Saturday, September 21, 2024

ರಾಗಾ ಹೇಳಿಕೆ ವಿವಾದ : ಸರಿಯಾದ ನಡೆ, ನುಡಿಗಳಿಗೆ ದಾರಿದ್ರ್ಯವೇಕೆ ?

ಮಾತು, ಅರ್ಥ, ವಿವೇಚನೆ, ಅರಿವು

ತೀವ್ರವಾದ ಸೈದ್ಧಾಂತಿಕ ಹೋರಾಟ ಮಾಡದ ಹೊರತು ನಾವು ನಮ್ಮ ವೈರಿಗಳ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬ ನಿಲುವಿನ ಜೊತೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೇಶದ ಉದ್ದಗಲಕ್ಕೂ ಭಾರತ್‌ ಜೋಡೋ ಯಾತ್ರೆ ಹಾಗೂ ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಮಾಡಿದರು. ಅಲ್ಲಿಂದ ರಾಹುಲ್‌ ಗಾಂಧಿ ಅವರ ಮೇಲೆ ದೇಶದ ಒಂದು ವರ್ಗ ಬಲವಾದ ನಂಬಿಕೆಯಿರಿಸಲಾರಂಭಿಸಿತ್ತು. ರಾಹುಲ್‌ ಅಕ್ಷರಶಃ ಪ್ರಜಾಪ್ರಭುತ್ವದ ನಿಜ ಧ್ವನಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದ್ದರು. ಬಹುಶಃ ಇದರ ಫಲವಾಗಿಯೇ ಕಾಂಗ್ರೆಸ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರಿಂದ ಮಹತ್ತರವಾದ ತೀರ್ಪನ್ನು ಪಡೆದಿದೆ. ಈ ಫಲವೇ ರಾಹುಲ್‌ ಅವರಿಗೆ ಸುಮಾರು ಎರಡು ದಶಕಗಳ ಫುಲ್‌ ಟೈಮ್‌ ರಾಜಕೀಯ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಸಾಂವಿಧಾನಿಕ ಹುದ್ದೆಯನ್ನು ಏರುವ ಹಾಗಾಯ್ತು.

ರಾಹುಲ್‌ ಅವರ ಸೈದ್ಧಾಂತಿಕ ನಿಲುವು, ರಾಜಕೀಯದಲ್ಲಿ ಅವರು ವೃದ್ಧಿಸಿಕೊಂಡ ವರ್ಚಸ್ಸು, ರಾಜಕೀಯ ವಲಯದಲ್ಲಿನ ಆಗುಹೋಗುಗಳಿಗೆ ಅವರು ಸ್ಪಂದಿಸುತ್ತಿದ್ದ ರೀತಿ ರಾಹುಲ್‌ ಅವರನ್ನು ವಿಪರೀತವಾಗಿ ಬೆಂಬಲಿಸುತ್ತಿರುವವರಲ್ಲಿಯೂ ಆಶ್ಚರ್ಯ ತಂದಿರಬಹುದು. ರಾಜಕೀಯ ವಲಯದಲ್ಲಿ ಬಲವಂತವಾಗಿ ಹೇರಿ ಸ್ಥಾಪಿಸಲ್ಪಟ್ಟಿದ್ದ ʼರಾಹುಲ್‌ ಗಂಭೀರವಾದ ರಾಜಕಾರಣಿ ಅಲ್ಲʼ ಎಂಬ ಅಭಿಪ್ರಾಯದಿಂದ ಬಹುತೇಕ ಹೊರಬರುವಲ್ಲಿ ರಾಹುಲ್‌ ಯಶಸ್ವಿಯಾಗಿದ್ದಾರೆ. ಆದರೇ, ಈಗ ಅವರೊಂದಿಗೆ ಸಾಂವಿಧಾನಿಕ ಹುದ್ದೆಯೊಂದಿದೆ. ಹಾಗಾಗಿ ರಾಹುಲ್‌ ಅವರಿಂದ ಆ ಹುದ್ದೆ ಇನ್ನಷ್ಟು ಗಂಭೀರತೆಯನ್ನು ಬೇಡುತ್ತದೆ. ಬಿಜೆಪಿಗೆ ರಾಹುಲ್‌ ಗಾಂಧಿಯನ್ನು ಅಷ್ಟು ಸುಲಭದಲ್ಲಿ ನಿರ್ಲಕ್ಷಿಸಿ ನೋಡುವ ಹಾಗಿಲ್ಲ ಎಂಬ ಅಭಿಪ್ರಾಯ ಹುಟ್ಟಿಸುವಲ್ಲಿ ಅವರು ಬೆಳೆದಿದ್ದಾರೆ ಎಂದರೇ, ಅದನ್ನು ಉಳಿಸಿಕೊಳ್ಳುವಲ್ಲಿಯೂ ಶ್ರಮ ಪಡಬೇಕಿದೆ.

