spot_img
Friday, March 6, 2026
spot_img

ಸುವರ್ಣ ಜೇಸೀಸ್‌ ನಾಟಕೋತ್ಸವ : ಹೃದಯಸ್ಪರ್ಶಿ ಆಯೋಜನೆ

ಐದು ನಾಟಕಗಳ ಸಂಕ್ಷಿಪ್ತ ವಿಮರ್ಶೆ, ತೇಲ್ನೋಟ 

ಮನುಷ್ಯ ತನ್ನ ಬದುಕಿನ ಎಲ್ಲಾ ಸಿಕ್ಕು ಸವಾಲುಗಳನ್ನು ಜಗತ್ತಿನೊಂದಿಗೆ ಸಮೀಕರಿಸುತ್ತಲೇ ತನ್ನ ಬದುಕಿನ ಎಲ್ಲಾ ಭೂತ, ವರ್ತಮಾನ ಹಾಗೂ ಭವಿಷ್ಯದ ಹೆಜ್ಜೆಗಳನ್ನು ಜೋಡಿಸಿಕೊಳ್ಳುತ್ತಲೇ ಸಮಾಜದ ಮುಂದೆ ಒಂದೊಂದಾಗಿ ಹಲವಾರು ಅಬಿವ್ಯಕ್ತಿ ಮಾಧ್ಯಮಗಳ ಮುಖೇನ ಇರಿಸುತ್ತಲೇ ಬಂದಿದ್ದಾನೆ. ಈ ಮೂಲಕ ತನ್ನ ಬದುಕಿನ ವಿಕಾಸವನ್ನು ಕಾಣುತ್ತಾ, ಸಮೃದ್ಧ ವಿಶಾಲ ಜಗತ್ತಿನೊಂದಿಗೆ ಬೆರೆಯಲು ತನನ್ನು ತಾನೇ ಸ್ವಸ್ಥವಾಗಿರಿಸಿಕೊಳ್ಳುವ ಘನ ಉದ್ದೇಶದಿಂದ ಹಲವಾರು ಅಭಿವ್ಯಕ್ತಿ ಮಾಧ್ಯಮಗಳ ಅನ್ವೇಷಣೆಯೂ ಅವನಿಂದಾಗಿದೆ. ಆ ಪೈಕಿ ರಂಗಭೂಮಿಯ ಅಭಿವ್ಯಕ್ತಿಯೂ ಒಂದು. ಬೌದ್ಧಿಕ ಹಾಗೂ ತಾತ್ವಿಕ ಚಿಂತನೆಗಳನ್ನು ದೃಶ್ಯ ಮಾಧ್ಯಮಗಳ ಮೂಲಕ ಸಮಾಜದ ಪರಿವರ್ತನೆಗೆ ಮಹತ್ತರವಾದದ್ದನ್ನೇ ನೀಡಿರುವ ಈ ರಂಗಭೂಮಿ ಎನ್ನುವ ದೃಶ್ಯಕಾವ್ಯ ಮಾಧ್ಯಮ ಇಂದು ಒಂದು ವರ್ಗದ ಜನರ ಅಭಿವ್ಯಕ್ತಿಗಾಗಿ ಮತ್ತು ರಂಜನೆಗಾಗಿ ಮಾತ್ರವೇ ಉಳಿದಿದೆ ಎನ್ನುವ ಕಾಲಘಟ್ಟದ ನಡುವೆ ಒಂದಿಷ್ಟು ಪ್ರಜ್ಞಾವಂತ ಸಂಘಟನೆಗಳು, ಸಂಸ್ಥೆಗಳು ಈ ಅಭಿವ್ಯಕ್ತಿಯ ಮೂಲಕ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುತ್ತಿರುವುದು ಅಕ್ಷರಶಃ ಸ್ತುತ್ಯಾರ್ಹ.

