Sunday, September 8, 2024

ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದ ಜನರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನವನ್ನು ಒದಗಿಸಿವೆ : ಗೆಲ್ಹೋಟ್‌

ಜನಪ್ರತಿನಿಧಿ (ಬೆಂಗಳೂರು) :  ರಾಜ್ಯಪಾಲರು ಇಂದು (ಸೋಮವಾರ) ವಿಧಾನ ಮಂಡಲದ ಅಧಿವೇಶವನ್ನು ಉದ್ದೇಶಿಸಿ ಮಾತನಾಡಿದರು.

ಅವರ ಭಾಷಣದ ಸಂಪೂರ್ಣ ಪಠ್ಯ ಇಲ್ಲಿದೆ.

1. ಕರ್ನಾಟಕ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತಾ ತಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

2. ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಹೊಸ ಕನಸು ಹೊತ್ತು ಜನರ ಮುಂದೆ ಹೋಗಿ ಅವರ ಬೆಂಬಲ, ಮನ್ನಣೆ ಮತ್ತು ವಿಶ್ವಾಸ ಪಡೆದು ಅಧಿಕಾರಕ್ಕೆ ಬಂದ ನನ್ನ ಸರ್ಕಾರವು ನಡೆ-ನುಡಿಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ. ಮಾತು ಸ್ಪಟಿಕದ ಸಲಾಕೆಯಂತಿರಬೇಕು. ಕೊಟ್ಟ ಮಾತನ್ನು ಪಾಲಿಸಬೇಕೆನ್ನುವುದು ನಮ್ಮ ವಚನಕಾರರ ನಿಲುವು. ಹಾಗಾದಾಗಲೇ ಮಾತಿಗೆ ಬೆಲೆ. ಹೇಳುವ ಮಾತಿಗೆ ಬೆಲೆ ನೀಡದೆ, ಭರವಸೆಗಳನ್ನೇ ಅವಹೇಳನ ಮಾಡುವ ರಾಜಕೀಯ ವಾತಾವರಣವೆ ಎಲ್ಲೆಡೆ ತುಂಬಿರುವಾಗ ನನ್ನ ಸರ್ಕಾರವು ಹೊಸ ಸಂಸ್ಕೃತಿಗೆ ನಾಂದಿ ಹಾಡಿದೆ. ನನ್ನ ಸರ್ಕಾರ ನುಡಿದಂತೆ ನಡೆದಿದೆ.  ಕೊಟ್ಟ ವಚನಗಳನ್ನು ಪಾಲಿಸಿದೆ. ಜನರ ಪ್ರೀತಿ, ವಿಶ್ವಾಸ ಹಾಗೂ ಭರವಸೆಗಳಿಗೆ ಧಕ್ಕೆಯಾಗದಂತೆ ನಡೆದುಕೊಂಡಿದೆ. ಜನರ ಬದುಕಿನಲ್ಲಿ ಹೊಸ ಆಯಾಮ ಸೃಷ್ಟಿಸಿದೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ. ರಾಜ್ಯದ 7 ಕೋಟಿ ಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ. ಸಂತಸದ, ನೆಮ್ಮದಿಯ, ಸಂತೃಪ್ತಿಯ ಹೊಸ ಮನ್ವಂತರಕ್ಕೆ ಚಾಲನೆ ದೊರೆತಿದೆ.

3. ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಅದನ್ನು ಕಡಿಮೆ ಮಾಡುತ್ತಾ ಆರ್ಥಿಕವಾಗಿ ಮುನ್ನಡೆ ಸಾಧಿಸುವ ಅಭಿವೃದ್ಧಿ ಪಥವನ್ನು ಕರ್ನಾಟಕವು ಅನುಸರಿಸುತ್ತಿದೆ. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಅಭಿವೃದ್ಧಿ ಮಾತ್ರವಲ್ಲ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯತೆಗಳು ಕೂಡ ಅದರಲ್ಲಿ ಸೇರಿವೆ. ಈ ಆಯಾಮಗಳುಳ್ಳ “ಕರ್ನಾಟಕ ಮಾದರಿ” ಯನ್ನು ನನ್ನ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಅನುಸರಿಸುತ್ತಾ ಬಂದಿದೆ. ಈ ಮಾದರಿಯನ್ನು ಇನ್ನಷ್ಟು ಸಶಕ್ತಗೊಳಿಸಿ ಕರ್ನಾಟಕ ರಾಜ್ಯವನ್ನು ಇಡೀ ದೇಶದಲ್ಲೇ ವಿಶಿಷ್ಟವಾಗಿ ರೂಪಿಸುವುದು ನನ್ನ ಸರ್ಕಾರದ ಗುರಿಯಾಗಿದೆ.

4. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದ ಜನರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನವನ್ನು ಒದಗಿಸಿವೆ. ಈ ಯೋಜನೆಗಳು ಆರ್ಥಿಕವಾಗಿ ಅಶಕ್ತರಾದವರಿಗೆ ಎಷ್ಟೊಂದು ಅಗತ್ಯವಿತ್ತು ಎನ್ನುವುದಕ್ಕೆ ಬೃಹತ್ ಸಂಖ್ಯೆಯಲ್ಲಿ ಹರಿದು ಬಂದ ಅರ್ಜಿಗಳೇ ಸಾಕ್ಷಿ. ಈ ಯೋಜನೆಗಳ ಸಮರ್ಪಕ ಅನುಷ್ಠಾನವನ್ನು ಆದ್ಯತೆಯನ್ನಾಗಿ ಪರಿಗಣಿಸಿರುವ ನನ್ನ ಸರ್ಕಾರ ಇದಕ್ಕೊಂದು ಸುಸಜ್ಜಿತ ವ್ಯವಸ್ಥೆಯನ್ನು ರೂಪಿಸಿದೆ. ಆದರೆ, ಆರ್ಥಿಕ ಅಸಮಾನತೆಯಿಂದಾಗಿ ಅಶಕ್ತರಾಗಿ ಉಳಿದಿರುವ ಜನತೆಯ ಬದುಕಿಗೆ ಈ ಗ್ಯಾರಂಟಿಗಳು ಮಾತ್ರ ಸಾಕಾಗುವುದಿಲ್ಲ ಎನ್ನುವ ಅರಿವು ಸರ್ಕಾರಕ್ಕೆ ಇದೆ.

5. ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುವ ರೀತಿಯ ಅಭಿವೃದ್ಧಿಯನ್ನು ಅಭಿವೃದ್ಧಿ ಎಂದು ಕರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಅಶಕ್ತರಾಗಿ ಉಳಿದಿರುವ ಜನಸಮೂಹವನ್ನು ಇಡೀ ಆರ್ಥಿಕ ಬೆಳವಣಿಗೆಯಲ್ಲಿ ಭಾಗೀದಾರರನ್ನಾಗಿ ಮಾಡುವ ಅವಶ್ಯಕತೆಯಿದೆ. ಅಭಿವೃದ್ಧಿಯ ಫಲವು ಸಹಜವಾಗಿಯೇ ಎಲ್ಲರಿಗೂ ಲಭಿಸುವ ರೀತಿಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ನಿರೂಪಿಸಲು ನನ್ನ ಸರ್ಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆಗಳು ಈ ನಿಟ್ಟಿನಲ್ಲಿ ಒಂದು ಆರಂಭ ಅಷ್ಟೇ.

6. ನನ್ನ ಸರ್ಕಾರವು ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವನಿಧಿ ಎಂಬ ಪಂಚ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

7. ನನ್ನ ಸರ್ಕಾರವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ. ನನ್ನ ಸರ್ಕಾರದ ಒಂದು ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ಏರುವುದು ಜಾಗತಿಕ ದಾಖಲೆಯಾಗಿದೆ.

8. ನನ್ನ ಸರ್ಕಾರವು ಖಾತರಿ ಯೋಜನೆಗಳ ಮೂಲಕ ಜನರ ಜೀವನದಲ್ಲಿ ಪರೋಕ್ಷವಾಗಿ ಗಮನಾರ್ಹ ಬದಲಾವಣೆಗಳನ್ನು ಗಮನಿಸುತ್ತಿದೆ. ರಾಜ್ಯದಲ್ಲಿ ಬರಗಾಲವಿದ್ದರೂ ಕಳೆದ ವರ್ಷಕ್ಕಿಂತ ನಮ್ಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದು ಸೂಕ್ತವಲ್ಲ ಎಂಬ ನಂಬಿಕೆಯೊಂದಿಗೆ ನನ್ನ ಸರ್ಕಾರ ಕೆಲಸ ಮಾಡುತ್ತಿದೆ.

9. ನನ್ನ ಸರ್ಕಾರ ಭವಿಷ್ಯದತ್ತ ದೃಷ್ಟಿ ನೆಟ್ಟಿರುವ (ಫ್ಯೂಚರಿಸ್ಟಿಕ್) ಸರ್ಕಾರ. ನಮ್ಮ ಎಲ್ಲ ಯೋಜನೆಗಳು ಈ ರಾಜ್ಯದ ಸಮಸ್ತ ಜನತೆಯ ಪಾಲಿಗೆ ಸಂತೃಪ್ತಿಯ ಮತ್ತು ನೆಮ್ಮದಿಯ ನಾಳೆಗಳನ್ನು ತರುವ ಉದ್ದೇಶ ಹೊಂದಿವೆ. ನಮ್ಮ ನೀತಿಗಳಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲಾಗಿದೆ. ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ, ಕೈಗಾರಿಕೆ ಮತ್ತು ಸೇವಾ ರಂಗಗಳಲ್ಲಿ ಹೊಸ ಭರವಸೆಗಳನ್ನು ಹುಟ್ಟು ಹಾಕಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಹಾಗೂ ಜೀವನ ಭದ್ರತೆಯನ್ನು ಕಲ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ನನ್ನ ಸರ್ಕಾರವು ಕೈಗೊಂಡಿದೆ.

10. ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳು ಜನಜೀವನದ ಎಲ್ಲಾ ರಂಗಗಳನ್ನು ವ್ಯಾಪಕವಾಗಿ ಆವರಿಸಿಕೊಳ್ಳುತ್ತಿವೆ ಹಾಗೂ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಈ ಅವಕಾಶಗಳನ್ನು ಬಳಸಿಕೊಂಡು ಉದ್ಯಮಶೀಲತೆಯನ್ನು ರೂಢಿಸಿಕೊಳ್ಳಲು ಮತ್ತು ಉದ್ಯೋಗ ಪಡೆದುಕೊಳ್ಳಲು ನಮ್ಮ ಯುವ ಜನತೆಯನ್ನು ಸನ್ನದ್ಧಗೊಳಿಸುವುದಕ್ಕಾಗಿ ನಾವು ಹೊಸ ಶಿಕ್ಷಣ ನೀತಿಯನ್ನು ರೂಪಿಸುತ್ತಿದ್ದೇವೆ. ಕರ್ನಾಟಕದ ರಾಜ್ಯ ಶಿಕ್ಷಣ ನೀತಿಯು, ಈಗಾಗಲೇ ರಾಜ್ಯವು ಸಾಧಿಸಿರುವ ಶೈಕ್ಷಣಿಕ ಪ್ರಗತಿಯೊಂದಿಗೆ ಈ ಕಾಲದ ಮತ್ತು ಭವಿಷ್ಯದ ಅಗತ್ಯಗಳಿಗೆ ಪೂರಕವಾಗಿರುವ ಶಿಕ್ಷಣ ನೀಡುವ ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ. ಶಿಕ್ಷಣ ರಂಗದಲ್ಲಿ ಇರುವ ಕೊರತೆಗಳನ್ನು ಸರಿಪಡಿಸುವುದರ ಜತೆಗೆ ಅದನ್ನು ಕಾಲಮಾನದ ಅಗತ್ಯಗಳಿಗೆ ಅನುಗುಣವಾಗಿ ಪುನರ್ ರಚಿಸುವ ಅನಿವಾರ್ಯತೆಯನ್ನು ಸರ್ಕಾರ ಮನಗಂಡಿದೆ. ರಾಜ್ಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ದೇಶಕ್ಕೆ ಒಂದು ಹೊಸ ಹಾದಿಯನ್ನು ತೋರಲಿದೆ.

11. ಜನಕೇಂದ್ರಿತವೂ, ಅಭಿವೃದ್ಧಿಪರವೂ ಆದ ನನ್ನ ಸರ್ಕಾರವು ರಚನೆಯಾಗಿ ಕೇವಲ 8 ತಿಂಗಳಲ್ಲಿಯೇ ಗಮನಾರ್ಹವಾದ ಸಾಧನೆಯನ್ನು ಮಾಡಿದೆ.  ರಾಷ್ಟ್ರಕವಿ ಕುವೆಂಪು ಅವರ ಆಶಯವಾದ “ಸರ್ವಜನಾಂಗದ ಶಾಂತಿಯ ತೋಟ” ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಳನ್ನು ನನ್ನ ಸರ್ಕಾರ ಧ್ಯೇಯವಾಕ್ಯಗಳನ್ನಾಗಿಸಿಕೊಂಡಿದೆ. ಈ 8 ತಿಂಗಳ ಆಡಳಿತದಲ್ಲಿ ಈ ಎರಡೂ ಧ್ಯೇಯಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡಿದೆ ಎಂಬ ಹೆಮ್ಮೆ ನಮ್ಮದು.

12. ಈ ಯೋಜನೆಗಳು ಒಂದು ಜಾತಿ, ಒಂದು ಪ್ರದೇಶಕ್ಕೆ, ಒಂದು ಧರ್ಮಕ್ಕೆ ಅನ್ವಯವಾಗದೆ ನಾಡಿನಲ್ಲಿರುವ ಎಲ್ಲಾ ರೀತಿಯ ಅರ್ಹ ಜನರಿಗೆ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ತಲುಪುತ್ತಿವೆ.  ಸಾರ್ವತ್ರಿಕ ಮೂಲ ಆದಾಯ [Universal Basic Income] ಎಂಬುದನ್ನು ನನ್ನ ಸರ್ಕಾರ ಬಾಯಿ ಮಾತಿನಲ್ಲಿ ಹೇಳದೆ ಅಕ್ಷರಶಃ ಅನುಷ್ಠಾನ ಮಾಡುತ್ತಿದೆ. ಇವುಗಳಿಂದ ಜನರಲ್ಲಿ ಒಂದು ಮಟ್ಟದ ನೆಮ್ಮದಿ ನೆಲೆಸಿದೆ.

13.  ಅತ್ಯಲ್ಪ ಅವಧಿಯಲ್ಲಿಯೆ ಒಂದಿಷ್ಟೂ ಗೊಂದಲ, ಗೋಜಲುಗಳಿಗೆ ಅವಕಾಶ ನೀಡದೆ ನನ್ನ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು ಸಾರ್ವತ್ರಿಕ ದಾಖಲೆ ಎಂದೇ ಪರಿಗಣಿಸಲಾಗುತ್ತಿದೆ. ದೇಶ-ವಿದೇಶಗಳ ಮಾಧ್ಯಮಗಳು ಈ ಕುರಿತು ಶ್ಲಾಘನೆ ಮಾಡಿವೆ. ಅಧ್ಯಯನಗಳನ್ನೂ ಮಾಡುತ್ತಿವೆ. ಒಳ್ಳೆಯ ಆಡಳಿತ, ಪಾರದರ್ಶಕ ಹಾಗೂ ಜನಸ್ನೇಹಿ ವ್ಯವಸ್ಥೆಗಳನ್ನು ಮೂಲಮಂತ್ರವನ್ನಾಗಿಸಿಕೊಂಡಿದೆ. ನನ್ನ ಸರ್ಕಾರವು ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌ ಎಂಬುದನ್ನೂ ಮರೆಯದೆ ಈಸ್‌ ಆಫ್‌ ಗವರ್ನೆನ್ಸ್‌ ಎಂಬುದನ್ನು ಮೂಲ ಆಶಯವನ್ನಾಗಿರಿಸಿಕೊಂಡಿದೆ.  ಇದು ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿಯೇ ಕ್ರಾಂತಿಕಾರಕವಾದ ಹೆಜ್ಜೆಯಾಗಿದೆ.

14. ಜೂನ್ 11, 2023 ರಂದು ಮಹತ್ವಾಕಾಂಕ್ಷಿ ಯೋಜನೆಯಾದ “ಶಕ್ತಿ ಯೋಜನೆ”–“ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ”ವನ್ನು ಜಾರಿಗೊಳಿಸಿ ಮಹಿಳಾ ಸಬಲೀಕರಣದತ್ತ ಹೊಸ ಹೆಜ್ಜೆಯಿಟ್ಟಿದೆ. ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು ಸೇರಿದಂತೆ, ರಾಜ್ಯದಲ್ಲಿರುವ 3.5 ಕೋಟಿ ಮಹಿಳೆಯರು ಜಾತಿ, ಧರ್ಮಗಳ ಬೇಧವಿಲ್ಲದೆ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ 150 ಕೋಟಿಗೂ ಹೆಚ್ಚು ಟ್ರಿಪ್ಪುಗಳಲ್ಲಿ ಮಹಿಳಾ ಪ್ರಯಾಣಿಕರು ಈ ಯೋಜನೆಯಡಿ ಪ್ರವಾಸ ಮಾಡಿದ್ದಾರೆ.

15. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ “ಅನ್ನಭಾಗ್ಯ ಯೋಜನೆ”ಯಡಿ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5ಕೆ.ಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ 5ಕೆ.ಜಿ ಆಹಾರ ಧಾನ್ಯವನ್ನು ಸೇರಿಸಿ ಪ್ರತಿ ಫಲಾನುಭವಿಗೆ 10ಕೆ.ಜಿ ಆಹಾರ ಧಾನ್ಯವನ್ನು ವಿತರಿಸಲು ಬದ್ಧವಾಗಿದೆ. ಪ್ರಸ್ತುತ ಈ ಯೋಜನೆಗೆ ಅಗತ್ಯವಿರುವ ಆಹಾರ ಧಾನ್ಯ ಲಭ್ಯವಾಗುವವರೆಗೆ ರಾಜ್ಯದ ಅರ್ಹ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಹೆಚ್ಚುವರಿ 5ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ ರೂ.34/-ರಂತೆ ಕುಟುಂಬದ ಸದಸ್ಯರುಗಳ ಬ್ಯಾಂಕ್‌ ಖಾತೆಗೆ ನೇರ ನಗದಿನ ಮೂಲಕ ವರ್ಗಾಯಿಸಲಾಗುತ್ತಿದೆ. ಜುಲೈ-2023 ಮಾಹೆಯಿಂದ ಜನವರಿ 2024ರ ಅಂತ್ಯಕ್ಕೆ 4595 ಕೋಟಿ ರೂ. ಗಳನ್ನು ಅರ್ಹ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ.

16. ದಿನಾಂಕ:01.07.2023ರಿಂದ ಜಾರಿಗೆ ಬರುವಂತೆ “ಗೃಹಜ್ಯೋತಿ” ಯೋಜನೆಯನ್ನು ಜಾರಿಗೊಳಿಸಿ, ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ 200 ಯೂನಿಟ್‌ಗಳವರೆಗೆ ಗರಿಷ್ಠ ಬಳಕೆಯ ಮಿತಿಗೆ ಒಳಪಟ್ಟು ಉಚಿತ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ನಾಡಿನ 1.60 ಕೋಟಿ ಗ್ರಾಹಕರು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ.

