spot_img
Monday, March 16, 2026
spot_img

ರಾಜ್ಯ ಬಿಜೆಪಿಯ ಹಾಸ್ಯ ಪ್ರಸಂಗ

ವಿಜಯೇಂದ್ರ ವಿರುದ್ಧ ಒಟ್ಟಾದ ಭಿನ್ನರು | ಸಮರ್ಥ ನಾಯಕತ್ವದ ಕೊರತೆ

ʼಹಣ್ಣು ತುಂಬಿದ ಮರಕ್ಕೆ ಕಲ್ಲುʼ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ವಿಚಾರಕ್ಕೆ ಸಂಬಂಧಿಸಿ ಹೇಳುವುದಕ್ಕೆ ಸಾಧ್ಯವಿದೆಯೇ ? ವಿಜಯೇಂದ್ರ ಯಾವ ಲೆಕ್ಕದಲ್ಲಿ ಹಣ್ಣು ತುಂಬಿದ ಮರ ? ಅಥವಾ ಸಾರ ಕಳೆದು ಒಣಗಿದ ಮರ ಎಂಬ ಕಾರಣಕ್ಕಾಗಿ ಭಿನ್ನರು ಅವರ ವಿರುದ್ಧ ಕಲ್ಲು ಎಸೆಯುತ್ತಿದ್ದಾರೆಯೇ ? ಉತ್ತರ ಹುಡುಕಾಟದಲ್ಲಿ ರಾಜಕೀಯ ವಲಯ ನಿರತವಾಗಿದೆ.

ಈ ನಡುವೆ, ವಿಜಯೇಂದ್ರ ಯಡಿಯೂರಪ್ಪ ಒಬ್ಬ ಉತ್ತಮ ಸಂಘಟಕ, ರಾಜಕೀಯ ತಂತ್ರಗಾರ ಎಂಬೆಲ್ಲಾ ಶ್ರೇಯ ʼಉಳ್ಳವರ ಸಾಧ್ಯತೆʼಗಳಲ್ಲಿ ಪಡೆದಂತವುಗಳು. ರಾಜಕೀಯಕ್ಕೆ ಅವರ ತಂದೆಯ ರಾಜಕೀಯ ಪ್ರಭಾವಳಿ ಬಹುದೊಡ್ಡ ಸಹಾಯವನ್ನೇ ಮಾಡಿದೆ ಎಂದು ಹೇಳಬಹುದು. ಬಿ. ಎಸ್‌. ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಎಂದೇ ಗುರುತಿಸಿಕೊಂಡವರು. ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದಿಂದ ಬಂದ ಅನೇಕ ಪ್ರಭಾವಿ ನಾಯಕರುಗಳಿದ್ದರೂ ʼಸಮುದಾಯದ ನಾಯಕʼ ಎಂದು ಗುರುತಿಸಿಕೊಳ್ಳುವುದಕ್ಕೆ ಬಹುಶಃ ಯಡಿಯೂರಪ್ಪ ಅವರನ್ನು ಹೊರತಾಗಿ ಬೇರೆ ಯಾರಿಗೂ ಸಾಧ್ಯವಾಗಿಲ್ಲ. ವಿಜಯೇಂದ್ರ ಯಡಿಯೂರಪ್ಪ ತಂದೆಯ ಕಾರಣಕ್ಕಾಗಿಯೇ ಲಿಂಗಾಯತ ಸಮುದಾಯದ ಯುವ ನಾಯಕ ಎಂದು ಕರೆಸಿಕೊಳ್ಳುತ್ತಾರೆಯೇ ಹೊರತು, ಅವರ ಸ್ವಂತ ನಾಯಕತ್ವ ಅಥವಾ ರಾಜಕೀಯದ ವರ್ಚಸ್ಸಿನಿಂದ ಖಂಡಿತ ಅಲ್ಲ. ಬಹುಶಃ ಲಿಂಗಾಯತ ಸಮುದಾಯವೂ ಕೂಡ ವಿಜಯೇಂದ್ರ ಅವರನ್ನು ತಮ್ಮ ಸಮುದಾಯದ ಭವಿಷ್ಯದ ಸಮರ್ಥ ನಾಯಕ ಎಂದು ಸರ್ವ ಸಮ್ಮತವಾಗಿ ಮನಸಾರೆ ಒಪ್ಪಿಕೊಳ್ಳುವುದಿಲ್ಲವೋ ಏನೋ. ಒಪ್ಪಿಕೊಂಡರೂ ಅದಕ್ಕೆ ಅನೇಕ ಕಾರಣಗಳಿರಬಹುದು.