ರಂಜನೆಗೆ ಇಂದು ಅನೇಕ ಮಾಧ್ಯಮಗಳಿವೆ. ರಂಜನೆಯ ರೂಪವೂ ಬದಲಾಗಿದೆ. ರಂಜನೆಗೆ ಒಂದು ಸಿದ್ಧ ಮಾದಿರಿಯೂ ಬಂದು ಬಿಟ್ಟಿದೆ. ಇವೆಲ್ಲದಕ್ಕೂ ನಮ್ಮ ಮಾನಸಿಕ ವಿಕೃತಿಯೇ ಕಾರಣ. ಬರೀ ಮಾತು, ಕೃತಿ ಗ್ರಂಥಗಳಿಗಷ್ಟೇ ಸಿಮಿತವಾಗಿದ್ದ ತತ್ವ ಚಿಂತನೆಗಳ ಒಂದು ಸಿದ್ಧ ಮಾದರಿಯನ್ನು ಒಡೆದು ಅದನ್ನು ದೃಶ್ಯಕಾವ್ಯದ ಮೂಲಕವೂ ಸಮಾಜಕ್ಕೆ ತಲುಪಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿರುವುದು ರಂಗಭೂಮಿ ನಾಟಕಗಳು. ರಂಗಭೂಮಿ ನಾಟಕಗಳಿಗೆ ವೇದಿಕೆಗಳನ್ನು ಕಲ್ಪಿಸಿಕೊಡುವ ಮೂಲಕ ಆ ಚಿಂತನೆ ಅಥವಾ ಹೊಸ ಹೊಳವು ಮತ್ತಷ್ಟು ಆಳ ಅಗಲದಲ್ಲಿ ವಿಸ್ತಾರವಾಗುವ ಹಾಗೆ ಒಂದಿಷ್ಟು ಸಂಸ್ಥೆಗಳು ಕೂಡ ನೆರವಾಗುತ್ತಿವೆ. ಆ ಪೈಕಿ  ಜೆಸಿಐ ಕುಂದಾಪುರವೂ ಒಂದು. ತನ್ನ ಆಯೋಜನೆಯ ಪ್ರತಿ ಹಂತದಲ್ಲಿಯೂ ಸಾಮಾಜಿಕ ಜವಾಬ್ದಾರಿಯನ್ನು ಮರೆಯದೆ ಸದಾ ಮಹತ್ವದ್ದನ್ನೇ ನೀಡುತ್ತಾ ಬಂದಿರುವ ಸಂಸ್ಥೆ ಜೆಸಿಐ ಕುಂದಾಪುರ. ಶಿಸ್ತು ಸೂಚಕ ಆಯೋಜನೆ. ವ್ಯವಸ್ಥಿತ ಕಾರ್ಯಕ್ರಮಗಳ ಸ್ವರೂಪ ಸೃಷ್ಟಿಸುವಲ್ಲಿ ಜೆಸಿಐ ಕುಂದಾಪುರ ಒಂದು ಹಂತ ಮೇಲೆಯೇ ನಿಲ್ಲುತ್ತದೆ. ತನ್ನ ಸುವರ್ಣ ಸಂಭ್ರಮದ ಆಯೋಜನೆಯ ಪ್ರಾಥಮಿಕ ಭಾಗವಾಗಿ ಐದು ದಿನಗಳ ʼಸುವರ್ಣ ಜೇಸೀಸ್‌ ನಾಟಕೋತ್ಸವʼ ಆಯೋಜಿಸಿರುವುದು ಅಭಿನಂದನಾರ್ಹ.

ಕುಂದಾಪುರದ ಕಲಾ ಮಂದಿರದಲ್ಲಿ ನಡೆದ ಈ ನಾಟಕೋತ್ಸವ ಹೃದಯ್ಪರ್ಶಿ ಅನುಭವ ನೀಡಿರುವುದಂತೂ ಸತ್ಯ. ಜನ ಕಿಕ್ಕಿರಿದು ಸೇರಿಲ್ಲವಾದರೂ ಸಭಾಂಗಣ ತುಂಬವಷ್ಟಂತೂ ಇದ್ದರು. ಮತ್ತೆ ಸೇರಿದವರೆಲ್ಲರೂ ಪ್ರಜ್ಞಾವಂತ ಪ್ರೇಕ್ಷಕರೇ ಎನ್ನುವುದರಲ್ಲಿ ಅನುಮಾನವಿಲ್ಲ. ಬಹುಶಃ ಜೆಸಿಐ ಕುಂದಾಪುರ ಅವರ ಟಾರ್ಗೇಟ್‌ ಗ್ರೂಪ್‌ ಕೂಡ ಅದೇ ಆಗಿದೆ. ಚುಟುಕು ಸಭಾ ಕಾರ್ಯಕ್ರಮ, ಕ್ಲಪ್ತ ಸಮಯಕ್ಕೆ ನಾಟಕ ಪ್ರದರ್ಶನ ಆರಂಭ ಎಲ್ಲವೂ ಸುವ್ಯವಸ್ಥಿತ.

