Sunday, September 8, 2024

ಗೋಡ್ಸೆಯ ಅನುಯಾಯಿಗಳು ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿದ್ದಾರೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಮಹಾತ್ಮ ಗಾಂಧೀಜಿಯವರು ಎಲ್ಲ ಜಾತಿ – ಧರ್ಮದವರು ಸೌಹಾರ್ದತೆಯಿಂದ ಬಾಳಬೇಕೆಂಬ ಕನಸನ್ನು ಕಂಡಿದ್ದರು. ಅವರ ಕಲ್ಪನೆಯ ರಾಮರಾಜ್ಯವೆಂದರೆ ಎಲ್ಲರನ್ನೂ ಸಮಾನವಾಗಿ ಕಾಣುವುದು, ಎಲ್ಲರಿಗೂ ನ್ಯಾಯವನ್ನು ಒದಗಿಸುವುದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಮಂಗಳವಾರ) ಹುತಾತ್ಮ ದಿನದ ಅಂಗವಾಗಿ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಹಾತ್ಮ ಗಾಂಧೀಜಿಯವರು 1948ರ ಜನವರಿ 30 ರಂದು ಗೋಡ್ಸೆಯವರ ಗುಂಡಿಗೆ ಬಲಿಯಾಗಿ ಹುತಾತ್ಮರಾದ ದಿನವಿದು. ಗಾಂಧೀಜಿಯವರು ವಲ್ಲಭಾ ಬಾಯಿ ಪಟೇಲರೊಂದಿಗೆ ಸಂವಾದಿಸಿದ ನಂತರ ಭಜನೆಗೆ ತೆರಳಲು ಸ್ವಲ್ಪ ವಿಳಂಬವಾಗಿದ್ದ ಸಂದರ್ಭದಲ್ಲಿ ಹಂತಕ ಗೋಡ್ಸೆಯು ಗಾಂಧೀಜಿಯವರ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಅವರನ್ನು ಹತ್ಯೆಗೈದರು. ಈ ದೇಶಕ್ಕೆ ಗಾಂಧೀಜಿ ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಲಭಿಸಿತು. ಕಾಂಗ್ರೆಸ್ ನ ಬಹಳಷ್ಟು ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಎಂದರು.

ಗಾಂಧೀಜಿಯವರು ತಮ್ಮ ಕೊನೆಯುಸಿರೆಳೆದಾಗಲೂ ‘ಹೇ ರಾಮ್’ ಎಂದು ಉಚ್ಛರಿಸಿದ್ದರು. ಶ್ರೀ ರಾಮನ ಬಗ್ಗೆ ಅಪಾರ ಭಕ್ತಿ, ನಂಬಿಕೆಯನ್ನು ಹೊಂದಿದ್ದರು. ಆದ್ದರಿಂದಲೇ ‘ರಘುಪತಿ ರಾಘವ ರಾಜಾರಾಮ್’ ಎಂಬುದು ಅವರ ನೆಚ್ಚಿನ ಭಜನೆಯಾಗಿತ್ತು. ಶ್ರೀರಾಮ ಪಿತೃವಾಕ್ಯ ಪರಿಪಾಲಕನಾಗಿದ್ದು, ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ತೆರಳಿದ್ದರು. ಆದರ್ಶಮಯ ಆಡಳಿತವನ್ನು ನೀಡಿದ ಶ್ರೀರಾಮಚಂದ್ರನನ್ನು ಪೂಜಿಸುವ ಮಹಾತ್ಮ ಗಾಂಧಿಯವರನ್ನು ಮತಾಂಧನಾಗಿದ್ದ ಗೋಡ್ಸೆ ಹತ್ಯೆಗೈಯುತ್ತಾನೆ ಎಂದು ಹೇಳಿದರು.

ಗಾಂಧೀಜಿ ಅವರ ಆದರ್ಶದಲ್ಲಿ ನಡೆದು ನಾವೆಲ್ಲರೂ ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣಬೇಕು. ಸತ್ಯ ಅಹಿಂಸೆಯ ಹಾದಿಯನ್ನು ತೋರಿದ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅಂತಹ ಮಹಾನ್ ವ್ಯಕ್ತಿಯ ಹತ್ಯೆಗೈದ ಗೋಡ್ಸೆಯನ್ನು ಪೂಜಿಸುವವರು ನಮ್ಮ ನಡುವೆ ಇದ್ದಾರೆ. ರಾಜ್ಯದ ಜನತೆ ಹಾಗೂ ಸರ್ಕಾರದ ಪರವಾಗಿ ಮಹಾತ್ಮ ಗಾಂಧೀಜಿಯವರಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತೇನೆ.

ಗಾಂಧೀಜಿಯವರು ಶಾಂತಿ ಸಂದೇಶವನ್ನು ಸಾರಿದರು. ಆದರೆ ಇತ್ತೀಚೆಗೆ ಗೋಡ್ಸೆಯ ಅನುಯಾಯಿಗಳು ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿದ್ದಾರೆ. ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಶಾಂತಿ ಸಮಾಜದಲ್ಲಿ ನೆಲೆಸಬೇಕು. ಮನುಷ್ಯ ಮನುಷ್ಯರ ನಡುವೆ ವೈಷಮ್ಯ ಹೆಚ್ಚಿಸುವ ಕೆಲಸವಾಗಬಾರದು ಎಂದರು.

ಇನ್ನು, ಮಂಡ್ಯ ʼಹನುಮ ಧ್ವಜʼ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು,  ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಯಾವುದೇ ಧರ್ಮ ಜಾತಿ, ಪಕ್ಷದ ಧ್ವಜವನ್ನು ಹಾರಿಸುವುದಿಲ್ಲ ಎಂದು ಮುಚ್ಚಳಿಕೆ ಪತ್ರ ನೀಡಿ, ಅವರೇ ನಂತರ ಅದರ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದರಿಂದ ರಾಜಕೀಯ ಲಾಭ ಪಡೆಯುವ ದುರುದ್ದೇಶ ಇದ್ದು, ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಪ್ರಯತ್ನ ಮಾಡಲಾಗಿದೆ.

ಫೆಬ್ರವರಿ 8 ರಂದು ಮಂಡ್ಯ ಬಂದ್ ಮಾಡುವ ಅಥವಾ ಮಾಡದಿರುವ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಇವರೇ ಮುಚ್ಚಳಿಕೆ ಪತ್ರ ನೀಡಿ, ನಂತರ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾರಿಸಿ, ತಮ್ಮ ಮುಚ್ಚಳಿಕೆಯನ್ನು ತಾವೇ ಉಲ್ಲಂಘನೆ ಮಾಡಿರುವುದು ತಪ್ಪು ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!