spot_img
Wednesday, January 22, 2025
spot_img

ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಮತ್ತು ಟೆಲಿಮೆಡಿಸಿನ್ ಕೇಂದ್ರ ಉದ್ಘಾಟನೆ

ಕ್ಯಾನ್ಸರ್ ನಿವಾರಕ ಔಷಧಿಗಳ ಮೇಲಿನ ಜಿ‌ಎಸ್‌ಟಿ ವಿನಾಯಿತಿಗೊಳಿಸಿದರೆ ರೋಗಿಗಳಿಗೆ ಅನುಕೂಲ-ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಜ.28, (ಜನಪ್ರತಿನಿಧಿ ವಾರ್ತೆ) ಕ್ಯಾನ್ಸರ್ ಚಿಕಿತ್ಸೆ ಎಂದಾಗ ಆರ್ಥಿಕ ಸಮಸ್ಯೆ ಕಾಡುತ್ತದೆ. ಚಿಕಿತ್ಸೆಗಿಂತ ವಿವಿಧ ಔಷಧ ಕಂಪನಿಗಳ ದರದಲ್ಲಿ ವ್ಯತ್ಯಾಸವಿರುತ್ತದೆ. ದುಬಾರಿಯಾಗಿರುವ ಕ್ಯಾನ್ಸರ್ ಔಷಧಗಳ ಮೇಲಿನ ಜಿ‌ಎಸ್‌ಟಿಯನ್ನು ಸರ್ಕಾರ ವಿನಾಯಿತಿ ಮಾಡಿದರೆ ಶೇ.20% ಉಳಿತಾಯವಾಗುತ್ತದೆ. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸುವ ಕೆಲಸ ಆಗಬೇಕು. ಕ್ಯಾನ್ಸರ್ ಔಷಧಿ ಮೇಲಿನ ಜಿ‌ಎಸ್‌ಡಿ ವಿನಾಯತಿ ಮಾಡಿದರೆ ಬಡ ಜನರಿಗೆ ಅನುಕೂಲವಾಗುತ್ತದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಚಿನ್ಮಯಿ ಆಸ್ಪತ್ರೆ ಕುಂದಾಪುರ ಮತ್ತು ಜುಲೇಖಾ ಯೆನಪೋಯ ಇನ್ಸ್ಟಿಟ್ಯೂಟ್ ಅಫ್ ಅಂಕೋಲಜಿ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಸ್ಥಾಪನೆಯಾದ ಕ್ಯಾನ್ಸರ್ ಮತ್ತು ಟೆಲಿಮೆಡಿಸಿನ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಇವತ್ತು ಆಯುಷ್ಮಾನ್ ವಿಮೆಯಲ್ಲಿಯೂ ಕೂಡಾ ಗೊಂದಲವನ್ನು ಕ್ಯಾನ್ಸರ್ ರೋಗಿಗಳು ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ಕ್ಯಾನ್ಸರ್ ರೋಗಿಗಳು ಈ ಸಮಸ್ಯೆ ಅನುಭವಿಸುತ್ತಿದ್ದು ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಆಗಬೇಕು. ಶಾಸಕರು ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ ಅವರು ಕುಂದಾಪುರದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭವಾಗಿರುವುದು ಜನಸಾಮಾನ್ಯರಿಗೆ ಹಣ, ಸಮಯ ಉಳಿತಾಯವಾಗುತ್ತದೆ. ರೋಗವನ್ನು ಪ್ರಾರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯೆನೆಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಮಾತನಾಡಿದ ಡಾ.ವಿಜಯ ಕುಮಾರ್ ಕ್ಯಾನ್ಸರ್ ಕಾಯಿಲೆಯನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದರೆ ಗುಣಮುಖವಾಗಲು ಸಾಧ್ಯ. ಆರಂಭದಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಇವತ್ತು 80%ಕ್ಕಿಂತ ಹೆಚ್ಚು ರೋಗಿಗಳು ರೋಗ ಉಲ್ಭಣಗೊಂಡ ಬಳಿಕವೇ ಬರುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.