ದಟ್ಸ್‌ ಆಲ್‌ ಯುವರ್‌ ಆನರ್‌ :

ಶಶಿರಾಜ್‌ ಕಾವೂರು ರಚನೆ, ನಿರ್ದೇಶನದ, ರಂಗ ಸಂಗಾತಿ ಪ್ರತಿಷ್ಠಾನ ರಿ. ಮಂಗಳೂರು ಪ್ರಸ್ತತಪಡಿಸಿದ ನಾಟಕ ʼದಟ್ಸ್‌ ಆಲ್‌ ಯುವರ್‌ ಆನರ್‌ʼ ನಾಟಕೋತ್ಸವದ ಮೊದಲನೇ ದಿನದ ನಾಟಕ. ಕೋರ್ಟ್‌ ಕಲಾಪಗಳ ವಿಷಯಾಧಾರಿತವಾಗಿ ಆರಂಭದಿಂದ ಕೊನೆಯವರೆಗೆ ನಾಟಕ ಸಾಗುತ್ತದೆ. ಕೋರ್ಟ್‌ನ ನ್ಯಾಯಾಧೀಶ ಮನೆಯಿಂದ ಕೋರ್ಟ್‌ಗೆ ಸಂಚರಿಸುತ್ತಿರವಾಗ ಒಬ್ಬ ಸಾಮಾನ್ಯನಿಂದ ಉಂಟಾದ ಸಣ್ಣ ಅಡ್ಡಿ, ದೂರು, ವಿಚಾರಣೆ, ಅಧಿಕಾರದ ದರ್ಪ ಹೀಗೆ ಕೆಲವು ಎಳೆಗಳನ್ನು ಆಧರಿಸಿಕೊಂಡು ರಚಿಸಿದ ಒಳ್ಳೆಯ ಅಭಿವ್ಯಕ್ತಿ. ಸತ್ಯ, ನ್ಯಾಯ, ಪ್ರತಿಷ್ಠೆ, ಅಧಿಕಾರ ಹಾಗೂ ಸತ್ಯವನ್ನು ಸುಳ್ಳಾಗಿಸುವ ತಂತ್ರ ಇವೆಲ್ಲದರ ನಡುವೆ ಹೆಣೆದುಕೊಂಡ ಈ ನಾಟಕ ಒಂದು ಅಧ್ಯಯನಶೀಲ ವಿಷಯವೊಂದನ್ನು ಪ್ರೇಕ್ಷಕನ ಮುಂದಿಡುತ್ತದೆ. ಅಲ್ಲಲ್ಲಿ ಸಂಭಾಷಣೆಗೆ ಬಳಸಿಕೊಂಡಿರುವ  ಸಂಸ್ಕೃತ ಶ್ಲೋಕಗಳು, ಅರ್ಥಪೂರ್ಣ ಸಂಭಾಷಣೆ, ಕೋರ್ಟ್‌ ವಿಚಾರಣೆಯ ನಡುವೆಯೇ ತಿಳಿ ಹಾಸ್ಯ ಎಲ್ಲವೂ ಪ್ರದರ್ಶನಕ್ಕೆ ಹೆಚ್ಚುಗಾರಿಕೆಯನ್ನು ತುಂಬಿಸುತ್ತವೆ. ಕೋರ್ಟ್‌ನ ನ್ಯಾಯಾಧೀಶನನ್ನೂ ನ್ಯಾಯಾಲಯದ ಕಟಕಟೆಗೆ ಹತ್ತಿಸಬಹುದು ಎನ್ನುವುದನ್ನು ನಾಟಕ ಬಹಳ ಗಂಭೀರವಾಗಿ ಹೇಳಿದೆ. ಬಹಳ ದೊಡ್ಡ ಸೃಷ್ಠಿಶೀಲ ರಂಗಸಜ್ಜಿಕೆ ಇಲ್ಲದೇ ಇದ್ದರೂ, ಇಂತಹದ್ದೊಂದು ವಿಷಯವನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನ ಯಶಸ್ವಿಯಾಗಿ ತಂಡ ಮಾಡಿದೆ. ರಂಗದ ಮೇಲೆ ಸ್ವಲ್ಪ ಚುರುಕು ಕಡಿಮೆ ಆಯ್ತೇನೋ, ಕೆಲವು ಕಡೆ ಸಂಭಾಷಣೆಗಳನ್ನು ಪ್ರೇಕ್ಷಕರಿಗೆ ಸ್ಪಷ್ಟವಾಗಿ ತಲುಪಿಸುವಲ್ಲಿ ಕಲಾವಿದರು ಎಡವಿದರು ಅನ್ನಿಸಿತು ಬಿಟ್ಟರೇ, ಒಳ್ಳೆಯ ಪ್ರಸ್ತುತಿ.