17. ರಾಜ್ಯದಲ್ಲಿರುವ ಪ್ರತಿ ಅರ್ಹ ಕುಟುಂಬದಲ್ಲಿನ ಯಜಮಾನಿಗೆ ಪ್ರತಿ ತಿಂಗಳು ರೂ.2,000/- ಗಳನ್ನು ನೀಡುವ “ಗೃಹಲಕ್ಷ್ಮಿ“ ಯೋಜನೆಯಡಿ ರೂ.17500 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ನೋಂದಾಯಿಸಿ ಕೊಂಡಿರುವ 1.17 ಕೋಟಿ ಮಹಿಳಾ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಜನವರಿ ವರೆಗೆ 11037 ಕೋಟಿ ರೂ. ಗಳನ್ನು ವರ್ಗಾಯಿಸಲಾಗಿದೆ.

18. “ಯುವನಿಧಿ ಯೋಜನೆ”ಯಡಿ 2022-23ನೇ ಸಾಲಿನಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಡಿಪ್ಲೋಮಾ ಹೊಂದಿದವರು 180 ದಿನಗಳು ಪೂರ್ಣಗೊಂಡರೂ ಉದ್ಯೋಗವನ್ನು ಪಡೆಯದೆ ಇದ್ದರೆ ಕ್ರಮವಾಗಿ ಮಾಸಿಕ ರೂ.3000/- ಮತ್ತು ರೂ.1500/- ಗಳ ನಿರುದ್ಯೋಗ ಭತ್ಯೆಯನ್ನು ಎರಡು ವರ್ಷದ ಅವಧಿಗೆ ಅಥವಾ ಎರಡು ವರ್ಷದೊಳಗೆ ಉದ್ಯೋಗ ಪಡೆಯುವವರೆಗೆ ಪಾವತಿಸಲು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಯೋಜನೆಯನ್ನು ಸ್ವಾಮಿ ವಿವೇಕಾನಂದ ಜಯಂತಿಯಂದು ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಅನುಷ್ಠಾನಗೊಳಿಸಲಾಗಿದೆ. ಹೀಗಾಗಿ, ನನ್ನ ಸರ್ಕಾರವು ನೀಡಿದ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಬದ್ಧತೆಯನ್ನು ಮೆರೆದಿದೆ.

19. ಗ್ಯಾರಂಟಿ ಯೋಜನೆಗಳಿಂದ ಜನರ ಕೈಸೇರಿದ ಹಣ ಆರ್ಥಿಕತೆಗೆ ಹೊಸ ಉತ್ತೇಜನ ನೀಡಿದೆ. ಒಂದೆಡೆ ರಾಜ್ಯಕ್ಕೆ ದೇಶಿಯ ಮತ್ತು ವಿದೇಶಿಯ ಹೂಡಿಕೆ ದೊಡ್ಡ ರೀತಿಯಲ್ಲಿ ಹರಿದು ಬರುತ್ತಿದೆ.  ಈ 8 ತಿಂಗಳಲ್ಲಿ 77 ಸಾವಿರ ಕೋಟಿಗೂ ಹೆಚ್ಚು ಬಂಡವಾಳವು ರಾಜ್ಯಕ್ಕೆ ಹರಿದು ಬಂದಿದೆ. ಇನ್ನೊಂದೆಡೆ, ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಕೊಳ್ಳುವ ಶಕ್ತಿಯು ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿವೆ. ತೆರಿಗೆ ಸಂಗ್ರಹ ಹೆಚ್ಚುತ್ತಿದೆ. ಜನವರಿ ತಿಂಗಳ ಅಂತ್ಯದವರೆಗೆ ನಮ್ಮ ರಾಜ್ಯದ ಜಿಎಸ್‌ಟಿ ಸಂಗ್ರಹಣೆಯ ಬೆಳವಣಿಗೆ ದರವು ಇಡೀ ದೇಶದಲ್ಲಿಯೆ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಕಳೆದ 8 ತಿಂಗಳಿನಿಂದ ಈಚೆಗೆ ಅಭಿವೃದ್ಧಿಯ ಹೊಸ ಶಕೆಯೇ ನಮ್ಮಲ್ಲಿ ಆರಂಭವಾಗಿದೆ. ಇದನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವುದಕ್ಕಾಗಿ ನನ್ನ ಸರ್ಕಾರ ಕಟಿಬದ್ಧವಾಗಿದೆ. ನನ್ನ ಸರ್ಕಾರ ಪ್ರಾರಂಭಿಸಿರುವ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಈ ಯೋಜನೆಗಳನ್ನು ಇನ್ನಿತರೆ ಸರ್ಕಾರಗಳು ಅಳವಡಿಸಿಕೊಳ್ಳಲು ಪೈಪೋಟಿಯಿಂದ ಮುಂದಾಗಿವೆ.

20. ರಾಜ್ಯದ ಆದಾಯ ಸಂಗ್ರಹಣೆಯಲ್ಲಿ ಸದೃಢವಾದ ಬೆಳವಣಿಗೆಯಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ನಾವು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆಯವ್ಯಯದಲ್ಲಿ ಖಾತರಿ ಯೋಜನೆಗಳ ಅನುಷ್ಠಾನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಗಳ ಬಗ್ಗೆ ಆರ್ಥಿಕ ಇಲಾಖೆಯು ಕೈಗೊಂಡ ಅಧ್ಯಯನಗಳು ಜನರಿಂದ ಸಕಾರಾತ್ಮಕ ಪರಿಣಾಮ ಮತ್ತು ಪ್ರತಿಕ್ರಿಯೆಯನ್ನು ತೋರಿಸುತ್ತಿವೆ.

21.  ನನ್ನ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ಅಭಿವೃದ್ಧಿ ವಿಚಾರಗಳಲ್ಲೂ ಅಪ್ರತಿಮ ಸಾಧನೆ ಮಾಡಿದೆ.  ಬರಗಾಲವಿದ್ದರೂ ರಸ್ತೆ, ನೀರು, ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ದಾಖಲಾರ್ಹ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಜೆಟ್‌ನಲ್ಲಿ ಘೋಷಿಸಿದ ಒಟ್ಟು ಘೋಷಣೆಗಳಲ್ಲಿ ಶೇಕಡ 97 ರಷ್ಟು ಘೋಷಣೆಗಳಿಗೆ ಅಧಿಸೂಚನೆ ಹೊರಡಿಸಿ ಕಾರ್ಯಗತಗೊಳಿಸಲಾಗುತ್ತಿರುವುದು ದಾಖಲೆಯ ಸಂಗತಿಯಾಗಿದೆ.

22. ನನ್ನ ಸರ್ಕಾರವು ಇನ್ನಷ್ಟು ಜನೋಪಯೋಗಿಯಾದ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಲು ಸಿದ್ಧವಿದೆ. ಆದರೆ ವಿವಿಧ ಮೂಲಗಳಿಂದ ಸಿಗಬೇಕಾದಷ್ಟು ಸಂಪನ್ಮೂಲಗಳು ಸಿಗುತ್ತಿಲ್ಲ.   ದೇಶದಲ್ಲಿಯೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಲ್ಲಿ ಕರ್ನಾಟಕವು ಎರಡನೆ ಸ್ಥಾನದಲ್ಲಿದೆ. ಆದರೆ ತೆರಿಗೆಯ ಪಾಲು ಪಡೆಯುವ ವಿಚಾರದಲ್ಲಿ ಹತ್ತನೆ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯಲು ನನ್ನ ಸರ್ಕಾರವು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ.

23. ನೂತನ ಸರ್ಕಾರವು ರಚನೆಯಾದ ತರುವಾಯ ಕಂದಾಯ ಇಲಾಖೆಯ ಜಿಲ್ಲಾಧಿಕಾರಿ / ಉಪವಿಭಾಗಾಧಿಕಾರಿ / ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ ಒಟ್ಟು 93,350 ಪ್ರಕರಣಗಳು ಬಾಕಿ ಇದ್ದು ಈ ಪೈಕಿ 5ನೇ ಫೆಬ್ರವರಿ 2024ರಂತೆ 84,253 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಹಾಗೂ 57,087 ಪ್ರಕರಣಗಳು ಬಾಕಿ ಉಳಿದಿರುತ್ತವೆ. ಜನಪರ ಆಡಳಿತ ನೀಡುವ ಅಂಗವಾಗಿ ಡಿಜಿಟಲ್‌ ಪ್ರಮಾಣ ಪತ್ರಗಳನ್ನು ವಿತರಿಸುವ ವ್ಯವಸ್ಥೆಯನ್ನು (Digital Certificates Delivery system) ಅಳವಡಿಸಲಾಗಿದೆ.  ಕಂದಾಯ ಇಲಾಖೆಯ ದಾಖಲೆಗಳನ್ನು ಸಂರಕ್ಷಿಸುವ ಸಲುವಾಗಿ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಪೋಡಿ ಮುಕ್ತ ಗ್ರಾಮ ಯೋಜನೆಗೆ ಮರುಚಾಲನೆ ನೀಡಲಾಗಿದೆ.

24. ರಾಜ್ಯದ ಹೆಚ್ಚಿನ ಭಾಗವು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕರ್ನಾಟಕವು 2023ರ ಮುಂಗಾರು ಅವಧಿಯಲ್ಲಿ 240 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಅವುಗಳಲ್ಲಿ196 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಮುಂತಾದ ತಕ್ಷಣದ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು 31 ಜಿಲ್ಲೆಗಳಿಗೆ ರೂ.324 ಕೋಟಿ ಬಿಡುಗಡೆ ಮಾಡಿದೆ.

