Thursday, November 21, 2024

ಸಾವಯವ ವಿಧಾನದಲ್ಲಿ ಯಶಸ್ಸು: ಮಿಶ್ರ ಕೃಷಿಯ ಶ್ರೇಯಸ್ಸು| ಇದು ಕಂದಾವರದ ಕೃಷಿಕ ಆನಂದ ಶೆಟ್ಟಿಯವರ ಕೃಷಿ ಯಶೋಗಾಥೆ


ಕುಂದಾಪುರ, ಸೆ.17: ಕೃಷಿಯಲ್ಲ್ಲಿ ಖುಷಿ ಕಾಣುತ್ತಾ, ಸಾವಯವ ವಿಧಾನವನ್ನೇ ಅನುಸರಿಸಿ, ಮಿಶ್ರ ಕೃಷಿ ಪದ್ದತಿಯ ಮೂಲಕ ಯಶಸ್ಸು ಕಂಡ ಕೃಷಿಕ ಕಂದಾವರ ಗ್ರಾಮದ ಉಳ್ಳೂರು ಕಾಡಿನಕೊಂಡದ ಅನಂದ ಶೆಟ್ಟಿ ಅವರು. ಕೃಷಿಯಲ್ಲಿ ದೂರಗಾಮಿ ಚಿಂತನೆ, ನಿರಂತರ ಅಧ್ಯಯನ, ಹೊಸತನದ ತುಡಿತ, ಸಾಂಸ್ಥಿಕ ಕೃಷಿಯ ಬಗ್ಗೆ ಕುತೂಹಲ, ಕೃಷಿಯನ್ನೇ ಉದ್ಯೋಗವನ್ನಾಗಿಸಿಕೊಂಡ ಆನಂದ ಶೆಟ್ಟಿ-ಸುಮತಿ ಶೆಡ್ತಿ ಅವರ ಕೃಷಿ ತಾಕುವಿನ ಯಶೋಗಾಥೆ ಇದು.

ಸಾಂಪ್ರಾದಾಯಿಕವಾಗಿ ಬಂದ ಕೃಷಿಯನ್ನು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಬಂದ ಇವರು ಸಾವಯವ ಕೃಷಿಯ ಅನುಷ್ಠಾನದೊಂದಿಗೆ ಸಮಗ್ರ ಕೃಷಿ ಪದ್ದತಿಯನ್ನು ರೂಢಿಸಿಕೊಂಡರು. ರೈತ ಏಕರೂಪದ ಕೃಷಿಯನ್ನು ನಂಬಿಕೊಳ್ಳದೇ ಬಹುವಿಧ ಕೃಷಿಯನ್ನು ಮಾಡಿದರೆ ಭವಿಷ್ಯ ಭದ್ರವಾಗುತ್ತದೆ ಎನ್ನುವ ಚಿಂತನೆಯೊಂದಿಗೆ ಕಾರ್ಯಗತಗೊಂಡ ಇವರ ಕೃಷಿ ಇವತ್ತಿನ ಕೃಷಿಕರಿಗೆ ಮಾದರಿಯಾಗಿದೆ.

8 ಎಕ್ರೆ ಜಮೀನಿನಲ್ಲಿ ಬೇರೆ ಬೇರೆ ರೀತಿಯ ಕೃಷಿ ಇದೆ. ತೆಂಗು, ಕಂಗು, ಗೇರು, ಕಾಳು ಮೆಣಸು ಒಂದೆಡೆಯಾದರೆ, ಭತ್ತ ಬೇಸಾಯ, ಒಣ ಭೂಮಿಯಲ್ಲಿ ಗೇರು ಕೃಷಿ, ಮಲ್ಲಿಗೆ ಕೃಷಿಯೂ ಇದೆ. ಇದಕ್ಕೆ ಪೂರಕವಾಗಿ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಈ ವರ್ಷದಿಂದ ಸಿಹಿ ನೀರು ಮೀನುಕೃಷಿಯನ್ನು ಆರಂಭಿಸಿದ್ದಾರೆ.