ಬರ್ಬರಿಕ :

ಬಿ. ಎಸ್.‌ ರಾಮ್‌ ಶೆಟ್ಟಿ ಹಾರಾಡಿ ನಿರ್ದೇಶನದ, ಶಶಿರಾಜ್‌ ಕಾವೂರು ರಚನೆಯ, ಭೂಮಿಕಾ ಹಾರಾಡಿ ಪ್ರಸ್ತುತಪಡಿಸಿದ ನಾಟಕ ಬರ್ಬರಿಕ. ಪುರಾಣ ಕಥೆಯ ಮರು ಓದಿಗೆ ಅಥವಾ ಮರು ಚಿಂತನೆಗೆ ಈ ನಾಟಕ ಸಹಾಯ ಮಾಡುತ್ತದೆ. ಉಳ್ಳವರು, ಇಲ್ಲದವರ ಮೇಲೆ ತೋರಿಸುವ ದರ್ಪವನ್ನು ಬಹಳ ಚೆನ್ನಾಗಿ ಈ ಪೌರಾಣಿಕ ಕಥೆಯ ಮೂಲಕ ವಿಂಡಬನಾತ್ಮಕವಾಗಿ ತೋರಿಸಿದ್ದಾರೆ. ಕಾಡು ಜನರ ಒಂದು ಮೇಳದ ಪ್ರವೇಶ ಗೀತೆಯ ಮೂಲಕ ಆರಂಭಗೊಳ್ಳುವ ಈ ʼಬರ್ಬರಿಕʼ ನಾಟಕ, ಕಲಾವಿದರ ಅಭಿನಯಕ್ಕಿಂತ ಹೆಚ್ಚಾಗಿ ವೈಭವದ ರಂಗಸಜ್ಜಿಕೆ, ಹಿನ್ನಲೆ ಸಂಗೀತ, ಗಾಯಕಿಯ ಧ್ವನಿ, ಸಾಹಿತ್ಯದ ಮೂಲಕವೇ ಸೆಳೆಯುತ್ತದೆ. ವೃತ್ತಿಪರ ಕಲಾವಿದರು ಅಲ್ಲ ಎನ್ನುವ ಕಾರಣಕ್ಕೆ ಕಲಾವಿದರ ಮೇಲೆ ಪ್ರೇಕ್ಷಕರ ವಲಯದಲ್ಲಿನ ಒಬ್ಬ ವಿಮರ್ಶಕ ದಯೆ ತೋರಬಹದು. ಅಷ್ಟಾಗಿಯೂ ಬರ್ಬರಿಕ, ಹಿಡಿಂಬಿ, ಮೌರ್ವಿ, ಭೀಮ, ಕೃಷ್ಣನ ಪಾತ್ರಧಾರಿಗಳ ಅಭಿನಯವನ್ನು ಮೆಚ್ಚಲೇ ಬೇಕು. ಉಳಿದ ಕಲಾವಿದರ ಪ್ರಯತ್ನವೂ ಅಭಿನಂದನಾರ್ಹ.

