spot_img
Thursday, December 5, 2024
spot_img

ಡಿಜಿಟಲ್ ಯುಗದಲ್ಲಿ ಸಂಬಂಧಗಳ ಸಂಕೋಚನ

ಬದಲಾಗುತ್ತಿರುವ ಈ ಜಗತ್ತಿನಲ್ಲಿ ಆಧುನಿಕತೆಯ ವಿಸ್ತಾರ ಎಲ್ಲೆಡೆ ಹಬ್ಬುತ್ತಿದೆ. ಇಂದು ನಮ್ಮದು ಡಿಜಿಟಲ್ ಯುಗ ಎಂದೇ ಹೇಳಬಹುದು. ಪ್ರತಿದಿನ ಜೀವನ ನಡೆಸಲು ತಂತ್ರಜ್ಞಾನ ಬೇಕೇ ಬೇಕು ಎನ್ನುವ ಸ್ಥಿತಿಯಲ್ಲಿ ಇಂದು ನಾವಿದ್ದೇವೆ. ನಿಜ ಹೇಳಬೇಕೆಂದರೆ ನಮ್ಮ ದಿನ ಆರಂಭವಾಗುವುದೇ ಈ ಮೊಬೈಲ್ ದರ್ಶನದಿಂದ. ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಜಾಲತಾಣವನ್ನು ಬಿಟ್ಟು ಇರುವವರು ಯಾರು ಇಲ್ಲ ಎಂದೇ ಹೇಳಬಹುದು. ಒಂದಿಲ್ಲೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಮುಳುಗಿ ಹೋಗಿದ್ದಾರೆ.

ಇಂದು ಯಾವುದೇ ಕಾರ್ಯಕ್ರಮ, ಹಬ್ಬ ಹರಿದಿನಗಳೆಂದು ಜನ ಸೇರುತ್ತಾರಾದರೂ ಪ್ರತಿಯೊಬ್ಬರು ತಮ್ಮ ತಮ್ಮ ಮೊಬೈಲ್ ಹಿಡಿದು ಕುಳಿತರೆ ಮತ್ತೆ ಯಾರಾದರೂ ಬಂದು ಊಟಕ್ಕಾಯ್ತು ಎನ್ನುವಾಗಲೇ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೂ ಮೊದಲೇ ಅವರು ಎದ್ದರೆ ಅದು ಚಾರ್ಜಿಂಗ್ ಪಾಯಿಂಟ್ ಹುಡುಕಲು ಎಂದರ್ಥ. ಆಸ್ಪತ್ರೆಯಲ್ಲಿ ಕಾಯಿಲೆ ಮಲಗಿದ್ದವರನ್ನು ನೋಡಲು ಹೋದಾಗಲೂ ಅವರ ಪಕ್ಕದಲ್ಲಿ ಕುಳಿತು ಮೊಬೈಲ್ ನೋಡುತ್ತಾ ಕಾಲ ಕಳೆಯುವವರಿದ್ದಾರೆ. ಅಜ್ಜಿ ಮನೆಗೆ ರಜೆಗೆಂದು ಹೋಗಿ ಬರೀ ಮೊಬೈಲ್ ನೋಡುತ್ತಲೇ ಕಾಲಹರಣ ಮಾಡುತ್ತಾ ಕುಳಿತರೆ ಇವರು ಬರದಿದ್ದರೆ ಚೆನ್ನಾಗಿತ್ತು ಎಂದು ಅವರಿಗೆ ಎನಿಸಬಹುದು ಅಲ್ಲವೇ…?

ಜಗತ್ತು ಡಿಜಿಟಲೀಕರಣದತ್ತ ಸಾಗುತ್ತಲಿದೆ; ಎಲ್ಲವೂ ಮೊಬೈಲ್, ಇಂಟರ್ನೆಟ್ ಮೂಲಕವೇ! ಒಂದು ಕ್ಲಿಕ್ ಸಾಕು ಹಣ ಪಡೆಯಲು; ಹಣ ಕಳಿಸಲು, ಯಾವುದೇ ವಸ್ತುವನ್ನು ಖರೀದಿಸಲು ಸಹಾಯಕವಾಗಿದೆ. ಇಲ್ಲಿ ಎಲ್ಲವೂ ಸಿಗುತ್ತದೆ ಎಂದರೆ ತಪ್ಪಾಗಲಾರದು.