25. ಬರ ಪೀಡಿತ ತಾಲೂಕುಗಳಲ್ಲಿ ಬರ ಪರಿಹಾರ ಕ್ರಮಗಳಿಗಾಗಿ ಎನ್‌ಡಿಆರ್‌ಎಫ್‌ನಿಂದ ರೂ.18171.44 ಕೋಟಿ ಆರ್ಥಿಕ ನೆರವು ಕೋರಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ರಾಜ್ಯ ಸರ್ಕಾರವು ಖಾರಿಫ್ ಬರ ಪರಿಹಾರಕ್ಕೆ ಸಂಬಂಧಿಸಿದ ಜ್ಞಾಪನ ಪತ್ರಗಳನ್ನು ಸಲ್ಲಿಸಿದೆ. ಆದರೆ, ಇದುವರೆಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ. ಬರ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

26. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ SDRF ಮಾರ್ಗಸೂಚಿಗಳ ಪ್ರಕಾರ ನನ್ನ ಸರ್ಕಾರವೆ ಮೊದಲನೇ ಕಂತಾಗಿ ಬೆಳೆ ಹಾನಿ ಪರಿಹಾರವನ್ನು ಅರ್ಹತೆಗೆ ಅನುಗುಣವಾಗಿ ರೂ.2000/-ಗಳವರೆಗೆ ಪರಿಹಾರವನ್ನು 32.50 ಲಕ್ಷ ಬರಪೀಡಿತ ರೈತರುಗಳಿಗೆ 617 ಕೋಟಿ ರೂಗಳಷ್ಟು ಇನ್‌ಪುಟ್‌ ಸಬ್ಸಿಡಿಯನ್ನು ಪಾವತಿಸಿದೆ. ಪರಿಹಾರಕ್ಕೆ ಸಂಬಂಧಿಸಿದಂತೆ ನಾವು ಈ ಬಾರಿ ಸಂಪೂರ್ಣ ಪಾರದರ್ಶಕತೆಯನ್ನು ತಂದಿದ್ದೇವೆ. ಹಿಂದಿನ ವರ್ಷಗಳಲ್ಲಿ ನೀಡಿದ ಪರಿಹಾರಗಳಲ್ಲಿ ಮತ್ತು ಇನ್‌ಪುಟ್‌ ಸಬ್ಸಿಡಿಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದು ನನ್ನ ಸರ್ಕಾರದ ಗಮನಕ್ಕೆ ಬಂದಿದೆ.  ಅರ್ಹ ರೈತರಿಗೆ ಪರಿಹಾರ ಸಿಗದೆ ಅನರ್ಹರಿಗೆ ಪರಿಹಾರ ನೀಡಿದ ಅನೇಕ ಪ್ರಕರಣಗಳು ಗಮನಕ್ಕೆ ಬಂದಿವೆ.  ಇದಷ್ಟೆ ಅಲ್ಲದೆ ತೊಗರಿ ಬೆಳೆಗೆ ಬಂದಿದ್ದ ನೆಟೆ ರೋಗದಿಂದ ಬಾಧಿತರಾದ 274637 ರೈತರ ಬ್ಯಾಂಕ್‌ ಖಾತೆಗಳಿಗೆ 219.70 ಕೋಟಿ ರೂ. ಗಳನ್ನು ನೇರವಾಗಿ ಪಾವತಿಸಿದ್ದೇವೆ. ಕೊಬ್ಬರಿಗೆ ಕೇಂದ್ರ ಸರ್ಕಾರವು ನಿಗಧಿ ಮಾಡಿರುವ ಬೆಂಬಲ ಬೆಲೆಯ ಜೊತೆಗೆ ನನ್ನ ಸರ್ಕಾರವು ಪ್ರತಿ ಕ್ವಿಂಟಾಲಿಗೆ 1500 ರೂ. ಗಳನ್ನು ನೀಡಲು ಕ್ರಮವಹಿಸಿದೆ. ಬಿತ್ತನೆ ವೈಫಲ್ಯದಿಂದ ಬಾಧಿತರಾದ 8.10 ಲಕ್ಷ ರೈತರಿಗೆ 591.26 ಕೋಟಿ ರೂ. ಗಳ ಬೆಳೆ ಪರಿಹಾರವನ್ನು ವಿಮಾ ಸಂಸ್ಥೆಗಳಿಂದ ಇತ್ಯರ್ಥಪಡಿಸಲಾಗಿದೆ.

27. ಬರ ಪರಿಹಾರವಿರಲಿ, ಗ್ಯಾರಂಟಿ ಯೋಜನೆಗಳಿರಲಿ ಇವುಗಳನ್ನು ನನ್ನ ಸರ್ಕಾರವು ಜನರ ಹಕ್ಕುಗಳು ಎಂದು ಭಾವಿಸಿಯೆ ಕಾರ್ಯ ನಿರ್ವಹಿಸುತ್ತಿದೆ.  ಪ್ರತಿಯೊಂದನ್ನು ಪರಿಶೀಲಿಸಿ ನೇರವಾಗಿ ರೈತರ ಖಾತೆಗಳಿಗೆ ಪರಿಹಾರ ತಂತ್ರಾಂಶದ ಮೂಲಕ ಜಮಾ ಮಾಡುತ್ತಿದ್ದೇವೆ.

28. ತಾಲ್ಲೂಕು ಮಟ್ಟದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವು ನಿರ್ವಹಣೆಗೆ ಹಾಗೂ ಬರ ಪರಿಹಾರ ಕ್ರಮಗಳ ಮೇಲ್ವಿಚಾರಣೆಗಾಗಿ ಮಾನ್ಯ ಶಾಸಕರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಟಾಸ್ಕ್‌ಫೋರ್ಸ್‌ ಸಮಿತಿಗಳನ್ನು ರಚಿಸಲಾಗಿದೆ.   ಬರಗಾಲಕ್ಕೆ ಸಂಬಂಧಿಸಿದಂತೆ ಜನವರಿ ಅಂತ್ಯದವರೆಗೆ ಶಾಸಕರುಗಳ ಅಧ್ಯಕ್ಷತೆಯಲ್ಲಿ 394 ಟಾಸ್ಕ್‌ಫೋರ್ಸ್‌ ಸಭೆಗಳು ನಡೆದಿವೆ.  226 ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ ಸಭೆಗಳು ನಡೆದಿವೆ.  ಈ ಮಾಹಿತಿಗಳೆ ಹೇಳುವಂತೆ ನನ್ನ ಸರ್ಕಾರವು ಜನರ ಸಂಕಷ್ಟ ನಿವಾರಣೆಗೆ ಕಟಿಬದ್ಧವಾಗಿ ನಿಂತಿದೆ.

29. ಕರ್ನಾಟಕವು ಪ್ರಾಕೃತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ʼಒನ್‌ ಸ್ಟೇಟ್‌ ಮೆನಿವರ್ಲ್ಡ್ಸ್ʼ ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ಸುಂದರ ಕರಾವಳಿ, ಮನೋಹರವಾದ ಸಹ್ಯಾದ್ರಿ ಶ್ರೇಣಿ, ಬಯಲು ಸೀಮೆಯ ಐತಿಹಾಸಿಕ ಸ್ಥಳಗಳು, ಹಲವು ನದಿಗಳ ಹರಿವು, ಚಿನ್ನ ಮುಂತಾದ ಅಪಾರ ಪ್ರಮಾಣದ ಖನಿಜ ಸಂಪತ್ತು ಈ ಭವ್ಯ ನಾಡಿನಲ್ಲಿದೆ.  ಕೃಷಿ, ಅರಣ್ಯ, ವನ್ಯ ಜೀವಿ ಸಂಪತ್ತನ್ನು ಒಳಗೊಂಡಂತೆ ಅಪಾರ ಮಟ್ಟದ ವೈವಿಧ್ಯತೆ ಇಲ್ಲಿದೆ. ಇವುಗಳಿಂದ ಕಂಗೊಳಿಸುವ ನಾಡು ನಮ್ಮದು. ಈ ನಾಡಿಗೆ ಕರ್ನಾಟಕವೆಂದು ನಾಮಕರಣವಾಗಿ 50 ವಸಂತಗಳು ಸಂದಿವೆ. 1973 ರ ನವೆಂಬರ್‌ 1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಗಿತ್ತು. ಅದರ ನೆನಪಿನಲ್ಲಿ ಈ ವರ್ಷ ಕರ್ನಾಟಕ ಸಂಭ್ರಮ-50 ಅನ್ನು ಆಚರಿಸಲಾಗುತ್ತಿದೆ.

30. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ನಮ್ಮ ಜೀವನ್ಮರಣದ ಸಂಗತಿಯಾಗಿದೆ. ನಮ್ಮ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಯಾವುದೇ ಆಕ್ರಮಣವನ್ನು ನಾವು ಸಹಿಸುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಸರಿಯೆ ನಮ್ಮ ಮಾತೃ ಭಾಷೆಯನ್ನು ಹಾಗೂ ಬಸವಣ್ಣ, ಕುವೆಂಪು ಮುಂತಾದವರು ಪ್ರತಿಪಾದಿಸಿದ ಕರ್ನಾಟಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನನ್ನ ಸರ್ಕಾರ ಬದ್ಧವಾಗಿದೆ.  ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022’ ಕಾಯ್ದೆಯನ್ನು ರೂಪಿಸಲಾಗಿದೆ. ಸಧ್ಯದಲ್ಲೆ ಅದು ಅನುಷ್ಠಾನಕ್ಕೆ ಬರಲಿದೆ.

31. ಜನರ ಅನುಕೂಲಕ್ಕಾಗಿ ನಾಮಫಲಕಗಳ ಶೇ.60ರಷ್ಟು ಭಾಗವು ಕನ್ನಡದಲ್ಲಿಯೇ ಇರಬೇಕೆಂದು ತೀರ್ಮಾನಿಸಿ ಕಾನೂನು ರೂಪಿಸಿ ಅನುಷ್ಠಾನ ಮಾಡಲು ಕ್ರಮವಹಿಸಿದ್ದೇವೆ.