ರಾಹುಲ್‌ ಮೇಲೆ ಮಹತ್ತರವಾದ ಹೊಣೆಗಾರಿಕೆ ಇದೆ. ಈ ಹಿಂದೆ ಒಬ್ಬ ಸಂಸದ, ಕಾಂಗ್ರೆಸ್‌ ಪಕ್ಷದ ನಾಯಕರಾಗಿ ಅಷ್ಟೇ ಇದ್ದ ರಾಹುಲ್‌ ಗಾಂಧಿ ಅವರಿಗೆ ಈಗ ಲೋಕಸಭೆಯ ಪ್ರತಿನಾಯಕನ ಸಾಂವಿಧಾನಿಕ ಹುದ್ದೆಯೂ ಜೊತೆ ಇದೆ. ರಾಹುಲ್‌ ತಾವಾಡುವ ಮಾತುಗಳು, ತಾವು ತೆಗೆದುಕೊಳ್ಳುವ ನಿರ್ಧಾರಗಳು, ನಡೆನುಡಿಗಳ ಬಗ್ಗೆ ಬಹಳ ಜಾಗೃತೆಯಿಂದ ನಡೆದುಕೊಳ್ಳಬೇಕಿದೆ. ಇಲ್ಲದಿದ್ದರೇ, ಲೋಕಸಭೆಯಲ್ಲಿ ಅವರೆದುರಿಗಿರುವ ನಾಯಕನ ಛಾಯೆ ಎಂಬಂತೆಯೇ ಉಳಿಯಬೇಕಾಗುತ್ತದೆ !.

ಲೋಕಸಭೆಯ ಪ್ರತಿನಾಯಕನ ಮೇಲೆ ಬಿಜೆಪಿ ಸಹಜವಾಗಿಯೇ ಈಗ ವಿಶೇಷ ಕಣ್ಣಿರಿಸಿದೆ. ರಾಹುಲ್‌ ಅವರು ತಮ್ಮ ನಡೆ ನುಡಿಯ ಬಗ್ಗೆ ಬಹಳ ಎಚ್ಚರದಿಂದಿರಬೇಕು. ರಾಹುಲ್‌ ಅವರು ಮಾತಾಡುವ ಮಾತುಗಳು ಬಹುಶಃ ಅದು ಪ್ರಜಾಪ್ರಭುತ್ವದ ಧ್ವನಿಯೇ ಆಗಿರಬಹುದು ಅಥವಾ ಅದು ವಾಸ್ತವವೇ ಆಗಿರಬಹುದು. ಆದರೇ, ತಾವಾಡುವ ಮಾತುಗಳು ಹೇಗೆ ತಲುಪಬಹುದು ಎನ್ನುವುದರ ಬಗ್ಗೆ ಅರಿವಿರಬೇಕಾಗಿರುವುದು ಬಹಳ ಮುಖ್ಯ. ಪ್ರತಿ ಬಾರಿಯೂ ರಾಹುಲ್ ಗಾಂಧಿ ಅವರು ವಿದೇಶಕ್ಕೆ, ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಿಗೆ ಪ್ರವಾಸಕ್ಕೆ ತೆರಳಿದಾಗ, ವಿವಾದಕ್ಕೆ ಒಳಗಾಗುವುದು ಅವರಿಗೆ ಅಭ್ಯಾಸವಾದಂತಾಗಿದೆ ಅಂತನ್ನಿಸುತ್ತಿದೆ.

