spot_img
Wednesday, January 22, 2025
spot_img

‘ಓದುವಿಕೆ ಉತ್ತಮ ಕಥೆಗಾರರನ್ನು ಸೃಷ್ಟಿಸುತ್ತದೆ’-ಎಸ್.ಜನಾರ್ದನ್ ಮರವಂತೆ

‘ದೇಸಿ ಜಗಲಿ ಕಥಾ ಕಮ್ಮಟ’ ಸಮಾರೋಪ

ಕುಂದಾಪುರ: ಕನ್ನಡದಲ್ಲಿ ಸಾಕಷ್ಟು ಅತ್ಯುತ್ತಮ ಕಥೆಗಳಿವೆ. ಕಥೆಗಾರರು ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಉತ್ತಮ ಕಥೆಗಳನ್ನು ನೀಡಲು ಸಾಧ್ಯ. ಕಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುವಲ್ಲಿ ಓದು ಸಹಕಾರಿಯಾಗುತ್ತದೆ. ಓದುವಿಕೆ ಇಲ್ಲದಿದ್ದರೆ ಉತ್ತಮ ಕಥೆಗಾರರಾಗಲು ಸಾಧ್ಯವಿಲ್ಲ, ಭಾಷೆಯ ಮೇಲೆ ಹಿಡಿತ ಸಾಧಿಸಲು ಓದುವಿಕೆ ಮುಖ್ಯ ಎಂದು ನಿವೃತ್ತ ಉಪನ್ಯಾಸಕ, ಪಂಚಾಯತ್ ರಾಜ್ ಪರಿಣಿತ ಎಸ್.ಜನಾರ್ದನ್ ಮರವಂತೆ ಹೇಳಿದರು.

ಮಾ.3ರಂದು ಜನಪ್ರತಿನಿಧಿ ಪ್ರಕಾಶನ ಕುಂದಾಪುರ ಮತ್ತು ವೀರಲೋಕ ಪ್ರಕಾಶನ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ರೋಟರಿ ಕುಂದಾಪುರ ಮಿಡ್‌ಟೌನ್ ಸಭಾಂಗಣದಲ್ಲಿ ನಡೆದ ಎರಡು ದಿನಗಳ ದೇಸಿ ಜಗಲಿ ಕಥಾ ಕಮ್ಮಟದ ಸಮಾರೋಪ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು.

ಸಾಹಿತ್ಯದಲ್ಲಿ ನಾವು ನಿರ್ದಿಷ್ಟ ಕ್ಷೇತ್ರ ಆಯ್ದುಕೊಂಡರೆ ಬೇಗ ಪ್ರಭುದ್ದತೆ ಸಾಧಿಸಬಹುದು. ಮನಸ್ಸಿನಲ್ಲಿ ಅಸ್ಥಿರತೆ ಇರಬಾರದು. ನಾವು ಆಯ್ದುಕೊಳ್ಳುವ ಕ್ಷೇತ್ರದಲ್ಲಿ ನಿರಂತರ ಆಸಕ್ತಿ, ಅಧ್ಯಯನಶೀಲತೆ ಇರಬೇಕು. ವಸ್ತು, ವಿಷಯ, ಬದಲಾವಣೆಗಳನ್ನು ಗಮನಿಸುವುದು ಮುಖ್ಯವಾಗುತ್ತದೆ. ಕಥಾಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡಿದ ಸಲಹೆ, ಮಾರ್ಗದರ್ಶನವನ್ನು ತಮ್ಮ ಬರಹಗಳಲ್ಲಿ ಅಳವಡಿಸಿಕೊಂಡು ಉತ್ತಮ ಕಥೆಗಾರರಾಗಿ ಮೂಡಿಬನ್ನಿ ಎಂದು ಶುಭ ಹಾರೈಸಿದರು.

