spot_img
Saturday, March 21, 2026
spot_img

ಕುಂದಾಪುರ : ಸ್ಮಶಾನಗಳಿಗೆ ಬೇಕಿದೆ ಕಾಯಕಲ್ಪ

ಪುರಸಭೆಯ ನಿರ್ವಹಣೆಯಲ್ಲಿನ ಸ್ಮಶಾನ ದಾಖಲೆಗೆ ಮಾತ್ರ | ಕೋಟೇಶ್ವರದಲ್ಲಿ ವ್ಯವಸ್ಥೆಯ ಅಲಭ್ಯತೆ 

– ಶ್ರೀರಾಜ್‌ ವಕ್ವಾಡಿ
ಉಡುಪಿಯಿಂದ ಸುಮಾರು 36 ಕಿಲೋ ಮೀಟರ್ ದೂರದಲ್ಲಿ ಇರುವ ಕುಂದಾಪುರ, ಪುರಸಭೆಯಾಗಿ ಈಗಾಗಲೇ 52 ವರ್ಷಗಳಾಗಿವೆ. ಆದಾಗ್ಯೂ ಇಲ್ಲಿ ವ್ಯವಸ್ಥಿತವಾದ ಸರ್ಕಾರಿ ಹಿಂದೂ ರುದ್ರಭೂಮಿ ಇಲ್ಲ. ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು ಒಟ್ಟು 14.01 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಪುರಸಭೆಯ ವ್ಯಾಪ್ತಿಗೆ ಒಳಪಡುವ ಕೋಡಿಯಲ್ಲಿರುವ ಹಿಂದೂ ರುದ್ರಭೂಮಿ ವ್ಯವಸ್ಥಿತ ನಿರ್ವಹಣೆ ಇಲ್ಲದೇ ಇದ್ದೂ ಇಲ್ಲದಂತಾಗಿದೆ. ಅಲ್ಲಿನ ಸ್ಥಳೀಯರೇ ಹೇಳುವ ಪ್ರಕಾರ, ಹಲವಾರು ವರ್ಷಗಳಿಂದೀಚೆಗೆ ಒಂದೇ ಒಂದು ಶವ ಸಂಸ್ಕಾರ ಇಲ್ಲಿ ನಡೆದಿಲ್ಲ ಎನ್ನುವುದು ಪುರಸಭೆಯ ಕಾರ್ಯ ನಿರ್ವಹಣೆಗೆ ಹಿಡಿದಿರುವ ಕನ್ನಡಿ.

ಕುಂದಾಪುರದ ಸಂಗಂ ಬಳಿ ಇರುವ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟ್‌ನಿಂದ ನಡೆಸಲ್ಪಡುವ ಹಿಂದೂ ರುದ್ರಭೂಮಿ ಇಲ್ಲದೇ ಹೋಗಿದ್ದರೇ ಇಲ್ಲಿ ಶವ ಸಂಸ್ಕಾರಕ್ಕೆ ಜನ ಮುಖಮುಖ ನೋಡಿಕೊಳ್ಳಬೇಕಿತ್ತು. ಕೋಟೇಶ್ವರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್‌ ಶವ ದಹನ ಯಂತ್ರ ನಿರ್ಮಾಣವಾಗಿದ್ದರೂ ಅದಿನ್ನೂ ಪರಿಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಅಸಮರ್ಥ ಯೋಜನೆಗಿದು ಮತ್ತೊಂದು ಉದಾಹರಣೆ. ಕಟ್ಟಿಗೆಗಳ ಅಲಭ್ಯ, ಸಿಬ್ಬಂದಿಗಳಿಲ್ಲದೇ ಅದು ಇದ್ದೂ ಇಲ್ಲದೇ ಇರುವಂತಿದೆ. ತಿಂಗಳಿಗೆ ಸರಿಸುಮಾರು ಮೂರು ಲಕ್ಷದವರೆಗೆ ನಿರ್ವಹಣೆಗೆ ವೆಚ್ಚ ಬೇಕಾಗುತ್ತದೆ. ಹಿಂದೂ ಸಂಪ್ರದಾಯದಂತೆ ಶವ ಸಂಸ್ಕಾರ ಮಾಡುವವರು ಎಲೆಕ್ಟ್ರಿಕ್‌ ಶವ ದಹನ ಯಂತ್ರವನ್ನು ಬಳಸುವುದು ತೀರಾ ಕಡಿಮೆ. ಮಹಾ ನಗರಗಳಲ್ಲಿ ತೀರಾ ಅಗತ್ಯವಿರುವ ಇಂತಹ ಅತ್ಯಾಧುನಿಕ ವ್ಯವಸ್ಥೆ ಕೋಟೇಶ್ವರದಂತಹ ಪ್ರದೇಶಗಳಿಗೆ ಅಗತ್ಯವೂ ಇಲ್ಲ ಎನ್ನುವುದು ಇಲ್ಲಿ ಪ್ರಮುಖಾಂಶ. ಆದಾಗ್ಯೂ ಇಲ್ಲಿ ಕೆಲವು ತಿಂಗಳ ಹಿಂದೆಯೇ ನಿರ್ಮಿಸಲಾಗಿದೆ. ಈವರೆಗೆ ಇನ್ನೂ ಟೆಸ್ಟಿಂಗ್‌ ಕೂಡ ಆಗಿಲ್ಲ ಎನ್ನುವುದು ದುರಂತವೇ ಸರಿ.