ಸರ್ವ ಸಮ್ಮತ ನಾಯಕ ಎನ್ನುವ ಅಭಿಪ್ರಾಯ ಯಾವ ಕಾಲಕ್ಕೂ, ಯಾವ ವಿಚಾರದಲ್ಲೂ, ಯಾವ ಸಿದ್ದಾಂತಗಳಲ್ಲೂ, ಯಾವ ರಾಜಕೀಯ ಪಕ್ಷಗಳಲ್ಲಿಯೂ ಬರುವುದಿಲ್ಲ. ಇಲ್ಲಿ ಎಲ್ಲರೂ, ಎಲ್ಲವೂ ಅನನ್ಯ ಎನ್ನುವ ಅಭಿಪ್ರಾಯ ಬರುವವರೆಗೆ ಭಿನ್ನಮತ ಇದ್ದೇ ಇರುತ್ತದೆ. ಬಹುಶಃ ರಾಜ್ಯ ಬಿಜೆಪಿಯಲ್ಲಿ ಇದು ಸದ್ಯಕ್ಕಂತೂ ಸಾಧ್ಯವಿಲ್ಲವೆಂದೆ ಕಾಣಿಸುತ್ತಿದೆ. ವಿಜಯೇಂದ್ರ ಅವರ ವಿರುದ್ಧ ಒಂದೆಡೆ ಯತ್ನಾಳ್‌, ರಮೇಶ್‌ ಜಾರಕೀಹೊಳಿ, ಕುಮಾರ್‌ ಬಂಗಾರಪ್ಪ, ಡಾ. ಕೆ. ಸುಧಾಕರ್‌ ಸೇರಿ ಮೊದಲಾದ ಭಿನ್ನರ ದೂರು ವರಿಷ್ಠರನ್ನು ಅಧಿಕೃತವಾಗಿ ತಲುಪಿದೆ. ಇನ್ನೊಂದೆಡೆ ರೇಣುಕಾಚಾರ್ಯ ನೇತೃತ್ವದಲ್ಲಿ ಹೊಸದೊಂದು ತಂಡ ತಯಾರಾಗಿದ್ದು, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿ ವರಿಷ್ಠರ ಮುಂದೆ ಬ್ಯಾಟ್‌ ಬೀಸಲು ಮುಂದಾಗಿದೆ. ಏನೇ ಆದರೂ ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಮತ್ತವರ ಕುಟುಂಬದಿಂದ ಮುಕ್ತಗೊಳಿಸುವವರೆಗೆ ತಮ್ಮ ಹೋರಾಟ ನಿಲ್ಲಿಸಲ್ಲ ಎಂದು ಯತ್ನಾಳ್‌ ಪಟ್ಟು ಹಿಡಿದಿದ್ದಾರೆ.

