spot_img
Saturday, March 7, 2026
spot_img

ಬೈಂದೂರನ್ನು ಒಳಗೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯೇ ಪಾರಮ್ಯ !

ಕಾಂಗ್ರೆಸ್‌ ಅಭ್ಯರ್ಥಿ ಕಗ್ಗಂಟು : ಉಸ್ತುವಾರಿಯನ್ನೇ ಕಣಕ್ಕಿಳಿಸುವ ಲೆಕ್ಕಚಾರ

ಜನಪ್ರತಿನಿಧಿ (ಶಿವಮೊಗ್ಗ) : ಲೋಕಸಭಾ ಚುನಾವಣೆ 2024ಕ್ಕೆ ಅಂತಿಮ ಹಂತದ ತಯಾರಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿವೆ. ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗ ಲೋಕಸಭಾ ಚುನಾವಣೆಯ ಹಬೆ ಜೋರಾಗಿಯೇ ಇದೆ. ಬಿಜೆಪಿ ಈಗಾಗಲೇ ಶಿವಮೊಗ್ಗದಲ್ಲಿ ಬಿಜೆಪಿ ಚುನಾವಣಾ ಕಛೇರಿಯನ್ನು ಆರಂಭಿಸುವ ಮೂಲಕ ತಯಾರಿ ಆರಂಭಿಸಿದೆ. ಕ್ಷೇತ್ರದ ಹಾಲಿ ಸಂಸದರು ಬಿಜೆಪಿಯ ಬಿ. ವೈ. ರಾಘವೇಂದ್ರ. ಶಿವಮೊಗ್ಗ ಬಿಜೆಪಿಯ ಭದ್ರಕೋಟೆ. ಕಾಂಗ್ರೆಸ್‌ ಗೆಲ್ಲುವುದಕ್ಕೆ ಹರಸಾಹವೇ ಪಡಬೇಕು. ಈ ಬಾರಿಯೂ ಕಾಂಗ್ರೆಸ್‌ ಅಭ್ಯರ್ಥಿ ಯಾರೆಂಬುವುದು ಇನ್ನೂ ಅನಿಶ್ಚಿತತೆಯಲ್ಲೇ ಇದೆ.

ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್‌ ಬಿಜೆಪಿಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ, ಸಚಿವ ಮಧು ಬಂಗಾರಪ್ಪ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ, ಮಾತ್ರವಲ್ಲದೇ ಅವರಿಗೆ ದಕ್ಷಿಣ ಕನ್ನಡದ ಲೋಕಸಭಾ ಕ್ಷೇತ್ರದ ಜವಾಬ್ದಾರಿಯೂ ಇದೆ. ಈ ನಡುವೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಚಿವ ಮಧು ಬಂಗಾರಪ್ಪ ಅವರನ್ನೇ ಕಣಕ್ಕಿಳಿಸುವ ಲೆಕ್ಕಚಾರದಲ್ಲಿಯೂ ಕಾಂಗ್ರೆಸ್ ಇದೆ ಎಂದು ಕೂಡ ಹೇಳಲಾಗುತ್ತಿದೆ.

ಬಿ. ಎಸ್. ಯಡಿಯೂರಪ್ಪ, ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯದಿಂದ ದೂರವಾಗಿದ್ದಾರೆ. ಬಿ. ವೈ. ರಾಘವೇಂದ್ರ ಸಹೋದರ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿಯ ಅಧ್ಯಕ್ಷರು. ಸೊರಬದ ಶಾಸಕ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು. ಆದ್ದರಿಂದ ಚುನಾವಣೆಗೆ ಉಭಯ ಪಕ್ಷಗಳ ತಯಾರಿ ಜೋರಾಗಿದೆ. ಮಧು ಬಂಗಾರಪ್ಪ ಅವರಿಗೆ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಳ್ಳಬೇಕಾಗಿರುವ ಒತ್ತಡವೂ ಇದೆ.