ನಾನು ಕೂಡಾ ಪ್ರಾರಂಭದಲ್ಲಿ ಕಥೆ ಬರೆಯುತ್ತಿದ್ದೆ. ಒಮ್ಮೆ ನಾನು ಆತ್ಮಾವಲೋಕನ ಮಾಡಿಕೊಂಡೆ. ನನ್ನಲ್ಲಿ ಕಥೆ ಕಟ್ಟುವ ಕೌಶಲ್ಯ ಇದೆಯೇ ಎಂದು ಯೋಚನೆ ಮಾಡಿದೆ. ಬಳಿಕ ಕಥೆ ಬರೆಯುವುದನ್ನು ನಿಲ್ಲಿಸಿದೆ. ನನ್ನ ಆಸಕ್ತಿಯ ಚಟುವಟಿಕೆಯಲ್ಲಿ ಸಕ್ರಿಯನಾದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಸಿದ್ಧ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮಾತನಾಡಿ, ಕಥೆಯನ್ನು ಅದ್ಬುತವಾಗಿ ಓದುಗರ ಮುಂದಿಡುವಲ್ಲಿ ಕಥೆಗಾರರ ಕೌಶಲ್ಯವೂ ಮುಖ್ಯ. ಓದುಗರ ಆಲೋಚನೆಗೆ ಚುರುಕು ಮುಟ್ಟಿಸುವ, ಚಿಂತನೆಗಳನ್ನು ಹುಟ್ಟು ಹಾಕುವ ಕಥೆಗಳು ಖುಷಿಯ ಜೊತೆ ಮನಸ್ಸಿನಲ್ಲಿ ಪರಾಮರ್ಶೆಗೂ ಅವಕಾಶ ನೀಡುತ್ತದೆ. ಕುತೂಹಲ ಕೆರಳಿಸುವ ಪತ್ತೆದಾರಿ ಕಥೆಗಳ ಅವಶ್ಯಕತೆ ಕನ್ನಡದಲ್ಲಿ ಬರಬೇಕು. ನರಸಿಂಹಯ್ಯನವರ ಪತ್ತೆದಾರಿ ಕಥೆಗಳು, ಅದರಲ್ಲಿರುವ ನಿರೂಪಣಾ ಶೈಲಿ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಪತ್ತೆದಾರಿ ಪುರುಷೋತ್ತಮನ ಪಾತ್ರ ಇಂದಿಗೂ ಓದುಗರ ಮನಃಪಟಲದಲ್ಲಿ ಇದೆ. ಪತ್ತೆದಾರಿ ಕಥೆಗಳು ಆಂಗ್ಲ ಭಾಷೆಯಲ್ಲಿ ಬಂದಷ್ಟು ಬೇರೆ ಭಾಷೆಯಲ್ಲಿ ಬಂದಿಲ್ಲ. ಕನ್ನಡದಲ್ಲಿ ಹೆಚ್ಚು ಹೆಚ್ಚು ಪತ್ತೆದಾರಿ ಕಥೆಗಳು ಬರಬೇಕು. ಅದಕ್ಕೆ ಪೂರಕವಾಗಿ ಕಥೆಗಾರ ಸಾಕಷ್ಟು ಅಧ್ಯಯನ ಮಾಡಬೇಕಾಗುತ್ತದೆ. ಪೊಲೀಸ್, ವೈದ್ಯಕೀಯ, ಕಾನೂನು ಅರಿವು ಹೊಂದಬೇಕಾಗುತ್ತದೆ ಎಂದರು.