ಹಾಗಾಗಿ ತೆಕ್ಕಟ್ಟೆಯಿಂದ ಹಿಡಿದು ಮರವಂತೆ, ಬೈಂದೂರುವರೆಗಿನ ಜನರ ಮೃತದೇಹಗಳು ಸಂಸ್ಕಾರದ ಸಲುವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟ್‌ನಿಂದ ನಡೆಸಲ್ಪಡುವ ಹಿಂದೂ ರುದ್ರಭೂಮಿಗೆ ಆಗಮಿಸುತ್ತವೆ. ಅತ್ತ ಗಂಗೊಳ್ಳಿ, ತ್ರಾಸಿ, ಕೋಟೇಶ್ವರ, ಕೋಡಿಯಲ್ಲಿ ರುದ್ರಭೂಮಿಗಳಿದ್ದರೂ ಅಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಇರುವ ಕಾರಣದಿಂದ ಸಂಗಮ್ ಬಳಿಯ ರುದ್ರಭೂಮಿಗೆ ಜನ ಹೆಚ್ಚಾಗಿ ಶವಸಂಸ್ಕಾರಕ್ಕೆ ಆಗಮಿಸುತ್ತಾರೆ.

ಒಂದು ಶವ ಸಂಸ್ಕಾರಕ್ಕೆ ಸುಮಾರು ಎರಡುವರೆ ಮೂರು ಗಂಟೆ ಸಮಯ ತಗುಲುತ್ತದೆ. ಇಲ್ಲಿ 4 ಚಿತಾಗಾರ ಇದ್ದು ಎಲ್ಲವೂ ಕಟ್ಟಿಗೆಯವೇ ಆಗಿವೆ. ಒಮ್ಮೊಮ್ಮೆ ಐದಾರು ಪಾರ್ಥೀವ ಶರೀರಗಳು ಒಟ್ಟೊಟ್ಟಿಗೆ ಆಗಮಿಸುತ್ತವೆ. ಇಂತಹ ಸಂದರ್ಭಗಳಲ್ಲಿ ತುಸು ಹೆಚ್ಚೇ ಜನಸಂದಣಿ ಹಕಂಡು ಬರುತ್ತದೆ. ಕೋಟೇಶ್ವರದಲ್ಲಿರುವ ರುದ್ರಭೂಮಿಯನ್ನು ನಿರ್ಮಿತಿ ಕೇಂದ್ರ ಆದಷ್ಟು ಬೇಗ ಉಪಯೋಗಕ್ಕೆ ಬಿಟ್ಟುಕೊಟ್ಟಲ್ಲಿ ಮತ್ತು ಕೋಡಿಯಲ್ಲಿರುವ ಇನ್ನೂ ಪ್ರಯೋಜನಕ್ಕೆ ಬಾರದೇ ಇರುವ ಸ್ಮಶಾನವನ್ನು ಸರಿಯಾಗಿ ನಿರ್ವಹಣೆ ಮಾಡಿದರೇ ಅನುಕೂಲ ಆಗುತ್ತದೆ.

