ ಮಾಡಬೇಕು. ನಮ್ಮ ರಾಜಕೀಯ ವೈರಿಗಳ ವಿರುದ್ಧ ಹೋರಾಟ ಮಾಡಬೇಕೆ ಹೊರತು ನಮ್ಮನಮ್ಮಲ್ಲೇ ಆಂತರಿಕ ವೈಷಮ್ಯ ಬೆಳೆಸಿಕೊಳ್ಳಬಾರದುʼ ಎಂದು ಯುವ ಕಾಂಗ್ರೆಸ್‌ ರಾಜ್ಯ ಘಟಕದ ಪದಾಧಿಕಾರಿಗಳನ್ನು ಉದ್ದೇಶಿಸಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್‌ ಅವರು ಆಡಿರುವ ಮಾತನ್ನು ಉಲ್ಲೇಖಿಸಿ ಇತ್ತೀಚೆಗೆ ಆಪ್ತರೊಬ್ಬರೊಂದಿಗೆ ಚರ್ಚೆ ಬೆಳೆಸಿದ್ದೆ. ʼಡಿಕೆಶಿ ನೋಡಿ ಯೂಥ್‌ ಕಾಂಗ್ರೆಸ್‌ಗೆ ಬುದ್ದಿ ಹೇಳ್ತಾರೆ, ಕೆಪಿಸಿಸಿ ಅಧ್ಯಕ್ಷರಾಗಿದ್ದುಕೊಂಡು ಪಕ್ಷದ ಆಂತರಿಕ ಜಗಳವನ್ನು ಸರಿ ಮಾಡುವುದಕ್ಕೆ ಆಗಿಲ್ಲ. “ಊರಿಗೆ ಬುದ್ದಿ ಹೇಳಿ, …” ಅಂತ ಹೇಳಿದೆ. ಒಂದಿಷ್ಟು ವಾದ ವಿವಾದ ಮುಂದುವರಿದಿತ್ತು.

ʼನಿಮ್ಮ ನಿಲುವು ಯಾವುದು ?ʼ ನೀವು ಯಾರ ಪರವಾಗಿದ್ದೀರಿ ಎನ್ನುವುದು ತಿಳಿಯುವುದಿಲ್ಲ ಎಂದು ಕೇಳಿದ್ದರು. ಮುಂದುವರಿಸಿ ʼರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾದಲ್ಲಿದೆ ಅಲ್ವೇ, ನಿಮ್ಮದೇ ಸರ್ಕಾರ. ನಿಮ್ಮವರೇ ಅಧಿಕಾರದಲ್ಲಿದ್ದಾರೆ. ನೀವು ಸ್ವಲ್ಪ ಅವರ ಪರವಾಗಿಯೇ ಇರುವವರು ಅಲ್ವಾ ?ʼ ಎಂದು ಹೇಳಿದರು. ಆ ಪಕ್ಷದ ಕಾರ್ಯಕರ್ತ ಅಥವಾ ವಕ್ತಾರ ಎನ್ನುವಂತೆ ನನ್ನನ್ನು ಬಿಂಬಿಸಿ ನಡೆದುಕೊಂಡಿದ್ದರು. ಅದು ನನ್ನನ್ನು ನಿಜಕ್ಕೂ ಪ್ರಚೋದಿಸುವಂತಿತ್ತು. ಬಹುಶಃ ಒಂದು ಪಕ್ಷದ ಭಾಗವಾಗುವ ಮನಸ್ಥಿತಿ ಸದ್ಯಕ್ಕಂತೂ ನನ್ನಲ್ಲಿಲ್ಲ. ʼನನ್ನ ಲೇಖನಗಳನ್ನು ಓದಿ, ಕಾಂಗ್ರೆಸ್‌ನ ತಪ್ಪುಗಳನ್ನು, ಕಾಂಗ್ರೆಸ್‌ ರಾಜಕೀಯದ ಅವ್ಯವಸ್ಥೆ, ಬಿಜೆಪಿಯ ಬೌದ್ಧಿಕ ಬಡತನ, ದುರಾಡಳಿತ ಸೇರಿ ಎಲ್ಲವನ್ನೂ ಬೇರೆ ಬೇರೆ ಲೇಖನಗಳಲ್ಲಿ ಟೀಕಿಸಿದ್ದೇನೆ. ಸಾಧ್ಯವಾದರೇ, ಓದಿ. ನಿಮ್ಮ ಅಭಿಪ್ರಾಯ ಬದಲಾಗಬಹುದು ಎಂದೆ. ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ, ವಿರೋಧ ಪಕ್ಷಗಳಲ್ಲಿರುವ ಬಿಜೆಪಿ ಮತ್ತು ಜೆಡಿಎಸ್‌ ಗಳಿಗಿರುವ ಹೆಚ್ಚು ಜವಾಬ್ದಾರಿಗಳ ಗಂಭೀರ ವಿಚಾರಗಳನ್ನು ನನ್ನ ವೈಯಕ್ತಿಕ ನಿಲುವು ಅಥವಾ ಅಭಿಪ್ರಾಯ ಮರೆಮಾಚುವಂತೆ ಆಗಬಾರದು. ಇದು ನನ್ನ ಬಗ್ಗೆಯಾಗಲಿ ಅಥವಾ ಸರ್ಕಾರದ ಬಗ್ಗೆಯಾಗಲಿ, ವಿರೋಧ ಪಕ್ಷಗಳ ಬಗ್ಗೆಯಾಗಲಿ ಅಲ್ಲ. ಇದು ಒಂದು ಸರ್ಕಾರ ಅಡಿಯಲ್ಲಿ ಬದುಕುತ್ತಿರುವ ಸಾಮಾನ್ಯ ನಾಗರಿಕರ ಪ್ರಶ್ನೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಕಾಂಗ್ರೆಸ್‌ ಆಗಬಹುದು ಎಂದು ರಾಜ್ಯದ ಅಧಿಕಾರವನ್ನು ಕಾಂಗ್ರೆಸ್‌ಗೆ ನೀಡಿದ್ದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾ‌ರ್ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದರು. ಭಾರೀ ಬಹುಮತವನ್ನು ನೀಡಿದ್ದರು.  ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ, ಡಿ.ಕೆ ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಜಾರಿಗೆ ತಂದಿತು. ಕೆಲವು ತಿಂಗಳುಗಳ ವಿಳಂಬ ಆಗಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ತನ್ನ ಯೋಜನೆಗಳ ಅನುಷ್ಠಾನದ ಬಗ್ಗೆ ಸಮರ್ಥಿಸಿಕೊಳ್ಳುವುದರಲ್ಲೂ ಕಾಂಗ್ರೆಸ್‌ ಬಡತನ ತೋರ್ಪಡಿಸಿತ್ತು.