ಇಂತಹ ಸಂದರ್ಭದಲ್ಲಿ ಕುತೂಹಲಕಾರಿಯಾಗಿ, ಸ್ವಂತ ಪಕ್ಷದ ಸದಸ್ಯರು ಅಥವಾ ಮೈತ್ರಿ ಪಕ್ಷಗಳಿಗಿಂತ ಹೆಚ್ಚಾಗಿ ಬಿಜೆಪಿ ಹಾಗೂ ಅದರ ಬೆಂಬಲಿತ ಪಕ್ಷಗಳ ಟೀಕೆಗಳಿಗಾಗಿಯೇ ಹೆಚ್ಚು ಗಮನ ಹರಿಸುತ್ತವೆ ಮತ್ತು ಆ ವಿವಾದಾತ್ಮಕ ಹೇಳಿಕೆಗಳನ್ನೇ ಹೆಚ್ಚಾಗಿ ರಾಜಕೀಯ ಮೈಲೇಜ್‌ ಪಡೆದುಕೊಳ್ಳುವ ಉದ್ದೇಶದಿಂದ ಬಳಸಿಕೊಳ್ಳುತ್ತವೆ. ಬಿಜೆಪಿ ಹಾಗೂ ಬಿಜೆಪಿಯ ಬೆಂಬಲಿತ ಪಕ್ಷಗಳಿಂದ ಈ ಪದ್ಧತಿ ಇತ್ತೀಚೆಗೆ ರಾಹುಲ್ ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪ್ರತಿಷ್ಠಿತ  ವಿಶ್ವವಿದ್ಯಾಲಯದ ಸಂವಾದವೊಂದರಲ್ಲಿ ಭಾಗಿಯಾಗಿರವ ವೇಳೆ ಮಾತಾಡಿರುವ ಹೇಳಿಕೆಗಳೊಂದಿಗೆ ಮುಂದುವರಿದಿದೆ. ಹಾಗಾಗಿ ರಾಹುಲ್‌ ಮತ್ತು ಅವರ ಮಾತುಗಳು ದೇಶದ ರಾಜಕೀಯ ವಲಯದ ಚರ್ಚೆಯ ವಿಷಯ.

ರಾಹುಲ್‌ ಹೊಂದಿರುವ ಸಂವಿಧಾನಾತ್ಮಕ ಹುದ್ದೆ ಹೆಚ್ಚಿನ ಜವಾಬ್ದಾರಿಗಳನ್ನು ಹೊಂದಿದೆ, ಹಾಗಾಗಿ ಅವರ ಹೇಳಿಕೆಗಳು ಹೆಚ್ಚು ಗಂಭೀರವಾಗಿ ಪರಿಗಣನೆಗೆ ಒಳಪಡುತ್ತವೆ. ಯುನೈಟೆಡ್ ಸ್ಟೇಟ್ಸ್‌ ನಲ್ಲಿ ಭಾರತೀಯ ರಾಜಕೀಯದ ಸೂಕ್ಷ್ಮತೆಗಳ ಪರಿಚಯವಿಲ್ಲದ ಅಥವಾ ಪರಿಸ್ಥಿತಿಯ ವೈಯಕ್ತಿಕ ಅನುಭವವನ್ನು ಹೊಂದಿರದ ಪ್ರೇಕ್ಷಕರು, ರಾಹುಲ್‌ ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು. ಭಾರತದ ಬಗ್ಗೆ ಋಣಾತ್ಮಕ ಅಭಿಪ್ರಾಯವೂ ಇದರಿಂದಾಗಿ ತಲುಪಬಹುದು. ರಾಹುಲ್‌ ಅವರ ಮಾತುಗಳು ದೇಶದ ವಿರುದ್ಧ ಅಲ್ಲದೇ ಇದ್ದರೂ, ಅದು ಬೇರೊಂದು ದೇಶದಲ್ಲಿ ನಿಂತು ಮಾತಾಡಿರುವ ಕಾರಣಕ್ಕೆ ಅಲ್ಲಿನವರು ಅದನ್ನು ತಪ್ಪಾಗಿ ಸ್ವೀಕರಿಸಬಹುದು ಅಥವಾ ರಾಜಕೀಯ ವೈರುದ್ಯಕ್ಕೆ ಅದನ್ನೇ ಅಸ್ತ್ರವಾಗಿ ಬಳಸಿಕೊಳ್ಳಬಹುದು. ರಾಹುಲ್‌ ಹೇಳಿರುವ ಮಾತುಗಳು ಎಲ್ಲವೂ ಪ್ರಜಾಪ್ರಭುತ್ವದ ನೆಲೆಯಲ್ಲಿ ಸರಿ ಇರಬಹುದು, ಆದರೇ, ಅದು ಹೇಳಿದ ಅಥವಾ ತಲುಪಿಸಿದ ಟೋನ್ (ಧ್ವನಿ) ಸರಿಯಿರಲಿಲ್ಲ ಎನ್ನುವುದನ್ನು ಬಹುಶಃ ಎಲ್ಲರೂ ಒಪ್ಪಿಕೊಳ್ಳಬೇಕು. ಹಾಗಾಗಿ ರಾಹುಲ್‌ ಇಂತೆಲ್ಲಾ ಸೂಕ್ಷ್ಮ ವಿಷಯಗಳ ಬಗ್ಗೆ ಪ್ರಸ್ತಾಪಿಸುವಾಗ ಈಗಂತೂ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವೈಫಲ್ಯವನ್ನು ಟೀಕಿಸುವುದು ಪ್ರತಿನಾಯಕನಿಗೆ ಒಂದು ವಿಷಯ, ಆದರೆ ರಾಹುಲ್ ಆಗಾಗ್ಗೆ ತನ್ನ ದೇಶವನ್ನು, ಸಂಸ್ಥೆಗಳನ್ನು, ಸಮುದಾಯಗಳನ್ನು, ಸಂಸ್ಥೆಯನ್ನು ವಿದೇಶಿ ನೆಲದಲ್ಲಿ ‌ʼಅವಹೇಳನವಾಗಿ ಪರಿವರ್ತನೆʼಯಾಗುವ ಹಾಗೆ ಮಾತನಾಡುತ್ತಾರೆ. ಹಾಗಾಗಿಯೇ ಬಹಶಃ ರಾಹುಲ್‌ ಆಗಾಗ್ಗೆ ವಿವಾದಕ್ಕೆ ಒಳಗಾಗುತ್ತಾರೆ. ಭಾರತೀಯ ರಾಜಕೀಯ ಪರಿಸ್ಥಿತಿ, ಆರ್ಥಿಕತೆ, ಧರ್ಮ ರಾಜಕಾರಣ, ಮತ್ತು ಜಾಗತಿಕ ಆರ್ಥಿಕತೆ, ನಿರುದ್ಯೋಗ, ಮೀಸಲಾತಿಗಳ ಬಗ್ಗೆ ಧ್ವನಿ ಎತ್ತಿದ ರಾಹುಲ್‌ ಅವರ ಉದ್ದೇಶ ಪ್ರಜಾಪ್ರಭುತ್ವದ ಆಶಯಗಳಿಗೆ ಬೆಲೆ ಕೊಡಬೇಕೆನ್ನುವುದೇ ಆಗಿದ್ದರೂ, ಅವನ್ನು ಸರಿಯಾಗಿ ತಲುಪಿಸುವಲ್ಲಿ ಮತ್ತೆ ಸೋತರು ಎನ್ನುವುದೇ ಇಲ್ಲಿನ ವಿಷಯ.