ಕಥೆಗಾರರಲ್ಲಿ ಅದ್ಭುತವಾದ ಆಲೋಚನಾ ಶಕ್ತಿ ಇರಬೇಕು. ಓದುಗರ ನಿರೀಕ್ಷೆಯನ್ನೂ ಮೀರಿ ಕಥೆಯ ಮುಕ್ತಾಯವಾಗಬೇಕು. ಕಥೆಯನ್ನು ನಿರೂಪಿಸುತ್ತಾ ಹೋಗುವಾಗ ಜಾಗರೂಕವಾಗಿರಬೇಕು. ಭಾಷೆ, ವ್ಯಾಕರಣದ ಬಗ್ಗೆ ಪ್ರಭುತ್ವ ಇರಬೇಕು. ಕಥೆಯಲ್ಲಿ ಬರುವ ಪಾತ್ರಗಳು, ಅದನ್ನು ಬೆಳೆಸುವಲ್ಲಿ ಕಥೆಗಾರ ಓದುಗರಿಗೆ ಇನ್ನಷ್ಟು ಕುತೂಹಲ ಉಂಟು ಮಾಡುವ ಕೌಶಲ್ಯ ಪ್ರದರ್ಶಿಸಬೇಕು ಎಂದರು.

ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಖ್ಯಾತ ವ್ಯಂಗ್ಯಚಿತ್ರಕರಾದ ಕೆ.ಜಿ ಹೆಬ್ಬಾರ್, ಕಥೆಗೊಂದು ಚಿತ್ರವಿದ್ದರೆ ಅದು ಇನ್ನಷ್ಟು ಪರಿಣಾಮಕಾರಿಯಾಗಿ ನಿಲ್ಲುತ್ತದೆ. ಕಥೆ ಅಥವಾ ಚಿತ್ರ ರಚನೆಕಾರರಿಂದ ಹೊರಬಂದ ಮೇಲೆ ಅದು ಓದುಗರ ಸ್ವತ್ತು. ಕಥೆಯ ವಸ್ತುವನ್ನು ಆಧರಿಸಿ ಚಿತ್ರವನ್ನು ಕಥೆಯ ಮುಖ್ಯವಾಹಿನಿ ಹತ್ತಿರಕ್ಕೆ ಹೋಗುವ ಪ್ರಯತ್ನ ಮಾಡುತ್ತೇವೆ. ಇವತ್ತು ಸಾಹಿತ್ಯ ಕ್ಷೇತ್ರಕ್ಕೆ ಹೊಸ ಚಿಗುರು ಕಾಣಿಸುತ್ತಿದೆ. ಈ ಆಸಕ್ತಿ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು. ಬಹುಶಃ ಈಗ ಸಿಗುವಂತಹ ಅವಕಾಶಗಳು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಿಗುವ ವಿಫುಲ ವೇದಿಕೆಗಳು ಹೊಸ ಹೊಸ ಬರಹಗಾರರಿಗೆ ಅನುಕೂಲಕಾರಿಯಾಗಿವೆ. ಇಂಥಹ ಕಥಾಕಮ್ಮಟಗಳ ಸದುಪಯೋಗ ಪಡೆದುಕೊಂಡು ಯಶಸ್ವಿಯಾದ ಕಥೆಗಾರರು ಮುಂದೆ ದೊಡ್ಡ ಕಥೆಗಾರರಾಗಿ ಮಾರ್ಪಟ್ಟಾಗ ತಮಗೆ ಮಾರ್ಗದರ್ಶನ ಮಾಡಿದ ಸಂಸ್ಥೆಗಳ ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಹಿರಿಯ ಲೇಖಕಿ ಡಾ.ಪಾರ್ವತಿ ಜಿ ಐತಾಳ್ ಅವರ ಕನ್ನಡದ ಮೂಲಕ ಇಂಗ್ಲೀಷ್ ಕಲಿಯಿರಿ ಪುಸ್ತಕವನ್ನು ಎಸ್.ಜನಾರ್ದನ್ ಮರವಂತೆ ಬಿಡುಗಡೆಗೊಳಿಸಿದರು.