ಇನ್ನು, ಕಾಂಗ್ರೆಸ್‌ ಗೆ ಬಹುಮತ ಬಂದಾಗೆಲ್ಲಾ ಒಂದು ರೋಗವಿದೆ. ರಾಜ್ಯದಲ್ಲಿ ಸದ್ಯಕ್ಕೆ ಬೇರೆ ಪಕ್ಷಗಳಿಗೆ ಹೋಲಿಸಿದರೇ, ಸ್ವಲ್ಪ ಪ್ರಬುದ್ಧ ರಾಜಕಾರಣಿಗಳು ಇರುವುದು ಕಾಂಗ್ರೆಸ್‌ನಲ್ಲಿಯೇ. ಆದರೇ, ಕಾಂಗ್ರೆಸ್‌ ನಾಯಕರಲ್ಲಿರುವ ಸ್ವಪ್ರತಿಷ್ಠೆ, ಶ್ರೇಷ್ಠತೆಯ ವ್ಯಸನ ಇಡೀ ಆಡಳಿತ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ ಎಂದರೆ ತಪ್ಪಿಲ್ಲ. ತಾನು ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗೆಲ್ಲಾ ಕಾಂಗ್ರೆಸ್‌ ಈ ವ್ಯಸನದಲ್ಲೇ ಕಾಲ ಕಳೆದಿದೆ. ಇದೇ ಕಾರಣದಿಂದ ಮತದಾರರ ಆಯ್ಕೆಯನ್ನು ಅಪಮಾನಿಸುವಂತೆ ಕಾಂಗ್ರೆಸ್‌ ಸರ್ಕಾರ ಅಕ್ಷರಶಃ ನಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಮೇಲೆ ಜನ ಬಹಳ ವಿಶ್ವಾಸ ಇರಿಸಿಕೊಂಡಿರುವ ಹಿನ್ನೆಲೆಯಲ್ಲಿಯೇ ಬಿಜೆಪಿಯನ್ನು ನಿರಾಕರಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೇರಿಸಿದ್ದರು. ಆದರೇ, ಈ ಸರ್ಕಾರವೂ ಬಿಜೆಪಿ ಸರ್ಕಾರಕ್ಕಿಂತ ಭಿನ್ನವೇನಲ್ಲ ಎಂಬಂತಾಗಿದೆ.