ಇವತ್ತು ಯನಪೋಯ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಕ್ಯಾನ್ಸರ್ ಘಟಕ ಕಾರ್ಯನಿರ್ವಹಿಸುತ್ತಿದೆ. ರೆಡಿಯೋ ಥೇರೆಪಿ ವಿಭಾಗದಿಂದ ಶೇ.98% ಚಿಕಿತ್ಸೆ ನೀಡಲಾಗುತ್ತಿದೆ. ದುಬಾರಿ ಎನಿಸಲ್ಪಡುವ ಕ್ಯಾನ್ಸರ್‌ಗೆ ಸಂಬಂಧಪಟ್ಟ ಅತ್ಯುತ್ತಮ ಗುಣಮಟ್ಟದ ಔಷಧಗಳನ್ನು ರಿಯಾಯತಿ ದರದಲ್ಲಿ ಒದಗಿಸುವ ಬಗ್ಗೆಯೂ ಪ್ರಯತ್ನಗಳು ನಡೆಯುತ್ತಿದೆ. ಆಯುಷ್ಮಾನ್ ಆರೋಗ್ಯ ವಿಮೆಯ ಸೌಲಭ್ಯ ಸೇರಿದಂತೆ ಸರ್ಕಾರ ಮಟ್ಟದಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಕುಂದಾಪುರದಲ್ಲಿ ಪ್ರತೀ ಶನಿವಾರ ತಜ್ಞ ವೈದ್ಯರು ಲಭ್ಯವಿರುತ್ತಾರೆ ಎಂದರು.

ಟೆಲಿಮೆಡಿಸಿನ್ ವಿಭಾಗವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರಿಗೆ ಕ್ಯಾನ್ಸರ್ ರೋಗದ ಮಾಹಿತಿ ಮಾರ್ಗದರ್ಶನ ಹಾಗೂ ಚಿಕಿತ್ಸೆ ಇಲ್ಲಿ ದೊರಕುತ್ತಿರುವುದರಿಂದ ಕ್ಯಾನ್ಸರ್‌ನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಗುಣಮುಖರಾಗಲು ಅನುಕೂಲವಾಗುತ್ತದೆ ಎಂದರು.

ಮತ್ಸ್ಯೋದ್ಯಮಿ ಆನಂದ ಸಿ ಕುಂದರ್ ಮಾತನಾಡಿ, ಕಟ್ಟೆ ಬೋಜಣ್ಣನವರು ಚಿನ್ಮಯಿ ಆಸ್ಪತ್ರೆ ಸ್ಥಾಪನೆಯ ಕನಸು ಕಂಡು ನನಸು ಮಾಡಿದರು. ಸಾರ್ಥಕ 26ನೇ ವರ್ಷದ ಸೇವೆಯನ್ನು ಈ ಆಸ್ಪತ್ರೆ ನೀಡುತ್ತಿದೆ. ಪ್ರಸ್ತುತ ಅತ್ಯಂತ ಅವಶ್ಯಕವಿರುವ ಅರ್ಬುದ ರೋಗಕ್ಕೆ ಸಂಬಂಧಪಟ್ಟ ತಪಾಸಣೆ, ಚಿಕಿತ್ಸೆ ಇಲ್ಲಿ ಆರಂಭವಾಗುತ್ತಿರುವುದು ಈ ಭಾಗದವರಿಗೆ ಅನುಕೂಲವಾಗುತ್ತದೆ. ಕ್ಯಾನ್ಸರ್ ಎಂದರೆ ಭಯ ಪಡುವ ವಾತವರಣವಿದೆ. ಆದರೆ ಆರಂಭಿಕ ಹಂತದಲ್ಲಿಯೆ ಚಿಕಿತ್ಸೆ ಪಡೆದುಕೊಂಡರೆ ಗುಣಪಡಿಸಲು ಸಾಧ್ಯತೆ ಇದೆ ಎಂದರು.