ಜನಪ್ರತಿನಿಧಿ ಪ್ರಕಾಶನದ ಮುಖ್ಯಸ್ಥರಾದ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಜನಪ್ರತಿನಿಧಿ ಪ್ರಕಾಶನ ಮತ್ತು ವೀರಲೋಕ ಪ್ರಕಾಶನದ ಜಂಟಿ ಆಶ್ರಯದಲ್ಲಿ ದೇಸಿ ಜಗಲಿ ಕಥಾ ಕಮ್ಮಟ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ೪೦ ಜನ ಶಿಬಿರಾರ್ಥಿಗಳು ಈ ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ಉಡುಪಿ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗದಿಂದಲೂ ಆಸಕ್ತರು ಭಾಗವಹಿಸಿರುವುದು ಅವರ ಆಸಕ್ತಿಯನ್ನು ಬಿಂಬಿಸುತ್ತದೆ. ಇಲ್ಲಿ ಭಾಗವಹಿಸಿದ ಎಲ್ಲ ಕಥೆಗಾರರು ಕೂಡಾ ಸಾಹಿತ್ಯದಲ್ಲಿ ಆಸಕ್ತಿ ಇರುವವರು ಎನ್ನುವುದನ್ನು ನಾವು ಕಂಡು ಕಂಡಿದ್ದೇವೆ. ಕಥಾ ಕಮ್ಮಟದಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳು ಯಶಸ್ವಿ ಕಥೆಗಾರರಾಗಿ ಕನ್ನಡ ಸಾಹಿತ್ಯಲೋಕವನ್ನು ಸಂಪದ್ಭರಿತಗೊಳಿಸಲಿ. ಜನಪ್ರತಿನಿಧಿ ಪತ್ರಿಕೆ ಕೂಡಾ ನಿರಂತರ ಅವರ ಸಾಹಿತ್ಯ ಚಟುವಟಿಕೆಗಳಿಗೆ ಅವಕಾಶವನ್ನು ಕಲ್ಪಿಸುತ್ತಾ ಇರುತ್ತದೆ. ಕಳೆದ ೨೫ ವರ್ಷಗಳಿಂದ ಜನಪ್ರತಿನಿಧಿ ಪತ್ರಿಕೆ ಸಾಹಿತ್ಯಕ್ಕೆ ಸಂಬಂಧಿಸಿದ ವಿವಿಧ ಕಮ್ಮಟಗಳನ್ನು ಆಯೋಜಿಸುತ್ತಾ ಬಂದಿದೆ. ಮುಂದೆಯೂ ಕೂಡಾ ಇಂಥಹ ಕಮ್ಮಟಗಳನ್ನು ಮುಂದುವರಿಸಲಿದೆ ಎಂದರು.

ಶಿಬಿರಾರ್ಥಿಗಳಾದ ಶರತ್ ವಂಡ್ಸೆ, ವರುಣ್, ಸುಮನಾ ಆರ್ ಹೇರ್ಳೆ ಅನಿಸಿಕೆ ಹಂಚಿಕೊಂಡರು. ನಾಗರಾಜ್ ವಂಡ್ಸೆ, ಸುರಕ್ಷಾ ಉಡುಪ, ಕೀರ್ತನ್ ಪಡುಕೋಣೆ ಅತಿಥಿಗಳ ಪರಿಚಯಿಸಿದರು. ವಿನಯ ಕೌಂಜೂರು ಕಾರ್ಯಕ್ರಮ ನಿರ್ವಹಿಸಿದರು. ಸುಮನಾ ಪಡುಕೋಣೆ ವಂದಿಸಿದರು. ಶ್ರೀರಾಜ್ ವಕ್ವಾಡಿ ಕಾರ್ಯಕ್ರಮದ ರೂಪುರೇಷೆ ಸಂಯೋಜಿಸಿದ್ದರು. ಕೃಷ್ಣ, ರೂಪೇಶ್, ರಕ್ಷಿತ್ ಕೋಟೇಶ್ವರ, ಗಣೇಶ ಬಳ್ಕೂರು, ಮಧುಸೂದನ್ ಕಾರ್ಯಕ್ರಮಕ್ಕೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!