ʼಬರ್ಬರಿಕನನ್ನು ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಕೃಷ್ಣ ಚಾಣಾಕ್ಷ ತಂತ್ರದ ಮೂಲಕ ಸಾಯಿಸುವಾಗ ಕತ್ತಿ/ಖಡ್ಗದ ಮೂಲಕ ಸಾಯಿಸಿದ್ದು, ಕೃಷ್ಣನ ದರ್ಬಾರ್‌ನಲ್ಲಿ ಅರ್ಜುನ ಖಡ್ಗವನ್ನು ಹಿಡಿದಿರುವುದನ್ನು ತಪ್ಪುʼ ಎಂದು, ʼಕೃಷ್ಣ ಬರ್ಬರಿಕನನ್ನು ಚಕ್ರದಿಂದ ಸಾಯಿಸಿದನೆಂದು, ಅರ್ಜುನ ಧನುರ್ಧಾರಿಯಾಗಿರಬೇಕಿತ್ತೆಂದುʼ ಹಿರಿಯರೊಬ್ಬರು ನಾಟಕ ಪ್ರದರ್ಶನದ ಬಳಿಕ ಹೇಳಿದರು. ಆದರೇ, ಕೃಷ್ಣ ಅರ್ಜುನನಿಗೆ ಮಹಾಭಾರತದ ಯುದ್ಧದ ಸಂದರ್ಭದಲ್ಲಿ ವಿಶ್ವರೂಪ ದರ್ಶನ ತೋರಿಸುವಾಗ ಸರ್ವಾಯುಧವನ್ನು ಹಿಡಿದಿರುವ ಪರಿಕಲ್ಪನೆಯನ್ನು ನಾವು ಕಾಣುತ್ತೇವೆ. ಅರ್ಜುನ ಕೇವಲ ಧನುರ್ವಿದ್ಯೆಯನ್ನಷ್ಟೇ ಬಲ್ಲವನಲ್ಲ ಎನ್ನುವುದು ಕೂಡ ಸತ್ಯ. ಅವನ ಮಗ ಅಭಿಮನ್ಯು ಚಕ್ರವ್ಯೂಹ ಭೇದಿಸುವಾಗ ಖಡ್ಗವೂ ಹಿಡಿದಿದ್ದ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಇದೇ ವಿಷಯವನ್ನು ಹೇಳಿ ನಿರ್ದೇಶಕರು ಸಮರ್ಥಿಸಿಕೊಳ್ಳಬಹುದಿತ್ತು. ಆದಾಗ್ಯೂ ನಿರ್ದೇಶಕರು ಜಾಣ ಮೌನ ತೋರಿಸಿರುವುದು ಯಾಕೆ ಎನ್ನುವುದು ತಿಳಿದಿಲ್ಲ.

ಮಾಲತೀ ಮಾಧವ :

ಮಾಲತೀ ಮಾಧವ

ಈ ವರ್ಷದ ನೀನಾಸಂ ತಿರುಗಾಟದ ನಾಟಕಗಳಲ್ಲಿ ಒಂದಾದ ಮಾಲತೀ ಮಾಧವ, ಭವಭೂತಿ ಕವಿಯ ಸಂಸ್ಕೃತ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿ, ನಿರ್ದೇಶಿಸಿರುವುದು ಅಕ್ಷರ ಕೆ.ವಿ. ಅವರು. ಪ್ರೇಮಿಗಳಿಬ್ಬರಾದ ಮಾಲತೀ, ಮಾಧವ ತಮ್ಮ ಸಮಾಗಮಕ್ಕೆ ಎದುರಾಗುವ ಅನೇಕ ಕಷ್ಟ, ದುಃಖ, ದುಮ್ಮಾನಗಳನ್ನು ಎದುರಿಸಿ, ಮೀರಿ, ದಾಟಿ ಕಡೆಗೂ ಮಿಲನಗೊಳ್ಳುವ ಕಥೆ. ನೀನಾಸಂ ನಾಟಕಗಳ ಗುಣಮಟ್ಟವೇ ಬೇರೆ. ನೀನಾಸಂ ಪ್ರಸ್ತುತ ಪಡಿಸುವ ನಾಟಕಗಳಲ್ಲಿ ತಪ್ಪುಗಳನ್ನು ಹುಡುಕುವುದು, ವಿಮರ್ಶಿಸುವುದು ತುಸು ಕಷ್ಟದ ಸಂಗತಿ. ಆದಾಗ್ಯೂ, ಗತ ಚರಿತ್ರೆಯ ಹೆಜ್ಜೆಗಳೊಡನೆ, ವಿಶಾಲವಾದ ಭವಿಷ್ಯದ ಹಾದಿಯ ಕಾಣ್ಕೆಯನ್ನು ವಿಶಾಲ ಸಮಾಜದ ಮುಂದೆ ಪ್ರೀತಿ, ಪ್ರೇಮ, ಪ್ರಣಯ, ಮೋಹ, ಕಾಮ ಮಾಯೆಯ ರಸವತ್ತತೆಯ ಮೂಲಕ ತೋರಿಸಬಹುದಾದ ಈ ಕಥೆ ತುಸು ಪೇಲವ ಎನ್ನುವ ಹಾಗೆ ಮೂಡಿಬಂದಿರುವುದು, ʼನೀನಾಸಂ ನಾಟಕʼ ಎಂದು ದೊಡ್ಡ ನಿರೀಕ್ಷೆಯಲ್ಲಿ ಬಂದ ರಂಗಾಸಕ್ತರಿಗೆ ತುಸು ನಿರಾಸೆ ಮೂಡಿಸಿದೆ ಅಂತನ್ನಿಸುತ್ತದೆ. ರಂಗದ ಮೇಲೆ ಈ ಕಥೆಯನ್ನು ತಂದಿರುವ ರೀತಿಯೇ ಸ್ವಲ್ಪ ಸಂಕೀರ್ಣವಾಯ್ತೇನೋ ಅನ್ನಿಸುತ್ತದೆ. ಭೂತ, ಪ್ರೇತ, ಪಿಶಾಚಿಗಳು, ನರಬಲಿ, ಮಾನವ ಮಾಂಸ ಮಾರಾಟ ಇವೆಲ್ಲಾ ನಾಟಕದಲ್ಲಿನ ಕೆಲವು ಸನ್ನಿವೇಶಗಳು ಪ್ರೀತಿ, ಪ್ರೇಮದ ನಡುವೆ ಬಂದಿರುವ ಅನಗತ್ಯ ಸಂಗತಿಗಳು ಎಂದು ಕಾಣಿಸುತ್ತವೆ. ಮತ್ತವು ಪ್ರಸ್ತುತವೂ ಅಲ್ಲ. ಅದನ್ನು ಹೊರತಾಗಿ ಸಂಭಾಷಣೆಗಳು ಮತ್ತದನ್ನು ಕಲಾವಿದರು ಪ್ರಕಟಗೊಳಿಸಿದ ರೀತಿ, ಹಿನ್ನೆಲೆ ಸಂಗೀತ, ರಂಗದ ಮೇಲೆ ಕಲಾವಿದರ ಚುರುಕುತನ, ಭಾವಾಭಿವ್ಯಕ್ತಿ, ಬೆಳಕಿನ ವಿನ್ಯಾಸ ನಿಜಕ್ಕೂ ಅದ್ಭುತ.