32. 2023-24ನೇ ಸಾಲಿನಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 27.87 ಲಕ್ಷ ಕುಟುಂಬಗಳಿಗೆ ಸೇರಿದ 50.22 ಲಕ್ಷ ಜನರಿಗೆ ಕೆಲಸ ಒದಗಿಸಿ ಡಿಸೆಂಬರ್-2023ರ ಅಂತ್ಯಕ್ಕೆ ರೂ.3350.85 ಕೋಟಿ ಕೂಲಿ ಮೊತ್ತವನ್ನು ಪಾವತಿ ಮಾಡಲಾಗಿದೆ ಹಾಗೂ ನರೇಗಾ ಕಾಮಗಾರಿಗಳ ಅನುಷ್ಠಾನಕ್ಕಾಗಿ ಒಟ್ಟು ರೂ.4981.98 ಕೋಟಿಗಳಷ್ಟು ವೆಚ್ಚ ಮಾಡಲಾಗಿರುತ್ತದೆ. ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ 100 ದಿನಗಳ ಬದಲಾಗಿ 150 ದಿನಗಳಷ್ಟು ಉದ್ಯೋಗವನ್ನು ಖಾತ್ರಿಯಾಗಿ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಅನುಷ್ಠಾನಗೊಳ್ಳುವ ನಿರೀಕ್ಷೆಯಲ್ಲಿ ನನ್ನ ಸರ್ಕಾರವಿದೆ.

33. ರಾಜ್ಯದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಜಲ್ ಜೀವನ್ ಮಿಷನ್ ಮೂಲಕ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ನಲ್ಲಿ ನೀರು ಸಂಪರ್ಕವನ್ನು 2024ನೇ ಸಾಲಿನೊಳಗೆ ಒದಗಿಸಲು ನನ್ನ ಸರ್ಕಾರವು ಯೋಜಿಸಿದೆ.

34. ʼಪ್ರಧಾನ ಮಂತ್ರಿ ಗ್ರಾಮ ಸಡಕ್‌ ʼಯೋಜನೆಯಡಿ 780.00 ಕಿಮೀ ಉದ್ದದ ರಸ್ತೆಗಳನ್ನು ರೂ.825.00 ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು ಈವರೆವಿಗೂ 214.170 ಕಿ.ಮೀ ಉದ್ದದ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೂ.206.80 ಕೋಟಿಗಳನ್ನು ಭರಿಸಲಾಗಿದೆ.

35. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರ ಸಮಗ್ರ ಅಭಿವೃದ್ದಿಗಾಗಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾರ್ಯಕ್ರಮಗಳಿಗೆ 2023-24ನೇ ಸಾಲಿನಲ್ಲಿ ಒಟ್ಟು ರೂ.34,580.38 ಕೋಟಿ ಅನುದಾನ ಒದಗಿಸಿ ಸಮರ್ಪಕ ಯೋಜನೆಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.

36. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕ್ರೈಸ್‌ ವಸತಿ ಶಾಲೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಪ್ರಸಕ್ತ ಸಾಲಿನಲ್ಲಿ ರೂ.960 ಕೋಟಿ ಅನುದಾನ ಒದಗಿಸಲಾಗಿದೆ. ಇದುವರೆಗೆ ಪರಿಶಿಷ್ಟ ಜಾತಿಯ 23 ವಿದ್ಯಾರ್ಥಿನಿಲಯಗಳು ಹಾಗೂ 23 ವಸತಿ ಶಾಲೆಗಳ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.

37. ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 75,299 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಈ ಪೈಕಿ 11,599 ಅಭ್ಯರ್ಥಿಗಳು ಉದ್ಯೋಗಾವಕಾಶವನ್ನು ಪಡೆದಿರುತ್ತಾರೆ.

38. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ʼಟನಲ್‌ ರಸ್ತೆʼ ಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಟನಲ್‌ ನಿರ್ಮಾಣದ ಕುರಿತು ʼಸಾಧಕ ವರದಿʼಯನ್ನು ಸಿದ್ದಪಡಿಸಲಾಗುತ್ತಿದೆ.

39. ಬೆಂಗಳೂರು ಮೆಟ್ರೋ ಹಂತ-2, ರೀಚ್-5 ಹೊಸ ಮಾರ್ಗ, 19.15 ಕಿಮೀ ಉದ್ದದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್‌ ಬೋರ್ಡ್ ವರೆಗೆ 3.3 ಕಿಮೀ ಉದ್ದದ 16 ನಿಲ್ದಾಣಗಳನ್ನು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಿಸುತ್ತಿದ್ದು, ಪ್ರಸ್ತುತ, 98% ಪ್ರಗತಿಯನ್ನು ಸಾಧಿಸಲಾಗಿದೆ ಮತ್ತು ಜುಲೈ 2024ರೊಳಗೆ ಮುಕ್ತಗೊಳಿಸಲು ಯೋಜಿಸಲಾಗಿದೆ.

40. ಬೆಂಗಳೂರು ಮೆಟ್ರೋ ರೈಲು ಹಂತ-2ರಡಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೃಷ್ಣರಾಜಪುರವರೆಗೆ 19.75 ಕಿ.ಮೀ. ಗಳು ಮತ್ತು ಹಂತ-2ಬಿ ಕೃಷ್ಣರಾಜಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ ಸದರಿ ಯೋಜನೆಯನ್ನು ಜೂನ್-2026ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.

41. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಯಾದ 110 ಹಳ್ಳಿಗಳ ಪ್ರದೇಶಗಳಿಗೆ 775 ಎಂ.ಎಲ್.ಡಿ ಹೆಚ್ಚುವರಿ ಕುಡಿಯುವ ನೀರನ್ನು ಪೂರೈಸುವ ಯೋಜನೆಯಾದ ಕಾವೇರಿ ನೀರು ಸರಬರಾಜು 5ನೇ ಹಂತದ ಯೋಜನೆಯನ್ನು ಮಾರ್ಚ್ 2024ರಲ್ಲಿ ಕಾರ್ಯಾರಂಭಗೊಳಿಸಲು ಉದ್ದೇಶಿಸಲಾಗಿದೆ.

42.  ನನ್ನ ಸರ್ಕಾರವು ಶಕ್ತಿ ಯೋಜನೆಯ ಸಮರ್ಥ ಅನುಷ್ಠಾನದ ಜೊತೆಗೆ ರಾಜ್ಯ ಸಾರಿಗೆಗೆ ಹೊಸ ಬಸ್ಸುಗಳನ್ನು ಖರೀದಿ ಮಾಡಿ ಜನರ ಓಡಾಟಕ್ಕೆ ಒದಗಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರಗಳು ಒಂದು ಹೊಸ ಬಸ್ಸನ್ನೂ ಒದಗಿಸಿರಲಿಲ್ಲ, ಒಂದು ಹುದ್ದೆಯನ್ನೂ ಭರ್ತಿ ಮಾಡಿರಲಿಲ್ಲ. ಆದರೆ ನನ್ನ ಸರ್ಕಾರವು ಕೇವಲ ಎಂಟು ತಿಂಗಳಲ್ಲಿ 1150 ಹೊಸ ಬಸ್ಸುಗಳನ್ನು ಖರೀದಿ ಮಾಡಿ ವಿವಿಧ ಸಾರಿಗೆ ನಿಗಮಗಳಿಗೆ ಒದಗಿಸಿದೆ ಮತ್ತು 1550ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಜನರ ಸೇವೆಗಾಗಿ ನಿಯೋಜಿಸಿದೆ.

43. ನನ್ನ ಸರ್ಕಾರವು ಅಸ್ತಿತ್ವಕ್ಕೆ ಬಂದ ಅಲ್ಪ ಅವಧಿಯಲ್ಲಿಯೆ ವಿವಿಧ ಇಲಾಖೆಗಳಲ್ಲಿನ    ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಮಾಡುತ್ತಿದೆ. ಈಗಾಗಲೇ 16000ಕ್ಕೂ ಅಧಿಕ ಯುವ ಜನರು ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಗೊಂಡು ತರಬೇತಿ ಅವಧಿಯಲ್ಲಿದ್ದಾರೆ. ಇಷ್ಟೆ ಅಲ್ಲದೆ 14000ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿಯು ವಿವಿಧ ಹಂತಗಳಲ್ಲಿ ನಡೆಯುತ್ತಿದೆ.  ನನ್ನ ಸರ್ಕಾರವು ನೇಮಕಾತಿಗಳಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕಾಯ್ದೆಯನ್ನೂ ಸಹ ಜಾರಿಗೊಳಿಸುತ್ತಿದೆ.

44. ವಿದ್ಯಾರ್ಥಿಗಳು, ಕಾರ್ಮಿಕರು, ದುಡಿಯುವ ವರ್ಗದ ಜನರ ಹಸಿವನ್ನು ಹೋಗಲಾಡಿಸುವ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್‌-2 ಯೋಜನೆಯನ್ನು ರೂಪಿಸಿದೆ. 2ನೇ ಹಂತದಲ್ಲಿ ಹೊಸ ಪಟ್ಟಣಗಳಲ್ಲಿ ಹಾಗೂ ಕ್ಯಾಂಟೀನ್ ನಿರ್ಮಾಣವಾಗದೆ ಇರುವ ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಮೆನುವಿನೊಂದಿಗೆ 188 ಹೊಸ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಅವುಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

45. 2023-24ನೇ ಸಾಲಿನ ಆಯವ್ಯಯದಲ್ಲಿ ಜಲಸಂಪನ್ಮೂಲ ಇಲಾಖೆಗೆ (ಭಾರಿ ಮತ್ತು ಮಧ್ಯಮ ನೀರಾವರಿ) ಒಟ್ಟು ರೂ.16,735.49 ಕೋಟಿ ಅನುದಾನ ಒದಗಿಸಲಾಗಿದ್ದು, ಡಿಸೆಂಬರ್‌-2023ರ ಅಂತ್ಯಕ್ಕೆ ರೂ.10357.91 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಮತ್ತು 31,117.98 ಎಕರೆ (12593 ಹೆಕ್ಟೇರ್) ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯವನ್ನು ಕಲ್ಪಿಸಲಾಗಿದೆ.

46. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ರಸ್ತೆಗಳ ಜಾಲ ಪ್ರಮುಖ ಪಾತ್ರ ವಹಿಸುವುದು. ನನ್ನ ಸರ್ಕಾರವು ಉತ್ತಮ ಗುಣಮಟ್ಟದ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ಇತರೆ ರಸ್ತೆಗಳ ಅಭಿವೃದ್ಧಿ ಮತ್ತು ಸೇತುವೆಗಳ ನಿರ್ಮಾಣವನ್ನು ರಾಜ್ಯ ಸರ್ಕಾರದ ಅನುದಾನ ಮತ್ತು ಬಾಹ್ಯ ಅನುದಾನಗಳಲ್ಲಿ ವಿವಿಧ ಯೋಜನೆಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ.

47. ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯಲ್ಲಿ 165 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ ಸುಮಾರು ರೂ.45,325 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 42,292 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.

48. ಹೊಸ ನೀತಿಯಿಂದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಪ್ರವಾಸೋದ್ಯಮದ ನೀಲನಕ್ಷೆಯನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ರೂಪಿಸಿದೆ. ಪ್ರವಾಸೋದ್ಯಮದ ಮೂಲಕ ಶೈಕ್ಷಣಿಕ, ಐತಿಹಾಸಿಕ ಮತ್ತು ಪಾರಂಪರಿಕ, ವಾಣಿಜ್ಯ ಹಾಗೂ ವೃತ್ತಿಪರ ತಿಳುವಳಿಕೆ ಮೂಡಿಸಲು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಗಳನ್ನು ಪ್ರಾಣಿ ಸಂಗ್ರಹಾಲಯ, ಅರಣ್ಯ ದರ್ಶನ ಮತ್ತು ಸಾಹಸಿ ಪ್ರವಾಸೋದ್ಯಮ ಇತ್ಯಾದಿಗಳನ್ನು ಉತ್ತೇಜಿಸಲು ಪರಿಣಾಮಕಾರಿಯಾದ ಅಂಶಗಳನ್ನು ಒಳಗೊಂಡ ಪ್ರವಾಸೋದ್ಯಮ ನೀತಿ ಮತ್ತು ಕಾರ್ಯಸೂಚಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.

49. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ಕುಡಿಯುವ ನೀರು ಹಾಗೂ ಉಚಿತ ವಿದ್ಯುತ್‌ ಸೌಲಭ್ಯಗಳನ್ನು ಒದಗಿಸಲಾಗಿದೆ.

50. ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ1 ರಿಂದ 10ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಮೊಟ್ಟೆ / ಬಾಳೆಹಣ್ಣು / ಚಿಕ್ಕಿಯನ್ನು ನೀಡಲಾಗುತ್ತಿದೆ. ಸದರಿ ಉದ್ದೇಶಕ್ಕಾಗಿ ರೂ.280.00 ಕೋಟಿ ಅನುದಾನ ವಿನಿಯೋಗಿಸಲಾಗುತ್ತಿದೆ.

51. ರಾಜ್ಯದ ಎಲ್ಲಾ ಶಾಲೆಗಳಲ್ಲಿ ʼಭಾರತ ಸಂವಿಧಾನʼ ಪೀಠಿಕೆ ವಿನ್ಯಾಸದ ಫೋಟೋವನ್ನು ಅಳವಡಿಸಲು ಹಾಗೂ ಪ್ರತಿನಿತ್ಯ ಪ್ರಾರ್ಥನಾ ಸಮಯದಲ್ಲಿ ಸಂವಿಧಾನ ಪೀಠಿಕೆಯನ್ನು ಓದಲು ಕ್ರಮವಹಿಸಲಾಗಿದೆ.

52. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಕಡಿಮೆ ಶೌಚಾಲಯಗಳಿರುವ 5,775 ಸರ್ಕಾರಿ ಶಾಲೆಗಳಲ್ಲಿ ಹಾಗೂ 150 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚುವರಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ.

53. ಜಾತಿ ಆಧಾರಿತವಾಗಿ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ ಮತ್ತು ದಮನಕ್ಕೆ ಒಳಗಾದ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಸಾಮಾಜಿಕ-ಧಾರ್ಮಿಕ ಕ್ರಾಂತಿಯ ಕೀರ್ತಿ ವಿಶ್ವ ಗುರು ಬಸವಣ್ಣನವರಿಗೆ ಸಲ್ಲುತ್ತದೆ.  ದುಡಿಮೆ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ತತ್ವವನ್ನು ಪ್ರತಿಪಾದಿಸಿದ ಹಾಗೂ ಅನುಭವ ಮಂಟಪದ ಮೂಲಕ ಸಂಸದೀಯ ವ್ಯವಸ್ಥೆಯ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದ ವಚನ ಚಳುವಳಿಯ ನೇತಾರರಾದ ಬಸವಣ್ಣನವರನ್ನು ನಾಡಿನ ʼಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ.  ಮನುವಾದದ ವಿರುದ್ಧ ಚಳುವಳಿ ರೂಪಿಸಿ ಸಮಾನತೆಯ ಕನಸನ್ನು ಬಿತ್ತಿದ ಬಸವಣ್ಣನವರು, ಅಲ್ಲಮಪ್ರಭುಗಳು ಮುಂತಾದವರನ್ನು ಮತ್ತೆ ಮತ್ತೆ ನಮ್ಮ ನಿಜ ಜೀವನದಲ್ಲಿ ಸ್ಫೂರ್ತಿದಾಯಕರನ್ನಾಗಿಸಿ ಕೊಳ್ಳಲೇಬೇಕಾಗಿದೆ.

54. ಕರ್ನಾಟಕ ರಾಜ್ಯದಲ್ಲಿ ಪ್ರಾದೇಶಿಕ ತ್ವರಿತ ಸಂಚಾರ ಹಾಗೂ ಸಂಪರ್ಕವನ್ನು ಕಲ್ಪಿಸಲು, ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆಯು ದಿನಾಂಕ: 31.08.2023 ರಿಂದ ಪ್ರಾರಂಭಗೊಂಡಿರುತ್ತದೆ. ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಪೂರ್ಣಗೊಳಿಸಿ, 2024ನೇ ಸಾಲಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. ಹಾಸನ ಹಾಗೂ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗಳನ್ನು ನಿಗಧಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು.

55. ಬೆಂಗಳೂರು ಉಪನಗರ ರೈಲ್ವೆ ಯೋಜನೆಯಡಿ ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಇಲಾಖೆಗಳ ಸಹಭಾಗಿತ್ವದಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಲ್ಲಿನ ಬೈಯಪ್ಪನಹಳ್ಳಿ-ಚಿಕ್ಕಬಾಣಾವಾರ (25 ಕಿ.ಮೀ) ಕಾರಿಡಾರ್‌ನ ಸಿವಿಲ್‌ ಕಾಮಗಾರಿಯು ಪ್ರಗತಿಯಲ್ಲಿದೆ. ಹೀಲಲಿಗೆ – ರಾಜಾನುಕುಂಟೆ (46.24 ಕಿ.ಮೀ) ಕಾರಿಡಾರ್‌ನ ಸಿವಿಲ್‌ ಕಾಮಗಾರಿಯ ಟೆಂಡರ್‌ ಅನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಲಾಗುವುದು.

56. ರಾಜ್ಯದ 62 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು 6ನೇ ತರಗತಿಯಿಂದ 12ನೇ ತರಗತಿಯವರೆಗೆ Integrated ಶಾಲೆಗಳನ್ನಾಗಿ ಉನ್ನತೀಕರಿಸಲಾಗಿದೆ ಹಾಗೂ 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿಗಳನ್ನು ದ್ವಿಗುಣಗೊಳಿಸಲಾಗಿದ್ದು ಇದರಿಂದ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗುತ್ತಿದೆ.

57. ಕರ್ನಾಟಕವು ಸ್ಟಾರ್ಟ್‌ಅಪ್ ಶ್ರೇಯಾಂಕದಲ್ಲಿ ಉಳಿದ ರಾಜ್ಯಗಳಿಗಿಂತ ಬಹಳ ಮುಂದೆ ಇದೆ. ರಾಜ್ಯವು ಈಗ ಗ್ಲೋಬಲ್ ಇನ್ನೋವೇಶನ್‌ ಹಬ್ ಕೂಡ ಆಗಿದೆ.

58. ಕರ್ನಾಟಕವು ವಿಶ್ವದ 4ನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಎಂದು ಗುರುತಿಸಲ್ಪಟ್ಟಿದೆ. ಫಾರ್ಚುನ್‌ 500 ಕಂಪನಿಗಳಲ್ಲಿ 400ಕ್ಕೂ ಹೆಚ್ಚು ಕಂಪನಿಗಳು ರಾಜ್ಯದಲ್ಲಿ ನೆಲೆಗೊಂಡಿವೆ. ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ R&D ಕೇಂದ್ರಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಹೊಂದಿವೆ. ಭಾರತದ ಐಟಿ ರಫ್ತಿನಲ್ಲಿ ರಾಜ್ಯವು ಶೇಕಡ 40ಕ್ಕಿಂತಲೂ ಹೆಚ್ಚು ಕೊಡುಗೆ ನೀಡುತ್ತಿದೆ ಮತ್ತು ಜೈವಿಕ ತಂತ್ರಜ್ಞಾನ ರಫ್ತಿನಲ್ಲಿ ಶೇಕಡ 33ಕ್ಕಿಂತಲೂ ಹೆಚ್ಚು ಕೊಡುಗೆ ನೀಡುತ್ತಿದೆ. ರಾಜ್ಯದ ಜೈವಿಕ ಆರ್ಥಿಕತೆಯು ಸುಮಾರು $25 ಬಿಲಿಯನ್‌ ಮೌಲ್ಯದ್ದಾಗಿದೆ ಮತ್ತು ಇದು ಭಾರತದ ಜೈವಿಕ ಆರ್ಥಿಕತೆಯ ಸುಮಾರು ಶೇಕಡ 33 ಆಗಿದೆ.

59. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರದ ಬೀಜಗಳ ಪೂರೈಕೆ ಯೋಜನೆಯಡಿ 3.52 ಲಕ್ಷ ಕ್ವಿಂಟಾಲ್ ಗಳಷ್ಟು ಬಿತ್ತನೆ ಬೀಜಗಳನ್ನು 9.08 ಲಕ್ಷ ರೈತರಿಗೆ ವಿತರಣೆ ಮಾಡಲಾಗಿರುತ್ತದೆ. 2023ರ ಹಿಂಗಾರು ಹಂಗಾಮಿನಲ್ಲಿ ದಿನಾಂಕ: 19.12.2023 ರವರೆಗೆ 2.39 ಲಕ್ಷ ಕ್ವಿಂಟಾಲ್‌ ಗಳಷ್ಟು ಬಿತ್ತನೆ ಬೀಜಗಳನ್ನು 3.75 ಲಕ್ಷ ರೈತರಿಗೆ ವಿತರಣೆ ಮಾಡಲಾಗಿರುತ್ತದೆ.

60. 2023-24ರಲ್ಲಿ ಸೂಕ್ಷ್ಮ ನೀರಾವರಿ ಯೋಜನೆ ಅನುಷ್ಠಾನಕ್ಕೆ ರೂ.102.84 ಕೋಟಿ ಬಿಡುಗಡೆ ಮಾಡಲಾಗಿದ್ದು, 49,000 ಹೆಕ್ಟೇರ್ ಪ್ರದೇಶದಲ್ಲಿ 48,000 ರೈತರ ಹೊಲಗಳಲ್ಲಿ ಸೂಕ್ಷ್ಮ ನೀರಾವರಿ ಘಟಕಗಳನ್ನು ಸ್ಥಾಪಿಸಲು ರೂ.89.51 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.

61. ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಜಯದೇವ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರವನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ.

62. ನಿಮ್ಹಾನ್ಸ್ ಸಹಯೋಗದೊಂದಿಗೆ ಬಿಎಂಸಿಆರ್‌ಐ, ಎಂಎಂಸಿಆರ್‌ಐ, ಕಿಮ್ಸ್ ಹುಬ್ಬಳ್ಳಿ, ವಿಮ್ಸ್‌ ಬಳ್ಳಾರಿ, ಜಿಮ್ಸ್‌ ಗುಲ್ಬರ್ಗಾ ಮತ್ತು ರಿಮ್ಸ್‌ ರಾಯಚೂರುಗಳಲ್ಲಿ ಹಬ್ ಮತ್ತು ಸ್ಪೋಕ್‌ ಮಾಡೆಲ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

63. ವಿವಿಧ ವಸತಿ ಯೋಜನೆಗಳಡಿಯಲ್ಲಿ 3ಲಕ್ಷ ಮನೆಗಳನ್ನು 2023-24ನೇ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಲು ಗುರಿ ಹೊಂದಲಾಗಿದ್ದು, ಜನವರಿ-2024ರವರೆಗೆ ಒಟ್ಟು 1.70 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟಾರೆ ರೂ.2337.34 ಕೋಟಿಗಳನ್ನು ಖರ್ಚು ಮಾಡಲಾಗಿದೆ.

64. ಕರ್ನಾಟಕ ಕೊಳಗೇರಿ ಆಭಿವೃದ್ದಿ ಮಂಡಳಿಯು 2835 ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ಘೋಷಿಸಿದೆ. ಕೊಳಚೆ ಪ್ರದೇಶದ ನಿವಾಸಿಗಳ ಜೀವನ ಮಟ್ಟ ಸುಧಾರಿಸಲು ಮೂಲಭೂತ ಸೌಲಭ್ಯಗಳನ್ನು ವಸತಿ ಯೋಜನೆಗಳೊಂದಿಗೆ ಕೈಗೊಳ್ಳಲಾಗಿದೆ.  ಪ್ರಸ್ತುತ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ (ಪಿ.ಎಂ.ಎ.ವೈ -ಎ.ಹೆಚ್.ಪಿ) 1,80,253 ಮನೆಗಳನ್ನು ನಿರ್ಮಿಸಲಾಗುತ್ತಿದೆ.

65. ಕಲ್ಯಾಣ-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2023-24ನೇ ಸಾಲಿನಲ್ಲಿ               ರೂ.3000.00 ಕೋಟಿಗಳನ್ನು ಒದಗಿಸಲಾಗಿದೆ. ಸದರಿ ಯೋಜನೆಯಡಿ ಒಟ್ಟಾರೆ 5468 ಕಾಮಗಾರಿಗಳಿಗೆ ಕ್ರಿಯಾ ಯೋಜನೆಯನ್ನು ಮಂಜೂರು ಮಾಡಿದ್ದು, ನವೆಂಬರ್-2023ರ ಅಂತ್ಯದವರೆಗೆ 1287 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ.

66. 2023-24ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ರೂ.1611.05 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ. ಈ ಇಲಾಖೆಯಡಿಯಲ್ಲಿ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ 134 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಮತ್ತು 119 ಆಶ್ರಮ ಶಾಲೆ ಸೇರಿ ಒಟ್ಟು 389 ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಯೋಜನೆಗಳಡಿ ಮೆಟ್ರಿಕ್ ಪೂರ್ವ, ಮೆಟ್ರಿಕ್‌ ಮತ್ತು ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ / ವಿದ್ಯಾರ್ಥಿವೇತನವನ್ನು ರಾಜ್ಯ ಮತ್ತು ಕೇಂದ್ರ ಯೋಜನೆಯಡಿ ಮಂಜೂರು ಮಾಡಲಾಗಿದೆ.

67. ಪೊಲೀಸ್‌ ಇಲಾಖೆಯಲ್ಲಿ ಇ-ಎಫ್‌ಐಆರ್‌ ಸೇವೆ, ಇ-ಚಲನ್‌ ಸಿಸ್ಟಂ, ಇಲಾಖೆಯ ಸೇವೆ ಕುರಿತು ಪ್ರತಿಕ್ರಿಯೆ (ಲೋಕಸ್ಪಂದನ), ಸಾಮಾಜಿಕ ಮಾಧ್ಯಮ ನಿರ್ವಹಣಾ ಕೋಶ, ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಸೈಬರ್‌ ಅಪರಾಧಗಳ ಕೋಶ, ಪ್ರದರ್ಶನ ಫಲಕಗಳು, ಇ-ಬೀಟ್‌ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ.

68. ರಾಜ್ಯದಲ್ಲಿ 10,84,794 ಅಂತ್ಯೋದಯ ಅನ್ನ ಯೋಜನೆಯ (AAY) ಪಡಿತರ ಚೀಟಿಯ 44,03,651 ಫಲಾನುಭವಿಗಳಿಗೆ ಹಾಗೂ 1,16,69,242 ಆದ್ಯತಾ (PHH) ಪಡಿತರ ಚೀಟಿಗಳ 3,94,30,492 ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಿಸಲಾಗಿದೆ. ಒಟ್ಟು 1,27,54,036 ಅಂತ್ಯೋದಯ ಅನ್ನ ಹಾಗೂ ಆದ್ಯತಾ ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು ಇದರಲ್ಲಿ ಒಟ್ಟು 4,38,34,143 ಫಲಾನುಭವಿಗಳಿಗೆ ಆಹಾರ ಭದ್ರತೆ ಒದಗಿಸಲಾಗಿದೆ.

69. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ವರದಿಗಾರರು ಹಾಗೂ ಛಾಯಾಗ್ರಾಹಕರು ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಸುಗಮವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಮಾಧ್ಯಮ ಮಾನ್ಯತಾ ಕಾರ್ಡ್‌ಗಳನ್ನು ನೀಡುತ್ತಿದ್ದು, ಮಾನ್ಯತೆ ಪಡೆದ ಪತ್ರಕರ್ತರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಶ್ರೇಣಿಯ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಸ್ಮಾರ್ಟ್‌ ಕಾರ್ಡ್‌ ಒದಗಿಸಲಾಗಿದೆ.

70. ಕನ್ನಡ ಪತ್ರಿಕಾ ರಂಗದ ಪತ್ರಕರ್ತರಿಗೆ ಟಿ.ಎಸ್.ಆರ್  ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಂಕಷ್ಟದಲ್ಲಿರುವ ನಿವೃತ್ತ ಪತ್ರಕರ್ತರಿಗೆ ರೂ.12000/-ಗಳು ಹಾಗೂ ಮೃತ ಫಲಾನುಭವಿಗಳ ಪತ್ನಿ ಅಥವಾ ಪತಿಗೆ ರೂ.6000/-ಗಳ ಮಾಸಾಶನವನ್ನು ನೀಡಲಾಗುತ್ತಿದೆ.

71. ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯನ್ನು ಕಳೆದ ವರ್ಷ ಅಂಗನವಾಡಿಗಳು, ಶಾಲೆಗಳು, ಕಾಲೇಜುಗಳಲ್ಲಿನ ಎಲ್ಲಾ ಮಕ್ಕಳು ಸೇರಿದಂತೆ, ಗರ್ಭಿಣಿಯರು, ಪ್ರಸವಪೂರ್ವ ತಾಯಂದಿರು ಮತ್ತು ಸಂತಾನೋತ್ಪತ್ತಿ ವಯೋಮಾನದ ಮಹಿಳೆಯರ ಹಿಮೋಗ್ಲೋಬಿನ್ (ಎಚ್‌ಬಿ) ತಪಾಸಣೆ ಮಾಡುವ ಉದ್ದೇಶದಿಂದ ಪ್ರಾರಂಭಿಸಲಾಯಿತು.  ಈ ಯೋಜನೆಯಡಿ 10 ಲಕ್ಷಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ.

