spot_img
Thursday, December 26, 2024
spot_img

11 ದಿನಗಳ ಚಳಿಗಾಲದ ಅಧಿವೇಶನಕ್ಕೆ ರೂ. 19.3 ಕೋಟಿಗೂ ಹೆಚ್ಚು ವೆಚ್ಚ !

ಜನಪ್ರತಿನಿಧಿ (ಬೆಳಗಾವಿ) : ಸುವರ್ಣ ವಿಧಾನ ಸೌಧದಲ್ಲಿ ಡಿಸೆಂಬರ್ 9ರಿಂದ 19ರವರೆಗೆ ನಡೆಯುವ 13ನೇ ಚಳಿಗಾಲದ ಅಧಿವೇಶನಕ್ಕೆ ಸುಮಾರು ರೂ. 19.3 ಕೋಟಿಗೂ ಹೆಚ್ಚು ವೆಚ್ಚ ಅಂದಾಜು ಮಾಡಲಾಗಿದೆ.

ಪ್ರತಿ ವರ್ಷ ವೆಚ್ಚದಲ್ಲಿ ಶೇ 10ರಷ್ಟು ಹೆಚ್ಚಳ ಆಗುವುದು ಸಹಜ. ಆದರೆ, ಈ ಬಾರಿ ಅದನ್ನೂ ಕಡಿಮೆ ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ಅಧಿವೇಶನದ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ (2023) ರೂ.17 ಕೋಟಿ ಅಂದಾಜಿಸಲಾಗಿತ್ತು. ಕೊನೆಗೆ ರೂ.23 ಕೋಟಿ ವೆಚ್ಚವಾಗಿತ್ತು. 2022ರಲ್ಲಿ ರೂ.17.50 ಕೋಟಿ ವೆಚ್ಚವಾಗಿತ್ತು. 2012ರಲ್ಲಿ ನಡೆದ ಮೊದಲ ಅಧಿವೇಶನಕ್ಕೆ ರೂ.7.39 ಕೋಟಿ ವೆಚ್ಚವಾಗಿತ್ತು. ಪ್ರತಿವರ್ಷ ನಿರೀಕ್ಷೆಗೂ ಮೀರಿ ವೆಚ್ಚವಾಗುತ್ತಿರುವುದನ್ನು ತಗ್ಗಿಸಲು ಜಿಲ್ಲಾಡಳಿತ ಕಸರತ್ತಿಗೆ ಮುಂದಾಗಿದೆ.

ಈ ಬಾರಿ ಜಿಲ್ಲಾಡಳಿತ ರೂ.13.8 ಕೋಟಿ ಹಾಗೂ ಪೊಲೀಸ್‌ ಇಲಾಖೆ ರೂ.5.5 ಕೋಟಿ ವೆಚ್ಚ ಮಾಡಲು ಸಿದ್ಧವಾಗಿವೆ. ಇದರೊಂದಿಗೆ ಲೋಕೋಪಯೋಗಿ, ಸಾರಿಗೆ, ಪೊಲೀಸ್, ಹೆಸ್ಕಾಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳೂ ತಮ್ಮ ಇಲಾಖೆಯ ಅನುದಾನ ಬಳಸಿಕೊಳ್ಳುತ್ತವೆ. ಅಧಿವೇಶನ ಮುಗಿದ ಬಳಿಕ ಅದರ ಸಂಪೂರ್ಣ ಲೆಕ್ಕಾಚಾರ ಲಭ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಬಹಳ ಪ್ರಮುಖವಾಗಿ ಎಲ್ಲಕ್ಕಿಂತ ಹೆಚ್ಚು ವೆಚ್ಚ ಉಭಯ ಸದನಗಳ ಶಾಸಕರ ವಸತಿ ಹಾಗೂ ಊಟಕ್ಕೆ ಆಗುತ್ತದೆ. ಅದರಲ್ಲೇ ಉಳಿತಾಯ ಮಾಡಲು ಅಧಿಕಾರಿಗಳು ಯೋಚಿಸಿದ್ದಾರೆ. ಕಳೆದ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಊಟಕ್ಕೆ ಪ್ರತಿದಿನ ರೂ.5 ಲಕ್ಷ ಖರ್ಚಾಗಿದೆ.