ಅಂಕದ ಪರದೆ : 

ಅಂಕದ ಪರದೆ

ಈ ವರ್ಷದ ನೀನಾಸಂ ಪ್ರಸ್ತುತಿಯ ಮತ್ತೊಂದು ನಾಟಕ ʼಅಂಕದ ಪರದೆʼ. ಅಭಿರಾಮ್‌ ಭಡ್ಕಂಕರ್‌ ರಚನೆಯ ಮರಾಠಿ ನಾಟಕವನ್ನು ಕನ್ನಡಕ್ಕೆ ತಂದವರು ಜಯಂತ್‌ ಕಾಯ್ಕಿಣಿ. ವಿದ್ಯಾನಿಧಿ ವನಾರಸೆ ನಿರ್ದೇಶಿಸಿದ್ದಾರೆ. ತಿಳಿ ಹಾಸ್ಯ, ವ್ಯಂಗ್ಯ, ವಿಡಂಬನೆಯೊಂದಿಗೆ ನಗಿಸುತ್ತೆಲೇ ವೃದ್ಧಾಪ್ಯದ ಜೀವನವನ್ನು ಹೆಣೆಯುತ್ತಾ ಸಾಗುವ ನಾಟಕ, ʼವೃದ್ಧಾಪ್ಯʼ ಎಂಬ ಗೋಳು ಅಥವಾ ಮರುಕ ಹುಟ್ಟಿಸದೆ ಮನೋಜ್ಞವಾಗಿ, ಹೃದಯಸ್ಪರ್ಶಿಯಾಗಿ ಮೂಡಿಬಂದಿರುವುದು ಈ ನಾಟಕದ ಹೆಚ್ಚುಗಾರಿಕೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಜೀವನ ನಡೆಸಿ ಜೀವನ ಸಂಧ್ಯಾಕಾಲದಲ್ಲಿ ವೃದ್ಧಾಶ್ರಮವನ್ನು ಸೇರಿದ ಮೇಲಿನ ಜೀವನವನ್ನು ನಾಟಕ ಕಟ್ಟಿಕೊಡುತ್ತದೆ. ʼಹಿರಿಯರಿಗೂ ಘನತೆಯಿಂದ ಬದುಕುವ ಹಕ್ಕಿದೆʼ ಎಂದು ತೋರಿಸುವ ʼಅಂಕದ ಪರದೆʼಯಲ್ಲಿ ವೃದ್ಧ ಪಾತ್ರಗಳು ಸಂಪೂರ್ಣ ಹತಾಶ ಪಾತ್ರಗಳಲ್ಲ, ದುಗುಡವನ್ನು ಮೀರಿ ಅನಿವಾರ್ಯಕ್ಕೆ ಒಪ್ಪಿಕೊಂಡ ಮನಸ್ಥಿತಿಯ ಪಾತ್ರಗಳು. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತಮ್ಮ ಈಗಿನ ಸ್ಥಿತಿಗೆ ವಿಷಾದಿಸುತ್ತಾ ಮಕ್ಕಳ ಮೇಲೆ ತೀರಾ ದ್ವೇಷ ಭಾವನೆಯೂ ಅಲ್ಲದ, ತೀರಾ ಪ್ರೀತಿಯ ಭಾವನೆಯೂ ಅಲ್ಲ ಒಂದು ಥರದ ಅವೆರಡೂ ಭಾವಗಳ ಸಂಕಲನ ಹೊಂದಿದ ಭಾವವನ್ನು ಹೊಂದಿರುವ ವೃದ್ಧರ ಬದುಕಿನ ಕಥೆ. ಇನ್ನು, ನಾಟಕದೊಳಗೆಯೇ ಒಂದು ನಾಟಕವಿದೆ. ಅದೇ ಈ ನಾಟಕದ ಸ್ವಾರಸ್ಯ. ಚಳುವಳಿ, ರಂಗಭೂಮಿ, ಸಿದ್ದಾಂತ, ಚರ್ಚೆ ಸಂವಾದ ಹೀಗೆ ಅನೇಕ ಸಂಗತಿಗಳನ್ನು ನಾಟಕ ಮುಂದಿಡುತ್ತದೆ.