ಸರ್ಕಾರ ಕೇವಲ ಎರಡು ವರ್ಷ ಪೂರೈಸುವ ಮುನ್ನವೇ ಕಾಂಗ್ರೆಸ್ ನಾಯಕರು ಕುರ್ಚಿ ಕಿತ್ತಾಟಕ್ಕಿಳಿದಿದ್ದಾರೆ. ಪ್ರತಿಷ್ಠೆ, ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗೆಳುತ್ತಿದ್ದಾರೆ. ಅಧಿಕಾರ ಹಂಚಿಕೆ ವಿವಾದ, ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ, ಒಬ್ಬರಿಗೆ ಒಂದೇ ಹುದ್ದೆ, ಮುಡಾ ಹಗರಣ, ಭ್ರಷ್ಟಾಚಾರ ಆರೋಪಗಳು, ವರ್ಗಾವಣೆ ದಂಧೆಗಳಂತಹ ವಿಚಾರಗಳ ಕಾರಣದಿಂದ ಕಾಂಗ್ರೆಸ್‌ ಸರ್ಕಾರದ ಮೇಲೆ ಜನರಲ್ಲಿ ಅವಿಶ್ವಾಸ ಮೂಡಿಸಿದೆ. ಪ್ರಬುದ್ಧ ರಾಜಕಾರಣಿಗಳು ಎಂದು ವಿರೋಧ ಪಕ್ಷಗಳಿಂದಲೂ ಕರೆಸಿಕೊಂಡವರು ಕೂಡ ಹಾದಿ ಬೀದಿಯಲ್ಲಿ ಆಡಿ, ರಾಡಿ ಎಬ್ಬಿಸಿರುವುದು ಕಾಂಗ್ರೆಸ್‌ ಸರ್ಕಾರದ ಆಡಳಿತಕ್ಕೆ ಮಸಿ ಬಳಿದಂತಾಗಿದೆ. ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆಯಾಗಬೇಕಿರುವ ವಿಷಯಗಳನ್ನು ತೀರಾ ಸಣ್ಣತನ ತೋರಿಸಿ ಭ್ರಮನಿರಸನ ಮೂಡಿಸುತ್ತದೆ ಎನ್ನುವ ಅಭಿಪ್ರಾಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಆಯ್ಕೆ ಮಾಡುವಾಗ ಜನರಲ್ಲಿ ಬಹುಶಃ ಇದ್ದಿರಲಿಕ್ಕಿಲ್ಲ.

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಹೊತ್ತಿಗೆ ಸಿಎಂ ಆಯ್ಕೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ವಯಸ್ಸು ಕೂಡ ಮುನ್ನೆಲೆಗೆ ಬಂದಿತ್ತು. ಮತ್ತವರ ʼಅಹಿಂದʼ ಬಲವೂ ವೃದ್ಧಿಯಾಗಿತ್ತು, ಇನ್ನೊಂದೆಡೆ ಡಿಕೆ ಶಿವಕುಮಾರ್‌ ಕೂಡ ಕಾಂಗ್ರೆಸ್‌ ಪಕ್ಷದಲ್ಲಿ ಸೀನಿಯರ್‌ ಮೋಸ್ಟ್‌ ನಾಯಕರುಗಳಲ್ಲೊಬ್ಬರಾಗಿ ಕಾಣಿಸಿಕೊಂಡಿದ್ದರು. ಸಿದ್ದರಾಮಯ್ಯ ಅವರನ್ನು ಬಿಟ್ಟರೇ, ಮಾಸ್‌ ಲೀಡರ್‌ ಕಾಂಗ್ರೆಸ್‌ ನಲ್ಲಿ ಯಾರೂ ಇಲ್ಲ. ಡಿಕೆಶಿ ಆ ಪಟ್ಟಕ್ಕೆ ಏರುವುದಕ್ಕೆ ಪ್ರಯತ್ನಪಡುತ್ತಿದ್ದರೂ ಬಹುಶಃ ಅವರ ಹಿನ್ನೆಲೆ ಮತ್ತು ಅವರು ರಾಜಕೀಯ ಜೀವನದಲ್ಲಿ ಕಂಡಂತಹ ಏರಿಳಿತಗಳು ಅವರಿಗೆ ಅಡ್ಡಿಯಗುತ್ತಿದೆ. ಎಸ್.‌ಎಂ. ಕೃಷ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಕೃಷ್ಣರ ಅತ್ಯಾಪ್ತರಾಗಿ ಗುರುತಿಸಿಕೊಂಡು, ಅವರ ಬಲಗೈ ಬಂಟ ಎಂಬಂತೆ ಕಾಣಿಸಿಕೊಂಡಿದ್ದ ಡಿಕೆಶಿ, ಅಂದಿನ ಹಿರಿಯ ನಾಯಕರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದಕ್ಕೆ ಸಿಎಂ ಎಸ್‌.ಎಂ ಕೃಷ್ಣರೊಂದಿಗೆ ಕೈ ಜೋಡಿಸಿದ್ದರು. ಅವೆಲ್ಲಾ ಸಿಟ್ಟು ಮಲ್ಲಿಕಾರ್ಜುನ್‌ ಖರ್ಗೆ ಅಂತವರಿಗೆ ಇನ್ನೂ ಡಿಕೆಶಿ ಮೇಲಿದೆ. ಇವೆಲ್ಲಾ ಪ್ರತಿಷ್ಠೆ, ಶ್ರೇಷ್ಠತೆಗಳು ಕಾಂಗ್ರೆಸ್‌ನಲ್ಲಿ ತುಸು ಹೆಚ್ಚೇ ಇದೆ ಎನ್ನುವುದಕ್ಕೆ ಒಂದು ಉದಾಹರಣೆ. ಕುರ್ಚಿ ಜಗಳವಾಗಿ ಈಗ ವ್ಯಕ್ತವಾಗುತ್ತಿದೆ.

ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ, ಡಿಕೆಶಿ ಅವರು ಇಬ್ಬರೂ ತಮ್ಮ ಪ್ರಭಾವವನ್ನು ತೋರಿಸಿದ್ದರು. ಹೈಕಮಾಂಡ್‌ ಅಳೆದುತೂಗಿ ಕೊನೆಗೆ ಸಿಎಂ ಹುದ್ದೆಗೆ ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಿತ್ತು. ಆಗ ಸಿಎಂ ಪದವಿ ಹಂಚಿಕೆಯ ಒಪ್ಪಂದ ಆಗಿತ್ತು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಅಸಲಿಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾ‌ರ್ ನಡುವೆ ಯಾವ ರೀತಿ ಅಧಿಕಾರ ಹಂಚಿಕೆಯಾಗಿದೆ ? ಏನು ಮಾತುಕತೆಯಾಗಿದೆ ? ಅಥವಾ ಈ ಒಪ್ಪಂದ ಆಗಿರುವುದು ನಿಜವೇ ? ಅಥವಾ ಇದೊಂದು ರಾಜಕೀಯ ಊಹಾಪೋಹವೇ ? ಎನ್ನುವುದರ ಬಗ್ಗೆ ಸಿದ್ದರಾಮಯ್ಯ ಅವರಾಗಲಿ, ಡಿಕೆಶಿಯವರಾಗಲಿ ಬಾಯಿ ಬಿಟ್ಟು ಹೇಳುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಈ ಬಗ್ಗೆ ಬಹಿರಂಗವಾಗಿ ಏನೂ ಮಾತಾಡುತ್ತಿಲ್ಲವಾದರೂ, ಅವರವರ ಆಪ್ತರು ಅಲ್ಲಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೇಳುತ್ತಿರುವುದು ನೋಡಿದರೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಖಡಕ್ ವಾರ್ನಿಂಗ್ ಗೂ ಬೆಲೆ ಇಲ್ಲದಂತಾಗಿದೆ.

ಒಳ್ಳೆಯ ಆಡಳಿತವೂ ಕಾಂಗ್ರೆಸ್‌ ಸರ್ಕಾರದಿಂದ ಕಾಣುತ್ತಿಲ್ಲ. ಬಿಜೆಪಿ ಹಾಗೂ ಜೆಡಿಎಸ್‌ಗೆ ಹೋಲಿಸಿದರೇ, ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರಭುತ್ವ ರಾಜಕಾರಣಿಗಳಿದ್ದಾರೆ, ಸಮರ್ಥರಿದ್ದಾರೆ, ಒಳ್ಳೆಯ ನಾಯಕರಿದ್ದಾರೆ. ಆದರೇ, ಕಾಂಗ್ರೆಸ್‌ನ ಆಂತರಿಕ ವೈಷಮ್ಯದಿಂದ ಸದ್ವಿನಿಯೋಗವಾಗುತ್ತಿಲ್ಲ ಎನ್ನುವುದು ನೇರವಾಗಿ ಕಾಣಿಸುತ್ತಿದೆ. ಐದು ಗ್ಯಾರಂಟಿಗಳು ನಾಡಿನ ಆರ್ಥಿಕತೆಗೆ ಬಲ ತುಂಬಿದ್ದರೂ, ಸರ್ಕಾರದ ಸಾಧನೆಯನ್ನು ಜನರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಕಾಂಗ್ರೆಸ್‌ ಸಂಪೂರ್ಣ ವಿಫಲವಾಗಿದೆ. ಆಡಳಿತ ಹಳಿ ತಪ್ಪಿಹೋಗಿದೆ ಎಂದು ಕೆಲವು ಕಾಂಗ್ರೆಸ್‌ ನಾಯಕರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇನ್ನು, ವಿರೋಧ ಪಕ್ಷದವರು ಹೇಳುವುದು ವಿಶೇಷವಲ್ಲ. ಏನೇ ಆಗಲಿ, ಕಾಂಗ್ರೆಸ್‌ ಸರ್ಕಾರದ ಆಡಳಿತ ಮೊದಲು ಸುಧಾರಿಸಲಿ.

ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!