72. ಮೊದಲ ಬಾರಿಗೆ, ಎಲ್ಲರಿಗೂ ಉಚಿತ ಡಯಾಲಿಸಿಸ್ ಸೇವೆಗಳ ಭಾಗವಾಗಿ, ಏಕ ಬಳಕೆಯ ಡಯಾಲಿಸಿಸ್ ಅನ್ನು ಪರಿಚಯಿಸಲಾಗಿದೆ.  ಈ ಕಾರ್ಯಕ್ರಮವನ್ನು ಈಗ 168 ಕೇಂದ್ರಗಳಿಂದ 219 ಕೇಂದ್ರಗಳಿಗೆ 800 ಘಟಕಗಳೊಂದಿಗೆ ವಾರ್ಷಿಕವಾಗಿ 7.2 ಲಕ್ಷ ಡಯಾಲಿಸಿಸ್ ಸೈಕಲ್‌ಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ.

73. ಹೃದಯ ಸಂಬಂಧಿ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದೊಂದಿಗೆ 15 ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಏಪ್ರಿಲ್ ನಿಂದ ಡಿಸೆಂಬರ್ ವರೆಗೆ 1,01,340 ಇಸಿಜಿಗಳನ್ನು ತೆಗೆದುಕೊಳ್ಳಲಾಗಿದೆ, ಆ ಪೈಕಿ 1,550 ಹೃದ್ರೋಗಿಗಳಿಗೆ ಜಯದೇವ ಆಸ್ಪತ್ರೆಯ ತೃತೀಯ ಹಂತದಲ್ಲಿ ಚಿಕಿತ್ಸೆ ನೀಡಲಾಗಿದೆ.

74. ನನ್ನ ಸರ್ಕಾರವು ಕೆಳಹಂತದಿಂದಲೇ ಉತ್ತಮ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸಲು ಶ್ರಮಿಸುವುದನ್ನು ಮುಂದುವರಿಸುತ್ತದೆ. ಹಬ್-ಸ್ಪೋಕ್ ಮಾಡೆಲ್‌ಗಳ ಮೂಲಕ ತಜ್ಞರ ಸೇವೆಗಳನ್ನು ಒದಗಿಸುವುದು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸಲಾಗುವುದು.

75. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಒಟ್ಟು 2635 ವಸತಿ ನಿಲಯ, ಆಶ್ರಮ ಶಾಲೆಗಳು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಡೆಸುತ್ತಿದ್ದು, ಈ ಸಂಸ್ಥೆಗಳಲ್ಲಿ ಒಟ್ಟು 2,29,461 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ.

76. ಕರ್ನಾಟಕ ಸರ್ಕಾರವು ಯುವ ಜನರ ಹಾಗೂ ಕ್ರೀಡಾಪಟುಗಳ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ. ದಿನಾಂಕ: 23-09-2023 ರಿಂದ 08-10-2023 ರವರೆಗೆ ಚೀನಾ ದೇಶದ ಹಾಂಗ್‌ಝೌನಲ್ಲಿ ನಡೆದ 19ನೇ ಏಷಿಯನ್‌ ಗೇಮ್ಸ್‌ 2023ರಲ್ಲಿ ಕರ್ನಾಟಕದ 08 ಕ್ರೀಡಾಪಟುಗಳು 09 ಪದಕಗಳನ್ನು ಗೆದ್ದು, ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ. ಈ ಕ್ರೀಡಾಪಟುಗಳಿಗೆ ಒಟ್ಟು ರೂ.175.00 ಲಕ್ಷಗಳ ನಗದು ಬಹುಮಾನ ನೀಡಿ ಸನ್ಮಾನಿಸಲಾಗಿರುತ್ತದೆ.

77. ರಾಜ್ಯದ 8.65ಲಕ್ಷ ಹಾಲು ಉತ್ಪಾದಕರಿಗೆ ರೂ.757.97ಕೋಟಿಗಳ ಪ್ರೋತ್ಸಾಹಧನವನ್ನು ನೇರ ನಗದು ವರ್ಗಾವಣೆ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.

78. ರಾಜ್ಯದಲ್ಲಿ ಅರಣ್ಯ ಮತ್ತು ವೃಕ್ಷ ಹೊದಿಕೆಯನ್ನು ವೃದ್ಧಿಸಲು ಅರಣ್ಯ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅರಣ್ಯ ಪ್ರದೇಶಗಳ ಸಮರ್ಪಕ ಸಂರಕ್ಷಣೆ ಮತ್ತು ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

79. ಸಂವಿಧಾನದ ಪ್ರತಿಯೊಂದು ಸದಾಶಯವನ್ನು ಅಕ್ಷರಷಃ ಅನುಷ್ಠಾನಗೊಳಿಸಲು ನನ್ನ ಸರ್ಕಾರ ಇಚ್ಛಾಶಕ್ತಿಯನ್ನು ಹೊಂದಿದೆ. ಸಂವಿಧಾನವನ್ನು ಸದಾಕಾಲ ರಕ್ಷಿಸುವ ಮತ್ತು ಸಂದರ್ಭಗಳಲ್ಲಿ ಸಮರ್ಥಿಸುವ ಮತ್ತು ಮಾನವ ಹಕ್ಕುಗಳ ರಕ್ಷಣೆ ಹಾಗೂ ಸಂವಿಧಾನದ ಸದಾಶಯಗಳನ್ನು ಈಡೇರಿಸಲು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಲಾಗುವುದು. ಕಾನೂನು ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಅಗತ್ಯ ಕಾನೂನುಗಳನ್ನು ರಚಿಸಲಾಗುವುದು.

80. ರಾಜ್ಯದ ಗ್ರಾಮೀಣ ಜನರ ಮನೆ ಬಾಗಿಲಿಗೆ ನ್ಯಾಯ ದೊರಕಿಸಿಕೊಡುವ ಮಹತ್ವಾಕಾಂಕ್ಷೆಯ ಭಾಗವಾಗಿ ಭಾರತ ಸಂವಿಧಾನದ 39A ಅನುಚ್ಛೇದದ ಅಡಿಯಲ್ಲಿ ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವಿಗೆ ಸಂಬಂಧಿಸಿದಂತೆ ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯ ಲಭಿಸುವಂತೆ ಕಾನೂನು ವ್ಯವಸ್ಥೆಯ ನಿರ್ವಹಣೆಯನ್ನು ಸುನಿಶ್ಚಿತಗೊಳಿಸಲು ಬಡವರ, ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ನ್ಯಾಯದಾನ ವ್ಯವಸ್ಥೆಯನ್ನು ಕೊಂಡೊಯ್ಯುವ ಉಪಕ್ರಮವಾಗಿ ರಾಜ್ಯದಲ್ಲಿ 100 ಹೊಸ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ನನ್ನ ಸರ್ಕಾರ ತಾತ್ವಿಕವಾಗಿ ನಿರ್ಧರಿಸಿದೆ.

81. ನಮ್ಮ ಸಂವಿಧಾನದ ಪ್ರಕಾರ ಚುನಾವಣೆಗಳಲ್ಲಿ ಧರ್ಮ, ಜಾತಿ ಇತ್ಯಾದಿಗಳ ಬಳಕೆಗೆ ನಿರ್ಬಂಧಗಳಿವೆ. ನಮ್ಮ ಎಲ್ಲಾ ಕಾರ್ಯಗಳು ಮತ್ತು ಚಟುವಟಿಕೆಗಳು ಸಂವಿಧಾನಕ್ಕೆ ಅನುಗುಣವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಸಾಂವಿಧಾನಿಕ ಸಂಸ್ಥೆಗಳು ಯಾವುದೇ ಕಾರಣಕ್ಕೂ ದುರ್ಬಲವಾಗದಂತೆ ಅಥವಾ ದುರುಪಯೋಗವಾಗದಂತೆ ನಾವೆಲ್ಲರೂ ಸಂಕಲ್ಪ ಮಾಡಿ ರಕ್ಷಿಸಬೇಕಾಗಿದೆ. ನಮಗೆ ಸಂವಿಧಾನವೇ ರಾಷ್ಟ್ರೀಯ ಧರ್ಮ. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂಬ ದೃಢವಾದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು.

82. ಕರ್ನಾಟಕವು ರಾಷ್ಟ್ರದಲ್ಲಿಯೇ ಒಂದು ಮಾದರಿ ರಾಜ್ಯ.  ಇಲ್ಲಿ ಜಾರಿಗೆ ತರುವ ಹಲವು ಪ್ರಗತಿಪರ ಯೋಜನೆಗಳು ವಿವಿಧ ರಾಜ್ಯಗಳಿಗೆ ಮಾದರಿಯಾಗಿವೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳಲ್ಲಿ ಹಲವರು ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ, ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಲ್ಲಿ ಉಪಸ್ಥಿತರಿರುವ ಹಲವು ಸದಸ್ಯರು ಈ ಕೀರ್ತಿಯನ್ನು ಮತ್ತಷ್ಟು ಎತ್ತಿ ಹಿಡಿಯುವ ಅರ್ಹತೆಯನ್ನು ಹೊಂದಿದ್ದಾರೆ ಎಂಬುದು ನನ್ನ ನಂಬಿಕೆ. ಕರ್ನಾಟಕ ಸರ್ಕಾರದ ಯೋಜನೆಗಳನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಜನ ಮಾನಸಕ್ಕೆ ತಲುಪಿಸಲು ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸೋಣ. ಕರ್ನಾಟಕವನ್ನು ಸಮೃದ್ಧ ನಾಡನ್ನಾಗಿ ಹಾಗೂ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸೋಣ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!