2009ರಿಂದ ಶಿವಮೊಗ್ಗವನ್ನು ಬಿ. ವೈ ರಾಘವೇಂದ್ರ ಬಲ್ಲವರಾಗಿದ್ದಾರೆ.  ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದ ತಂದೆ ಯಡಿಯೂರಪ್ಪನವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ನಡೆದ ಉಪ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿ ದೊಡ್ಡ ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾದರು.

ಕಾಂಗ್ರೆಸ್‌ ಹಾಗೂ ಬಿಜೆಪಿ ಬಲಾಬಲ !

2009 ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರನ್ನು 52,893 ಮತಗಳ ಅಂತರದಿಂದ ಸೋಲಿಸಿ 15ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು. 2018ರಲ್ಲಿ ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಲೋಕಸಭಾ ಉಪಚುನಾವಣೆಯಲ್ಲಿ ಬಂಗಾರಪ್ಪನವರ ಮಗ ಮಧು ಬಂಗಾರಪ್ಪ ಅವರನ್ನು 47,388 ಮತಗಳ ಅಂತರದಿಂದ ಸೋಲಿಸಿ ಮತ್ತೆ ರಾಘವೇಂದ್ರ ಸಂಸದರಾದರು. 2019ರಲ್ಲಿ  ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿದಿದ್ದರು, ಆದರೆ ಮರಳಿ ಬಿ. ವೈ. ರಾಘವೇಂದ್ರ ಸಂಸದರಾಗಿ ಗೆದ್ದು ಬೀಗಿದರು. ಈಗ ಮತ್ತೊಂದು ಸುತ್ತಿನ ಲೋಕಸಭಾ ಚುನಾವಣೆ ಸನಿಹವಾಗುತ್ತಿದೆ. ರಾಘವೇಂದ್ರ ಅವರು ತಮ್ಮ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ದೂರದ ಬೈಂದೂರಿಗೆ ಆಗಾಗ ಭೇಟಿ ನೀಡಿ ಇಲ್ಲಿನ ಜನರೊಂದಿಗೂ ಉತ್ತಮ ಸಂಪರ್ಕ ಬೆಸೆದು ಕೊಂಡಿದ್ದಾರೆ. ಇತ್ತ ಸಚಿವ ಮಧು ಬಂಗಾರಪ್ಪ ಅವರಿಗೆ ಕ್ಷೇತ್ರವನ್ನು ಗೆಲ್ಲಿಸಿಕೊಡಬೇಕಾದ ಜವಾಬ್ದಾರಿ ಇದೆ. ಮಧು ಬಂಗಾರಪ್ಪ ಅವರೇ ಅಭ್ಯರ್ಥಿಯಾದರೇ, ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದ ಪರಿಚಯವಿದೆ. ಬೈಂದೂರು ಭಾಗಗಗಳಲ್ಲಿ ಅಷ್ಟೊಂದು ಜನ ಸಂಪರ್ಕ ಅವರಿಗೆ ಇಲ್ಲದೇ ಇದ್ದರೂ ಶಿವಮೊಗ್ಗದಲ್ಲಿ ತಂದೆ ಬಂಗಾರತಪ್ಪನವರ ಕೃಪಾಶೀರ್ವಾದದಿಂದ ಒಂದಿಷ್ಟು ಜನ ಸಂಪರ್ಕ ಸಾಧಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು, ಮಧು ಬಂಗಾರಪ್ಪ ಸ್ವತಃ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವುದರಿಂದ ಈ ಬಾರಿ ಮಧು ಬಂಗಾರಪ್ಪ ಅವರೇ ಅಭ್ಯರ್ಥಿಯಾದರೇ ಒಂದು ಜಿದ್ದಾಜಿದ್ದಿನ ಹೋರಾಟ ನೀಡಬಹುದು ಎಂದು ಹೇಳಲಾಗಿದೆ. ಆದರೂ, ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿ ಲೋಕಸಭಾ ಚುನಾವಣೆಯನ್ನು ಎದರಿಸುತ್ತಿದೆ. ತೀರ್ಥಹಳ್ಳಿ, ಶಿವಮೊಗ್ಗ ನಗರ, ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ತೆಕ್ಕೆಯಲ್ಲಿವೆ, ಇತ್ತ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೈಂದೂರು ವಿಧಾನಸಭಾ ಕ್ಷೇತ್ರವೂ ಕೂಡ ಬಿಜೆಪಿಯ ವಶದಲ್ಲಿದೆ. ಶಿವಮೊಗ್ಗ ಗ್ರಾಮಾಂತರ ಜೆಡಿಎಸ್‌ ಕೈಯಲ್ಲಿದ್ದರೂ ಈ ಬಾರಿ ಮೈತ್ರಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುವುದರಿಂದ ಈ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಬಹುತೇಕ ಎಲ್ಲಾ ಮತಗಳ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯ ಪರವಾಗಿಯೇ ಬರಲಿದೆ ಎಂಬಂತೆ ಕಾಣಿಸುತ್ತಿದೆ. ಇನ್ನು ಕಾಂಗ್ರೆಸ್‌ ತೆಕ್ಕೆಯಲ್ಲಿರುವ ಸಾಗರ, ಭದ್ರಾವತಿ ಹಾಗೂ ಸೊರಬ ವಿಧಾನಸಭಾ ಕ್ಷೇತ್ರಗಳ ಮತಗಳು ಹೆಚ್ಚಾಗಿ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಬರಬಹುದೆಂದು ನಿರೀಕ್ಷಿಸಬಹುದಾಗಿದೆ.   