ಇನ್ನು, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಯಡಿಯೂರಪ್ಪ ಅವರ ಮೌನ ಇಲ್ಲಿ ಎದ್ದು ಕಾಣಿಸುತ್ತಿದೆ. ಬಿಎಸ್‌ವೈ ಹಿಡಿತದಲ್ಲಿದ್ದ ರಾಜ್ಯ ಬಿಜೆಪಿಯನ್ನು ಹೈಕಮಾಂಡ್‌ ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವುದರ ಮುನ್ಸೂಚನೆ ಅವರಿಗೆ ತಿಳಿದಂತೆ ಕಾಣಿಸುತ್ತಿದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಹೊತ್ತಿಗೆ ಅವರಿಗೆ ಒಂದು ಹಂತಕ್ಕೆ ಈ ಬಗ್ಗೆ ಅರಿವಾಗಿತ್ತು. ಅಂದು ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದಕ್ಕೆ ಹೈಕಮಾಂಡ್‌ ಮುಂದಾಗಿದ್ದಾಗಲೂ ಇನ್ನು ಉಳಿದೆರಡು ವರ್ಷ ತಾವೇ ಸಿಎಂ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುತ್ತಿದ್ದರು. ನಾಯಕತ್ವದ ಬಗ್ಗೆ ಯಾವ ಗೊಂದಲವೂ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಅಂದು ಏನು ನಡೆದಿತ್ತೋ ಅಂತೆಯೆ ಬಹುತೇಕ ಅದೆ ಪರಿಸ್ಥಿತಿ ಈಗ ಮಗನಿಗೂ ಎದುರಾಗಿದೆ. ವಿಜಯೇಂದ್ರ ಯಡಿಯೂರಪ್ಪ ಕೂಡ ಇಷ್ಟೆಲ್ಲಾ ವಿರೋಧ ಎದುರಿಸುತ್ತಿದ್ದರೂ ಕೂಡ ತಾವೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುತ್ತೇನೆ ಎಂದೇ ಹೇಳಿಕೊಳ್ಳುತ್ತಿದ್ದಾರೆ. ಅವರಲ್ಲಿ ಅಧೈರ್ಯದ ಲವಲೇಶವೂ ಕಾಣಿಸದೇ ಇರುವಂತೆ ನಡೆದುಕೊಳ್ಳುತ್ತಿದ್ದಾರೆ. ಆದರೇ, ಕಳೆದ ಕೆಲವು ತಿಂಗಳಿಂದ ರಾಜ್ಯ ಬಿಜೆಪಿಯಲ್ಲಿ ಉಂಟಾದ ಗೊಂದಲಗಳ ಕಾರಣದಿಂದ ಸ್ವಲ್ಪ ಕಳೆಗುಂದಿದಂತೆಯೂ ಕಾಣಿಸುತ್ತಿದೆ. ಮೊದಲಿದ್ದ ʼಬಾಸಿಸಂʼ ಧೋರಣೆ ಕಡಿಮೆಯಾದಂತಿದೆ.

ಹಾಸಿ ಹೊದೆಯುವಷ್ಟು ಬಿಜೆಪಿಯಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಈ ನಡುವೆ ರಾಜ್ಯದ ವಿಚಾರದಲ್ಲಿ ಲಿಂಗಾಯತ ಮತಗಳನ್ನು ಎದುರು ಹಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣದಿಂದ ಈವರೆಗೆ ಯಡಿಯೂರಪ್ಪ ಅವರನ್ನು ಸಾಧ್ಯವಾದ ಮಟ್ಟಿಗೆ ಸಮಾಧಾನ ಪಡಿಸುತ್ತಲೇ ಬಂದಿರುವ ಬಿಜೆಪಿ ಹೈಕಮಾಂಡ್‌ಗೂ ಈಗ ಸುಸ್ತಾಗಿದೆ. ಹಾಗಾಗಿ ರಾಜ್ಯ ಬಿಜೆಪಿಯನ್ನು ಸಂಪೂರ್ಣ ಯಡಿಯೂರಪ್ಪ ಅವರ ಕಪಿಮುಷ್ಠಿಯಿಂದ ತಪ್ಪಿಸುವ ಪ್ರಯತ್ನವೂ ಹೈಕಮಾಂಡ್‌ ಮಟ್ಟದಲ್ಲಿ ಈ ಹಿಂದೆಯೂ ನಡೆದಿತ್ತು. ಆದರೆ, ಅದು ಎಂದೂ ಯಶಸ್ವಿಯಾಗಿರಲಿಲ್ಲ. ಈ ಬಾರಿಯ ಪ್ರಯತ್ನದಲ್ಲಿ ಹೈಕಮಾಂಡ್‌ ಹಿಂದೆ ಸರಿಯುವುದಿಲ್ಲ ಎಂದೇ ಕಾಣಿಸುತ್ತಿದೆ. ಯಡಿಯೂರಪ್ಪ ಅವರೊಬ್ಬರನ್ನು ಸಮಾಧಾನ ಪಡಿಸುವ ಉದ್ದೇಶದಿಂದ ಉಳಿದ ಭಿನ್ನರ, ರಾಜ್ಯದ ಮಟ್ಟಿಗೆ ತಮ್ಮದೇ ಆದ ರಾಜಕೀಯ ವರ್ಚಸ್ಸು ಹಾಗೂ ಪ್ರಭಾವ ಬೆಳೆಸಿಕೊಂಡಿರುವ ನಾಯಕರನ್ನು ಕೈ ಬಿಡುವುದಕ್ಕೆ ಹೈಕಮಾಂಡ್‌ ತಯಾರಿಲ್ಲ.