ಇಂದಿನ ಯುವ ಜನತೆ ಸಂಪೂರ್ಣವಾಗಿ ಮೊಬೈಲಿನ ದಾಸರಾಗಿದ್ದಾರೆ. ತಮ್ಮ ದಿನನಿತ್ಯದ ಅತಿ ಅಮೂಲ್ಯ ಸಮಯವನ್ನು ಇಲ್ಲೇ ಕಳೆಯುತ್ತಿದ್ದಾರೆ. ಅಂತರ್ಜಾಲದ ಮಾಹಿತಿ, ಸಾಮಾಜಿಕ ಜಾಲತಾಣಗಳಿಂದ ತಮ್ಮ ಮುಂದಿನ ಜೀವನದ ಕುರಿತು ಚಿಂತಿಸುವುದನ್ನು ಮರೆತಿದ್ದಾರೆ.

ಸಂಪರ್ಕಿಸುವ ಸಾಧನವಾಗಿ ಆವಿಷ್ಕಾರವಾದ ಮೊಬೈಲ್ ಫೋನ್ ತನ್ನ ಮೂಲ ಉದ್ದೇಶವನ್ನು ಮರೆತು ಎಲ್ಲರನ್ನು ಪ್ರತ್ಯೇಕತೆಯತ್ತ ತಳ್ಳುತ್ತಿದೆ. ಇದರ ಮೇಲೆ ಸಂಪೂರ್ಣ ಅವಲಂಬನೆಯಾಗಿರುವ ನಮ್ಮ ಯುವ ಜನತೆ ವ್ಯಕ್ತಿಯನ್ನು ಮುಖತಃ ಭೇಟಿಯಾದಾಗ ಯಾವ ರೀತಿಯಲ್ಲಿ ಸಂವಹನ ನಡೆಸಬೇಕು ಎಂಬುದೇ ಮರೆತಿದ್ದಾರೆ. ಜೊತೆಗೆ ಮೊಬೈಲ್ ಅತಿಯಾದ ಬಳಕೆಯಿಂದ ಚಿಕ್ಕ ಚಿಕ್ಕ ಮಕ್ಕಳಿಗೆ ಕನ್ನಡಕ ಬಂದುಬಿಟ್ಟಿದೆ ಅಲ್ವಾ??

ಮೊದಲೆಲ್ಲ ಮಕ್ಕಳು ಊಟ ಮಾಡುವುದಿಲ್ಲ ಎಂದು ಹಠ ಮಾಡಿದರೆ ಚಂದಮಾಮನನ್ನು ತೋರಿಸುತ್ತಾ ಕಥೆ ಹೇಳುತ್ತಾ ಊಟ ಮಾಡಿಸುವಳು ತಾಯಿ.  ಆದರೆ ಇಂದು ಪೋಷಕರು ಮಕ್ಕಳನ್ನು ಸಮಾಧಾನ ಪಡಿಸಲು ಮೊಬೈಲ್ ನೀಡುತ್ತಿರುವುದು ವಿಪರ್ಯಾಸವೇ ಸರಿ. ಇನ್ನು ಚಿಕ್ಕ ಚಿಕ್ಕ ಮಕ್ಕಳು ಸಹ ಮೊಬೈಲ್ ಗೇಮ್ಸ್ ಅಲ್ಲಿ ಮುಳುಗಿ ಹೋಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದೆ. ಈ ಮೋಸದ ಜಾಲಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ವಿದ್ಯಾವಂತರೇ. ಪ್ರತಿದಿನ ಪತ್ರಿಕೆಗಳಲ್ಲಿ ಕನಿಷ್ಠ ಒಂದೆರಡು ಇಂಥ ಸುದ್ದಿಗಳು ಬರುತ್ತಲೇ ಇರುತ್ತವೆ. ಅಷ್ಟರ ಮಟ್ಟಿಗೆ ಜನರು ಮೋಸ ಹೋಗುತ್ತಿದ್ದಾರೆ. ಈ ಖದೀಮರು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿರುವುದು ಪಾರ್ಟ್ ಟೈಮ್ ಜಾಬ್ ಹುಡುಕುತ್ತಿರುವವರನ್ನು ಎಂಬುವುದು ಮಾತ್ರ ವಿಪರ್ಯಾಸವೇ ಸರಿ.