ರಾಹುಲ್‌ ಮಾತಾಡಿರುವುದು ʼಭಾರತದ ಜನರ ಧ್ವನಿʼಯೇ ಆಗಿರಬಹುದು, ಆದರೆ ಇಂತಹ ಸಂದರ್ಭಗಳಲ್ಲಿ ಟೀಕಾಸ್ತ್ರ ಬಳಸಲು ಬಿಜೆಪಿ ಸಕ್ರಿಯವಾಗುತ್ತದೆ. ರಾಹುಲ್ ಗಾಂಧಿ ಇಂತಹ ಸೂಕ್ಷ್ಮ ವಿವೇಚನೆಗಳನ್ನು ವೃದ್ಧಿಸಿಕೊಳ್ಳುವ ಅಗತ್ಯವಿದೆ. ಸಮಯೋಚಿತವಾಗಿ ನಡೆದುಕೊಳ್ಳಬೇಕು. ಸರ್ಕಾರ ನ್ಯಾಯಯುತವಾಗಿ ಸಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಪಾಲಿಸುವುದರ ಬರದಲ್ಲಿ ಎಡವದಂತೆ ಎಚ್ಚರಿಕೆಯಿಂದ ವರ್ತಿಸಬೇಕು. ಸಂಘರ್ಷಾತ್ಮಕವಾಗಿಯೇ ರಾಜಕೀಯ ಸಾಗಬೇಕು ಎನ್ನುವ ಯಾವ ನಿಯಮವಿಲ್ಲದ ಕಾರಣ ಈ ಸೂಕ್ಷ್ಮ ವಿಚಾರಗಳ ಬಗ್ಗೆ ಸ್ಪಂದಿಸುವಾಗ ಸರಿ ದಿಕ್ಕಿನಲ್ಲಿ ಚರ್ಚೆಗೆ ಆಸ್ಪದವಾಗುವಂತೆ ನೋಡಿಕೊಳ್ಳಬೇಕೆ ಹೊರತು ಅದು ವಿವಾದವಾಗುವಂತಾಗಬಾರದು.