ಕೃಷಿಯಲ್ಲಿ ಸ್ವಾಯತ್ತೆ ಮತ್ತು ಸ್ವಾವಲಂಬನೆ ಸಾಧಿಸಬೇಕು ಎನ್ನುವ ಹಿನ್ನೆಲೆಯಲ್ಲಿ ತೋಟಕ್ಕೆ ಬೇಕಾಗುವಷ್ಟು ಗೊಬ್ಬರವನ್ನು ಉತ್ಪಾದಿಸಲಾಗುತ್ತದೆ. ರಸಸಾರ ಕಾಪಾಡುವ ನಿಟ್ಟಿನಲ್ಲಿ ಮಣ್ಣಿಗೆ ಸುಣ್ಣ ಬಳಕೆ ಬಿಟ್ಟು ಬೇರೆ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡುದಿಲ್ಲ. ಸಾವಯವ ವಿಧಾನ ಬಳಕೆಯಿಂದ ತೋಟದಲ್ಲಿ ರೋಗ, ಕೀಟ ಬಾಧೆಯೂ ಕಡಿಮೆ ಅಲ್ಲದೇ ಸಸ್ಯಗಳ ಬೆಳವಣಿಗೆಯಲ್ಲಿ ಏರುಪೇರು ಕಂಡು ಬರುವುದಿಲ್ಲ ಎನ್ನುತ್ತಾರೆ.

ಸ್ಥಳೀಯ ಅಡಿಕೆ ಮರಗಳಲ್ಲದೆ 220 ಮೋಹಿತ್ ನಗರ ತಳಿಯ ಅಡಿಕೆ ಮರಗಳು ಸಮೃದ್ದವಾಗಿ ಬೆಳೆದಿವೆ. ಅದಕ್ಕೆ ಉಪ ಬೆಳೆಯಾಗಿ ಕಾಳು ಮೆಣಸು ಹಾಕಿದ್ದಾರೆ. 20 ವರ್ಷಗಳ ಹಿಂದೆ ಪ್ರತೀ ಅಡಿಕೆ ಮರಕ್ಕೂ ಹಬ್ಬಿಸಿದ ಕಾಳು ಮೆಣಸು ಇತ್ತೀಚೆಗೆ ಸೊರಗು ರೋಗಕ್ಕೆ ತುತ್ತಾಗಿತ್ತು. ಒಳ್ಳೆಯ ಇಳುವರಿಯನ್ನು ಈ ನಡುವಿನ ಅವಧಿಯಲ್ಲಿ ಪಡೆದ ತೃಪ್ತಿ, ಸೊರಗಿನಿಂದ ಕಾಳುಮೆಣಸಿನ ಬಳ್ಳಿ ಕಳಕೊಂಡ ವ್ಯಥೆಯೂ ಕಾಡುತ್ತಿದೆ. ಅಲ್ಲಿಗೆ ನಿಲ್ಲಿಸದೆ ಮತ್ತೆ ಕಾಳುಮೆಣಸು ನಾಟಿ ಮಾಡಿದ್ದಾರೆ.
ಭತ್ತದ ಬೇಸಾಯದಲ್ಲಿಯೂ ಕೂಡಾ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತ ಬಂದ ಇವರು, ಈ ಬಾರಿ ಬಿತ್ತನೆ ಬೇಸಾಯ ಮಾಡಿದ್ದಾರೆ. ಮಿತವ್ಯಯದಿಂದ ಉತ್ತಮ ಫಸಲು ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ಹಾಗೆಯೇ ಒಣ ಭೂಮಿಯಲ್ಲಿ ಗೇರು ಕೃಷಿಯನ್ನು ಮಾಡಿದ್ದು, ಸಹಜ ಕೃಷಿ ಪದ್ದತಿ, ಸಮರ್ಪಕ ನಿರ್ವಹಣೆ, ಸಸ್ಯ ಸಂರಕ್ಷಣಾ ಕ್ರಮಗಳಿಂದ ಇಳುವರಿಯಲ್ಲಿ ಪ್ರಗತಿ ಕಂಡಿದ್ದಾರೆ. ತೋಟಗಾರಿಕೆಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವಿಧಾನ ಅನುಸರಿಸಿದ್ದಾರೆ. ಕುಟುಂಬ ಸದಸ್ಯರು ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಯಶಸ್ಸು ಮತ್ತು ಖುಸಿ ಕಾಣುತ್ತಿದ್ದಾರೆ.