ಕೋಡಿ ಸ್ಮಶಾನ ನಾಮಕಾವಸ್ಥೆಗಷ್ಟೆ  

ಪುರಸಭೆಯ ವ್ಯಾಪ್ತಿಯ ಕೋಡಿ ಮಧ್ಯ ವಾರ್ಡ್‌ ನಲ್ಲಿ ಸ್ಮಶಾನ ಇದ್ದರೂ ಅದು ಅಂತ್ಯಕ್ರಿಯೆಗೆ ಯೋಗ್ಯವಾಗಿಲ್ಲ. ಸ್ಮಶಾನದ ಮೇಲ್ಚಾವಣಿ ಗಾಳಿಗೆ ಹಾರಿ ಹೋಗಿದೆ. ಚಿತಾಗಾರವೂ ವ್ಯವಸ್ಥಿತವಾಗಿ ಇಲ್ಲ. ಹೇಳುವುದಕ್ಕೆ ಕೇಳುವುದಕ್ಕೆ ಇಲ್ಲಿ ಯಾರೂ ಇಲ್ಲ. ಸೌಲಭ್ಯಗಳ ಅಲಭ್ಯತೆ ಎದ್ದು ಕಾಣುತ್ತಿದೆ. ಪುರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಗಂಧಗಾಳಿ ಗೊತ್ತಿಲ್ಲ. ಹೆಸರಿಗಷ್ಟೇ ರುದ್ರಭೂಮಿ, ಹಲವಾರು ವರ್ಷಗಳಿಂದ ಇಲ್ಲಿ ಒಂದೇ ಒಂದು ಶವ ಸಂಸ್ಕಾರ ಮಾಡಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ದಾಖಲಾತಿಗೆ ಮಾತ್ರ ಇರುವ ಈ ಸ್ಮಶಾನದಲ್ಲಿ ವ್ಯವಸ್ಥಿತ ನಿರ್ವಹಣೆ ಮಾಡಿದ್ದಲ್ಲಿ ಜನರಿಗೂ ಅನುಕೂಲವಾಗುತ್ತದೆ.

ಸಾರ್ವಜನಿಕರ ಬಳಕೆಗೆ ದೊರಕದ ಕೋಟೇಶ್ವರ ರುದ್ರಭೂಮಿ

ಕೋಟೇಶ್ವರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಇರುವ ಹಿಂದೂ ರುದ್ರಭೂಮಿಯೂ ಸದ್ಯ ಅವ್ಯವಸ್ಥೆಯಿಂದ ಕೂಡಿದೆ. ವಿಧಾನ ಪರಿಷತ್‌ ಸದಸ್ಯರಾಗಿದ್ದ ಪ್ರತಾಪಚಂದ್ರ ಶೆಟ್ಟಿ ಅವರು ಶಾಸಕರ ಸ್ಥಳೀಯರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು ೩೫ ಲಕ್ಷ ವೆಚ್ಚದಲ್ಲಿ ವಿದುತ್‌ ಚಿತಾಗಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಉಡುಪಿ ನಿರ್ಮಿತಿ ಕೇಂದ್ರಕ್ಕೆ ಯೋಜನೆಯನ್ನು ಹಸ್ತಾಂತರಿಸಲಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಯೋಜನೆಯನ್ನು ಒಪ್ಪಿಸಿ ೨ ವರ್ಷಗಳಾದರೂ ಬಳಕೆಗೆ ಇನ್ನೂ ಬಿಟ್ಟುಕೊಟ್ಟಿಲ್ಲ. ಅಂತಿಮ ಟೆಸ್ಟಿಂಗ್‌ ಅನ್ನು ಕೂಡ ಈವರೆಗೆ ಮಾಡಿಲ್ಲ. ಆದಷ್ಟು ಬೇಗ ಸಾರ್ವಜನಿಕರ ಬಳಕೆಗೆ ಬಿಟ್ಟುಕೊಟ್ಟಲ್ಲಿ ಶವ ಸಂಸ್ಕಾರಕ್ಕಾಗಿ ಈ ಭಾಗದ ಜನರು ಕುಂದಾಪುರಕ್ಕೆ ತೆರಳುವ ಅಗತ್ಯವಿಲ್ಲ.