ಇನ್ನು, ತಮ್ಮ ಭಾರತ ವಿರೋಧಿ ನಿಲುವಿನಿಂದಲೇ ಕುಖ್ಯಾತರಾಗಿರುವ ಅಮೆರಿಕ ಸಂಸದೆ ಇಲ್ಹಾನ್ ಒಮರ್ ಅವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದರು. ಇದು ಕೂಡ ಭಾರೀ ಚರ್ಚೆಗೆ ಗ್ರಾಸವಾಯ್ತು. ಪ್ರಧಾನ ಮಂತ್ರಿ ಮೋದಿ ಅವರ ವಿರುದ್ಧ ಟೀಕಾಪ್ರಕಾರ ನಡೆಸುವ ಸಂಸದೆ ಜೊತೆ ರಾಹುಲ್ ಗಾಂಧಿ ಇರುವ ಫೋಟೋ ಕುರಿತಾಗಿ ಪರ ವಿರೋಧ ಚರ್ಚೆಗಳು ಎದ್ದವು. ಅಮೆರಿಕಾದ ಸಂಸದರಾದ ಬ್ರಾಡ್ಲಿ ಜೇಮ್ಸ್ ಶೆರ್ಮನ್, ಜೊನಾಥನ್ ಜಾಕ್ಸನ್, ರೋ ಖನ್ನಾ, ರಾಜಾ ಕೃಷ್ಣಮೂರ್ತಿ, ಬಾರ್ಬರಾ ಲೀ, ತಾನೆದಾರ್, ಜೆಸಸ್ ಜಿ ಚುಯ್ ಗಾರ್ಸಿಯಾ, ಹ್ಯಾಂಕ್ ಜಾನ್ಸನ್ ಹಾಗೂ ಜಾನ್ ಶಾಕೋವ್ಸ್ಕಿ ಅವರನ್ನು ರಾಹುಲ್ ಭೇಟಿ ಮಾಡಿದ್ದರು. ಇವರ ಜೊತೆಗೆ ಇಲ್ಹಾನ್ ಒಮರ್ ಅವರೂ ಇದ್ದರು. ಈ ಗ್ರೂಪ್‌ ಫೋಟೋವನ್ನು ಕಾಂಗ್ರೆಸ್ ಪಕ್ಷ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು.

ಇಲ್ಹಾನ್ ಒಮರ್ ಭಾರತ – ಕೆನಡಾ ದೇಶಗಳ ನಡುವೆ ರಾಜತಾಂತ್ರಿಕ ಸಮರ ಏರ್ಪಟ್ಟ ಸಂದರ್ಭದಲ್ಲೂ ಇಲ್ಹಾನ್ ಒಮರ್ ಭಾರತ ವಿರೋಧಿ ಹೇಳಿಕೆ ನೀಡಿದ್ದರು. ಖಲಿಸ್ತಾನ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ವಿರುದ್ಧ ತನಿಖೆ ನಡೆಸಲು ಅಮೆರಿಕ ಕೆನಡಾ ದೇಶಕ್ಕೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಆಗ್ರಹಿಸಿದ್ದಳು. ಹೀಗೆಲ್ಲಾ ವಿವಾದಗಳಿರುವ ವ್ಯಕ್ತಿಗಳನ್ನು ಭೇಟಿ ಮಾಡುವುದು ಕೂಡ ರಾಹುಲ್‌ ವೈಯಕ್ತಿಕ ಹಾಗೂ ರಾಜಕೀಯ ವರ್ಚಸ್ಸಿಗೆ ಧಕ್ಕೆಯೇ ಸರಿ. ಇಂತಹ ಸಂದರ್ಭಗಳು ಎದುರಾದಾಗ ನಿರಾಕರಿಸುವುದೇ ಒಳ್ಳೆಯದು. ಇಂತಹ ವಿವೇಚನೆ ಇಲ್ಲದಿದ್ದರೇ, ರಾಜಕೀಯದಲ್ಲಿ ಭವಿಷ್ಯ ಕಷ್ಟ.

ನಡೆ, ನುಡಿ ನಿಮ್ಮನ್ನು ಸೆರೆಮನೆಗೆ ಕಳುಹಿಸಬಹುದು. ಮಾತೇ ನಿಮ್ಮ ಅಂತ್ಯಕ್ಕೆ ಕಾರಣವಾಗಬಹುದು. ಒಳ್ಳೆಯ, ಸರಿಯಾದ ಮಾತುಗಳಿಗೆ ದಾರಿದ್ರ್ಯ ಯಾಕೆ ? ರಾಹುಲ್‌ ನಿಮ್ಮ ಮೇಲೆ ಹೊಣೆಗಾರಿಕೆ ಹೆಚ್ಚಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!