ಮಲ್ಲಿಗೆ ಕೃಷಿ:
ಕಳೆದ 22 ವರ್ಷದಿಂದ ಶಂಕರಪುರ ತಳಿಯ ಮಲ್ಲಿಗೆ ಕೃಷಿ ಮಾಡುತ್ತಿರುವ ಇವರು 130 ಮಲ್ಲಿಗೆ ಗಿಡಗಳ ನಿರ್ವಹಣೆ ಮಾಡುತ್ತಿದ್ದಾರೆ. ಸೀಸನ್‍ನಲ್ಲಿ 30 ಸಾವಿರ ತನಕ ಹೂವು ದೊರೆಯುತ್ತದೆ. ಸುಡುಮಣ್ಣು, ಗಂಜಲ, ನೆಲಗಡಲೆ ಹಿಂಡಿ, ಕೊಟ್ಟಿಗೆ ಗೊಬ್ಬರ, ಕೆಂಪು ಮಣ್ಣು ಇವಿಷ್ಟೆ ಇವರ ಮಲ್ಲಿಗೆ ಕೃಷಿಯ ಗುಟ್ಟು. ಗೋಮೂತ್ರವನ್ನು ಆಗಾಗ ನೀರಿನೊಂದಿಗೆ ಬೆರೆಸಿ ಸಿಂಪರಣೆ ಮಾಡುತ್ತಾರೆ. ಇದರಿಂದ ಕೀಟ ಬಾಧೆ ನಿವಾರಣೆಯಾಗುತ್ತದೆ. ಅಲ್ಲದೇ ಮಲ್ಲಿಗೆ ಮೊಗ್ಗು ಒಳ್ಳೆಯ ಆಕಾರ ಪಡೆಯುತ್ತದೆ. ಮಲ್ಲಿಗೆ ಗಿಡ ನೆಲದ ಮೇಲೆ ಬೀಳದಂತೆ ಚಪ್ಪರ ರೀತಿಯಲ್ಲಿ ಎರಡು ಕಡೆಗಳಲ್ಲಿ ಬಡಿಗೆ ಕಟ್ಟಿ ಅದರ ಮೇಲೆ ಬಿಡಲಾಗಿದೆ. ಹೀಗೆ ಮಾಡುವುದರಿಂದ ಬುಡದಲ್ಲಿ ಕಳೆ ನಿರ್ವಹಣೆ ಸುಲಭವಾಗುತ್ತದೆ. ಹೂ ಕೊಯ್ಯಲು ಅನುಕೂಲವಾಗುತ್ತದೆ. ಗಿಡದ ಬೆಳವಣಿಗೆಗೆ ಪೂರಕವಾಗುತ್ತದೆ ಎನ್ನುತ್ತಾರೆ ಈ ಕೃಷಿಕ ದಂಪತಿಗಳು.

ಸಿಹಿ ನೀರು ಮೀನು ಕೃಷಿ
ಮೀನು ಕೃಷಿ ಮಾಡುವ ಆಸಕ್ತಿಯಿಂದ ಕಳೆದ ಬೇಸಿಗೆಯಲ್ಲಿ 60 ಸೆಂಟ್ಸ್ ಜಾಗದಲ್ಲಿ 5 ಅಡಿಯಷ್ಟು ಆಳ ಮಾಡಿ ಕೆರೆ ನಿರ್ಮಿಸಿ, ಅದಕ್ಕೆ 3750 ಮೀನು ಮರಿಗಳನ್ನು ಬಿಟ್ಟಿದ್ದಾರೆ. ಇದು ಹೊಸ ಅನುಭವವಾದರೂ ಅದರ ಬಗ್ಗೆ ಆಸಕ್ತಿ ಮತ್ತು ಕುತೂಹಲದಿಂದ ಜತನದಿಂದ ನಿರ್ವಹಣೆ ಮಾಡುತ್ತಿದ್ದಾರೆ. ಶಿಫಾರಸ್ಸು ಮಾಡಿದ ಆಹಾರವನ್ನು ಕ್ರಮಬದ್ದವಾಗಿ ಒದಗಿಸುತ್ತಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಮೀನು ಸಿಗಬಹುದು ಎನ್ನುವ ನಿರೀಕ್ಷೆ ಹೊಂದಿದ್ದಾರೆ. ಮುಂದೆ ಇದನ್ನು ಆಧುನಿಕವಾಗಿ ರೂಪಿಸುವ ಯೋಜನೆಯನ್ನು ಹೊಂದಿದ್ದಾರೆ.