ಬಹಳ ಪ್ರಮುಖವಾಗಿ ರಾಜ್ಯ ಬಿಜೆಪಿಯಲ್ಲಿ ಕೊರತೆಯಾಗಿ ಕಾಣಿಸುತ್ತಿರುವುದು ಸಮರ್ಥ ಹಾಗೂ ಸರ್ವ ಸಮ್ಮತ ನಾಯಕತ್ವ. ಕಳೆದ ಕೆಲವು ವರ್ಷಗಳಿಂದ ನಾಯಕತ್ವವನ್ನೇ ಬಿಜೆಪಿ ಕಳೆದುಕೊಂಡಿದೆ. ಬಿಜೆಪಿ ಹಿಂದೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಹೊರತು, ಅಲ್ಲಿ ಒಬ್ಬ ಸಮರ್ಥ ನಾಯಕ ಇಲ್ಲ. ಅದು ರಾಜ್ಯದಲ್ಲಿಯೂ ಹೌದು, ರಾಷ್ಟ್ರದಲ್ಲಿಯೂ ಹೌದು. ರಾಷ್ಟ್ರದಲ್ಲಿ ಒಬ್ಬ ಸಮರ್ಥ ನಾಯಕನಿಲ್ಲದೇ, ರಾಜ್ಯದಲ್ಲಿಯೂ ಸಮರ್ಥ ನಾಯಕತ್ವವನ್ನು ಬೆಳೆಸುವುದರಲ್ಲಿ ಬಿಜೆಪಿ ಹೀನಾಯವಾಗಿ ಸೋಲುತ್ತಿದೆ. ಬಿಜೆಪಿಯ ಬೌದ್ಧಿಕ ಶ್ರೀಮಂತಿಕೆಯ ಕೊರತೆಯದು. ಬಿಜೆಪಿಗೆ ಮತ ನೀಡುವ ಮತದಾರರು ಕೂಡ ಹಿಂದುತ್ವದ ಆಧಾರದಲ್ಲಿ ಮತ ಕೊಟ್ಟು ಬಿಜೆಪಿಯನ್ನು ಪೊರೆಯುತ್ತಿದ್ದಾರೆ ಹೊರತು, ಬಿಜೆಪಿಯಲ್ಲಿ ಒಂದು ಸಮರ್ಥ ನಾಯಕತ್ವ ಇದೆ ಎಂದಲ್ಲ.

ಬಿಜೆಪಿಯೊಳಗಿನ ಈ ಬಣ ಜಗಳ ಸ್ವತಃ ಬಿಜೆಪಿ ಕಾರ್ಯಕರ್ತರಲ್ಲಿಯೂ ಅಸಮಧಾನ ಮೂಡಿಸಿದೆ. ಬಿ.ಎಸ್‌ ಯಡಿಯೂರಪ್ಪ ಅವರ ರಾಜಕೀಯ ಪ್ರಭಾವಳಿಯಲ್ಲಿ ರಾಜ್ಯ ರಾಜಕಾರಣದ ಮುಖ್ಯ ಸ್ತರಕ್ಕೆ ಬಂದ ಅವರ ಮಗ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಹೈಕಮಾಂಡ್‌ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿಕೊಳ್ಳುವಾಗ ಸೃಷ್ಟಿಯಾಗಿದ್ದ ಅಸಮಾಧಾನವನ್ನು ದಿಲ್ಲಿ ನಾಯಕರು ತೀರಾ ಏನೂ ಅಲ್ಲ ಎಂಬಂತೆ ನಿರಾಕರಿಸಿರುವುದೇ ಇಂದು ಬಿಜೆಪಿ ಕಂಡಕಂಡೆಲ್ಲಾ ಬಾಗಿಲುಗಳಾಗಿ ಬದಲಾಗುವುದಕ್ಕೆ ಮೂಲ ಕಾರಣ. ಪಕ್ಷದಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಾ ರಾಜ್ಯ ರಾಜಕಾರಣದಲ್ಲಿ ಪ್ರಭಾವಿಗಳಾಗಿ ಕಾಣಿಸಿಕೊಂಡವರಿಗೆ ಅನುಭವಕ್ಕೆ ತಕ್ಕಂತೆ ಅಧಿಕಾರ, ಹುದ್ದೆ ಸಿಕ್ಕದ ಹಾಗೆ ನೋಡಿಕೊಂಡವರಿಗೆ ತಿರುಗೇಟು ಎನ್ನುವಂತೆ ಯತ್ನಾಳ್‌ ಯಡಿಯೂರಪ್ಪ ವಿರುದ್ಧ ನೇರಾನೇರವಾಗಿ, ಮುಲಾಜಿಲ್ಲದೇ ಧ್ವನಿ ಎತ್ತಿದಾಗ, ರಾಜ್ಯದ ಜನರು ಕೂಡ ʼಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾನೆ…. ಎಟುಕದ ದ್ರಾಕ್ಷಿ ಹುಳಿʼ ಎಂಬಂತಹ ಅಭಿಪ್ರಾಯವನ್ನೇ ಇರಿಸಿಕೊಂಡಿದ್ದರು. ಆದರೆ, ಕಾಲಕ್ರಮೇಣ ಯತ್ನಾಳ್‌ ಅವರೊಂದಿಗೆ ಮತ್ತೊಂದಿಷ್ಟು ಅತೃಪ್ತ ನಾಯಕರು ಸೇರ್ಪಡೆಗೊಂಡರು. ಅಸಮಾಧಾನದ ಧ್ವನಿಗೆ ಪುಷ್ಠಿ ದೊರೆಯುತ್ತಾ ಹೋಯಿತು. ಈ ಭಿನ್ನರ ಧ್ವನಿಯನ್ನು ತೀರಾ ಕಡೆಗಣಿಸಿ ನೋಡುವಂತೆಯೂ ಇಲ್ಲ ಎಂಬುವುದು ಈಗ ಸ್ಪಷ್ಟವಾಗಿದಂತಿದೆ.