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು :

ಲೋಕಸಭೆ ಚುನಾವಣೆ ಕಣಕ್ಕಿಳಿಯಲು ಹೈಕಮಾಂಡ್ ಸೂಚಿಸಿದರೆ ಈ ಬಾರಿಯೂ ಮಧು ಬಂಗಾರಪ್ಪ ಕಣಕ್ಕಿಳಿಯಬಹುದು ಎಂಬುವುದು ಸದ್ಯದ ಲೆಕ್ಕಾಚಾರ. ಆದರೆ ಈ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ಪಕ್ಷದ ನಾಯಕರು. ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿಯಲ್ಲಿ ಸೋತ ಕಿಮ್ಮನೆ ರತ್ನಾಕರ್, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಹೆಸರು ಸಹ ಅಭ್ಯರ್ಥಿ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. 2014ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ಚುನಾವಣೆ ಎದುರಿಸಿದ್ದ ಗೀತಾ ಶಿವರಾಜ್ ಕುಮಾರ್ 240,636 ಮತಗಳನ್ನು ಪಡೆದು ಬಿ. ಎಸ್. ಯಡಿಯೂರಪ್ಪ ವಿರುದ್ಧ ಸೋಲು ಕಂಡಿದ್ದರು.

ಕಿಮ್ಮನೆ ರತ್ನಾಕರ್ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದು ಕಾಂಗ್ರೆಸ್‌ನ ರಾಜ್ಯ ಮಟ್ಟದ ನಾಯಕರಿಗೂ ಸಹ ಶಾಕ್ ನೀಡಿದೆ. ಅವರನ್ನು ಲೋಕಸಭೆ ಚುನಾವಣಾ ಕಣಕ್ಕಿಳಿಸುವ ಕುರಿತು ತೀರ್ಥಹಳ್ಳಿ ಭಾಗದ ನಾಯಕರ ಜೊತೆ ರಾಜ್ಯ ನಾಯಕರು ಸಭೆ ನಡೆಸಿದ್ದಾರೆ ಎಂಬ ಮಾಹಿತಿಯೂ ಇದೆ. ಇತ್ತ, ವಿಧಾನಸಭೆ ಚುನಾವಣೆಯಲ್ಲಿ ಸೊರಬದಲ್ಲಿ ಸೋತ ಬಿಜೆಪಿಯ ಕುಮಾರ್ ಬಂಗಾರಪ್ಪ ಕಾಂಗ್ರೆಸ್‌ ಸೇರ್ಪಡೆಗೊಂಡು ಅಭ್ಯರ್ಥಿಯಾಗಲಿದ್ದಾರೆಯೇ ? ಎಂಬ ಸುದ್ದಿಗಳು ಆಗಾಗ ಕೇಳಿ ಬರುತ್ತಲೇ ಇವೆ. ಆದರೇ, ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ ಸೇರ್ಪಡೆಗೆ ಸಹೋದರ ಮಧು ಬಂಗಾರಪ್ಪ ಅವರ ಆಕ್ಷೇಪವಿದೆ ಎಂದು ಕೂಡ ಹೇಳಲಾಗುತ್ತಿದೆ.