ಅಡಿಕೆ ಮರದ ಬುಡ ಬಿಡಿಸುವುದಿಲ್ಲ!
ಇವರು ಹಿಂದಿನಿಂದಲೂ ಅಡಿಕೆ ಮರದ ಬುಡ ಬಿಡಿಸುವ ಪ್ರಕ್ರಿಯೆ ನೆಡೆಸುವುದಿಲ್ಲ. ನಾಲ್ಕು ವರ್ಷಗಳಿಗೊಮ್ಮೆ ಬುಡದ ಸುತ್ತ ಮೇಲ್ಮೈ ಮಣ್ಣನ್ನು ತಗೆಯುತ್ತಾರೆ. ಮತ್ತೆ ಪ್ರತೀ ವರ್ಷ ಸುಣ್ಣ, ಗೊಬ್ಬರ, ಸೊಪ್ಪು ಹಾಕಿ ಹೊಸ ಮಣ್ಣಿನ ಹೊದಿಕೆ ಮಾಡುತ್ತಾರೆ. ಮಳೆಗಾಲದಲ್ಲಿ ಆಗಸ್ಟ್ ಕೊನೆಯಲ್ಲಿ ಗೊಬ್ಬರ ನೀಡುತ್ತಾರೆ. ಮೊದಲಿಗೆ ಸುಣ್ಣ ಹಾಕಿ ನಂತರ ಹಟ್ಟಿ ಗೊಬ್ಬರ ಹಾಕುತ್ತಾರೆ. ಇದರಿಂದ ಬೇರಿಗೆ ಬೇಗನೆ ಪೋಷಕಾಂಶ ಸಿಗುತ್ತದೆ. ಅದರ ಮೇಲೆ ಹಸಿರು ಸೊಪ್ಪು ಹಾಕುತ್ತಾರೆ. ಸೊಪ್ಪು ನಿಧಾನವಾಗಿ ಕೊಳೆಯುವುದರಿಂದ ತಳಕ್ಕೆ ಸೊಪ್ಪು ಹಾಕಿದರೆ ಸಕಾಲಕ್ಕೆ ಪೋಷಕಾಂಶದ ಕೊರತೆಯಾಗುತ್ತದೆ.

ಸುಮತಿ ಶೆಡ್ತಿ ಅವರು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಂದಾವರ ಒಕ್ಕೂಟ ವ್ಯಾಪ್ತಿಯ ಸುಮುಖ ಸ್ವ-ಸಹಾಯ ಸಂಘದ ಸದಸ್ಯೆ. ಈಗಾಗಲೇ ಇವರ ಕೃಷಿ ಕ್ಷೇತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳ್ತಂಗಡಿ ಸೇರಿದಂತೆ ಬೇರೆ ಬೇರೆ ತಾಲೂಕುಗಳಿಂದ ಅಧ್ಯಯನಾರ್ಥಿಗಳು ಭೇಟಿ ನೀಡಿದ್ದಾರೆ. ಕೃಷಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಯೋಚನೆಯನ್ನು ಇವರು ಹೊಂದಿದ್ದಾರೆ.


“ನಾವು ಸಾವಯವ ವಿಧಾನವನ್ನು ಅನುಸರಿಸಿದವರು. ಈ ವಿಧಾನ ಲಾಭದಾಯಕ. ಕೃಷಿಕ ಒಂದೇ ಕೃಷಿ ನಂಬಿಕೊಳ್ಳಬಾರದು. ಮಿಶ್ರ ಬೇಸಾಯ ಪದ್ದತಿ ಅನುಸರಿಸಬೇಕು. ಕೃಷಿಯೊಂದಿಗೆ ಹೈನುಗಾರಿಕೆ ಇದ್ದರೆ  ಉತ್ಕೃಷ್ಠ ಗೊಬ್ಬರ ಸಿಗುತ್ತದೆ. ಕಳೆದ ಬಾರಿ ಅಡಿಕೆ ಗೊನೆಗೆ ಗೋಮೂತ್ರ ಸಿಂಪರಣೆ ಮಾಡಿದೆವು. ಇದರಿಂದ ಬೇಸಿಗೆಯಲ್ಲಿ ಹಿಂಗಾರ ಕರಟುವುದು, ಎಳೆಕಾಯಿ ಉದುರುವುದು ನಿಯಂತ್ರಣಕ್ಕೆ ಬಂದಿದೆ.”
-ಆನಂದ ಶೆಟ್ಟಿ, ಕೃಷಿಕರು.


“ಯಾವುದೇ ತರಬೇತಿಗಳನ್ನು ಆಯೋಜನೆ ಮಾಡಿದಾಗ ಉತ್ತಮವಾಗಿ ಪಾಲ್ಗೊಂಡು ಅಧ್ಯಯನ ಮಾಡಿ ಅನುಷ್ಠಾನಕ್ಕೆ ಮುಂದಾಗುತ್ತಾರೆ. ಕೃಷಿಯಲ್ಲಿ ಸಮಸ್ಯೆಗಳು ಬಂದಾಗ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುತ್ತಾರೆ. ಕ್ರಿಯಾಶೀಲರಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಯಶಸ್ಸನ್ನು ಕಾಣುತ್ತಿದ್ದಾರೆ”
   -ಚೇತನ ಕುಮಾರ್,
  ಧ.ಗ್ರಾ.ಯೋಜನೆ ಕೃಷಿ ಅಧಿಕಾರಿ, ಕುಂದಾಪುರ


(-ಲೇಖನ: ನಾಗರಾಜ್ ವಂಡ್ಸೆ)

 

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!