ಈವರೆಗಿನ ಒಟ್ಟು 12 ಅಧಿವೇಶನಗಳಿಗೆ ರೂ. 154.3 ಕೋಟಿ ವೆಚ್ಚ :

2012 ರಿಂದ ಈವರೆಗೆ ಅಂದರೇ, 2023ರವರೆಗೆ ಒಟ್ಟು 12 ಅಧಿವೇಶನಗಳು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದಿದ್ದು, ರೂ. 154.3 ಕೋಟಿ ಹಣ ಖರ್ಚಾಗಿದೆ. 2006ರಲ್ಲಿ ಮೊದಲ ಚಳಿಗಾಲದ ಅಧಿವೇಶನ ನಡೆಯಿತು. ಆಗ ಸುವರ್ಣ ವಿಧಾನಸೌಧ ನಿರ್ಮಿಸಿರಲಿಲ್ಲ. ಕೆಎಲ್‌ಇ ಸಂಸ್ಥೆಯ ಡಾ.ಜೀರಗೆ ಸಭಾಂಗಣದಲ್ಲಿ ತಾತ್ಕಾಲಿಕ ಸದನ ನಿರ್ಮಿಸಲಾಗಿತ್ತು. 2009ರಲ್ಲಿ ನಡೆದ ಎರಡನೇ ಅಧಿವೇಶನವೂ ಇಲ್ಲೇ ನಡೆದಿತ್ತು. 2012ರಿಂದ ಸೌಧದಲ್ಲಿ ನಡೆಯುತ್ತಿವೆ.

ಶಾಸಕರ ಭವನ : ಮುಗಿಯದ ಚಿಂತೆ !
ಸುವರ್ಣ ವಿಧಾನಸೌಧದ ಬಳಿ ಶಾಸಕರ ಭವನ ಇನ್ನೂ ನಿರ್ಮಾಣವಾಗಿಲ್ಲ. ಇದಕ್ಕೆ ಕನಿಷ್ಠ ರೂ.300 ಕೋಟಿ ಬೇಕು ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಮೊತ್ತ ಸುರಿದರೂ ಬಳಕೆಯಾಗುವುದು 10 ದಿನ ಮಾತ್ರ. ಹಾಗಾಗಿ, ಇದು ಅವೈಜ್ಞಾನಿಕ ಎಂಬುದು ಕೆಲ ಅಧಿಕಾರಿಗಳ ಅಭಿಪ್ರಾಯವಾಗಿದೆ. ಹತ್ತು ದಿನಗಳ ಶಾಸಕರ ವಾಸ್ತವ್ಯಕ್ಕಾಗಿ ಸುಮಾರು ಮುನ್ನೂರು ಕೋಟಿ ವ್ಯಯಿಸಿ ಶಾಸಕರ ಭವನ ನಿರ್ಮಾಣ ಮಾಡುವುದು ವ್ಯರ್ಥವೆನ್ನುವುದು ಅಧಿಕಾರಿಗಳ ಅಭಿಪ್ರಾಯ. ಚಳಿಗಾಲದ ಅಧಿವೇಶನವನ್ನು ಹೊರತಾಗಿ ಉಳಿದಂತೆ ಬೆಂಗಳೂರಿನಲ್ಲೇ ಆಗುವುದರಿಂದ ಈ ದುಂದು ವೆಚ್ಚವನ್ನು ಮಾಡುವುದು ಸೂಕ್ತವಲ್ಲ ಎನ್ನುವುದು ಕೆಲವು ಅಧಿಕಾರಿಗಳ ಅಭಿಪ್ರಾಯ.

ಮುಖ್ಯಮಂತ್ರಿ ಸೇರಿ ಸಚಿವರು, ಶಾಸಕರು, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸಚಿವಾಲಯದ ಅಧಿಕಾರಿಗಳು, ಪತ್ರಕರ್ತರು, ಮಾರ್ಷಲ್‌ಗಳು, ವಾಹನಗಳ ಚಾಲಕರೆಲ್ಲರೂ ಬೆಳಗಾವಿ ನಗರದಲ್ಲೇ ವಾಸ್ತವ್ಯ ಹೂಡಬೇಕು. ಪ್ರತಿದಿನ ಇಲ್ಲಿಂದ ಸೌಧಕ್ಕೆ ಹೋಗಬೇಕು. ಹೀಗಾಗಿ, ವಸತಿಯ ಜತೆಗೆ ಸಾರಿಗೆ ವೆಚ್ಚವೂ ಹೆಚ್ಚಾಗುತ್ತದೆ. ಈ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಅಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!