ಇನ್ನು, 28 ಕ್ಷೇತ್ರಗಳ ಪೈಕಿ ಬಹುಪಾಲು ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್‌ ಯೋಜನೆ ರೂಪಿಸಿದ್ದು, ಬಹುತೇಕ ಕಡೆ ಉಸ್ತುವಾರಿ ಸಚಿವರ ಸ್ಫರ್ಧೆ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ಬಲ್ಲಮೂಲಗಳು ಮಾಹಿತಿ ನೀಡಿವೆ. ಹಾಗಾಗಿ ಕಳೆದ ಚುನಾವಣೆಯೂ ಅನುಭವ ಇರುವುದರಿಂದ ಮಧು ಬಂಗಾರಪ್ಪ ಅವರನ್ನೇ ಕಾಂಗ್ರೆಸ್‌ ಕಣಕ್ಕಿಳಿಸುತ್ತದೆಯೇ ? ಎನ್ನುವುದು ಸದ್ಯದ ಕುತೂಹಲ. 

ಮಧು ಬಂಗಾರಪ್ಪ, ಕಿಮ್ಮನೆ ರತ್ನಾಕರ್, ಆಯನೂರು ಮಂಜುನಾಥ್, ಆರ್.‌ ಎಂ. ಮಂಜುನಾಥ ಗೌಡ, ಎಂ. ಶ್ರೀಕಾಂತ್‌ ಮುಂತಾದ ನಾಯಕರ ಪ್ರಭಾವ ಜಿಲ್ಲೆಯಲ್ಲಿ ಕೆಲಸ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ನಗೆ ಬೀರಬಹುದು.

ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ. ವೈ ರಾಘವೇಂದ್ರ ಅವರಿಗೆ ಮರಳಿ ಟಿಕೇಟ್‌ ಸಿಗುವುದು ಬಹುತೇಕ ನಿಶ್ಚಿತ. ಶಿವಮೊಗ್ಗ ವಿಮಾನ ನಿಲ್ದಾಣ ಹಾಗೂ ಶಿವಮೊಗ್ಗದಲ್ಲಿ ತೀವ್ರ ಸ್ವರೂಪ ಪಡೆದ ಈದ್‌ ಮಿಲಾದ್‌ ಕಟೌಟ್‌ ವಿವಾದ ಸೇರಿ ರಾಮ ಮಂದಿರದ ಉನ್ಮಾದ, ಹಿಂದುತ್ವ ಎಲ್ಲವೂ ಬಿಜೆಪಿ ಪರವಾದ ಮತಗಳಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂದು ಹೇಳಲಾಗುತ್ತಿದೆ.

2019ರಲ್ಲಿ ಬಿಜೆಪಿಯ ಬಿ. ವೈ. ರಾಘವೇಂದ್ರ 729,872 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ 506,512 ಮತಗಳನ್ನು ಪಡೆದಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾರು? ಎನ್ನುವುದು ಸದ್ಯಕ್ಕೆ ಎಲ್ಲರ ಕುತೂಹಲವಾಗಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!