Sunday, October 13, 2024

ಕಸ್ತೂರಿ ರಂಗನ್‌ ವರದಿ | 16,114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಮಿತಿಗೆ ಒಳಪಟ್ಟು ವರದಿಯನ್ನು ಸಮ್ಮತಿಸಬಹುದು : ಈಶ್ವರ್ ಖಂಡ್ರೆ

ಜನಪ್ರತಿನಿಧಿ (ಬೆಂಗಳೂರು) : ರಾಜ್ಯದಲ್ಲಿರುವ ವಿವಿಧ ಅರಣ್ಯ ಹಾಗೂ ವನ್ಯಜೀವಿ ತಾಣಗಳ ಸುತ್ತ 16,114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶವನ್ನು ಈಗಾಗಲೇ ಸಂರಕ್ಷಿಸಲಾಗಿದ್ದು, ಈ ಮಿತಿಗೆ ಒಳಪಟ್ಟು ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕಸ್ತೂರಿ ರಂಗನ್‌ ವರದಿಯನ್ನು ಸಮ್ಮತಿಸಬಹುದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಕಸ್ತೂರಿ ರಂಗನ್‌ ವರದಿಯ ಬಗ್ಗೆ ಕೇಂದ್ರ ಸರ್ಕಾರ ಆ.2 ರಂದು 6ನೇ ಅಧಿಸೂಚನೆ ಹೊರಡಿಸಿರುವ ಕಾರಣ ಈ ಮಾಸಾಂತ್ಯದೊಳಗಾಗಿ ವರದಿ ಮೇಲೆ ರಾಜ್ಯ ಸರ್ಕಾರದ ನಿಲುವು ಸಲ್ಲಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ನಡೆದ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ 11 ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.

ಈ ಬಗ್ಗೆ 11 ಜಿಲ್ಲೆಗಳಿಗೆ ಸಂಬಂಧಿಸಿದ ಸಚಿವರು, ಶಾಸಕರು ಹಾಗೂ ಸಂಸತ್ ಸದಸ್ಯರ ಅಭಿಪ್ರಾಯ ಸ್ವೀಕರಿಸಲಾಗಿದೆ. ಆ ಎಲ್ಲ ಅಭಿಪ್ರಾಯಗಳನ್ನು ನಾಳೆ(ಶುಕ್ರವಾರ) ನಡೆಯಲಿರುವ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ, ಪರಿಶೀಲಿಸಿ ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ, ಸಂಪುಟದ ಅನುಮೋದನೆ ಪಡೆದುಕೊಂಡು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 16,114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶವಿದ್ದು, ಇನ್ನು ಹೆಚ್ಚಳ ಮಾಡಿದರೆ ಅರಣ್ಯದಂಚಿನ ಜನರ ಬದುಕು ಮೂರಾಬಟ್ಟೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬಫರ್ ಜ್ಹೋನ್ ಅನ್ನು ಶೂನ್ಯಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಹಾಲಿ ಇರುವ 16,114 ಚ.ಕಿ.ಮೀ. ಮಿತಿಗೆ ನಾವು ಸಮ್ಮತಿಸಿದರೆ ಶೂನ್ಯ ಬಫರ್‌ ಜ್ಹೋನ್ ಆಗುತ್ತದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 20,668 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯವಿದೆ ಎಂದು ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ಗುರುತಿಸಲಾಗಿದೆ. ಈ ಬಗ್ಗೆ ಭೌತಿಕ ಸರ್ವೆ ನಡೆಸಿದ್ದಲ್ಲಿ ಈ ಪ್ರದೇಶ ಇನ್ನೂ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯವನ್ನೂ ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಅರಣ್ಯ ಪ್ರದೇಶದಲ್ಲೇ ಜೀವನ ನಡೆಸುತ್ತಿರುವವರನ್ನು ಒಕ್ಕಲೆಬ್ಬಿಸುವುದು ಸೂಕ್ತವಲ್ಲ. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಿದರೂ ಅವರು ಅಲ್ಲಿಗೆ ಹೋಗುವುದಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ ಹೀಗಾಗಿ ಸಂಪುಟ ಉಪಸಮಿತಿಯ ಸಭೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಕೇಂದ್ರದಿಂದ ವಿಶೇಷ ಪ್ಯಾಕೇಜ್ ಗೆ ಒತ್ತಾಯಕ್ಕೆ ಸಲಹೆ :
16,114 ಚ.ಕಿ.ಪ್ರದೇಶಕ್ಕೆ ಅಂಗೀಕಾರ ನೀಡಿದರೂ ಈ ಪ್ರದೇಶದಲ್ಲಿರುವ 1576 ಗ್ರಾಮಗಳ ಜನರ ಜೀವನ ದುಸ್ತರವಾಗಲಿದೆ. ಈ ದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯ ಮಾಡಬಹುದು ಎಂದು ತಾವು ಸಲಹೆ ನೀಡಿರುವುದಾಗಿ ಸಚಿವರು ತಿಳಿಸಿದರು.

ಇನ್ನು, ಪಶ್ಚಿಮ ಘಟ್ಟಪ್ರದೇಶ ಹಲವು ನದಿಗಳ ಉಗಮ ಸ್ಥಾನವಾಗಿದೆ. ಅಷ್ಟಲ್ಲದೇ ಈ ಪಶ್ಚಿಮ ಘಟ್ಟಗಳು ಮಳೆಯ ಮಾರುತಗಳನ್ನು ತಡೆಯುವ ಕಾರಣ ದೇಶಾದ್ಯಂತ ವ್ಯಾಪಕ ಮಳೆಯಾಗುತ್ತದೆ. ಹೀಗಾಗಿ ಈ ಪಶ್ಚಿಮಘಟ್ಟ ಸಂರಕ್ಷಣೆಯು ಕೇಂದ್ರ ಸರ್ಕಾರದ ಹೊಣೆಯಾಗಿದೆ. ಈ ಕಾರಣದಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಅನ್ನು ಅಗತ್ಯವಾಗಿ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಅಕ್ರಮ ಒತ್ತುವರಿ ತೆರವಿನ ಕುರಿತು ಸ್ಪಷ್ಟಿಕರಣ:
ಒತ್ತುವರಿ ತೆರವಿನ ಬಗ್ಗೆ ತಾವು ನೀಡಿರುವ ಟಿಪ್ಪಣಿಗಳು ಸ್ಪಷ್ಟವಾಗಿವೆ. 2015ರ ನಂತರದ ಒತ್ತುವರಿ ಮಾತ್ರ ತೆರವು ಮಾಡಲು ಸೂಚಿಸಲಾಗಿದೆ. 2015 ರ ಸರ್ಕಾರದ ಆದೇಶ ಹಾಗೂ ನಡಾವಳಿಯಂತೆ 3 ಎಕರೆಗಿಂತ ಹೆಚ್ಚಿರುವ ದೊಡ್ಡ ಒತ್ತುವರಿ ತೆರವು ಮಾಡಲಾಗುತ್ತಿದ್ದು, ಬಡ ರೈತರ ಪಟ್ಟಾಭೂಮಿ ಮತ್ತು ಒತ್ತುವರಿ ಸೇರಿ 3 ಎಕರೆ ಒತ್ತುವರಿಯನ್ನು ತೆರವು ಮಾಡಿಸುವುದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದು ಪುನರುಚ್ಛರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!