ಜುಲೇಖಾ ಯೆನಪೋಯ ಇನ್ಸ್ಟಿಟ್ಯೂಟ್ ಅಫ್ ಅಂಕೋಲಜಿ ಸಂಸ್ಥೆಯ ಪ್ರಮುಖರಾದ ಹಬಿಬ್ ರೆಹಮಾನ್ ಉಪಸ್ಥಿತರಿದ್ದರು. ಕ್ಯಾನ್ಸರ್ ಮತ್ತು ಟೆಲಿಮೆಡಿಸಿನ್ ಕೇಂದ್ರದ ಕುರಿತಾದ ದಾಖಲಾತಿಗಳನ್ನು ಯೆನೆಪೋಯ ಸಂಸ್ಥೆಯ ಪರಾದ್ ಯೆನೆಪೋಯ ಅವರು ಡಾ.ಉಮೇಶ ಪುತ್ರನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಚಿನ್ಮಯಿ ಆಸ್ಪತ್ರೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಕಾಮತ್, ಜನರಲ್ ಸರ್ಜನ್ ಡಾ.ಬಾಲಕೃಷ್ಣ ಶೆಟ್ಟಿ, ಹೆರಿಗೆ ಸ್ತ್ರೀರೋಗ ತಜ್ಞೆ ಡಾ.ಶ್ರೀದೇವಿ ಕಟ್ಟೆ, ಎಲುಬು ಮತ್ತು ಕೀಲು ತಜ್ಞರಾದ ಡಾ.ದಿನೇಶ ಕುಮಾರ್ ಶೆಟ್ಟಿ, ಔಷಧಾಲಯದ ಮೇಲ್ವಿಚಾರಕ ಭಾಸ್ಕರ ಜಿ.ರಾವ್ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರೋತ್ಸನ ಪರಿಷತ್ ವತಿಯಿಂದ ಬ್ರಹ್ಮಾವರ ಸಮೀಪ ನಿರ್ಮಿಸಲಾಗುತ್ತಿರುವ ಶಿಕ್ಷಣ ಸಂಸ್ಥೆಗೆ ಚಿನ್ಮಯಿ ಆಸ್ಪತ್ರೆಯ ವತಿಯಿಂದ ರೂ.5 ಲಕ್ಷ ಮೊತ್ತವನ್ನು ಡಾ.ಉಮೇಶ ಪುತ್ರನ್ ಅವರು ಡಾ.ಶ್ರೀಕಾಂತ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ ಪುತ್ರನ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಯೆನೆಪೋಯ ವೈದ್ಯಕೀಯ ಸಂಸ್ಥೆಯ ಡಾ.ನಾಗರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಬ್ಬಂದಿ ಮೇಘನಾ ಪ್ರಾರ್ಥನೆ ಮಾಡಿದರು. ಚಿನ್ಮಯಿ ಆಸ್ಪತೆಯ ಪಾಲುದಾರರಾದ ರಾಜೇಂದ್ರ ಕಟ್ಟೆ ವಂದಿಸಿದರು. ಪತ್ರಕರ್ತ ಯು.ಎಸ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರ:

ಚಿನ್ಮಯಿ ಆಸ್ಪತ್ರೆ ಕುಂದಾಪುರ ಮತ್ತು ಜುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಅಫ್ ಅಂಕೋಲಜಿ ದೇರಳಕಟ್ಟೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಸಹಕಾರದೊಂದಿಗೆ ನಡೆಯಿತು. ಶಿಬಿರದಲ್ಲಿ ಅನೀಮಿಯ ಪರೀಕ್ಷೆ, ಪ್ಯಾಪ್ ಸ್ಮಿಯರ್ (ಗರ್ಭಕಂಠದ ಪರೀಕ್ಷೆ) ಬಾಯಿಯ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ, ಸಕ್ಕರೆ ಪರೀಕ್ಷೆ, ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ, ಮ್ಯಾಮೋಗ್ರಾಮ್ (ಸ್ತನ ಪರೀಕ್ಷೆ)ಗೆ ಅವಕಾಶ ಕಲ್ಪಿಸಲಾಗಿತ್ತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!