ಸ್ಮಾರ್ಟ್ ಫೋನ್ ಎಂಬ ಗಾಳಕ್ಕೆ ಬಾಲ್ಯವು ಸಿಕ್ಕಿ ಬಿಟ್ಟಿದೆ. ಮೊದಲೆಲ್ಲ ಮಕ್ಕಳು ಗುಂಪು ಮಾಡಿಕೊಂಡು ಎಷ್ಟೆಲ್ಲಾ ಆಟ ಆಡುತ್ತಿದ್ದರು; ಮರಕೋತಿ, ಕುಂಟೆಬಿಲ್ಲೆ, ಲಗೋರಿ, ಗೋಲಿ, ಬುಗುರಿ ಆಟ. ಮಕ್ಕಳೆಲ್ಲ ನಾ ಮುಂದು ತಾ ಮುಂದು ಎಂದು ಕಿತ್ತಾಡಿ ಊರ ಮೂಲ ಮೂಲೆಗೂ ಕೇಳುವಂತೆ ಗದ್ದಲವನ್ನು ಮಾಡುತ್ತಿದ್ದರು. ಆದರೆ ಈಗ ಸ್ಮಾರ್ಟ್ ಫೋನ್ ಬಂದ ಮೇಲೆ ಈ ಮಕ್ಕಳೆಲ್ಲ ಯಾವುದೋ ಮೂಲೆಯನ್ನು ಸೇರಿ ತಮ್ಮ ಬಾಲ್ಯವನ್ನು ನಾಲ್ಕು ಗೋಡೆಯ ಒಳಗೆ ಬಂಧಿತರಾಗಿ ಕಳೆಯುತ್ತಿದ್ದಾರೆ. ಮನೆ ತುಂಬಾ ಮಕ್ಕಳು ಇದ್ದರೂ ಯಾರ ಸುಳಿವು ಇಲ್ಲದೆ ಮೊಬೈಲ್ ಬಳಕೆಯಲ್ಲಿ ಮಗ್ನರಾಗಿರುತ್ತಾರೆ. ಈಗ ಮಕ್ಕಳು ಮನೆಯಿಂದ ಹೊರಬರುವುದೇ ಹೂದೋಟದಲ್ಲಿ ದುಂಬಿಗಳು ಅಪರೂಪಕ್ಕೆ ಬಂದು ಹೋಗುವಂತೆ ಕಾಣುತ್ತಿದೆ. ಎಲ್ಲಿ ಹೋಯಿತು ನಾವು ಕಳೆದ ಬಾಲ್ಯ???

ನಮಗಿಂದು ಸಾಧನೆಯೊಂದಿಗೆ ಭಾವನೆಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲದೆ ಹೋದರೆ ಮುಂದಿನ ತಲೆಮಾರಿಗೆ ತಮ್ಮ ಅಪ್ಪ – ಅಮ್ಮನನ್ನು ಹೊರತುಪಡಿಸಿ ಬೇರೆ ಯಾರ ಪರಿಚಯವೂ ಇರುವುದಿಲ್ಲ. ಅಂತಹ ಸಂದರ್ಭ ಬರುವ ಸಾಧ್ಯತೆ ಇದೆ. ಆದ್ದರಿಂದ ದಿನದಲ್ಲಿ ಒಂದಿಷ್ಟು ಸಮಯ ಮನುಷ್ಯರೊಂದಿಗೆ ನಗುವ, ಮಾತನಾಡುವ, ವ್ಯವಹರಿಸುವ ಸಂದರ್ಭವನ್ನು ಅಗತ್ಯವಾಗಿ ಸೃಷ್ಟಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ನಾಳಿನ ಸಮಾಜಕ್ಕೆ ನಾವು ಮನುಷ್ಯರ ಬದಲು ರೋಬೋಟ್ ಗಳನ್ನು ಸೃಷ್ಟಿಸಿದಂತಾಗುತ್ತದೆ ಅಲ್ಲವೇ…?

-ರಶ್ಮಿ ಉಡುಪ ಮೊಳಹಳ್ಳಿ
SKVMS GFGC Kundapura, Koteshwara

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!