Saturday, September 21, 2024

ಗಣೇಶ ಮೂರ್ತಿಗಳ ವಶಕ್ಕೆ ಪಡೆದ ಪೊಲೀಸರು | ರಾಜ್ಯ ಕಾಂಗ್ರೆಸ್‌ ಸರ್ಕಾರ ಹಿಂದೂ ಸಮಾಜದ ಕ್ಷಮೆ ಕೇಳಲಿ : ವಿಜಯೇಂದ್ರ ಒತ್ತಾಯ

ಜನಪ್ರತಿನಿಧಿ (ಬೆಂಗಳೂರು) : ಗಣೇಶೋತ್ಸವ ಹಿಂದೂಗಳ ಧಾರ್ಮಿಕ ಶ್ರದ್ಧೆ ಹಾಗೂ ಸಾಂಸ್ಕೃತಿಕ ಸಂಗಮದ ದ್ಯೋತಕ. ಈ ಉತ್ಸವದ ಆಚರಣೆಗೆ ಎಲ್ಲೆ, ಕಟ್ಟುಪಾಡುಗಳನ್ನು ಮೀರಿ ಅಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಸಂಭ್ರಮಿಸುವ ಉತ್ಸವದ ಹಬ್ಬ. ಹಿಂದೂಗಳ ಧಾರ್ಮಿಕ ಆಚಾರ-ವಿಚಾರಗಳಲ್ಲಿ ಮೊದಲ ಪೂಜೆ ವಿಘ್ನ ನಿವಾರಿಸುವ ವಿನಾಯಕನಿಗೆ ಸಲ್ಲಿಸಲಾಗುತ್ತದೆ. ಈ ಕಾರಣದಿಂದಾಗಿಯೂ ಗಣೇಶನಿಗೆ ಎಲ್ಲಿಲ್ಲದ ಮಹತ್ವ. ಜನರ ಭಾವೊದ್ವೇಗಗಳು ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಾರದು ಎಂಬುದನ್ನು ಒಪ್ಪಬಹುದಾದರೂ ಅದರ ಹೆಸರಿನಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುವ ಮಾರ್ಗಸೂಚಿಗಳನ್ನು ಅಳವಡಿಸಿ ಉತ್ಸವ ಆಚರಣೆಯ ಸಡಗರದ ಸ್ವಾತಂತ್ರ್ಯಕ್ಕೆ ತೊಂದರೆ ನೀಡುವುದನ್ನು ಒಪ್ಪಲಾಗದು ಎಂದು ಬಿಜೆಪಿ ರಾಜ್ಯ ಘಟಕದ ವಿಜಯೇಂದ್ರ ಯಡಿಯೂರಪ್ಪ ಹೇಳಿದ್ದಾರೆ.

ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ಧಪಡಿಸುವ ಮಾರ್ಗಸೂಚಿಗಳು ಉದ್ದೇಶಪೂರ್ವಕ ಎಂಬ ಭಾವನೆ ಹಿಂದೂ ಸಮಾಜದಲ್ಲಿ ಬಲವಾಗಿ ಬೇರೂರಿದೆ ಇದಕ್ಕೆ  ನಾಗಮಂಗಲದಂತಹ ಘಟನೆ ಸಾಕ್ಷಿಯಾಗಿದೆ, ದುರ್ಘಟನೆ ಉದ್ಭವಿಸುವುದಕ್ಕೆ ಆಸ್ಪದ ನೀಡುವ ನಿಟ್ಟಿನಲ್ಲಿ ಉತ್ಸವ ವಿರೋಧಿ ದುಷ್ಟ ಗುಂಪುಗಳು ಗಣೇಶ ಮೆರವಣಿಗೆ ಸಂದರ್ಭದಲ್ಲಿ ದಾಂಧಲೆ ನಡೆಸಿ ಅಟ್ಟಹಾಸ ಮೆರೆಯುವ ಪರಿಸ್ಥಿತಿಯ ಸೃಷ್ಟಿಗೆ ಕಾನೂನು ಸುವ್ಯವಸ್ಥೆಯ ನಿಷ್ಕ್ರೀಯತೆ ಅವಕಾಶ ಮಾಡಿಕೊಡುತ್ತಿದೆ ಎಂದಿದ್ದಾರೆ.

ಈ ಸಂಬಂಧವಾಗಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಸದಸ್ಯರು ಟೌನ್ ಹಾಲ್ ಬಳಿ ಗಣೇಶ ಮೂರ್ತಿಯೊಂದಿಗೆ ಶಾಂತಿಯುತ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಪ್ರತಿಭಟನಾನಿರತರೊಂದಿಗೆ  ‘ಗಣಪತಿ ಮೂರ್ತಿಯನ್ನೂ ಪೊಲೀಸ್ ವಾಹನದಲ್ಲಿ ಬಂಧಿಸಿಟ್ಟಿದ್ದು’ ಹಿಂದೂ ಸಮಾಜದ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.

ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿ ಗಣೇಶ ಮೂರ್ತಿಯ ಪಾವಿತ್ರ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾಳಜಿವಹಿಸಬಹುದಾಗಿದ್ದ  ಪೊಲೀಸರು ಅತ್ಯಂತ ಉಡಾಫೆಯಾಗಿ ವರ್ತಿಸಿರುವ ರೀತಿ ಸರ್ವಥಾ ಖಂಡನೀಯ, ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ಬಗ್ಗೆ ತೋರುವ ತಾತ್ಸಾರ ದೋರಣೆಯನ್ನು ಈ ಘಟನೆ ಪ್ರತಿಬಿಂಬಿಸಿದೆ, ಈ ಕೂಡಲೇ ಸರ್ಕಾರ ಹಿಂದೂ ಸಮಾಜದ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!