ವಾಸ್ತವ ಜಗತ್ತಿನ ಬಗ್ಗೆ ಗಂಭೀರವಾದ ವಿಡಂಬನೆಯ ಮೂಲಕ ಆತ್ಮ ವಿಮರ್ಶೆಗೆ ಒಳಗಾಗುವಂತೆ ಮಾಡುತ್ತದೆ. ʼಯುವ ಜನರೇ, ನೀವು ಒಂದಿಷ್ಟು ವೃದ್ಧಾಶ್ರಮ ನಿರ್ಮಿಸಿ, ಭವಿಷ್ಯದಲ್ಲಿ ನಿಮಗೂ ಇದರ ಅಗತ್ಯ ಬೀಳಬಹುದುʼ ಎಂಬಂತಹ ಖಾರವಾದ ಸಂಭಾಷಣೆಗಳ ಮೂಲಕ ಚಾಟಿಯೂ ಬೀಸುತ್ತದೆ. ವೃದ್ದಾಪ್ಯ ತಲುಪಿದರೇನಂತೆ ? ಅವುಗಳನ್ನು ಸಮರ್ಥವಾಗಿ ಎದುರಿಸಿ ನಾಳೆಗಳನ್ನು ಜೀವಿಸುವ ಎನ್ನುವ ಸಂದೇಶ ಮಾರ್ಮಿಕವಾಗಿ ತಲುಪುತ್ತದೆ. ಒಂದೊಂದು ಸಂಭಾಷಣೆ, ನೀನಾಸಂ ನಟರ ಆಂಗಿಕ ಅಭಿನಯ ಮನಸ್ಸಿನೊಳಗೆ ಅಚ್ಚಾಗುತ್ತವೆ. ʼಆಜ್‌ ಫಿರ್‌ ಜೀನೆಕಿ ತಮನ್ನಾ ಹೇ…ʼ ಎಂಬ ಗೀತೆಯ ಮೂಲಕ ಹೊಸತೇನೋ ಸಂತಸ ಹುಡುಕಿಕೊಳ್ಳೋಣ ಎನ್ನುತ್ತಲೇ ʼಅಂಕದ ಪರದೆʼ ಮುಚ್ಚಿಕೊಳ್ಳುತ್ತದೆ.