ಈ ಬಣಗಳ ನಾಯಕರು ಮೊದಲಿನಿಂದಲೂ ಬಿಜೆಪಿ ಪಕ್ಷವನ್ನು ಯಡಿಯೂರಪ್ಪ ಕುಟುಂಬದಿಂದ ಮುಕ್ತಿಗೊಳಿಸುವುದೇ ಪ್ರಧಾನ ಗುರಿಯೆಂದು ಹೇಳುತ್ತಲೇ ಬಂದಿದ್ದಾರೆ. ಹೈಕಮಾಂಡ್‌ ಕೂಡ ಈ ಬಣದ ನಾಯಕರ ಮಾತಿಗೆ ಒಪ್ಪಿ ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಮತ್ತು ಅವರ ಕುಟುಂಬದ ಕಪಿಮುಷ್ಠಿಯಿಂದ ಬಿಡಿಸುವುದಕ್ಕೆ ಒಪ್ಪಿದ್ದಲ್ಲಿ, ಮುಂದಿನ ರಾಜ್ಯ ಬಿಜೆಪಿ ನಾಯಕರು ಯಾರು ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ವಿರೋಧಿಸುತ್ತಿರುವ ನಾಯಕರನ್ನು ಆಹ್ವಾನಿಸಿ ಮಣೆ ಹಾಕುವ ಸ್ಥಿತಿಯಲ್ಲಿಯೂ ಹೈಕಮಾಂಡ್‌ ಇಲ್ಲ. ಅದಾಗಲೇ ಅನೇಕರು ಈಗ ಆ ಒಂದು ಹುದ್ದೆಗಾಗಿ ಟವೆಲ್‌ ಹಾಕಿ ಕಾಯುತ್ತಿದ್ದಾರೆ. ಒಟ್ಟಿನಲ್ಲಿ, ರಾಜ್ಯ ಬಿಜೆಪಿಯಲ್ಲಿ ಏನೇ ಹೊಸ ಬದಲಾವಣೆ ಆಗಬೇಕಾದರೂ, ಈ ಎಲ್ಲಾ ಸಮಸ್ಯೆಗಳಿಗೆ ಹೈಕಮಾಂಡ್‌ ಪರಿಹಾರ ಕಂಡುಕೊಳ್ಳಬೇಕಿರುವುದು ತೀರಾ ಅನಿವಾರ್ಯವಾಗಿದೆ ಎನ್ನುವುದು ನೂರಕ್ಕೆ ನೂರು ಸತ್ಯಾಂಶ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!