(ಕೋಟೇಶ್ವರದ ವಿದ್ಯುತ್‌ ಶವ ದಹನ ಯಂತ್ರ)

ರುದ್ರಭೂಮಿಯ ಸಂಪೂರ್ಣ ಕಸ ತ್ಯಾಜ್ಯಗಳಿಂದ ತುಂಬಿದ್ದು, ಕಳೆಗಳು ತುಂಬಿಕೊಂಡಿವೆ. ನಿರ್ವಹಣೆ ಇಲ್ಲದೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ನಿರ್ವಹಿಸಬೇಕಾದ ಕೋಟೇಶ್ವರ ಗ್ರಾಮ ಪಂಚಾಯತ್‌ ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.

ಒಟ್ಟಿನಲ್ಲಿ, ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಈ ಸ್ಮಶಾನಗಳಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸುವಲ್ಲಿ ಶೀಘ್ರವಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವ ತುರ್ತಿದೆ.

ಪುರಸಭೆಯ ಸಹಕಾರವಿಲ್ಲ
ಕುಂದಾಪುರದ ಸಂಗಂ ಬಳಿ ಇರುವ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟ್‌ನಿಂದ ನಡೆಸಲ್ಪಡುವ ಹಿಂದೂ ರುದ್ರಭೂಮಿಗೆ ಪುರಸಭೆಯಿಂದ ಯಾವುದೇ ಸಹಕಾರ ಇಲ್ಲ. ಶವ ಸಂಸ್ಕರಕ್ಕಾಗಿ ಸೌದೆ, ಅಂಬುಲೆನ್ಸ್‌ ಹಾಗೂ ಸಿಬ್ಬಂದಿಗಳಿಗಾಗಿ ಅಲ್ಪ ಮೊತ್ತವನ್ನು ತೆಗೆದುಕೊಳ್ಳಲಾಗುತ್ತಿದೆ. ಸುಮಾರು ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ದೇವಸ್ಥಾನದ ವತಿಯಿಂದಲೇ ಈ ಹಿಂದೂ ರುದ್ರಭೂಮಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಪರಸಭೆಯಿಂದ ಯಾವುದೇ ಸಹಕಾರವನ್ನು ತೆಗೆದುಕೊಳ್ಳಲಾಗುತ್ತಿಲ್ಲ.
-ಕೆ. ರಾಧಾಕೃಷ್ಣ ಶೆಣೈ
ಅಧ್ಯಕ್ಷರು, ವೆಂಕಟರಮಣ ದೇವಸ್ಥಾನದ ಟ್ರಸ್ಟ್‌.


ಸಾಧ್ಯವಾದ ಎಲ್ಲಾ ಸಹಕಾರ ನೀಡಿದ್ದೇವೆ
ಪುರಭೆಯ ವ್ಯಾಪ್ತಿಯಲ್ಲಿ ಬರುವ ಕೋಡಿಯಲ್ಲಿರುವ ಸ್ಮಶಾನಕ್ಕೆ ಬೇಕಾದ ಎಲ್ಲಾ ಸೌಕರ್ಯವನ್ನು ಒದಗಿಸಲಾಗಿದೆ. ಅದರ ನಿರ್ವಹಣೆಯನ್ನು ಸಾರ್ವಜನಿಕರಿಗೆ ನೀಡಲಾಗಿದೆ ಎಂದಿದ್ದಲ್ಲದೇ, ಕುಂದಾಪುರದ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟ್‌ನಿಂದ ನಡೆಸಲ್ಪಡುವ ಹಿಂದೂ ರುದ್ರಭೂಮಿಗೂ ಪುರಸಭೆಯಿಂದ ಸಾಧ್ಯವಿರುವ ಎಲ್ಲಾ ಸಹಕಾರ ನೀಡಲಾಗುತ್ತಿದೆ.
-ಮೋಹನದಾಸ್‌ ಶೆಣೈ
ಅಧ್ಯಕ್ಷರು, ಪುರಸಭೆ ಕುಂದಾಪುರ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!