ದಶಾನನ ಸ್ವಪ್ನ ಸಿದ್ಧಿ :

ಭಳಿರೇ ವಿಚಿತ್ರಂ ನಟನೆಯ ಈ ನಾಟಕ ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ಭಾಗ. ತೀರಾ ಖಾಲಿ ಖಾಲಿ ಎನ್ನಿಸುವ ಸಿಂಪಲ್‌ ರಂಗಸಜ್ಜಿಕೆಯ ಬಳಕೆಯಲ್ಲಿ ಪ್ರದರ್ಶನಗೊಂಡ ನಾಟಕ, ಪೂರ್ತಿ ಹಳೆಗನ್ನಡದಲ್ಲೇ ಇರುವ ಕಾರಣಕ್ಕೆ ಬೋರ್‌ ಹಿಡಿಸಿತ್ತು. ಅಭಿನಯ ನಿಜಕ್ಕೂ ಸ್ತುತ್ತಾರ್ಹ. ಪ್ರದರ್ಶನಕ್ಕೆ ಮುನ್ನಾ ಕಥೆಯನ್ನು ಪೂರ್ತಿಯಾಗಿ ವಿವರಿಸಿ ಹೇಳುವ ಅನಿವಾರ್ಯ ಬಂದಿರುವುದೇ ನಾಟಕ ತಂಡದ ಸೋಲು. ಅವಿನಾಶ್‌ ರೈ, ಶ್ವೇತಾ ಅರೆಹೊಳೆ ಅವರ ನಟನೆ ಅದ್ಭುತ. ಆದರೇ, ಸಾಮಾನ್ಯ ರಂಗಾಸಕ್ತನಿಗಂತೂ ಇದು ಹಿಡಿಸುವ ನಾಟಕವಲ್ಲ. ಕುವೆಂಪು ಅವರ ರಾಮಾಯಣ ದರ್ಶನಂ ಬಗ್ಗೆ ಗೊತ್ತಿದ್ದವನಿಗೆ ನಾಟಕ ಅರ್ಥವಾಗುತ್ತದೆ ಬಿಟ್ಟರೆ ಉಳಿದವರಿಗೆ ಅರ್ಥವಾಗುವುದಿಲ್ಲ. ಹಿನ್ನೆಲೆ ಸಂಗೀತವನ್ನು ವಿಶೇಷವಾಗಿ ಅಭಿನಂದಿಸಲೇ ಬೇಕು. ಅದೂ ಇಲ್ಲದಿದ್ದರೇ, ಕೊನೆಗೆ ಸಭಾಂಗಣದಲ್ಲಿ ಬರೀ ಖಾಲಿ ಕುರ್ಚಿಗಳೇ ಕಾಣಿಸುತ್ತಿದ್ದವೋ ಏನೋ. ಮಂಜು ಕೊಡುಗು ನಿರ್ದೇಶನ ಚೆನ್ನಾಗಿದೆ. ಆದರೇ, ಹಳೆಗನ್ನಡವನ್ನು ಸ್ವಲ್ಪ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಆಡು ಭಾಷೆಯ ಕನ್ನಡಕ್ಕೆ ಇಳಿಸಬಹುದಿತ್ತು. ಶ್ವೇತ ಅರೆಹೊಳೆ ನಟಿಸಿದ ಅಷ್ಟೂ ಪಾತ್ರಗಳ ವಸ್ತ್ರ ವಿನ್ಯಾಸ ನಿಜಕ್ಕೂ ಗಮನ ಸೆಳೆಯುವಂತಿದ್ದವು.

ಒಟ್ಟಿನಲ್ಲಿ ಕಲೆ, ಸಾಹಿತ್ಯ, ಸಂವೇದನೆ ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಯಶಸ್ವಿ ಬದುಕಿಗಾಗಿ ಇಂತಹ ನಾಟಕ, ಕಲೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಆಗದಿದ್ದರೂ, ಆಸಕ್ತಿ ಬೆಳೆಸಿಕೊಳ್ಳುವ ಮನಸ್ಸು ಎಲ್ಲರಲ್ಲೂ ಮೂಡಲಿ ಎಂಬ ಸದಾಶಯದೊಂದಿಗೆ ಇಂತಹ ನಾಟಕೋತ್ಸವ ಆಯೋಜಿಸಿರುವ ಜೆಸಿಐ ಕುಂದಾಪುರದ ಮೇಲೆ ಬಹಳ ದೊಡ್ಡ ನಿರೀಕ್ಷೆ ಹುಟ್ಟಿದೆ. ಆ ನಿರೀಕ್ಷೆಯನ್ನು ಸಂಸ್ಥೆ ಹುಸಿಗೊಳಿಸುವುದಿಲ್ಲವೆಂಬ ನಂಬಿಕೆ ಇದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!